ಬಾಗಲಕೋಟೆ:ಟ್ರ್ಯಾಕ್ಟರ್ ಟ್ರೈಲರ್‌ನಲ್ಲಿ ಸಾಗಿಸಲಾಗುತ್ತಿದ್ದ ಡಾಂಬರ್ ಮಷಿನ್ ಹೆದ್ದಾರಿ ಪಕ್ಕದ ಆಳವಾದ ಕಂದಕಕ್ಕೆ ಉರುಳಿದ ಪರಿಣಾಮ, ಮಷಿನ್ ಆಪರೇಟರ್ ಸ್ಥಳದಲ್ಲೇ ಸಾವನ್ನಪ್ಪಿದ ದುರ್ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರ ಹೊರವಲಯದಲ್ಲಿ ನಡೆದಿದೆ.
ನಗರದ ಕಟ್ಟೆ ಕೆರೆ ಸಮೀಪ ಈ ಅಪಘಾತ ಸಂಭವಿಸಿದ್ದು, ಟ್ರ್ಯಾಕ್ಟರ್ ಟ್ರೈಲರ್‌ನಲ್ಲಿ ಡಾಂಬರ್ ಮಷಿನ್ ಅನ್ನು ಸಾಗಿಸಲಾಗುತ್ತಿತ್ತು. ಈ ವೇಳೆ ನಿಯಂತ್ರಣ ತಪ್ಪಿದ ಟ್ರ್ಯಾಕ್ಟರ್ ಸಮೇತ ಮಷಿನ್ ಸುಮಾರು 30 ಅಡಿ ಆಳದ ಕಂದಕಕ್ಕೆ ಉರುಳಿದೆ.
ಅಪಘಾತದ ತೀವ್ರತೆಗೆ ಮಷಿನ್ ಆಪರೇಟರ್ ಬಂದೆ ನವಾಜ್ ಶೇಕ್ (28) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರು ವಿಜಯಪುರ ಜಿಲ್ಲೆಯ ಸಿರನಾಳ ಗ್ರಾಮದ ನಿವಾಸಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಮೃತದೇಹವನ್ನು ಹೊರತೆಗೆದಲು ಹರಸಾಹಸ ಪಟ್ಟರು. ಬಳಿಕ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಯಿತು.
ಅಪಘಾತ ಸ್ಥಳಕ್ಕೆ ಜಮಖಂಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿ
ಸಿದ್ದಾರೆ.