ಕರ್ನಾಟಕ

ಹಳೆಯ ಎರಡು ವಿದ್ಯುತ್ ಮಾರ್ಗಗಳನ್ನು ಮೇಲ್ದರ್ಜೆಗೆ ಏರಿಸುವ ಪ್ರಸ್ತಾವನೆಗೆ ಭೂ ಮಾಲೀಕರಿಂದ ತೀವ್ರ ವಿರೋಧ? ಭೂಗತ ವಿದ್ಯುತ್ ಕೇಬಲ್ ಅಳವಡಿಕೆಗೆ ಆಗ್ರಹ

ಮೂಲಕ News Desk | ಪ್ರಕಟಿಸಲಾಗಿದೆ May 18, 2026 May 18, 2026 | 01:54 PM 7 ವೀಕ್ಷಣೆಗಳು

ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯ ದಾಸರಹಳ್ಳಿ : ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನಿಯಮಿತ (KPTCL) ವತಿಯಿಂದ ಸಾರ್ವಜನಿಕ ಹಿತದೃಷ್ಟಿಯಿಂದ ಹಳೆಯ ಎರಡು ಪ್ರಮುಖ ವಿದ್ಯುತ್ ಮಾರ್ಗಗಳಾದ ನೆಲಮಂಗಲ ಉಪ ಕೇಂದ್ರದಿಂದ ಬೃಂದಾವನದ ಬಳಿ ಇರುವ ಗೋಪುರದವರೆಗೂ ಸದರಿ 110 ಕೆವಿ ವಿದ್ಯುತ್ ಮಾರ್ಗವನ್ನು 220 ಕೆವಿ ಮಾರ್ಗ ಹಾಗೂ ನೆಲಮಂಗಲ ಉಪಕೇಂದ್ರದಿಂದ 220/66 ಕೆವಿ ವಿದ್ಯುತ್ ಅನ್ನು ಪೀಣ್ಯ ಉಪಕೇಂದ್ರದವರೆಗೂ ಪ್ರಸ್ತುತವಿರುವ ಪೀಣ್ಯ ಉಪಕೇಂದ್ರಕ್ಕೆ ಸಂಪರ್ಕ 400/220 ಕೆವಿ ಮೇಲ್ದರ್ಜೆಗೆ ಏರಿಸುವ ಪ್ರಸ್ತಾವನೆಗೆ ಭೂ ಮಾಲೀಕರಿಂದ ತೀವ್ರ ವಿರೋಧ ವ್ಯಕ್ತವಾಯಿತು.


ಬೆಂಗಳೂರು ನಗರ ವ್ಯಾಪ್ತಿಯಲ್ಲಿನ ಶಿವನಪುರ, ಗಜ್ಜಗದಹಳ್ಳಿ, ನಾರಾಯಣಪ್ಪನಪಾಳ್ಯ, ಹಾರೋಕ್ಯಾತನಹಳ್ಳಿ, ದೊಂಬರಹಳ್ಳಿ,ಲಕ್ಷ್ಮೀಪುರ, ಶ್ರೀಕಂಠಪುರ, ಕರಿವೋಬನಹಳ್ಳಿ, ತಿರುಮಲಾಪುರ, ದೊಡ್ಡಬಿದರೆಕಲ್ಲು ನೆಲಗದರನಹಳ್ಳಿ, ಶಿವಪುರ, ಚೊಕ್ಕಸಂದ್ರ ಮತ್ತು ಪೀಣ್ಯ 2ನೇ ಹಂತದ ಮೂಲಕ ಹಾದುಹೋಗಲಿದ್ದು ಹೊಸದಾಗಿ ನಿರ್ಮಿಸಲಾಗುವ ವಿದ್ಯುತ್ ಗೋಪುರಗಳ (Towers) ಜಾಗದ ನೈಜ ಭೂಮಾಲೀಕರಿಗೆ ನಿಯಮಾನುಸಾರ ಪರಿಹಾರ ನೀಡಲು ಬೆಂಗಳೂರು ನಗರ ಜಿಲ್ಲಾಧಿಕಾರಿಗಳು ಆದೇಶಿಸಿರುವ ಹಿನ್ನಲೆಯಲ್ಲಿ ಪೀಣ್ಯದ ಎಸ್.ಆರ್.ಎಸ್ ಹತ್ತಿರದ ಕೆಪಿಟಿಸಿಎಲ್ ಆವರಣದಲ್ಲಿ ಇಂದು ಸಾರ್ವಜನಿಕ ಸಭೆ ಏರ್ಪಡಿಸಲಾಗಿತ್ತು. ಸಭೆಯಲ್ಲಿ ಶೇ.30 ರಷ್ಟು ಪರಿಹಾರಕ್ಕೆ ಒಪ್ಪದ ಭೂ ಮಾಲೀಕರು ವಿರೋಧ ವ್ಯಕ್ತಪಡಿಸಿದರು.


ಭೂ ಮಾಲೀಕ ಸಿದ್ದಗಂಗಯ್ಯ ಮಾತನಾಡಿ,' ಕೆಪಿಟಿಸಿಎಲ್ ಅವರು ಬಫರ್ ಜೋನ್ ಎಂದು 38 ಮೀಟರ್ ಅಗಲ ಜಮೀನು ಒತ್ತುವರಿ ಮಾಡಿ ಲಕ್ಷಾಂತರ ಜನರು ಕಟ್ಟಿರುವ ಮನೆ ಹಾಗೂ ನಿವೇಶನಗಳನ್ನು ಆಕ್ರಮಿಸಿಕೊಳ್ಳಲು ಮುಂದಾಗಿದ್ದಾರೆ.ಹೈಟೆನ್ಶನ್ ಎತ್ತರ ಮತ್ತು ಅಗಲ ಮಾಡುತ್ತಿದ್ದಾರೆ ನಮಗೆ ಯಾವುದೇ ಮಾಹಿತಿ ನೀಡದೆ ಪರಿಹಾರವನ್ನು ನೀಡದೆ ಅಕ್ರಮ ನಡೆಸುತ್ತಿದ್ದಾರೆ. ಸರ್ಕಾರ ನಮಗೆ ಸೂಕ್ತ ಪರಿಹಾರ ನೀಡಲಿ ಅಥವಾ ಸುರಂಗ ಕೊರೆದು ಅಂಡರ್ ಗ್ರೌಂಡ್ ಕೇಬಲ್ ಹಾಕಿ ಅಲ್ಲಲ್ಲಿ ಸಬ್ ಸ್ಟೇಷನ್ ಗಳನ್ನು ಮಾಡಲಿ, ಇದರಿಂದ ನಮ್ಮ ಆಕ್ಷೇಪಣೆ ಇಲ್ಲ' ಎಂದು ಆಗ್ರಹಿಸಿದರು.


ತಿಪ್ಪೇನಹಳ್ಳಿ ಗ್ರಾಮದ ನಿವಾಸಿ ಲೋಕೇಶ್,' ಕೆಪಿಟಿಸಿಎಲ್ ನವರು ಸಭೆಯ ಬಗ್ಗೆ ಸರಿಯಾದ ಮಾಹಿತಿ ನೀಡಿಲ್ಲ. ಜನರ ವಿರುದ್ಧ ಕೆಲಸ ಮಾಡುತ್ತಿರುವ ಕೆಪಿಟಿಸಿಎಲ್ ವಿರುದ್ಧ ದಿಕ್ಕಾರ ಹಾಕುತ್ತೇವೆ. ಪೊಲೀಸ್ ಇಲಾಖೆಯವರನ್ನು ಕರೆಸಿ ನಮಗೆ ಎದುರಿಸುತ್ತಿರುವ ಕೆಲಸ ಮಾಡುತ್ತಿದ್ದಾರೆ. ನಾವು ಅಲ್ಲಿ ಕೆಲಸ ಮಾಡಲು ಬಿಡುವುದಿಲ್ಲ' ಎಂದು ವಿರೋಧ ವ್ಯಕ್ತಪಡಿಸಿದರು.


ಸಭೆಯಲ್ಲಿ ಕೆಪಿಟಿಸಿಎಲ್ ಎಇಇ ಲತಾ, ಎಂಜಿನಿಯರ್ ಗಳಾದ ಸುಮ, ಸೌಮ್ಯ, ಪೊಲೀಸ್ ಇನ್ಸ್ ಪೆಕ್ಟರ್ ಗಳಾದ ಚಿಕ್ಕಸ್ವಾಮಿ, ಪ್ರಶಾಂತ್ ಹಾಗೂ ನೂರಾರು ಭೂಮಾಲೀಕರಿದ್ದರು.


ವರದಿ : ಪಬ್ಲಿಕ್ ರೈಡ್ ದೇವರಾಜ್