ಬೆಳಗಾವಿ: ಮನೆ ಅಂಗಳದಲ್ಲಿ ನಿಲ್ಲಿಸಲಾಗಿದ್ದ ದುಬಾರಿ ಕಾರು ಕಳ್ಳತನ ಪ್ರಕರಣವನ್ನು ಬೆಳಗಾವಿ ನಗರದ ಎಪಿಎಂಸಿ ಪೊಲೀಸರು ಕೇವಲ 24 ಗಂಟೆಯೊಳಗೆ ಭೇದಿಸಿ, ಸುಮಾರು ₹29 ಲಕ್ಷ ಮೌಲ್ಯದ ಎರಡು ಕಾರುಗಳನ್ನು ವಶಕ್ಕೆ ಪಡೆದಿದ್ದಾರೆ.
ಹನುಮಾನನಗರ ನಿವಾಸಿ ಪ್ರಿಯಾಂಕಾ ಚೇತನ ಅಜರೇಕರ ಅವರಿಗೆ ಸೇರಿದ ಕಿಯಾ ಕಂಪನಿಯ ಕಾರು (ಕೆಎ-22 ಎಂಸಿ 8122) ದಿ.10ರಂದು ಮನೆಯ ಮುಂದೆ ನಿಲ್ಲಿಸಿದ್ದ ವೇಳೆ ಕಳ್ಳತನವಾಗಿತ್ತು. ಈ ಕುರಿತು ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ-2023ರ ಕಲಂ 303(2) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಎಪಿಎಂಸಿ ಪೊಲೀಸರು, ನಗರ ಪೊಲೀಸ್ ಆಯುಕ್ತರು ಹಾಗೂ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಿ ತನಿಖೆ ಆರಂಭಿಸಿದರು. ಪಿಐ ಯು.ಎಸ್. ಆವಟಿ ನೇತೃತ್ವದ ತಂಡವು ತಾಂತ್ರಿಕ ಮಾಹಿತಿ ಹಾಗೂ ಜಾಡು ಹಿಡಿದು ಮಹಾರಾಷ್ಟ್ರದ ಮುಂಬೈವರೆಗೆ ತೆರಳಿ ಕಾರ್ಯಾಚರಣೆ ನಡೆಸಿ ಕಳ್ಳತನವಾದ ಕಾರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಯಿತು.
ತನಿಖೆ ವೇಳೆ ಧಾರವಾಡ ಸಬ್ ಅರ್ಬನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನವಾಗಿದ್ದ ಹ್ಯೂಂಡೈ ಕಂಪನಿಯ ಮತ್ತೊಂದು ಕಾರು ಸಹ ಪತ್ತೆಯಾಗಿದ್ದು, ಎರಡೂ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆದರೆ ಕಾರುಗಳನ್ನು ಕಳ್ಳತನ ಮಾಡಿದ್ದ ಆರೋಪಿತರು ವಾಹನಗಳನ್ನು ಬಿಟ್ಟು ಪರಾರಿಯಾಗಿರುವುದರಿಂದ, ಆರೋಪಿಗಳ ಬಂಧನಕ್ಕಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.
ಪ್ರಕರಣ ಭೇದಿಸುವಲ್ಲಿ ಪಿಎಸ್‌ಐ ಎಸ್.ಕೆ. ಹೊಳೆನ್ನವರ, ಎಎಸ್‌ಐ ಎಂ.ಎ. ಪಾಟೀಲ ಹಾಗೂ ಸಿಬ್ಬಂದಿಗಳಾದ ಡಿ.ಸಿ. ಸಾಗರ, ಬಸವರಾಜ ನರಗುಂದ, ಗೋವಿಂದಪ್ಪ ಪೂಜಾರ, ರಫೀಕ್ ಮುಜಾವರ, ಶಿವಾಜಿ ಚವ್ಹಾಣ ಮತ್ತು ರಮೇಶ್ ಪಾಟೀಲ ಅವರ ಕಾರ್ಯವನ್ನು ಹಿರಿಯ ಪೊಲೀಸ್ ಅಧಿಕಾರಿಗಳು ಶ್ಲಾಘಿಸಿದ್ದಾರೆ.