ಹುಬ್ಬಳ್ಳಿ:ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಹಾಡಹಗಲೇ ನಡೆದ ದಾದಾಪೀರ್ ಉದೆಯಕರ (34) ಬರ್ಬರ ಹತ್ಯೆ ಪ್ರಕರಣಕ್ಕೆ ಇದೀಗ ಮಹತ್ವದ ತಿರುವು ಸಿಕ್ಕಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ಧ ದೂರು ದಾಖಲಾಗಿದೆ.
ಹುಬ್ಬಳ್ಳಿಯ ಲಿಂಗರಾಜನಗರದ ಸಿದ್ದೇಶ್ವರ ಪಾರ್ಕ್ ಬಳಿ ಬೋಗೇನಾಗರಕೊಪ್ಪ ಗ್ರಾಮದ ದಾದಾಪೀರ್ ಉದೆಯಕರ ಅವರನ್ನು ತಲ್ವಾರ್‌ನಿಂದ ಹಲ್ಲೆ ನಡೆಸಿ ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಮೃತರ ಸಹೋದರ ಮೊಹಮ್ಮದ್ ಸಾಧಿಕ್ ಉದೆಯಕರ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ದೂರಿನಲ್ಲಿ ವೀರೇಂದ್ರ ತಳಕಲ್, ದೀಪಕ್ ಚಲವಾದಿ ಸೇರಿದಂತೆ ಮೂವರ ವಿರುದ್ಧ ಆರೋಪ ಮಾಡಲಾಗಿದೆ.
ದೂರುದಾರರ ಪ್ರಕಾರ, 2015ರಲ್ಲಿ ಕಸಬಾಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಗಿರಿಯಾಲ ರಸ್ತೆ ಈಶ್ವರನಗರದ ಬಳಿ ಮಾರುತಿ ತಳಕಲ್ ಎಂಬಾತನ ಕೊಲೆ ಪ್ರಕರಣದಲ್ಲಿ ದಾದಾಪೀರ್ ಭಾಗಿಯಾಗಿದ್ದ ಎನ್ನಲಾಗಿದೆ. ಇದೇ ಹಳೆಯ ದ್ವೇಷವನ್ನು ಇಟ್ಟುಕೊಂಡು ಕೊಲೆಯಾದ ಮಾರುತಿ ಅವರ ಸಂಬಂಧಿಕರಾದ ವೀರೇಂದ್ರ ತಳಕಲ್, ದೀಪಕ್ ಚಲವಾದಿ ಹಾಗೂ ಇತರರು ದಾದಾಪೀರ್‌ಗೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಆ.28ರಂದು ಸಂಚು ರೂಪಿಸಿ, ಲಿಂಗರಾಜನಗರದ ಸಿದ್ದೇಶ್ವರ ಪಾರ್ಕ್ ಬಳಿ ದಾದಾಪೀರ್‌ನನ್ನು ಹಿಂಬಾಲಿಸಿಕೊಂಡು ಬಂದ ಆರೋಪಿಗಳು, ತಲ್ವಾರ್‌ನಿಂದ ಮುಖದ ಭಾಗಕ್ಕೆ ಹಲ್ಲೆ ನಡೆಸಿ ಭೀಕರವಾಗಿ ಕೊಲೆ ಮಾಡಿದ್ದಾರೆ. ಬಳಿಕ ಆಟೋದಲ್ಲಿ ಪರಾರಿಯಾಗಿದ್ದಾರೆ ಎಂದು ಮೃತರ ಸಹೋದರ ದೂರಿನಲ್ಲಿ ಆರೋಪಿಸಿದ್ದಾರೆ.
ಘಟನೆಯ ಬಳಿಕ ಪೊಲೀಸರು ಸ್ಥಳದಲ್ಲಿನ ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸುತ್ತಿದ್ದು, ಆರೋಪಿಗಳ ಚಲನವಲನದ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ. ಆರೋಪಿಗಳ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಪ್ರಕರಣದ ತನಿಖೆಗಾಗಿ ಎಸಿಪಿ ಶಿವಾನಂದ ಚಲವಾದಿ ನೇತೃತ್ವದಲ್ಲಿ ವಿಶೇಷ ಪೊಲೀಸ್ ತಂಡ ರಚಿಸಲಾಗಿದೆ.ಹಳೆಯ ಕೊಲೆ ಪ್ರಕರಣದ ದ್ವೇಷವೇ ಈ ಹತ್ಯೆಗೆ ಕಾರಣವೇ? ಅಥವಾ ಇದರ ಹಿಂದೆ ಬೇರೆಯೇ ಕಾರಣವಿದೆಯೇ ಎಂಬುದರ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಒಟ್ಟಿನಲ್ಲಿ, ಹಳೆ ಕೊಲೆ ಪ್ರಕರಣದ ದ್ವೇಷ, ಬೆದರಿಕೆ, ಹಾಡಹಗಲೇ ತಲ್ವಾರ್ ದಾಳಿ ಮತ್ತು ಸಿಸಿಟಿವಿ ದೃಶ್ಯಗಳು ಇದೀಗ ದಾದಾಪೀರ್ ಕೊಲೆ ಪ್ರಕರಣದ ತನಿಖೆಯಲ್ಲಿ ಪ್ರಮುಖ ಅಂಶಗಳಾಗಿವೆ. ಆರೋಪಿಗಳ ಬಂಧನದ ಬಳಿಕವೇ ಪ್ರಕರಣದ ಸಂಪೂರ್ಣ ಹಿನ್ನೆಲೆ ಹಾಗೂ ಕೊಲೆಗೆ ನಿಖರ ಕಾರಣ ಹೊರಬರಬೇಕಿದೆ.