ಧಾರವಾಡ: ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದ ಹುಬ್ಬಳ್ಳಿ-ಧಾರವಾಡ ನಗರ ಪೊಲೀಸ್ ಕಮಿಷ್ನರೇಟ್ ವ್ಯಾಪ್ತಿಯ ಧಾರವಾಡ ಉಪನಗರ ಪೊಲೀಸ್ ಠಾಣೆಯ ಖಾಲಿ ಇದ್ದ ಪೊಲೀಸ್ ಇನ್ಸ್ಪೆಕ್ಟರ್ ಹುದ್ದೆ ಇದೀಗ ಭರ್ತಿಯಾಗಿದೆ.
ಹುಕ್ಕೇರಿ ತಾಲೂಕಿನ ಪೊಲೀಸ್ ಇನ್ಸ್ಪೆಕ್ಟರ್ ಮಹಾಂತೇಶ್ ಕಲ್ಲಪ್ಪ ಬಸಾಪುರ್ ಅವರನ್ನು ಧಾರವಾಡ ಉಪನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಆಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ. ಬಹುದಿನಗಳಿಂದ ಈ ಹುದ್ದೆ ಖಾಲಿ ಇದ್ದ ಹಿನ್ನೆಲೆ, ಹುಬ್ಬಳ್ಳಿ ಉಪನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಗಂಗೆನಹಳ್ಳಿ ಅವರು ಹುಬ್ಬಳ್ಳಿ ಹಾಗೂ ಧಾರವಾಡ ಉಪನಗರ ಪೊಲೀಸ್ ಠಾಣೆಗಳ ಎರಡು ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದರು.
ಈ ನೇಮಕಾತಿಯಿಂದ ಧಾರವಾಡ ಉಪನಗರ ಪೊಲೀಸ್ ಠಾಣೆಯ ಆಡಳಿತ ಮತ್ತು ಕಾನೂನು ಸುವ್ಯವಸ್ಥೆ ಕಾರ್ಯಗಳಿಗೆ ಮತ್ತಷ್ಟು ಚುರುಕು ಸಿಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ. ಸ್ಥಳೀಯರು ಹಾಗೂ ಸಾರ್ವಜನಿಕ ವಲಯದಲ್ಲೂ ಹೊಸ ಇನ್ಸ್ಪೆಕ್ಟರ್ ನೇಮಕಕ್ಕೆ ಸ್ವಾಗತ ವ್ಯಕ್ತವಾಗಿದೆ.
ಬಹುಕಾಲದಿಂದ ಖಾಲಿ ಇದ್ದ ಪ್ರಮುಖ ಹುದ್ದೆ ಭರ್ತಿಯಾಗಿರುವುದರಿಂದ ಪೊಲೀಸ್ ಇಲಾಖೆಯ ಕಾರ್ಯ ನಿರ್ವಹಣೆಗೆ ಸಹಕಾರಿಯಾಗಲಿದೆ ಎಂದು ಹೇಳಲಾಗುತ್ತಿದೆ.