ಕರ್ನಾಟಕ

ಅಥಣಿಯಲ್ಲಿ ಅಂತಾರಾಜ್ಯ ಮಹಿಳಾ ಕಳ್ಳಿಯರ ಬಂಧನ – 68 ಲಕ್ಷ ಮೌಲ್ಯದ ಚಿನ್ನಾಭರಣ ವಶ

ಮೂಲಕ News Desk | ಪ್ರಕಟಿಸಲಾಗಿದೆ May 17, 2026 May 17, 2026 | 03:44 PM 135 ವೀಕ್ಷಣೆಗಳು

ಅಥಣಿ: ಜನದಟ್ಟಣೆಯನ್ನೇ ಬಂಡವಾಳ ಮಾಡಿಕೊಂಡು ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ಚಿನ್ನಾಭರಣ ಕಳವು ಮಾಡುತ್ತಿದ್ದ ಅಂತಾರಾಜ್ಯ ಮಹಿಳಾ ಕಳ್ಳಿಯರನ್ನು ಅಥಣಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.


ಬಂಧಿತ ಆರೋಪಿಗಳನ್ನು ಮಹಾರಾಷ್ಟ್ರ ಮೂಲದ ಹೇಮಾ ಕಸಬೇಕರ ಹಾಗೂ ನಿಲಂ ಕಾಂಬಳೆ ಎಂದು ಗುರುತಿಸಲಾಗಿದೆ. ಅಥಣಿ ಪಟ್ಟಣದ ಬಸ್ ನಿಲ್ದಾಣದಲ್ಲಿ ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ವೇಳೆ ಪೊಲೀಸರು ಬಲೆ ಬೀಸಿ ಇಬ್ಬರನ್ನೂ ವಶಕ್ಕೆ ಪಡೆದಿದ್ದಾರೆ.


ಪೊಲೀಸರ ವಿಚಾರಣೆಯ ವೇಳೆ ವಿವಿಧ ಪ್ರದೇಶಗಳಲ್ಲಿ ನಡೆದ ನಾಲ್ಕು ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿವೆ. ಆರೋಪಿಗಳಿಂದ ಸುಮಾರು 68 ಲಕ್ಷ ರೂಪಾಯಿ ಮೌಲ್ಯದ 42.5 ಗ್ರಾಂ ಚಿನ್ನಾಭರಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.


ಬಸ್ ಹತ್ತುವ ಹಾಗೂ ಇಳಿಯುವ ಸಂದರ್ಭಗಳಲ್ಲಿ ಉಂಟಾಗುವ ಜನದಟ್ಟಣೆ, ಗದ್ದಲ ಮತ್ತು ತಳ್ಳಾಟವನ್ನು ದುರುಪಯೋಗಪಡಿಸಿಕೊಂಡು ಮಹಿಳಾ ಪ್ರಯಾಣಿಕರನ್ನು ಗುರಿಯಾಗಿಸಿಕೊಂಡು ಕಳ್ಳತನ ನಡೆಸುತ್ತಿದ್ದರು ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ.


ಪ್ರಯಾಣಿಕರ ರೂಪದಲ್ಲಿ ಬಂದು ಯಾರಿಗೂ ಅನುಮಾನ ಬಾರದಂತೆ ಕಾರ್ಯಾಚರಣೆ ನಡೆಸುತ್ತಿದ್ದ ಈ ಮಹಿಳಾ ಕಳ್ಳಿಯರ ಬಂಧನದಿಂದ ಸಾರ್ವಜನಿಕರು ನಿಟ್ಟುಸಿರು ಬಿಟ್ಟಿದ್ದಾರೆ. ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ಅಥಣಿ ಪೊಲೀಸರ ಕಾರ್ಯಾಚರಣೆಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.