ಮಲೆ ಮಹದೇಶ್ವರ ಬೆಟ್ಟ: ನಾಗಮಲೆ ಮಾರ್ಗದಲ್ಲಿ ಚಿರತೆ ದಾಳಿಗೆ 12 ವರ್ಷದ ಬಾಲಕ ಬಲಿಯಾದ ಹೃದಯವಿದ್ರಾವಕ ಘಟನೆ ನಿನ್ನೆ ಬೆಳಗ್ಗೆ ನಡೆದಿದೆ. ಮೃತ ಬಾಲಕನನ್ನು ಹರ್ಷಿತ್ ಗೌಡ ಎಂದು ಗುರುತಿಸಲಾಗಿದೆ.
ಬೆಂಗಳೂರು ನಗರದ ಲಗ್ಗೆರೆ ವಾರ್ಡಿನ ಕುಟುಂಬವು ದೇವರ ದರ್ಶನಕ್ಕಾಗಿ ಮಲೆ ಮಹದೇಶ್ವರ ಬೆಟ್ಟಕ್ಕೆ ಆಗಮಿಸಿದ್ದ ವೇಳೆ ಈ ದುರಂತ ಸಂಭವಿಸಿದೆ. ಕುಟುಂಬಸ್ಥರ ಕಣ್ಣೆದುರೇ ಚಿರತೆ ಬಾಲಕನ ಮೇಲೆ ದಾಳಿ ನಡೆಸಿ, ಪೊದೆಗಳೊಳಗೆ ಎಳೆದೊಯ್ದಿರುವುದು ಆತಂಕ ಸೃಷ್ಟಿಸಿದೆ.
ಈ ಘಟನೆ ಇಂಡಿಗನತ್ತ ಗ್ರಾಮ ಸಮೀಪದ ಅರಣ್ಯ ಪ್ರದೇಶದಲ್ಲಿ ನಡೆದಿದೆ ಎಂದು ತಿಳಿದುಬಂದಿದೆ. ಘಟನೆ ನಂತರ ಅರಣ್ಯ ಇಲಾಖೆ ಸಿಬ್ಬಂದಿ, ಪೊಲೀಸರು ಹಾಗೂ ಸ್ಥಳೀಯರು ಸೇರಿಕೊಂಡು ವ್ಯಾಪಕ ಶೋಧ ಕಾರ್ಯಾಚರಣೆ ನಡೆಸಿದರು. ಬಳಿಕ ಅರಣ್ಯ ಪ್ರದೇಶದಲ್ಲೇ ಬಾಲಕನ ಶವ ಪತ್ತೆಯಾಯಿತು.
ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಹಾಗೂ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಮಧ್ಯೆ, ಅರಣ್ಯ ಇಲಾಖೆ ನಿರ್ಲಕ್ಷ್ಯವೇ ಮಗುವಿನ ಸಾವಿಗೆ ಕಾರಣ ಎಂದು ಆರೋಪಿಸಿರುವ ಕುಟುಂಬಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.