ಧಾರವಾಡದಲ್ಲೂ ಚೀಟಿ ವ್ಯವಹಾರ ಆರೋಪ; ಕ್ರಮಕ್ಕೆ ಸಾರ್ವಜನಿಕರ ಒತ್ತಾಯ
ಬೆಳಗಾವಿ: ಅನಧಿಕೃತ ಬಡ್ಡಿ ಮತ್ತು ಠೇವಣಿ ವ್ಯವಹಾರ ನಡೆಸಿದ ಆರೋಪದ ಮೇಲೆ ಬೆಳಗಾವಿಯ ಶಿವಂ ಅಸೋಸಿಯಟ್ಸ್ ಮಾಲೀಕ ಶಿವಾನಂದ ನೀಲಣ್ಣವರ್ ಅವರನ್ನು ಅಧಿಕಾರಿಗಳು ಶುಕ್ರವಾರ ರಾತ್ರಿ ಬಂಧಿಸಿದ್ದಾರೆ. ಪ್ರಕರಣದಲ್ಲಿ 50 ಕೋಟಿಗೂ ಅಧಿಕ ಹಣಕಾಸು ಅವ್ಯವಹಾರ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ತನಿಖೆ ಮುಂದುವರಿದಿದೆ.
ಈ ಕುರಿತು ಮಾಹಿತಿ ನೀಡಿದ ಬೆಳಗಾವಿ ಜಿಲ್ಲಾಧಿಕಾರಿ ಮೊಮ್ಮದ್ ರೋಷನ್, ಇದು ಅತ್ಯಂತ ಗಂಭೀರ ಪ್ರಕರಣವಾಗಿದ್ದು, ಶಿವಾನಂದ ನೀಲಣ್ಣವರ್ ವಿವಿಧ ರಾಜ್ಯಗಳ ಜನರಿಂದ ಕೈಸಾಲ ಮತ್ತು ಹೂಡಿಕೆ ಹೆಸರಿನಲ್ಲಿ ದೊಡ್ಡ ಪ್ರಮಾಣದ ಹಣ ಸಂಗ್ರಹಿಸಿರುವುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಹೇಳಿದರು.
ಶಿವಾನಂದ ನೀಲಣ್ಣವರ್ ಬಳಿ ಸುಮಾರು 35 ಸಾವಿರಕ್ಕೂ ಹೆಚ್ಚು ಜನರು ಹಣ ಠೇವಣಿ ಇಟ್ಟಿರುವ ಶಂಕೆ ವ್ಯಕ್ತವಾಗಿದೆ. “1 ಲಕ್ಷ ರೂ. ಠೇವಣಿ ಇಟ್ಟರೆ ವಾರ್ಷಿಕ ಶೇಕಡಾ 36ರಷ್ಟು ಬಡ್ಡಿ ನೀಡಲಾಗುವುದು” ಎಂದು ಜಾಹೀರಾತು ನೀಡಿ ಸಾರ್ವಜನಿಕರಿಂದ ಹಣ ಹೂಡಿಕೆ ಮಾಡಿಸಿಕೊಂಡಿರುವ ಆರೋಪ ಕೇಳಿಬಂದಿದೆ.
ರಾಜ್ಯ ಮಾತ್ರವಲ್ಲದೆ ಮಹಾರಾಷ್ಟ್ರ, ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿಯೂ ಹಣ ಸಂಗ್ರಹ ನಡೆಸಿರುವ ಮಾಹಿತಿ ಲಭ್ಯವಾಗಿದೆ. ಒಟ್ಟು ಎಷ್ಟು ಕೋಟಿ ರೂಪಾಯಿ ಠೇವಣಿ ಸಂಗ್ರಹಿಸಲಾಗಿದೆ ಎಂಬುದು ತನಿಖೆ ಬಳಿಕ ಸ್ಪಷ್ಟವಾಗಲಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ವಿಡಿಯೋಗಳ ಆಧಾರದ ಮೇಲೆ ಅಧಿಕಾರಿಗಳು ಶಿವಾನಂದ ನೀಲಣ್ಣವರ್ ಅವರ ಕಚೇರಿ ಮತ್ತು ನಿವಾಸದ ಮೇಲೆ ದಾಳಿ ನಡೆಸಿದ್ದು, ದೊಡ್ಡ ಪ್ರಮಾಣದ ಹಣಕಾಸು ವ್ಯವಹಾರಗಳ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಪ್ರತಿ ತಿಂಗಳು ಒಂದೇ ಖಾತೆಯಿಂದ 300ರಿಂದ 400 ಕೋಟಿ ರೂಪಾಯಿವರೆಗೆ ವ್ಯವಹಾರ ನಡೆದಿರುವ ಮಾಹಿತಿ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ಅದೇ ವೇಳೆ, ರಿಸರ್ವ್ ಬ್ಯಾಂಕ್ ಹಾಗೂ ಸಹಕಾರ ಸಂಸ್ಥೆಗಳ ನಿಯಮಗಳನ್ನು ಪಾಲಿಸದೆ ಹಣಕಾಸು ಚಟುವಟಿಕೆ ನಡೆಸಲಾಗಿತ್ತು ಎಂಬ ಆರೋಪವೂ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೆಪಿಐಡಿ ಕಾಯ್ದೆಯಡಿ ವಿಶೇಷ ತನಿಖಾ ವಿಭಾಗವನ್ನು ತೆರೆಯಲಾಗಿದೆ.
ಇನ್ನೊಂದೆಡೆ, ಧಾರವಾಡದಲ್ಲಿಯೂ ಇದೇ ರೀತಿಯ ಚೀಟಿ ವ್ಯವಹಾರ ಆರೋಪ ಸದ್ದು ಮಾಡುತ್ತಿದೆ. ಅಯಾಜ್ ಗೋರೆಖಾನ್ ಎಂಬಾತ ಮಹಿಳೆಯರಿಂದ ಚೀಟಿ ವ್ಯವಹಾರದ ಹೆಸರಿನಲ್ಲಿ ಹಣ ಸಂಗ್ರಹಿಸಿ ಮೋಸ ಮಾಡಿದ್ದಾನೆ ಎಂದು ಕೆಲ ದಿನಗಳ ಹಿಂದೆ ಹಲವು ಮಹಿಳೆಯರು ಆಗಿನ ಧಾರವಾಡ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರಿಗೆ ದೂರು ನೀಡಿದ್ದರು.
ಈ ದೂರಿನ ಪರಿಶೀಲನೆ ವೇಳೆ ಅಯಾಜ್ ಗೋರೆಖಾನ್ ಅವರ ಹೆಸರಿನಲ್ಲಿ ಯಾವುದೇ ಕಾನೂನುಬದ್ಧ ಚೀಟಿ ವ್ಯವಹಾರ ಪರವಾನಿಗೆ ಇಲ್ಲ ಎಂಬುದು ಅಧಿಕಾರಿಗಳಿಗೆ ತಿಳಿದುಬಂದಿತ್ತು. ಸಹಕಾರ ಇಲಾಖೆಯ ಅಧಿಕಾರಿಗಳು ತಪ್ಪು ಕಂಡುಬಂದರೆ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಹುಬ್ಬಳ್ಳಿ-ಧಾರವಾಡ ನಗರ ಪೊಲೀಸ್ ಕಮಿಷನರೇಟ್‌ಗೆ ಪತ್ರ ಬರೆದಿದ್ದರೂ ಇದುವರೆಗೆ ಯಾವುದೇ ಕಠಿಣ ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ಈಗ ಬೆಳಗಾವಿಯಲ್ಲಿ ನಡೆದಿರುವ ಬೆಳವಣಿಗೆ ಹಿನ್ನೆಲೆ, ಧಾರವಾಡದಲ್ಲಿಯೂ ಪರವಾನಿಗೆ ಇಲ್ಲದೆ ಹಣಕಾಸು ವ್ಯವಹಾರ ನಡೆಸುತ್ತಿರುವವರ ವಿರುದ್ಧ ನೂತನ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳುವರೇ ಎಂಬುದನ್ನು ಸಾರ್ವಜನಿಕರು ಕಾದುನೋಡುತ್ತಿದ್ದಾರೆ.