ಕ್ರೈಂ

ಭೂ ಕಬಳಿಕೆ ಆರೋಪಿಗೆ ಕೊನೆಗೂ ಪೊಲೀಸ್ ಬಿಸಿ!

ಮೂಲಕ News Desk | ಪ್ರಕಟಿಸಲಾಗಿದೆ November 5, 2026 November 5, 2026 | 11:36 AM 1315 ವೀಕ್ಷಣೆಗಳು

ಆಯುಕ್ತರ ಖಡಕ್ ಸೂಚನೆಗೆ ಬೆಚ್ಚಿಬಿದ್ದ ವ್ಯವಸ್ಥೆ; ರಾಘವೇಂದ್ರ ಗೋಕಾಕ್ ಪೊಲೀಸ್ ಬಲೆಗೆ!


ಹುಬ್ಬಳ್ಳಿ: ನಕಲಿ ದಾಖಲೆಗಳ ಸೃಷ್ಟಿ, ಭೂ ಕಬಳಿಕೆ ಹಾಗೂ ಅಮಾಯಕ ಕುಟುಂಬಗಳಿಗೆ ವಂಚನೆ ಮಾಡಿದ ಗಂಭೀರ ಆರೋಪಗಳನ್ನು ಎದುರಿಸುತ್ತಿದ್ದ ರಾಘವೇಂದ್ರ ಗೋಕಾಕ್ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಬಡವರು, ಮಧ್ಯಮ ವರ್ಗದ ಕುಟುಂಬಗಳು ಹಾಗೂ ರೈತರ ಜಮೀನುಗಳನ್ನೇ ಗುರಿಯಾಗಿಸಿಕೊಂಡು ವಂಚನೆ ನಡೆಸುತ್ತಿದ್ದಾನೆ ಎಂಬ ಆರೋಪಗಳ ನಡುವೆ, ಹಲವು ಪ್ರಕರಣಗಳು ದಾಖಲಾಗಿದ್ದರೂ ಬಂಧನವಾಗದೆ ಉಳಿದಿದ್ದ ಆರೋಪಿಗೆ ಇದೀಗ ಪೊಲೀಸ್ ಇಲಾಖೆ ಬಿಸಿ ಮುಟ್ಟಿಸಿದೆ.


ಬೆಂಡಿಗೇರಿ ಹಾಗೂ ವಿದ್ಯಾನಗರ ಪೊಲೀಸ್ ಠಾಣೆಗಳಲ್ಲಿ ರಾಘವೇಂದ್ರ ಗೋಕಾಕ್ ವಿರುದ್ಧ ಪ್ರಕರಣಗಳು ದಾಖಲಾಗಿದ್ದರೂ, ಇಷ್ಟು ದಿನ ಆರೋಪಿಯ ಬಂಧನವಾಗದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು. ಪ್ರಕರಣಗಳು ದಾಖಲಾಗಿದ್ದರೂ ಆರೋಪಿ ಹೊರಗಡೆಯೇ ಓಡಾಡುತ್ತಿದ್ದಾನೆ ಎಂಬ ವಿಚಾರ ಪೊಲೀಸ್ ಆಯುಕ್ತ ಭೂಷಣ್ ಗುಲಾಬರಾವ್ ಬೊರಸೆ ಅವರ ಗಮನಕ್ಕೆ ಬರುತ್ತಿದ್ದಂತೆ ಪೊಲೀಸ್ ಇಲಾಖೆಯ ಕಾರ್ಯವೈಖರಿಯೇ ಪ್ರಶ್ನೆಗೆ ಒಳಗಾಗಿದೆ.


ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಆಯುಕ್ತರು ಸಂಬಂಧಪಟ್ಟ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು, ಪ್ರಕರಣಗಳಲ್ಲಿ ಆರೋಪಿಯಾಗಿರುವ ವ್ಯಕ್ತಿಯನ್ನು ಕೂಡಲೇ ಬಂಧಿಸುವಂತೆ ಖಡಕ್ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಆಯುಕ್ತರ ಸೂಚನೆಯ ಬೆನ್ನಲ್ಲೇ ಕಾರ್ಯಾಚರಣೆ ಚುರುಕುಗೊಂಡಿದ್ದು, ಕೊನೆಗೂ ರಾಘವೇಂದ್ರ ಗೋಕಾಕ್ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.


ದೂರುಗಳಿದ್ದರೂ ಕ್ರಮ ಕೈಗೊಳ್ಳಲು ಇಷ್ಟು ದಿನ ಬೇಕಾಯಿತೇ?


ಸಾಮಾನ್ಯ ಜನರು ತಮ್ಮ ಆಸ್ತಿ, ಜಮೀನು ಉಳಿಸಿಕೊಳ್ಳಲು ಪೊಲೀಸ್ ಠಾಣೆಗಳಿಗೆ ಅಲೆದಾಡಬೇಕಾದ ಪರಿಸ್ಥಿತಿ ಇರುವಾಗ, ಹಲವು ಪ್ರಕರಣಗಳನ್ನು ಎದುರಿಸುತ್ತಿದ್ದ ಆರೋಪಿಯ ಬಂಧನ ಇಷ್ಟು ದಿನ ವಿಳಂಬವಾಗಿದ್ದೇಕೆ ಎಂಬ ಪ್ರಶ್ನೆ ಇದೀಗ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.


ಪೊಲೀಸ್ ಆಯುಕ್ತರ ನೇರ ಮಧ್ಯಪ್ರವೇಶದ ನಂತರವೇ ಪ್ರಕರಣಕ್ಕೆ ವೇಗ ಸಿಕ್ಕಿರುವುದು, ಸ್ಥಳೀಯ ಮಟ್ಟದಲ್ಲಿ ಈ ಹಿಂದೆ ನಡೆದಿದ್ದ ತನಿಖೆಯ ವಿಳಂಬದ ಬಗ್ಗೆಯೂ ಪ್ರಶ್ನೆಗಳನ್ನು ಹುಟ್ಟುಹಾಕಿದೆ.


ಇದೀಗ ಆರೋಪಿಯ ಬಂಧನದೊಂದಿಗೆ ಪ್ರಕರಣದ ತನಿಖೆ ಯಾವ ದಿಕ್ಕಿನಲ್ಲಿ ಸಾಗಲಿದೆ? ನಕಲಿ ದಾಖಲೆಗಳ ಜಾಲದ ಹಿಂದೆ ಇನ್ನೂ ಯಾರಾದರೂ ಇದ್ದಾರೆಯೇ? ಅಮಾಯಕ ಕುಟುಂಬಗಳು ಕಳೆದುಕೊಂಡಿರುವ ಆಸ್ತಿಗಳಿಗೆ ನ್ಯಾಯ ಸಿಗಲಿದೆಯೇ? ಎಂಬ ಪ್ರಶ್ನೆಗಳಿಗೆ ತನಿಖೆಯಿಂದ ಉತ್ತರ ಸಿಗಬೇಕಿದೆ.


ಅಮಾಯಕರ ಆಸ್ತಿಗೆ ಕನ್ನ ಹಾಕುವವರ ವಿರುದ್ಧ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕು. ಬಂಧನ ಕೇವಲ ಆರಂಭವಾಗಲಿ, ಸಂತ್ರಸ್ತರಿಗೆ ನ್ಯಾಯ ಸಿಗುವವರೆಗೂ ತನಿಖೆ ನಿಲ್ಲದಿರಲಿ ಎಂಬುದು ಸಾರ್ವಜನಿಕರ ಒತ್ತಾಯ.