ಹುಬ್ಬಳ್ಳಿ: ನಗರದಲ್ಲಿ ಸುರಿದ ಭಾರೀ ಮಳೆಯ ಪರಿಣಾಮ ವಾರ್ಡ್ ನಂ. 53ರ ಶಿವಪುತ್ರ ನಗರದಲ್ಲಿ ದೊಡ್ಡ ಮರ ದರೇಗುರುಳಿದ ಘಟನೆ ನಡೆದಿದೆ. ಮರ ಉರುಳಿದ ಪರಿಣಾಮ ಸಮೀಪದಲ್ಲಿದ್ದ ವಿದ್ಯುತ್ ಕಂಬವೂ ನೆಲಕ್ಕುರುಳಿ ದರ್ಗಾ ಹಾಗೂ ಮನೆಯೊಂದಕ್ಕೆ ಹಾನಿಯಾಗಿದೆ.
ಘಟನೆಯಿಂದ ಕೆಲಕಾಲ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಸ್ಥಳೀಯರು ತಕ್ಷಣವೇ ಪಾಲಿಕೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ವಿದ್ಯುತ್ ಕಂಬ ಬಿದ್ದ ಹಿನ್ನೆಲೆಯಲ್ಲಿ ವಿದ್ಯುತ್ ಸಂಪರ್ಕಕ್ಕೂ ವ್ಯತ್ಯಯ ಉಂಟಾಗಿದೆ ಎಂದು ತಿಳಿದುಬಂದಿದೆ.
ಘಟನೆ ಕುರಿತು ಮಾಹಿತಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಪಾಲಿಕೆ ಸದಸ್ಯ ಶ್ರೀ ಆರಿಫ್ ಭದ್ರಾಪೂರ ಅವರು ಪರಿಶೀಲನೆ ನಡೆಸಿ, ಸಂಬಂಧಿಸಿದ ಅಧಿಕಾರಿಗಳಿಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಮರ ತೆರವು ಹಾಗೂ ಹಾನಿಗೊಳಗಾದ ಪ್ರದೇಶದ ದುರಸ್ತಿ ಕಾರ್ಯವನ್ನು ಶೀಘ್ರ ಆರಂಭಿಸಲಾಗುವುದು ಎಂದು ಅವರು ಭರವಸೆ ನೀಡಿದರು.
ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಭಾರೀ ಮಳೆಯ ಹಿನ್ನೆಲೆ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕೆಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.