ಧಾರವಾಡ: ಧಾರವಾಡ ಜಿಲ್ಲೆಯಲ್ಲಿ ಬಜರಂಗದಳದ ಕಾರ್ಯಕರ್ತರು ನಡೆಸಿದ ಕಾರ್ಯಾಚರಣೆಯಲ್ಲಿ ಬೆಳಗಾವಿಯಿಂದ ಹುಬ್ಬಳ್ಳಿಗೆ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಸುಮಾರು 5 ಟನ್ ಗೋಮಾಂಸದ ತುಂಬಿದ ಅಶೋಕ ಲೆಲ್ಯಾಂಡ್ ವಾಹನವನ್ನು ವಶಪಡಿಸಿಕೊಂಡು ಪೊಲೀಸರಿಗೆ ಒಪ್ಪಿಸಿದ್ದಾರೆ.
ದಳದ ಕಾರ್ಯಕರ್ತರಾದ ಗಣೇಶ, ಧ್ರುವ, ಶುಭಂ, ಬಸು ಮತ್ತಿತರರು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ರಹಸ್ಯ ಮಾಹಿತಿಯ ಆಧಾರದ ಮೇಲೆ ಕಾರ್ಯಕರ್ತರು ವಾಹನವನ್ನು ತಡೆದು ಪರಿಶೀಲನೆ ನಡೆಸಿದಾಗ, ದೊಡ್ಡ ಪ್ರಮಾಣದ ಗೋಮಾಂಸವನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ.
ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪೊಲೀಸರು ವಾಹನ ಮತ್ತು ಗೋಮಾಂಸವನ್ನು ವಶಕ್ಕೆ ಪಡೆದು ಮುಂದಿನ ತನಿಖೆ ಕೈಗೊಂಡಿದ್ದಾರೆ. ಸ್ಥಳೀಯರಲ್ಲಿ ಈ ಘಟನೆ ತೀವ್ರ ಸಂಚಲನ ಮೂಡಿಸಿದೆ.