ಕರ್ನಾಟಕ

ಕುಡಿದ ಮತ್ತಿನಲ್ಲಿ ಸ್ನೇಹಿತರ ನಡುವೆ ಗಲಾಟೆ; ವ್ಯಕ್ತಿ ಸಾವು ಇಬ್ಬರು ಆರೋಪಿಗಳ ಬಂಧನ

ಮೂಲಕ News Desk | ಪ್ರಕಟಿಸಲಾಗಿದೆ May 17, 2026 May 17, 2026 | 05:57 AM 45 ವೀಕ್ಷಣೆಗಳು

ಬೆಂಗಳೂರು: ಕುಡಿದ ಮತ್ತಿನಲ್ಲಿ ಸ್ನೇಹಿತರ ನಡುವೆ ನಡೆದ ಗಲಾಟೆ ಒಬ್ಬ ವ್ಯಕ್ತಿಯ ಸಾವಿನಲ್ಲಿ ಅಂತ್ಯಗೊಂಡ ಘಟನೆ ಬೆಂಗಳೂರಿನ ಯಶವಂತಪುರ ಭಾಗದಲ್ಲಿ ನಡೆದಿದ್ದು, ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಆರ್‌ಎಂಸಿ ಯಾರ್ಡ್ ಪೊಲೀಸರು ಬಂಧಿಸಿದ್ದಾರೆ.

ಕೊಪ್ಪಳ ಮೂಲದ ಶರಣಪ್ಪ (36) ಮೃತ ವ್ಯಕ್ತಿಯಾಗಿದ್ದು, ಬೆಂಗಳೂರಿನಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಶರಣಪ್ಪ ಹಾಗೂ ಆತನ ಸ್ನೇಹಿತರಾದ ಆನಂದ್ ಮತ್ತು ದಕ್ಷಿಣಾಮೂರ್ತಿ ನಡುವೆ ಕೌಟುಂಬಿಕ ವಿಚಾರಕ್ಕೆ ಸಂಬಂಧಿಸಿದಂತೆ ಜಗಳ ಆರಂಭವಾಗಿತ್ತು.


ಮೇ 10ರಂದು ಯಶವಂತಪುರದ ಗೋವರ್ಧನ್ ಟಾಕೀಸ್ ಸಮೀಪದ ಬಾರ್ ಒಂದರಲ್ಲಿ ಮೂವರ ನಡುವೆ ವಾಗ್ವಾದ ನಡೆದಿದ್ದು, ಬಳಿಕ ಬಾರ್ ಹೊರಗಡೆಯೂ ಗಲಾಟೆ ಮುಂದುವರಿದಿತ್ತು. ಈ ವೇಳೆ ಆನಂದ್ ಹಾಗೂ ದಕ್ಷಿಣಾಮೂರ್ತಿ ಶರಣಪ್ಪಗೆ ಡಿಚ್ಚಿ ಹೊಡೆದು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.


ಘಟನೆಯ ಬಳಿಕ ಮೂವರೂ ಒಂದೇ ಶೆಡ್‌ಗೆ ತೆರಳಿ ಮಲಗಿದ್ದರು. ಆದರೆ ಶರಣಪ್ಪ ತೀವ್ರ ಅಸ್ವಸ್ಥಗೊಂಡ ಹಿನ್ನೆಲೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಸ್ವಗ್ರಾಮ ಕೊಪ್ಪಳಕ್ಕೆ ಕರೆದುಕೊಂಡು ಹೋಗಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶರಣಪ್ಪ ಮೃತಪಟ್ಟಿದ್ದಾರೆ.


ಈ ಸಂಬಂಧ ಆರಂಭದಲ್ಲಿ ಕೊಪ್ಪಳದಲ್ಲಿ ಪ್ರಕರಣ ದಾಖಲಾಗಿದ್ದು, ಬಳಿಕ ಪ್ರಕರಣವನ್ನು ಬೆಂಗಳೂರಿನ ಆರ್‌ಎಂಸಿ ಯಾರ್ಡ್ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ತನಿಖೆ ಕೈಗೊಂಡ ಪೊಲೀಸರು ಆರೋಪಿಗಳಾದ ಆನಂದ್ ಮತ್ತು ದಕ್ಷಿಣಾಮೂರ್ತಿಯನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.