ಕರ್ನಾಟಕ News

Discover the latest headlines in this section.

ಹಳೆಯ ಎರಡು ವಿದ್ಯುತ್ ಮಾರ್ಗಗಳನ್ನು ಮೇಲ್ದರ್ಜೆಗೆ ಏರಿಸುವ ಪ್ರಸ್ತಾವನೆಗೆ ಭೂ ಮಾಲೀಕರಿಂದ ತೀವ್ರ ವಿರೋಧ? ಭೂಗತ ವಿದ್ಯುತ್ ಕೇಬಲ್ ಅಳವಡಿಕೆಗೆ ಆಗ್ರಹ

ಹಳೆಯ ಎರಡು ವಿದ್ಯುತ್ ಮಾರ್ಗಗಳನ್ನು ಮೇಲ್ದರ್ಜೆಗೆ ಏರಿಸುವ ಪ್ರಸ್ತಾವನೆಗೆ ಭೂ ಮಾಲೀಕರಿಂದ ತೀವ್ರ ವಿರೋಧ? ಭೂಗತ ವಿದ್ಯುತ್ ಕೇಬಲ್ ಅಳವಡಿಕೆಗೆ ಆಗ್ರಹ

ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯ ದಾಸರಹಳ್ಳಿ : ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನಿಯಮಿತ (KPTCL) ವತಿಯಿಂದ ಸಾರ್ವಜನಿಕ ಹಿತದೃಷ್ಟಿಯಿಂದ ಹಳೆಯ ಎರಡು ಪ್ರಮುಖ ವಿದ್ಯುತ್ ಮಾರ್ಗಗಳಾದ ನೆಲಮಂಗಲ ಉಪ ಕೇಂದ್ರದಿಂದ ಬೃಂದಾವನದ ಬಳಿ ಇರುವ ಗೋಪುರದವರೆಗೂ ಸದರಿ 110 ಕೆವಿ ವಿದ್ಯುತ್ ಮಾರ್ಗವನ್ನು 220 ಕೆವಿ ಮಾರ್ಗ ಹಾಗೂ ನೆಲಮಂಗಲ ಉಪಕೇಂದ್ರದಿಂದ 220/66 ಕೆವಿ ವಿದ್ಯುತ್ ಅನ್ನು ಪೀಣ್ಯ ಉಪಕೇಂದ್ರದವರೆಗೂ ಪ್ರಸ್ತುತವಿರುವ ಪೀಣ್ಯ ಉಪಕೇಂದ್ರಕ್ಕೆ ಸಂಪರ್ಕ 400/220 ಕೆವಿ ಮೇಲ್ದರ್ಜೆಗೆ ಏರಿಸುವ ಪ್ರಸ್ತಾವನೆಗೆ ಭೂ ಮಾಲೀಕರಿಂದ ತೀವ್ರ ವಿರೋಧ ವ್ಯಕ್ತವಾಯಿತು.ಬೆಂಗಳೂರು ನಗರ ವ್ಯಾಪ್ತಿಯಲ್ಲಿನ ಶಿವನಪುರ, ಗಜ್ಜಗದಹಳ್ಳಿ, ನಾರಾಯಣಪ್ಪನಪಾಳ್ಯ, ಹಾರೋಕ್ಯಾತನಹಳ್ಳಿ, ದೊಂಬರಹಳ್ಳಿ,ಲಕ್ಷ್ಮೀಪುರ, ಶ್ರೀಕಂಠಪುರ, ಕರಿವೋಬನಹಳ್ಳಿ, ತಿರುಮಲಾಪುರ, ದೊಡ್ಡಬಿದರೆಕಲ್ಲು ನೆಲಗದರನಹಳ್ಳಿ, ಶಿವಪುರ, ಚೊಕ್ಕಸಂದ್ರ ಮತ್ತು ಪೀಣ್ಯ 2ನೇ ಹಂತದ ಮೂಲಕ ಹಾದುಹೋಗಲಿದ್ದು ಹೊಸದಾಗಿ ನಿರ್ಮಿಸಲಾಗುವ ವಿದ್ಯುತ್ ಗೋಪುರಗಳ (Towers) ಜಾಗದ ನೈಜ ಭೂಮಾಲೀಕರಿಗೆ ನಿಯಮಾನುಸಾರ ಪರಿಹಾರ ನೀಡಲು ಬೆಂಗಳೂರು ನಗರ ಜಿಲ್ಲಾಧಿಕಾರಿಗಳು ಆದೇಶಿಸಿರುವ ಹಿನ್ನಲೆಯಲ್ಲಿ ಪೀಣ್ಯದ ಎಸ್.ಆರ್.ಎಸ್ ಹತ್ತಿರದ ಕೆಪಿಟಿಸಿಎಲ್ ಆವರಣದಲ್ಲಿ ಇಂದು ಸಾರ್ವಜನಿಕ ಸಭೆ ಏರ್ಪಡಿಸಲಾಗಿತ್ತು. ಸಭೆಯಲ್ಲಿ ಶೇ.30 ರಷ್ಟು ಪರಿಹಾರಕ್ಕೆ ಒಪ್ಪದ ಭೂ ಮಾಲೀಕರು ವಿರೋಧ ವ್ಯಕ್ತಪಡಿಸಿದರು.ಭೂ ಮಾಲೀಕ ಸಿದ್ದಗಂಗಯ್ಯ ಮಾತನಾಡಿ,' ಕೆಪಿಟಿಸಿಎಲ್ ಅವರು ಬಫರ್ ಜೋನ್ ಎಂದು 38 ಮೀಟರ್ ಅಗಲ ಜಮೀನು ಒತ್ತುವರಿ ಮಾಡಿ ಲಕ್ಷಾಂತರ ಜನರು ಕಟ್ಟಿರುವ ಮನೆ ಹಾಗೂ ನಿವೇಶನಗಳನ್ನು ಆಕ್ರಮಿಸಿಕೊಳ್ಳಲು ಮುಂದಾಗಿದ್ದಾರೆ.ಹೈಟೆನ್ಶನ್ ಎತ್ತರ ಮತ್ತು ಅಗಲ ಮಾಡುತ್ತಿದ್ದಾರೆ ನಮಗೆ ಯಾವುದೇ ಮಾಹಿತಿ ನೀಡದೆ ಪರಿಹಾರವನ್ನು ನೀಡದೆ ಅಕ್ರಮ ನಡೆಸುತ್ತಿದ್ದಾರೆ. ಸರ್ಕಾರ ನಮಗೆ ಸೂಕ್ತ ಪರಿಹಾರ ನೀಡಲಿ ಅಥವಾ ಸುರಂಗ ಕೊರೆದು ಅಂಡರ್ ಗ್ರೌಂಡ್ ಕೇಬಲ್ ಹಾಕಿ ಅಲ್ಲಲ್ಲಿ ಸಬ್ ಸ್ಟೇಷನ್ ಗಳನ್ನು ಮಾಡಲಿ, ಇದರಿಂದ ನಮ್ಮ ಆಕ್ಷೇಪಣೆ ಇಲ್ಲ' ಎಂದು ಆಗ್ರಹಿಸಿದರು.ತಿಪ್ಪೇನಹಳ್ಳಿ ಗ್ರಾಮದ ನಿವಾಸಿ ಲೋಕೇಶ್,' ಕೆಪಿಟಿಸಿಎಲ್ ನವರು ಸಭೆಯ ಬಗ್ಗೆ ಸರಿಯಾದ ಮಾಹಿತಿ ನೀಡಿಲ್ಲ. ಜನರ ವಿರುದ್ಧ ಕೆಲಸ ಮಾಡುತ್ತಿರುವ ಕೆಪಿಟಿಸಿಎಲ್ ವಿರುದ್ಧ ದಿಕ್ಕಾರ ಹಾಕುತ್ತೇವೆ. ಪೊಲೀಸ್ ಇಲಾಖೆಯವರನ್ನು ಕರೆಸಿ ನಮಗೆ ಎದುರಿಸುತ್ತಿರುವ ಕೆಲಸ ಮಾಡುತ್ತಿದ್ದಾರೆ. ನಾವು ಅಲ್ಲಿ ಕೆಲಸ ಮಾಡಲು ಬಿಡುವುದಿಲ್ಲ' ಎಂದು ವಿರೋಧ ವ್ಯಕ್ತಪಡಿಸಿದರು.ಸಭೆಯಲ್ಲಿ ಕೆಪಿಟಿಸಿಎಲ್ ಎಇಇ ಲತಾ, ಎಂಜಿನಿಯರ್ ಗಳಾದ ಸುಮ, ಸೌಮ್ಯ, ಪೊಲೀಸ್ ಇನ್ಸ್ ಪೆಕ್ಟರ್ ಗಳಾದ ಚಿಕ್ಕಸ್ವಾಮಿ, ಪ್ರಶಾಂತ್ ಹಾಗೂ ನೂರಾರು ಭೂಮಾಲೀಕರಿದ್ದರು.ವರದಿ : ಪಬ್ಲಿಕ್ ರೈಡ್ ದೇವರಾಜ್

May 18, 2026 | 01:54 PM
21 0
No Image

ಬೆಳಗಾವಿಯಲ್ಲಿ ಅನಧಿಕೃತ ಬಡ್ಡಿ ವ್ಯವಹಾರ: ಶಿವಾನಂದ ನೀಲಣ್ಣವರ್ ಬಂಧನ

ಧಾರವಾಡದಲ್ಲೂ ಚೀಟಿ ವ್ಯವಹಾರ ಆರೋಪ; ಕ್ರಮಕ್ಕೆ ಸಾರ್ವಜನಿಕರ ಒತ್ತಾಯಬೆಳಗಾವಿ: ಅನಧಿಕೃತ ಬಡ್ಡಿ ಮತ್ತು ಠೇವಣಿ ವ್ಯವಹಾರ ನಡೆಸಿದ ಆರೋಪದ ಮೇಲೆ ಬೆಳಗಾವಿಯ ಶಿವಂ ಅಸೋಸಿಯಟ್ಸ್ ಮಾಲೀಕ ಶಿವಾನಂದ ನೀಲಣ್ಣವರ್ ಅವರನ್ನು ಅಧಿಕಾರಿಗಳು ಶುಕ್ರವಾರ ರಾತ್ರಿ ಬಂಧಿಸಿದ್ದಾರೆ. ಪ್ರಕರಣದಲ್ಲಿ 50 ಕೋಟಿಗೂ ಅಧಿಕ ಹಣಕಾಸು ಅವ್ಯವಹಾರ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ತನಿಖೆ ಮುಂದುವರಿದಿದೆ.ಈ ಕುರಿತು ಮಾಹಿತಿ ನೀಡಿದ ಬೆಳಗಾವಿ ಜಿಲ್ಲಾಧಿಕಾರಿ ಮೊಮ್ಮದ್ ರೋಷನ್, ಇದು ಅತ್ಯಂತ ಗಂಭೀರ ಪ್ರಕರಣವಾಗಿದ್ದು, ಶಿವಾನಂದ ನೀಲಣ್ಣವರ್ ವಿವಿಧ ರಾಜ್ಯಗಳ ಜನರಿಂದ ಕೈಸಾಲ ಮತ್ತು ಹೂಡಿಕೆ ಹೆಸರಿನಲ್ಲಿ ದೊಡ್ಡ ಪ್ರಮಾಣದ ಹಣ ಸಂಗ್ರಹಿಸಿರುವುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಹೇಳಿದರು.ಶಿವಾನಂದ ನೀಲಣ್ಣವರ್ ಬಳಿ ಸುಮಾರು 35 ಸಾವಿರಕ್ಕೂ ಹೆಚ್ಚು ಜನರು ಹಣ ಠೇವಣಿ ಇಟ್ಟಿರುವ ಶಂಕೆ ವ್ಯಕ್ತವಾಗಿದೆ. “1 ಲಕ್ಷ ರೂ. ಠೇವಣಿ ಇಟ್ಟರೆ ವಾರ್ಷಿಕ ಶೇಕಡಾ 36ರಷ್ಟು ಬಡ್ಡಿ ನೀಡಲಾಗುವುದು” ಎಂದು ಜಾಹೀರಾತು ನೀಡಿ ಸಾರ್ವಜನಿಕರಿಂದ ಹಣ ಹೂಡಿಕೆ ಮಾಡಿಸಿಕೊಂಡಿರುವ ಆರೋಪ ಕೇಳಿಬಂದಿದೆ.ರಾಜ್ಯ ಮಾತ್ರವಲ್ಲದೆ ಮಹಾರಾಷ್ಟ್ರ, ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿಯೂ ಹಣ ಸಂಗ್ರಹ ನಡೆಸಿರುವ ಮಾಹಿತಿ ಲಭ್ಯವಾಗಿದೆ. ಒಟ್ಟು ಎಷ್ಟು ಕೋಟಿ ರೂಪಾಯಿ ಠೇವಣಿ ಸಂಗ್ರಹಿಸಲಾಗಿದೆ ಎಂಬುದು ತನಿಖೆ ಬಳಿಕ ಸ್ಪಷ್ಟವಾಗಲಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ವಿಡಿಯೋಗಳ ಆಧಾರದ ಮೇಲೆ ಅಧಿಕಾರಿಗಳು ಶಿವಾನಂದ ನೀಲಣ್ಣವರ್ ಅವರ ಕಚೇರಿ ಮತ್ತು ನಿವಾಸದ ಮೇಲೆ ದಾಳಿ ನಡೆಸಿದ್ದು, ದೊಡ್ಡ ಪ್ರಮಾಣದ ಹಣಕಾಸು ವ್ಯವಹಾರಗಳ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಪ್ರತಿ ತಿಂಗಳು ಒಂದೇ ಖಾತೆಯಿಂದ 300ರಿಂದ 400 ಕೋಟಿ ರೂಪಾಯಿವರೆಗೆ ವ್ಯವಹಾರ ನಡೆದಿರುವ ಮಾಹಿತಿ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.ಅದೇ ವೇಳೆ, ರಿಸರ್ವ್ ಬ್ಯಾಂಕ್ ಹಾಗೂ ಸಹಕಾರ ಸಂಸ್ಥೆಗಳ ನಿಯಮಗಳನ್ನು ಪಾಲಿಸದೆ ಹಣಕಾಸು ಚಟುವಟಿಕೆ ನಡೆಸಲಾಗಿತ್ತು ಎಂಬ ಆರೋಪವೂ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೆಪಿಐಡಿ ಕಾಯ್ದೆಯಡಿ ವಿಶೇಷ ತನಿಖಾ ವಿಭಾಗವನ್ನು ತೆರೆಯಲಾಗಿದೆ.ಇನ್ನೊಂದೆಡೆ, ಧಾರವಾಡದಲ್ಲಿಯೂ ಇದೇ ರೀತಿಯ ಚೀಟಿ ವ್ಯವಹಾರ ಆರೋಪ ಸದ್ದು ಮಾಡುತ್ತಿದೆ. ಅಯಾಜ್ ಗೋರೆಖಾನ್ ಎಂಬಾತ ಮಹಿಳೆಯರಿಂದ ಚೀಟಿ ವ್ಯವಹಾರದ ಹೆಸರಿನಲ್ಲಿ ಹಣ ಸಂಗ್ರಹಿಸಿ ಮೋಸ ಮಾಡಿದ್ದಾನೆ ಎಂದು ಕೆಲ ದಿನಗಳ ಹಿಂದೆ ಹಲವು ಮಹಿಳೆಯರು ಆಗಿನ ಧಾರವಾಡ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರಿಗೆ ದೂರು ನೀಡಿದ್ದರು.ಈ ದೂರಿನ ಪರಿಶೀಲನೆ ವೇಳೆ ಅಯಾಜ್ ಗೋರೆಖಾನ್ ಅವರ ಹೆಸರಿನಲ್ಲಿ ಯಾವುದೇ ಕಾನೂನುಬದ್ಧ ಚೀಟಿ ವ್ಯವಹಾರ ಪರವಾನಿಗೆ ಇಲ್ಲ ಎಂಬುದು ಅಧಿಕಾರಿಗಳಿಗೆ ತಿಳಿದುಬಂದಿತ್ತು. ಸಹಕಾರ ಇಲಾಖೆಯ ಅಧಿಕಾರಿಗಳು ತಪ್ಪು ಕಂಡುಬಂದರೆ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಹುಬ್ಬಳ್ಳಿ-ಧಾರವಾಡ ನಗರ ಪೊಲೀಸ್ ಕಮಿಷನರೇಟ್‌ಗೆ ಪತ್ರ ಬರೆದಿದ್ದರೂ ಇದುವರೆಗೆ ಯಾವುದೇ ಕಠಿಣ ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.ಈಗ ಬೆಳಗಾವಿಯಲ್ಲಿ ನಡೆದಿರುವ ಬೆಳವಣಿಗೆ ಹಿನ್ನೆಲೆ, ಧಾರವಾಡದಲ್ಲಿಯೂ ಪರವಾನಿಗೆ ಇಲ್ಲದೆ ಹಣಕಾಸು ವ್ಯವಹಾರ ನಡೆಸುತ್ತಿರುವವರ ವಿರುದ್ಧ ನೂತನ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳುವರೇ ಎಂಬುದನ್ನು ಸಾರ್ವಜನಿಕರು ಕಾದುನೋಡುತ್ತಿದ್ದಾರೆ.

May 17, 2026 | 05:53 AM
24 0
ಅಥಣಿಯಲ್ಲಿ ಅಂತಾರಾಜ್ಯ ಮಹಿಳಾ ಕಳ್ಳಿಯರ ಬಂಧನ – 68 ಲಕ್ಷ ಮೌಲ್ಯದ ಚಿನ್ನಾಭರಣ ವಶ

ಅಥಣಿಯಲ್ಲಿ ಅಂತಾರಾಜ್ಯ ಮಹಿಳಾ ಕಳ್ಳಿಯರ ಬಂಧನ – 68 ಲಕ್ಷ ಮೌಲ್ಯದ ಚಿನ್ನಾಭರಣ ವಶ

ಅಥಣಿ: ಜನದಟ್ಟಣೆಯನ್ನೇ ಬಂಡವಾಳ ಮಾಡಿಕೊಂಡು ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ಚಿನ್ನಾಭರಣ ಕಳವು ಮಾಡುತ್ತಿದ್ದ ಅಂತಾರಾಜ್ಯ ಮಹಿಳಾ ಕಳ್ಳಿಯರನ್ನು ಅಥಣಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಬಂಧಿತ ಆರೋಪಿಗಳನ್ನು ಮಹಾರಾಷ್ಟ್ರ ಮೂಲದ ಹೇಮಾ ಕಸಬೇಕರ ಹಾಗೂ ನಿಲಂ ಕಾಂಬಳೆ ಎಂದು ಗುರುತಿಸಲಾಗಿದೆ. ಅಥಣಿ ಪಟ್ಟಣದ ಬಸ್ ನಿಲ್ದಾಣದಲ್ಲಿ ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ವೇಳೆ ಪೊಲೀಸರು ಬಲೆ ಬೀಸಿ ಇಬ್ಬರನ್ನೂ ವಶಕ್ಕೆ ಪಡೆದಿದ್ದಾರೆ.ಪೊಲೀಸರ ವಿಚಾರಣೆಯ ವೇಳೆ ವಿವಿಧ ಪ್ರದೇಶಗಳಲ್ಲಿ ನಡೆದ ನಾಲ್ಕು ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿವೆ. ಆರೋಪಿಗಳಿಂದ ಸುಮಾರು 68 ಲಕ್ಷ ರೂಪಾಯಿ ಮೌಲ್ಯದ 42.5 ಗ್ರಾಂ ಚಿನ್ನಾಭರಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.ಬಸ್ ಹತ್ತುವ ಹಾಗೂ ಇಳಿಯುವ ಸಂದರ್ಭಗಳಲ್ಲಿ ಉಂಟಾಗುವ ಜನದಟ್ಟಣೆ, ಗದ್ದಲ ಮತ್ತು ತಳ್ಳಾಟವನ್ನು ದುರುಪಯೋಗಪಡಿಸಿಕೊಂಡು ಮಹಿಳಾ ಪ್ರಯಾಣಿಕರನ್ನು ಗುರಿಯಾಗಿಸಿಕೊಂಡು ಕಳ್ಳತನ ನಡೆಸುತ್ತಿದ್ದರು ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ.ಪ್ರಯಾಣಿಕರ ರೂಪದಲ್ಲಿ ಬಂದು ಯಾರಿಗೂ ಅನುಮಾನ ಬಾರದಂತೆ ಕಾರ್ಯಾಚರಣೆ ನಡೆಸುತ್ತಿದ್ದ ಈ ಮಹಿಳಾ ಕಳ್ಳಿಯರ ಬಂಧನದಿಂದ ಸಾರ್ವಜನಿಕರು ನಿಟ್ಟುಸಿರು ಬಿಟ್ಟಿದ್ದಾರೆ. ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ಅಥಣಿ ಪೊಲೀಸರ ಕಾರ್ಯಾಚರಣೆಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

May 17, 2026 | 03:44 PM
148 0
ಹುಬ್ಬಳ್ಳಿ ಶಿವಪುತ್ರ ನಗರದಲ್ಲಿ ಭಾರೀ ಮಳೆಗೆ ದೊಡ್ಡ ಮರ ಉರುಳಿ ಅವಾಂತರ

ಹುಬ್ಬಳ್ಳಿ ಶಿವಪುತ್ರ ನಗರದಲ್ಲಿ ಭಾರೀ ಮಳೆಗೆ ದೊಡ್ಡ ಮರ ಉರುಳಿ ಅವಾಂತರ

ಹುಬ್ಬಳ್ಳಿ: ನಗರದಲ್ಲಿ ಸುರಿದ ಭಾರೀ ಮಳೆಯ ಪರಿಣಾಮ ವಾರ್ಡ್ ನಂ. 53ರ ಶಿವಪುತ್ರ ನಗರದಲ್ಲಿ ದೊಡ್ಡ ಮರ ದರೇಗುರುಳಿದ ಘಟನೆ ನಡೆದಿದೆ. ಮರ ಉರುಳಿದ ಪರಿಣಾಮ ಸಮೀಪದಲ್ಲಿದ್ದ ವಿದ್ಯುತ್ ಕಂಬವೂ ನೆಲಕ್ಕುರುಳಿ ದರ್ಗಾ ಹಾಗೂ ಮನೆಯೊಂದಕ್ಕೆ ಹಾನಿಯಾಗಿದೆ.ಘಟನೆಯಿಂದ ಕೆಲಕಾಲ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಸ್ಥಳೀಯರು ತಕ್ಷಣವೇ ಪಾಲಿಕೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ವಿದ್ಯುತ್ ಕಂಬ ಬಿದ್ದ ಹಿನ್ನೆಲೆಯಲ್ಲಿ ವಿದ್ಯುತ್ ಸಂಪರ್ಕಕ್ಕೂ ವ್ಯತ್ಯಯ ಉಂಟಾಗಿದೆ ಎಂದು ತಿಳಿದುಬಂದಿದೆ.ಘಟನೆ ಕುರಿತು ಮಾಹಿತಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಪಾಲಿಕೆ ಸದಸ್ಯ ಶ್ರೀ ಆರಿಫ್ ಭದ್ರಾಪೂರ ಅವರು ಪರಿಶೀಲನೆ ನಡೆಸಿ, ಸಂಬಂಧಿಸಿದ ಅಧಿಕಾರಿಗಳಿಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಮರ ತೆರವು ಹಾಗೂ ಹಾನಿಗೊಳಗಾದ ಪ್ರದೇಶದ ದುರಸ್ತಿ ಕಾರ್ಯವನ್ನು ಶೀಘ್ರ ಆರಂಭಿಸಲಾಗುವುದು ಎಂದು ಅವರು ಭರವಸೆ ನೀಡಿದರು.ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಭಾರೀ ಮಳೆಯ ಹಿನ್ನೆಲೆ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕೆಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.

May 17, 2026 | 02:08 PM
239 0
ಕುಡಿದ ಮತ್ತಿನಲ್ಲಿ ಸ್ನೇಹಿತರ ನಡುವೆ ಗಲಾಟೆ; ವ್ಯಕ್ತಿ ಸಾವು ಇಬ್ಬರು ಆರೋಪಿಗಳ ಬಂಧನ

ಕುಡಿದ ಮತ್ತಿನಲ್ಲಿ ಸ್ನೇಹಿತರ ನಡುವೆ ಗಲಾಟೆ; ವ್ಯಕ್ತಿ ಸಾವು ಇಬ್ಬರು ಆರೋಪಿಗಳ ಬಂಧನ

ಬೆಂಗಳೂರು: ಕುಡಿದ ಮತ್ತಿನಲ್ಲಿ ಸ್ನೇಹಿತರ ನಡುವೆ ನಡೆದ ಗಲಾಟೆ ಒಬ್ಬ ವ್ಯಕ್ತಿಯ ಸಾವಿನಲ್ಲಿ ಅಂತ್ಯಗೊಂಡ ಘಟನೆ ಬೆಂಗಳೂರಿನ ಯಶವಂತಪುರ ಭಾಗದಲ್ಲಿ ನಡೆದಿದ್ದು, ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಆರ್‌ಎಂಸಿ ಯಾರ್ಡ್ ಪೊಲೀಸರು ಬಂಧಿಸಿದ್ದಾರೆ.ಕೊಪ್ಪಳ ಮೂಲದ ಶರಣಪ್ಪ (36) ಮೃತ ವ್ಯಕ್ತಿಯಾಗಿದ್ದು, ಬೆಂಗಳೂರಿನಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಶರಣಪ್ಪ ಹಾಗೂ ಆತನ ಸ್ನೇಹಿತರಾದ ಆನಂದ್ ಮತ್ತು ದಕ್ಷಿಣಾಮೂರ್ತಿ ನಡುವೆ ಕೌಟುಂಬಿಕ ವಿಚಾರಕ್ಕೆ ಸಂಬಂಧಿಸಿದಂತೆ ಜಗಳ ಆರಂಭವಾಗಿತ್ತು.ಮೇ 10ರಂದು ಯಶವಂತಪುರದ ಗೋವರ್ಧನ್ ಟಾಕೀಸ್ ಸಮೀಪದ ಬಾರ್ ಒಂದರಲ್ಲಿ ಮೂವರ ನಡುವೆ ವಾಗ್ವಾದ ನಡೆದಿದ್ದು, ಬಳಿಕ ಬಾರ್ ಹೊರಗಡೆಯೂ ಗಲಾಟೆ ಮುಂದುವರಿದಿತ್ತು. ಈ ವೇಳೆ ಆನಂದ್ ಹಾಗೂ ದಕ್ಷಿಣಾಮೂರ್ತಿ ಶರಣಪ್ಪಗೆ ಡಿಚ್ಚಿ ಹೊಡೆದು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.ಘಟನೆಯ ಬಳಿಕ ಮೂವರೂ ಒಂದೇ ಶೆಡ್‌ಗೆ ತೆರಳಿ ಮಲಗಿದ್ದರು. ಆದರೆ ಶರಣಪ್ಪ ತೀವ್ರ ಅಸ್ವಸ್ಥಗೊಂಡ ಹಿನ್ನೆಲೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಸ್ವಗ್ರಾಮ ಕೊಪ್ಪಳಕ್ಕೆ ಕರೆದುಕೊಂಡು ಹೋಗಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶರಣಪ್ಪ ಮೃತಪಟ್ಟಿದ್ದಾರೆ.ಈ ಸಂಬಂಧ ಆರಂಭದಲ್ಲಿ ಕೊಪ್ಪಳದಲ್ಲಿ ಪ್ರಕರಣ ದಾಖಲಾಗಿದ್ದು, ಬಳಿಕ ಪ್ರಕರಣವನ್ನು ಬೆಂಗಳೂರಿನ ಆರ್‌ಎಂಸಿ ಯಾರ್ಡ್ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ತನಿಖೆ ಕೈಗೊಂಡ ಪೊಲೀಸರು ಆರೋಪಿಗಳಾದ ಆನಂದ್ ಮತ್ತು ದಕ್ಷಿಣಾಮೂರ್ತಿಯನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

May 17, 2026 | 05:57 AM
63 0
ಹುಬ್ಬಳ್ಳಿ-ಧಾರವಾಡದಲ್ಲಿ ರೌಡಿಶೀಟರ್‌ಗಳ ವಿರುದ್ಧ ಪೊಲೀಸ್ ಕಾರ್ಯಾಚರಣೆ

ಹುಬ್ಬಳ್ಳಿ-ಧಾರವಾಡದಲ್ಲಿ ರೌಡಿಶೀಟರ್‌ಗಳ ವಿರುದ್ಧ ಪೊಲೀಸ್ ಕಾರ್ಯಾಚರಣೆ

ಹುಬ್ಬಳ್ಳಿ: ಸಾರ್ವಜನಿಕರಿಗೆ ತೊಂದರೆ ಉಂಟುಮಾಡುತ್ತಿದ್ದ ರೌಡಿಶೀಟರ್‌ಗಳು, MOB ಆರೋಪಿಗಳು ಹಾಗೂ NDPS ಪ್ರಕರಣಗಳಿಗೆ ಸಂಬಂಧಿಸಿದ ಆರೋಪಿಗಳ ವಿರುದ್ಧ ಹುಬ್ಬಳ್ಳಿ-ಧಾರವಾಡ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಹಲವರನ್ನು ವಶಕ್ಕೆ ಪಡೆದು ಕಾನೂನು ಕ್ರಮ ಕೈಗೊಂಡಿದ್ದಾರೆ.ವಿದ್ಯಾಗಿರಿ ಪೊಲೀಸ್ ಠಾಣೆ, ಹುಬ್ಬಳ್ಳಿ ಶಹರ ಪೊಲೀಸ್ ಠಾಣೆ ಹಾಗೂ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಕಾರ್ಯಾಚರಣೆ ನಡೆಯಿತು.ಸಾರ್ವಜನಿಕರ ಸುರಕ್ಷತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ರೌಡಿಶೀಟರ್‌ಗಳು, MOB ಗಳು, NDPS ಆರೋಪಿಗಳು ಮತ್ತು ಸಾರ್ವಜನಿಕ ಶಾಂತಿಗೆ ಭಂಗ ಉಂಟುಮಾಡುತ್ತಿದ್ದವರನ್ನು ಗುರುತಿಸಿ ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಧಾರವಾಡ ಮತ್ತು ಹುಬ್ಬಳ್ಳಿ ದಕ್ಷಿಣ ಉಪವಿಭಾಗಗಳ ACP ಅವರ ನೇತೃತ್ವದಲ್ಲಿ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.ನಗರದಲ್ಲಿ ಅಕ್ರಮ ಚಟುವಟಿಕೆಗಳು ಹಾಗೂ ಸಮಾಜವಿರೋಧಿ ಕೃತ್ಯಗಳಿಗೆ ಕಡಿವಾಣ ಹಾಕಲು ಇಂತಹ ವಿಶೇಷ ಕಾರ್ಯಾಚರಣೆಗಳು ಮುಂದುವರಿಯಲಿವೆ ಎಂದು ಪೊಲೀಸ್ ಇಲಾಖೆ ಮಾಹಿತಿ ನೀಡಿದೆ.

May 16, 2026 | 03:40 AM
102 0
ಪುಸ್ತಕದ ಚಳುವಳಿ ಜ್ಞಾನದ ಚಳುವಳಿ :ಡಾ. ಸಿ ಸೋಮಶೇಖರ್

ಪುಸ್ತಕದ ಚಳುವಳಿ ಜ್ಞಾನದ ಚಳುವಳಿ :ಡಾ. ಸಿ ಸೋಮಶೇಖರ್

ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯ ದಾಸರಹಳ್ಳಿ:' ಪುಸ್ತಕದ ಚಳುವಳಿ ಜ್ಞಾನದ ಚಳುವಳಿ, ಜ್ಞಾನ ವಿಸ್ತಾರವಾದರೆ ಅಲ್ಲಿ ಹಿಂಸೆ, ಕ್ರೌರ್ಯ ಇರುವುದಿಲ್ಲ' ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಸಿ ಸೋಮಶೇಖರ್ ತಿಳಿಸಿದರು.ಶೆಟ್ಟಿಹಳ್ಳಿಯ ಶಾಸಕ ಎಸ್. ಮುನಿರಾಜು ಅವರ ಕಚೇರಿಯಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ಮತ್ತು ದಾಸರಹಳ್ಳಿ ಕ್ಷೇತ್ರ ಕಸಾಪ ಸಹಯೋಗದೊಂದಿಗೆ 'ಮನೆಗೊಂದು ಗ್ರಂಥಾಲಯ ಅನುಷ್ಠಾನ' ಸಮಾರಂಭ ಉದ್ಘಾಟಿಸಿ ಮಾತನಾಡಿದರು.' ಪುಸ್ತಕಗಳು ನಮ್ಮ ಮನೆಯ ದೊಡ್ಡ ಆಸ್ತಿ. ಅವುಗಳನ್ನು ಜೋಪಾನ ಮಾಡಬೇಕು. ಶರಣರ, ವಚನಕಾರರ, ಜಾನಪದರ ಪದ್ಯದ ಪುಸ್ತಕಗಳು ಮಾನವೀಯತೆಯ ಮೌಲ್ಯಾಧಾರಿತವಾದವುಗಳು' ಎಂದರು.ಹಿಂದಿನ ಕಾಲದಲ್ಲಿ ಅನಕ್ಷರತೆ ಜಾಸ್ತಿ ಇತ್ತು. ಇಂದು ಎಲ್ಲರೂ ಅಕ್ಷರಸ್ಥರಾಗಿದ್ದಾರೆ, ಬುದ್ದಿವಂತರಾಗಿದ್ದಾರೆ ಹಾಗೆಯೇ ಪುಸ್ತಕ ಜ್ಞಾನವನ್ನು ಪಡೆಯಬೇಕು'ಎಂದು ಸಲಹೆ ನೀಡಿದರು.ಶಾಸಕ ಎಸ್. ಮುನಿರಾಜು ಮಾತನಾಡಿ,' ಪೋಷಕರು ತಮ್ಮ ಮಕ್ಕಳ ಕೈಗೆ ಮೊಬೈಲ್ ಬದಲು ಪುಸ್ತಕಗಳನ್ನು ನೀಡಿ ಪುಸ್ತಕ ಓದುವುದರಿಂದ ಜ್ಞಾನಾರ್ಜನೆ ಪಡೆಯಬಹುದು. ನಮ್ಮ ಕ್ಷೇತ್ರದಲ್ಲಿ ಕೂಡ ಅನೇಕ ಹಿರಿಯ ಸಾಹಿತಿಗಳು ಇದ್ದಾರೆ' ಎಂದು ತಿಳಿಸಿದರು.ನಗರ ಜಿಲ್ಲಾ ಕಸಾಪ ಅಧ್ಯಕ್ಷ ಎಂ. ಪ್ರಕಾಶ್ ಮೂರ್ತಿ ಮಾತನಾಡಿ,' ಒಂದು ಮನೆಗೆ ಪೂಜಾಲಯ ಎಷ್ಟು ಮುಖ್ಯ ಹಾಗೆಯೇ ಗ್ರಂಥಾಲಯ ಕೂಡ ಅಷ್ಟೇ ಮುಖ್ಯ. ಡಾ. ಬಿ.ಆರ್. ಅಂಬೇಡ್ಕರ್ ಅವರು ಕೂಡ ಅನೇಕ ಪುಸ್ತಕಗಳನ್ನು ಓದಿ ದೇಶವಿದೇಶಗಳ ಸ್ಥಿತಿಗತಿಗಳನ್ನು ತಿಳಿದಿದ್ದರು' ಎಂದು ಅಭಿಪ್ರಾಯಪಟ್ಟರು.ಸಮಾರಂಭದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ, ಸುರೇಶ್ ಮುಂತಾದವರಿದ್ದರು.  ವರದಿ : ಪಬ್ಲಿಕ್ ರೈಡ್ ದೇವರಾಜ್

May 13, 2026 | 01:43 PM
38 0
ಕಂದಕಕ್ಕೆ ಉರುಳಿದ ಡಾಂಬರ್ ಮಷಿನ್‌; ಆಪರೇಟರ್ ಸ್ಥಳದಲ್ಲೇ ಸಾವು

ಕಂದಕಕ್ಕೆ ಉರುಳಿದ ಡಾಂಬರ್ ಮಷಿನ್‌; ಆಪರೇಟರ್ ಸ್ಥಳದಲ್ಲೇ ಸಾವು

ಬಾಗಲಕೋಟೆ:ಟ್ರ್ಯಾಕ್ಟರ್ ಟ್ರೈಲರ್‌ನಲ್ಲಿ ಸಾಗಿಸಲಾಗುತ್ತಿದ್ದ ಡಾಂಬರ್ ಮಷಿನ್‌ ಹೆದ್ದಾರಿ ಪಕ್ಕದ ಆಳವಾದ ಕಂದಕಕ್ಕೆ ಉರುಳಿದ ಪರಿಣಾಮ, ಮಷಿನ್‌ ಆಪರೇಟರ್ ಸ್ಥಳದಲ್ಲೇ ಸಾವನ್ನಪ್ಪಿದ ದುರ್ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರ ಹೊರವಲಯದಲ್ಲಿ ನಡೆದಿದೆ.ನಗರದ ಕಟ್ಟೆ ಕೆರೆ ಸಮೀಪ ಈ ಅಪಘಾತ ಸಂಭವಿಸಿದ್ದು, ಟ್ರ್ಯಾಕ್ಟರ್ ಟ್ರೈಲರ್‌ನಲ್ಲಿ ಡಾಂಬರ್ ಮಷಿನ್‌ ಅನ್ನು ಸಾಗಿಸಲಾಗುತ್ತಿತ್ತು. ಈ ವೇಳೆ ನಿಯಂತ್ರಣ ತಪ್ಪಿದ ಟ್ರ್ಯಾಕ್ಟರ್‌ ಸಮೇತ ಮಷಿನ್‌ ಸುಮಾರು 30 ಅಡಿ ಆಳದ ಕಂದಕಕ್ಕೆ ಉರುಳಿದೆ.ಅಪಘಾತದ ತೀವ್ರತೆಗೆ ಮಷಿನ್‌ ಆಪರೇಟರ್ ಬಂದೆ ನವಾಜ್ ಶೇಕ್ (28) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರು ವಿಜಯಪುರ ಜಿಲ್ಲೆಯ ಸಿರನಾಳ ಗ್ರಾಮದ ನಿವಾಸಿಯಾಗಿದ್ದಾರೆ ಎಂದು ತಿಳಿದುಬಂದಿದೆ.ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಮೃತದೇಹವನ್ನು ಹೊರತೆಗೆದಲು ಹರಸಾಹಸ ಪಟ್ಟರು. ಬಳಿಕ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಯಿತು.ಅಪಘಾತ ಸ್ಥಳಕ್ಕೆ ಜಮಖಂಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

May 13, 2026 | 09:24 AM
26 0
24 ಗಂಟೆಯಲ್ಲಿ 29 ಲಕ್ಷ ಮೌಲ್ಯದ ಎರಡು ಕಾರು ಪತ್ತೆ: ಎಪಿಎಂಸಿ ಪೊಲೀಸರ ಚುರುಕು ಕಾರ್ಯಾಚರಣೆ

24 ಗಂಟೆಯಲ್ಲಿ 29 ಲಕ್ಷ ಮೌಲ್ಯದ ಎರಡು ಕಾರು ಪತ್ತೆ: ಎಪಿಎಂಸಿ ಪೊಲೀಸರ ಚುರುಕು ಕಾರ್ಯಾಚರಣೆ

ಬೆಳಗಾವಿ: ಮನೆ ಅಂಗಳದಲ್ಲಿ ನಿಲ್ಲಿಸಲಾಗಿದ್ದ ದುಬಾರಿ ಕಾರು ಕಳ್ಳತನ ಪ್ರಕರಣವನ್ನು ಬೆಳಗಾವಿ ನಗರದ ಎಪಿಎಂಸಿ ಪೊಲೀಸರು ಕೇವಲ 24 ಗಂಟೆಯೊಳಗೆ ಭೇದಿಸಿ, ಸುಮಾರು ₹29 ಲಕ್ಷ ಮೌಲ್ಯದ ಎರಡು ಕಾರುಗಳನ್ನು ವಶಕ್ಕೆ ಪಡೆದಿದ್ದಾರೆ.ಹನುಮಾನನಗರ ನಿವಾಸಿ ಪ್ರಿಯಾಂಕಾ ಚೇತನ ಅಜರೇಕರ ಅವರಿಗೆ ಸೇರಿದ ಕಿಯಾ ಕಂಪನಿಯ ಕಾರು (ಕೆಎ-22 ಎಂಸಿ 8122) ದಿ.10ರಂದು ಮನೆಯ ಮುಂದೆ ನಿಲ್ಲಿಸಿದ್ದ ವೇಳೆ ಕಳ್ಳತನವಾಗಿತ್ತು. ಈ ಕುರಿತು ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ-2023ರ ಕಲಂ 303(2) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಎಪಿಎಂಸಿ ಪೊಲೀಸರು, ನಗರ ಪೊಲೀಸ್ ಆಯುಕ್ತರು ಹಾಗೂ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಿ ತನಿಖೆ ಆರಂಭಿಸಿದರು. ಪಿಐ ಯು.ಎಸ್. ಆವಟಿ ನೇತೃತ್ವದ ತಂಡವು ತಾಂತ್ರಿಕ ಮಾಹಿತಿ ಹಾಗೂ ಜಾಡು ಹಿಡಿದು ಮಹಾರಾಷ್ಟ್ರದ ಮುಂಬೈವರೆಗೆ ತೆರಳಿ ಕಾರ್ಯಾಚರಣೆ ನಡೆಸಿ ಕಳ್ಳತನವಾದ ಕಾರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಯಿತು.ತನಿಖೆ ವೇಳೆ ಧಾರವಾಡ ಸಬ್ ಅರ್ಬನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನವಾಗಿದ್ದ ಹ್ಯೂಂಡೈ ಕಂಪನಿಯ ಮತ್ತೊಂದು ಕಾರು ಸಹ ಪತ್ತೆಯಾಗಿದ್ದು, ಎರಡೂ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಆದರೆ ಕಾರುಗಳನ್ನು ಕಳ್ಳತನ ಮಾಡಿದ್ದ ಆರೋಪಿತರು ವಾಹನಗಳನ್ನು ಬಿಟ್ಟು ಪರಾರಿಯಾಗಿರುವುದರಿಂದ, ಆರೋಪಿಗಳ ಬಂಧನಕ್ಕಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.ಪ್ರಕರಣ ಭೇದಿಸುವಲ್ಲಿ ಪಿಎಸ್‌ಐ ಎಸ್.ಕೆ. ಹೊಳೆನ್ನವರ, ಎಎಸ್‌ಐ ಎಂ.ಎ. ಪಾಟೀಲ ಹಾಗೂ ಸಿಬ್ಬಂದಿಗಳಾದ ಡಿ.ಸಿ. ಸಾಗರ, ಬಸವರಾಜ ನರಗುಂದ, ಗೋವಿಂದಪ್ಪ ಪೂಜಾರ, ರಫೀಕ್ ಮುಜಾವರ, ಶಿವಾಜಿ ಚವ್ಹಾಣ ಮತ್ತು ರಮೇಶ್ ಪಾಟೀಲ ಅವರ ಕಾರ್ಯವನ್ನು ಹಿರಿಯ ಪೊಲೀಸ್ ಅಧಿಕಾರಿಗಳು ಶ್ಲಾಘಿಸಿದ್ದಾರೆ.

May 13, 2026 | 09:10 AM
259 0
ಬೆಳಗಾವಿ ಸಿಸಿಬಿ ಪೊಲೀಸರ ಭರ್ಜರಿ ಕಾರ್ಯಾಚರಣೆ: ₹3 ಲಕ್ಷಕ್ಕೂ ಅಧಿಕ ಮೌಲ್ಯದ ಗಾಂಜಾ ವಶ, ಓರ್ವ ಅರೆಸ್ಟ್

ಬೆಳಗಾವಿ ಸಿಸಿಬಿ ಪೊಲೀಸರ ಭರ್ಜರಿ ಕಾರ್ಯಾಚರಣೆ: ₹3 ಲಕ್ಷಕ್ಕೂ ಅಧಿಕ ಮೌಲ್ಯದ ಗಾಂಜಾ ವಶ, ಓರ್ವ ಅರೆಸ್ಟ್

ಬೆಳಗಾವಿ: ನಗರದಲ್ಲಿ ಅಕ್ರಮ ಮಾದಕ ವಸ್ತುಗಳ ಮಾರಾಟಕ್ಕೆ ಕಡಿವಾಣ ಹಾಕಲು ಸಿಸಿಬಿ ಪೊಲೀಸರು ನಿರಂತರ ಕಾರ್ಯಾಚರಣೆ ಮುಂದುವರಿಸಿದ್ದು, ಇದೀಗ ಮತ್ತೊಂದು ಯಶಸ್ವಿ ದಾಳಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿ ಲಕ್ಷಾಂತರ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.ನಗರದ ಕಾಕತಿ ಪೊಲೀಸ್ ಠಾಣೆ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 48ರ ಸರ್ವಿಸ್ ರಸ್ತೆಯ ಬಳಿ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ದಾಳಿ ನಡೆಸಿದರು. ಈ ವೇಳೆ ಮಹಾರಾಷ್ಟ್ರ ಮೂಲದ ಸೈಯ್ಯದ್ ನಿಸಾರ್ ಸೈಯ್ಯದ್ ಇಸಾಕ್ (40) ಎಂಬಾತನನ್ನು ಬಂಧಿಸಲಾಗಿದೆ.ಬಂಧಿತನಿಂದ ಸುಮಾರು 6 ಕೆಜಿ 145 ಗ್ರಾಂ ಗಾಂಜಾ, ಒಂದು ವಿವೋ ಮೊಬೈಲ್ ಫೋನ್ ಸೇರಿದಂತೆ ಒಟ್ಟು ₹3.10 ಲಕ್ಷ ಮೌಲ್ಯದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಗಾಂಜಾದ ಮೌಲ್ಯವೇ ಸುಮಾರು ₹3.05 ಲಕ್ಷ ಎಂದು ಅಂದಾಜಿಸಲಾಗಿದೆ.ಸಿಸಿಬಿ ಇನ್ಸ್‌ಪೆಕ್ಟರ್ ಮಂಜುನಾಥ ನಾಯಕ, ಮಂಜುನಾಥ ಭಜಂತ್ರಿ ಹಾಗೂ ಸಿಬ್ಬಂದಿ ತಂಡದ ಕಾರ್ಯಾಚರಣೆಯಲ್ಲಿ ಈ ಯಶಸ್ಸು ದೊರೆತಿದೆ. ನಗರ ಪೊಲೀಸ್ ಆಯುಕ್ತರು ಹಾಗೂ ಡಿಸಿಪಿ ಅವರು ಸಿಸಿಬಿ ತಂಡದ ಕಾರ್ಯವನ್ನು ಶ್ಲಾಘಿಸಿದ್ದಾರೆ.ಈ ಕುರಿತು ಕಾಕತಿ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಆರೋಪಿಯ ಹಿನ್ನೆಲೆ ಹಾಗೂ ಗಾಂಜಾ ಪೂರೈಕೆ ಜಾಲದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

May 12, 2026 | 01:52 PM
56 0
ಮಲೆ ಮಹದೇಶ್ವರ ಬೆಟ್ಟದಲ್ಲಿ ಚಿರತೆ ದಾಳಿ: 12 ವರ್ಷದ ಬಾಲಕ ಬಲಿ

ಮಲೆ ಮಹದೇಶ್ವರ ಬೆಟ್ಟದಲ್ಲಿ ಚಿರತೆ ದಾಳಿ: 12 ವರ್ಷದ ಬಾಲಕ ಬಲಿ

ಮಲೆ ಮಹದೇಶ್ವರ ಬೆಟ್ಟ: ನಾಗಮಲೆ ಮಾರ್ಗದಲ್ಲಿ ಚಿರತೆ ದಾಳಿಗೆ 12 ವರ್ಷದ ಬಾಲಕ ಬಲಿಯಾದ ಹೃದಯವಿದ್ರಾವಕ ಘಟನೆ ನಿನ್ನೆ ಬೆಳಗ್ಗೆ ನಡೆದಿದೆ. ಮೃತ ಬಾಲಕನನ್ನು ಹರ್ಷಿತ್ ಗೌಡ ಎಂದು ಗುರುತಿಸಲಾಗಿದೆ.ಬೆಂಗಳೂರು ನಗರದ ಲಗ್ಗೆರೆ ವಾರ್ಡಿನ ಕುಟುಂಬವು ದೇವರ ದರ್ಶನಕ್ಕಾಗಿ ಮಲೆ ಮಹದೇಶ್ವರ ಬೆಟ್ಟಕ್ಕೆ ಆಗಮಿಸಿದ್ದ ವೇಳೆ ಈ ದುರಂತ ಸಂಭವಿಸಿದೆ. ಕುಟುಂಬಸ್ಥರ ಕಣ್ಣೆದುರೇ ಚಿರತೆ ಬಾಲಕನ ಮೇಲೆ ದಾಳಿ ನಡೆಸಿ, ಪೊದೆಗಳೊಳಗೆ ಎಳೆದೊಯ್ದಿರುವುದು ಆತಂಕ ಸೃಷ್ಟಿಸಿದೆ.ಈ ಘಟನೆ ಇಂಡಿಗನತ್ತ ಗ್ರಾಮ ಸಮೀಪದ ಅರಣ್ಯ ಪ್ರದೇಶದಲ್ಲಿ ನಡೆದಿದೆ ಎಂದು ತಿಳಿದುಬಂದಿದೆ. ಘಟನೆ ನಂತರ ಅರಣ್ಯ ಇಲಾಖೆ ಸಿಬ್ಬಂದಿ, ಪೊಲೀಸರು ಹಾಗೂ ಸ್ಥಳೀಯರು ಸೇರಿಕೊಂಡು ವ್ಯಾಪಕ ಶೋಧ ಕಾರ್ಯಾಚರಣೆ ನಡೆಸಿದರು. ಬಳಿಕ ಅರಣ್ಯ ಪ್ರದೇಶದಲ್ಲೇ ಬಾಲಕನ ಶವ ಪತ್ತೆಯಾಯಿತು.ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಹಾಗೂ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಮಧ್ಯೆ, ಅರಣ್ಯ ಇಲಾಖೆ ನಿರ್ಲಕ್ಷ್ಯವೇ ಮಗುವಿನ ಸಾವಿಗೆ ಕಾರಣ ಎಂದು ಆರೋಪಿಸಿರುವ ಕುಟುಂಬಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಘಟನೆಯ ನಂತರ ನಾಗಮಲೆ ಮಾರ್ಗದ ಭದ್ರತೆ ಕುರಿತು ಸಾರ್ವಜನಿಕರು ಪ್ರಶ್ನೆ ಎತ್ತಿದ್ದಾರೆ. ಪ್ರವಾಸಿಗರಲ್ಲಿ ಆತಂಕ ಹೆಚ್ಚಾಗಿದ್ದು, ಎಂಎಂ ಹಿಲ್ಸ್ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಅರಣ್ಯ ಪ್ರದೇಶಗಳಲ್ಲಿ ಪ್ರವಾಸಿಗರು ಎಚ್ಚರಿಕೆಯಿಂದ ಸಂಚರಿಸುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

May 11, 2026 | 11:11 AM
198 0
ಧಾರವಾಡ ಉಪನಗರ ಪೊಲೀಸ್ ಠಾಣೆಗೆ ಹೊಸ ಇನ್ಸ್ಪೆಕ್ಟರ್ ನೇಮಕ

ಧಾರವಾಡ ಉಪನಗರ ಪೊಲೀಸ್ ಠಾಣೆಗೆ ಹೊಸ ಇನ್ಸ್ಪೆಕ್ಟರ್ ನೇಮಕ

ಧಾರವಾಡ: ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದ ಹುಬ್ಬಳ್ಳಿ-ಧಾರವಾಡ ನಗರ ಪೊಲೀಸ್ ಕಮಿಷ್ನರೇಟ್ ವ್ಯಾಪ್ತಿಯ ಧಾರವಾಡ ಉಪನಗರ ಪೊಲೀಸ್ ಠಾಣೆಯ ಖಾಲಿ ಇದ್ದ ಪೊಲೀಸ್ ಇನ್ಸ್ಪೆಕ್ಟರ್ ಹುದ್ದೆ ಇದೀಗ ಭರ್ತಿಯಾಗಿದೆ.ಹುಕ್ಕೇರಿ ತಾಲೂಕಿನ ಪೊಲೀಸ್ ಇನ್ಸ್ಪೆಕ್ಟರ್ ಮಹಾಂತೇಶ್ ಕಲ್ಲಪ್ಪ ಬಸಾಪುರ್ ಅವರನ್ನು ಧಾರವಾಡ ಉಪನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಆಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ. ಬಹುದಿನಗಳಿಂದ ಈ ಹುದ್ದೆ ಖಾಲಿ ಇದ್ದ ಹಿನ್ನೆಲೆ, ಹುಬ್ಬಳ್ಳಿ ಉಪನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಗಂಗೆನಹಳ್ಳಿ ಅವರು ಹುಬ್ಬಳ್ಳಿ ಹಾಗೂ ಧಾರವಾಡ ಉಪನಗರ ಪೊಲೀಸ್ ಠಾಣೆಗಳ ಎರಡು ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದರು.ಈ ನೇಮಕಾತಿಯಿಂದ ಧಾರವಾಡ ಉಪನಗರ ಪೊಲೀಸ್ ಠಾಣೆಯ ಆಡಳಿತ ಮತ್ತು ಕಾನೂನು ಸುವ್ಯವಸ್ಥೆ ಕಾರ್ಯಗಳಿಗೆ ಮತ್ತಷ್ಟು ಚುರುಕು ಸಿಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ. ಸ್ಥಳೀಯರು ಹಾಗೂ ಸಾರ್ವಜನಿಕ ವಲಯದಲ್ಲೂ ಹೊಸ ಇನ್ಸ್ಪೆಕ್ಟರ್ ನೇಮಕಕ್ಕೆ ಸ್ವಾಗತ ವ್ಯಕ್ತವಾಗಿದೆ.ಬಹುಕಾಲದಿಂದ ಖಾಲಿ ಇದ್ದ ಪ್ರಮುಖ ಹುದ್ದೆ ಭರ್ತಿಯಾಗಿರುವುದರಿಂದ ಪೊಲೀಸ್ ಇಲಾಖೆಯ ಕಾರ್ಯ ನಿರ್ವಹಣೆಗೆ ಸಹಕಾರಿಯಾಗಲಿದೆ ಎಂದು ಹೇಳಲಾಗುತ್ತಿದೆ.

May 11, 2026 | 04:02 AM
179 0