ಕರ್ನಾಟಕ News

Discover the latest headlines in this section.

ಹುಬ್ಬಳ್ಳಿ  ಸುತ್ತಮುತ್ತ ಅಕ್ರಮ ಮಣ್ಣು ಗಣಿಗಾರಿಕೆ ಆರೋಪ: ಅಧಿಕಾರಿಗಳ ಮೌನಕ್ಕೆ ಸಾರ್ವಜನಿಕರ ಪ್ರಶ್ನೆ

ಹುಬ್ಬಳ್ಳಿ ಸುತ್ತಮುತ್ತ ಅಕ್ರಮ ಮಣ್ಣು ಗಣಿಗಾರಿಕೆ ಆರೋಪ: ಅಧಿಕಾರಿಗಳ ಮೌನಕ್ಕೆ ಸಾರ್ವಜನಿಕರ ಪ್ರಶ್ನೆ

ಹುಬ್ಬಳ್ಳಿ: ಹುಬ್ಬಳ್ಳಿ ತಾಲೂಕಿನ ಮಾವನೂರು, ಚೆನ್ನಾಪುರ ಸೇರಿದಂತೆ ಸುತ್ತಮುತ್ತಲಿನ ಹಲವು ಗ್ರಾಮಗಳಲ್ಲಿ ಅಕ್ರಮವಾಗಿ ಮಣ್ಣು ಗಣಿಗಾರಿಕೆ ನಡೆಯುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಅನುಮತಿ ಹಾಗೂ ನಿಯಮಗಳನ್ನು ಮೀರಿ ನಡೆಯುತ್ತಿರುವ ಮಣ್ಣು ಗಣಿಗಾರಿಕೆಯಿಂದ ಕೃಷಿ ಭೂಮಿ, ಪರಿಸರ ಹಾಗೂ ಸ್ಥಳೀಯ ಭೌಗೋಳಿಕ ವ್ಯವಸ್ಥೆಯ ಮೇಲೆ ದುಷ್ಪರಿಣಾಮ ಬೀರುವ ಆತಂಕ ಸಾರ್ವಜನಿಕರಲ್ಲಿ ಮೂಡಿದೆ.ಗ್ರಾಮಗಳ ವ್ಯಾಪ್ತಿಯಲ್ಲಿ ನಿರಂತರವಾಗಿ ಮಣ್ಣು ತೆಗೆಯಲಾಗುತ್ತಿದೆ ಎನ್ನಲಾಗುತ್ತಿದ್ದು, ಇದರಿಂದ ಭೂಮಿಯ ಸ್ವರೂಪವೇ ಬದಲಾಗುತ್ತಿರುವ ಆರೋಪಗಳು ಕೇಳಿಬರುತ್ತಿವೆ. ಕೆಲವು ಪ್ರದೇಶಗಳಲ್ಲಿ ಗಣಿಗಾರಿಕೆಯಿಂದ ದೊಡ್ಡ ಪ್ರಮಾಣದ ಗುಂಡಿಗಳು ನಿರ್ಮಾಣವಾಗಿದ್ದು, ಮಳೆಗಾಲದಲ್ಲಿ ಅವು ಅಪಾಯಕಾರಿಯಾಗುವ ಸಾಧ್ಯತೆಯೂ ಇದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.ಅಕ್ರಮ ಮಣ್ಣು ಗಣಿಗಾರಿಕೆ ನಡೆಯುತ್ತಿದೆ ಎಂಬ ಆರೋಪಗಳ ನಡುವೆಯೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳ ಗಮನಕ್ಕೆ ಈ ವಿಚಾರ ಬಂದಿಲ್ಲವೇ? ಅಥವಾ ಮಾಹಿತಿ ಇದ್ದರೂ ಕ್ರಮ ಕೈಗೊಳ್ಳದೆ ಮೌನ ವಹಿಸಿದ್ದಾರೆಯೇ? ಎಂಬ ಪ್ರಶ್ನೆಗಳು ಇದೀಗ ಸಾರ್ವಜನಿಕ ವಲಯದಲ್ಲಿ ಜೋರಾಗಿವೆ.ಅಕ್ರಮ ಗಣಿಗಾರಿಕೆಯಿಂದ ಸರ್ಕಾರದ ರಾಜಸ್ವಕ್ಕೂ ನಷ್ಟವಾಗುವ ಸಾಧ್ಯತೆಯಿದ್ದು, ಪರಿಸರದ ಮೇಲೆ ಬೀರುವ ಪರಿಣಾಮದ ಬಗ್ಗೆಯೂ ಗಂಭೀರವಾಗಿ ಪರಿಶೀಲನೆ ನಡೆಸಬೇಕಿದೆ. ಗ್ರಾಮೀಣ ಪ್ರದೇಶಗಳಲ್ಲಿ ನಿಯಮಬಾಹಿರವಾಗಿ ಮಣ್ಣು ಸಾಗಾಟ ನಡೆಯುತ್ತಿದ್ದರೆ, ಸಂಬಂಧಪಟ್ಟ ಇಲಾಖೆ ಸ್ಥಳ ಪರಿಶೀಲನೆ ನಡೆಸಿ ಸೂಕ್ತ ದಾಖಲೆಗಳನ್ನು ಪರಿಶೀಲಿಸುವ ಅಗತ್ಯವಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.ಅಕ್ರಮ ಮಣ್ಣು ಗಣಿಗಾರಿಕೆಯ ಆರೋಪಗಳ ಕುರಿತು ಜಿಲ್ಲಾಡಳಿತ ಮತ್ತು ಗಣಿ ಹಾಗೂ ಭೂ ವಿಜ್ಞಾನ ಇಲಾಖೆ ತಕ್ಷಣ ತನಿಖೆ ನಡೆಸಿ, ತಪ್ಪಿತಸ್ಥರು ಕಂಡುಬಂದಲ್ಲಿ ಕಾನೂನುಬದ್ಧ ಕ್ರಮ ಕೈಗೊಳ್ಳಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ.ಮಾವನೂರು, ಚೆನ್ನಾಪುರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ನಡೆಯುತ್ತಿದೆ ಎನ್ನಲಾಗುತ್ತಿರುವ ಈ ಅಕ್ರಮ ಗಣಿಗಾರಿಕೆಯ ಬಗ್ಗೆ ಜಿಲ್ಲಾಡಳಿತ ಯಾವಾಗ ಎಚ್ಚೆತ್ತುಕೊಳ್ಳಲಿದೆ? ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವರೇ? ಆರೋಪಗಳಿಗೆ ತೆರೆ ಎಳೆಯಲು ಕಠಿಣ ಕ್ರಮ ಕೈಗೊಳ್ಳುವರೇ? ಎಂಬುದನ್ನು ಕಾದು ನೋಡಬೇಕಿದೆ.

Aug 14, 2026 | 11:17 AM
128 0
ಸೇಂಟ್ ಜಾನ್ಸ್ ಸಮರಿಟನ್ ಶಾಲೆಯಲ್ಲಿ ಪದಗ್ರಹಣ ಸಮಾರಂಭ

ಸೇಂಟ್ ಜಾನ್ಸ್ ಸಮರಿಟನ್ ಶಾಲೆಯಲ್ಲಿ ಪದಗ್ರಹಣ ಸಮಾರಂಭ

ಹುಬ್ಬಳ್ಳಿ, ಆಗಸ್ಟ್ 12: ಆನಂದ ನಗರದ ಸೇಂಟ್ ಜಾನ್ಸ್ ಸಮರಿಟನ್ ಇಂಗ್ಲಿಷ್ ಮೀಡಿಯಂ ಹೈಯರ್ ಮತ್ತು ಪ್ರೈಮರಿ ಶಾಲೆಯಲ್ಲಿ ವಿದ್ಯಾರ್ಥಿ ನಾಯಕರ ಪದಗ್ರಹಣ (ಬ್ಯಾಡ್ಜ್) ಸಮಾರಂಭವು ಸಂಭ್ರಮದಿಂದ ಜರುಗಿತು.ಕಾರ್ಯಕ್ರಮದಲ್ಲಿ ಸಿಆರ್‌ಪಿ ಶ್ರೀ ರವಿ ಬಂಗೇನ್ನವರ್ ಅವರು ಶಾಲಾ ಆಡಳಿತ ಮಂಡಳಿ, ಶಿಕ್ಷಕರು ಹಾಗೂ ಸಿಬ್ಬಂದಿಯೊಂದಿಗೆ ಭಾಗವಹಿಸಿ ಕಾರ್ಯಕ್ರಮಕ್ಕೆ ಬೆಂಬಲ ಸೂಚಿಸಿದರು.ಈ ಸಂದರ್ಭದಲ್ಲಿ ವಿದ್ಯಾರ್ಥಿ ನಾಯಕರಿಗೆ ಅಧಿಕೃತವಾಗಿ ಬ್ಯಾಡ್ಜ್‌ಗಳನ್ನು ಧರಿಸಿ, ನಾಯಕತ್ವದ ಜವಾಬ್ದಾರಿಯನ್ನು ವಹಿಸಲಾಯಿತು. ವಿದ್ಯಾರ್ಥಿಗಳಲ್ಲಿ ಶಿಸ್ತು, ಜವಾಬ್ದಾರಿ, ನಾಯಕತ್ವ ಹಾಗೂ ಸೇವಾ ಮನೋಭಾವ ಬೆಳೆಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.ವಿದ್ಯಾರ್ಥಿ ನಾಯಕರು ಶಾಲೆಯ ಶೈಕ್ಷಣಿಕ ಹಾಗೂ ಶಿಸ್ತಿನ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಇತರ ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕು ಎಂದು ಕಾರ್ಯಕ್ರಮದಲ್ಲಿ ತಿಳಿಸಲಾಯಿತು.ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕರು ನೂತನ ವಿದ್ಯಾರ್ಥಿ ನಾಯಕರಿಗೆ ಶುಭಹಾರೈಸಿ, ತಮ್ಮ ಜವಾಬ್ದಾರಿಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸುವಂತೆ ಪ್ರೋತ್ಸಾಹಿಸಿದರು. ಸಮಾರಂಭದಲ್ಲಿ ಶಿಕ್ಷಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Aug 12, 2026 | 12:25 PM
32 0
ವಿದ್ಯಾರ್ಥಿಗಳು ತಾಂತ್ರಿಕ, ವೃತ್ತಿಪರ ಕೌಶಲ್ಯಗಳನ್ನು ಬೆಳೆಸಿಕೊಳ್ಳಿ.  ಶಾಸಕ ಶ್ರೀ ಅರವಿಂದ ಬೆಲ್ಲದ.

ವಿದ್ಯಾರ್ಥಿಗಳು ತಾಂತ್ರಿಕ, ವೃತ್ತಿಪರ ಕೌಶಲ್ಯಗಳನ್ನು ಬೆಳೆಸಿಕೊಳ್ಳಿ. ಶಾಸಕ ಶ್ರೀ ಅರವಿಂದ ಬೆಲ್ಲದ.

ಧಾರಾವಾಡ -ರಾಯಾಪುರದಲ್ಲಿರುವ ಎಸ್.ಜೆ. ಎಂ.ವಿ ಮಹಾಂತ ಪ್ರಥಮ ದರ್ಜೆ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಇಂದು ಐ ಟಿ ಸಿ, ಪ್ರಥಮ ಎಜುಕೇಶನ್ ಫೌಂಡೇಶನ,ಹಾಸ್ಪಿಟಾಲಿಟಿ ಉದ್ಯೋಗ ತರಬೇತಿ ಕೇಂದ್ರ ಹುಬ್ಬಳ್ಳಿ, ಹಾಗೂ ಎಸ್.ಜೆ. ಎಂ.ವಿ ಮಹಾಂತ ಪ್ರಥಮ ದರ್ಜೆ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ ರಾಯಾಪುರ ಧಾರವಾಡ ಇವರ ಸಂಯುಕ್ತ ಆಶ್ರಯದಲ್ಲಿ ಉದ್ಯೋಗ ಮೇಳವನ್ನು ಆಯೋಜಿಸಲಾಗಿತ್ತು.ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಜಾಬ್ ಮೇಳವನ್ನು ಉದ್ಘಾಟಿಸಿದ ಶ್ರೀ ಅರವಿಂದ ಬೆಲ್ಲದ, ವಿರೋಧ ಪಕ್ಷದ ಉಪನಾಯಕರು ಹಾಗೂ ಶಾಸಕರು ಹುಬ್ಬಳ್ಳಿ ಧಾರವಾಡ ಪಶ್ಚಿಮ -74 ಇವರು ಆಗಮಿಸಿದಂತ ಉದ್ಯೋಗ ಆಕಾಂಕ್ಷಿಗಳನ್ನು ಕುರಿತು ಮಾತನಾಡುತ್ತಾ, ಪ್ರಸ್ತುತ ಸ್ಪರ್ಧಾತ್ಮಕ ಹಾಗೂ ಮಾಹಿತಿ ತಂತ್ರಜ್ಞಾನ ಯುಗದಲ್ಲಿ ಕೌಶಲ್ಯ ಬರಿತ ಜೀವನ ತಮ್ಮದಾಗಲಿ. ಉದ್ಯೋಗವೆಂಬುದು ಕೇವಲ ಜೀವನೋಪಾಯದ ಸಾಧನವಲ್ಲ, ಅದು ಯುವಜನರ ಕನಸುಗಳಿಗೆ ಪ್ರತಿಭೆಗೆ ಮತ್ತು ಸಾಮರ್ಥ್ಯಕ್ಕೆ ಸೂಕ್ತವಾದ ವೇದಿಕೆ. ಪ್ರಸ್ತುತ ಮಹಾಂತ ಮಹಾವಿದ್ಯಾಲಯದಲ್ಲಿ ಆಯೋಜಿಸಿದ ಉದ್ಯೋಗ ಮೇಳ ಹಲವಾರು ಉದ್ಯೋಗಾವಕಾಶಗಳನ್ನು ಒಂದೇ ವೇದಿಕೆಯಲ್ಲಿ ಪರಿಚಯಿಸುವುದರ ಜೊತೆಗೆ, ನಮ್ಮ ಯುವಜನರ ಕೌಶಲ್ಯ ಮತ್ತು ಪ್ರತಿಭೆಯನ್ನು ಗುರುತಿಸುವ ಮಹತ್ವದ ವೇದಿಕೆಯಾಗಿದೆ ಎಂದರು. ಜ್ಞಾನ ನಮ್ಮ ಶಕ್ತಿ, ಕೌಶಲ್ಯ ನಮ್ಮ ಸಾಮರ್ಥ್ಯ, ಅವಕಾಶ ನಮ್ಮ ಯಶಸ್ಸಿನ ಮೆಟ್ಟಿಲು ಎನ್ನುತ್ತಾ ಇಂತಹ ಅವಕಾಶಗಳ ಸದುಪಯೋಗಪಡಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಐಟಿಸಿ ಲಿಮಿಟೆಡನ ಕಾರ್ಯಕ್ರಮ ಅಧಿಕಾರಿಗಳಾದಂತ ಶ್ರೀ ಮನೋಜ್ ಅವರು ಪ್ರಸ್ತುತದಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಕೌಶಲ್ಯವು ಅತ್ಯಂತ ಅವಶ್ಯಕ. ಇಂತಹ ಉದ್ಯೋಗ ಮೇಳಗಳು ಉದ್ಯೋಗದಾತರು ಮತ್ತು ಉದ್ಯೋಗಾಕಾಂಕ್ಷಿ ಗಳನ್ನು ಒಂದೇ ವೇದಿಕೆಯಲ್ಲಿ ಸಂಪರ್ಕಿಸುವ ಕಾರ್ಯಕ್ರಮ. ಇಂತಹ ಜಾಬ್ ಮೇಳದಲ್ಲಿ ಭಾಗವಹಿಸುವ ಮೂಲಕ ತಜ್ಞರಿಂದ ಉದ್ಯೋಗ ತರಬೇತಿ ಕೌಶಲ್ಯ ಅಭಿವೃದ್ಧಿ ಮತ್ತು ವೃತ್ತಿ ಯೋಜನೆ ಕುರಿತು ಸಲಹೆ ಪಡೆಯಿರಿ. ಇಂತಹ ಉದ್ಯೋಗ ಮೇಳಗಳು ತಮ್ಮಲ್ಲಿ ಆತ್ಮವಿಶ್ವಾಸವನ್ನು ವೃದ್ಧಿಸುವತ್ತವೆ ಎನ್ನುತ್ತಾ ಐಟಿಸಿ ಯೋಜನೆಗಳ ಕುರಿತು ವಿವರಿಸಿದರು.  ಅಧ್ಯಕ್ಷತೆ ವಹಿಸಿದ್ದ ಮಹಾಂತ ಮಹಾವಿದ್ಯಾಲಯದ ಪ್ರಾಚಾರ್ಯರಾದಂತಹ ಡಾ. ಪುಷ್ಪಾ ಬಸನಗೌಡರವರು ಮಾತನಾಡುತ್ತಾ, ಉದ್ಯೋಗಾಕಾಂಕ್ಷಿಗಳು ಇಂತಹ ಸುವರ್ಣ ಅವಕಾಶಗಳ ಸದುಪಯೋಗಪಡಿಸಿಕೊಳ್ಳಿ. ನಿಮ್ಮ ಕನಸುಗಳು ಗರಿಗೆದರಲು ಇಂತಹ ಉದ್ಯೋಗ ಮೇಳಗಳು ಅವಕಾಶ ಕಲ್ಪಿಸುತ್ತವೆ. ಉದ್ಯೋಗದಾತರೇ ನಿಮ್ಮ ಮನೆ ಬಾಗಿಲಿಗೆ ಬಂದಾಗ ಅಂತಹ ಅವಕಾಶಗಳ ಸದುಪಯೋಗ ಮಾಡಿಕೊಳ್ಳುವುದರ ಜೊತೆಗೆ ಭವಿಷ್ಯವನ್ನು ರೂಪಿಸಿಕೊಳ್ಳಿ. ಶಿಕ್ಷಣದ ಜೊತೆಗೆ  ಉತ್ತಮ ಕೌಶಲ್ಯ ರೂಡಿಸಿಕೊಳ್ಳಿ ಎನ್ನುತ್ತಾ ಆಗಮಿಸಿದಂತ ಉದ್ಯೋಗಾಕಾಂಕ್ಷಿಗಳಿಗೆ ಶುಭ ಕೋರಿದರು. ಇದೇ ಸಂದರ್ಭದಲ್ಲಿ ಉದ್ಘಾಟಕರಾಗಿ ಆಗಮಿಸಿದಂತ ಶ್ರೀ ಅರವಿಂದ್ ಬೆಲ್ಲದ್, ವಿರೋಧ ಪಕ್ಷದ ನಾಯಕರು ಹಾಗೂ ಶಾಸಕರು ಹುಬ್ಬಳ್ಳಿ ಧಾರವಾಡ ಪಶ್ಚಿಮ 74 ಇವರನ್ನು ಉದ್ಯೋಗ ಮೇಳದ ಪರವಾಗಿ ಸನ್ಮಾನಿಸಲಾಯಿತು. ಕಾರ್ಯಕ್ರಮದ ವೇದಿಕೆಯಲ್ಲಿಶ್ರೀ ವೆಂಕಟರಮಣ ರೆಡ್ಡಿ,ರಾಜ್ಯ ಸಂಯೋಜನಾಧಿಕಾರಿ, ಕರ್ನಾಟಕ, ಶ್ರೀ ಪುನೀತ್ ಕಾರ್ಯಕ್ರಮ ಮುಖ್ಯಸ್ಥರು, ಶ್ರೀ ಬರಮಣ್ಣ ಕ್ಲಸ್ಟರ್ ಲೀಡರ್, ಶ್ರೀ ಮುತ್ತುರಾಜ್ ಆರ್ ಮೈಸೂರ್ ಕ್ಲಸ್ಟರ್ ಲೀಡರ್, ಶ್ರೀಮತಿ ಗೀತಾ ಕುಲಕರ್ಣಿ ಅಸ್ಸಿಸ್ಟಂಟ್ ಕಂಟ್ರೋಲರ್ ಧಾರವಾಡ ಜಿಲ್ಲಾ ಕೌಶಲ್ಯ ಅಭಿವೃದ್ಧಿ ಕೇಂದ್ರ  ಇವರು ಉಪಸ್ಥಿತರಿದ್ದರು   ಆರಂಭದಲ್ಲಿ ಅಂಧ ವಿದ್ಯಾರ್ಥಿ ಶಿವಕುಮಾರ್ ಪ್ರಾರ್ಥಿಸಿದರು. ಮಹಾವಿದ್ಯಾಲಯದ ಪ್ಲೇಸ್ಮೆಂಟ್ ಸಂಯೋಜಕರಾದ ಪ್ರೊ. ಜಿ.ಸಿ ಕಡ್ಡಿಪುಡಿ ಆಗಮಿಸಿದಂತ ಸರ್ವರನ್ನು ಸ್ವಾಗತಿಸಿದರು. ಪ್ರಥಮ ಎಜುಕೇಶನ್ ಫೌಂಡೇಶನ್ ಸೆಂಟರ್  ನ ಕೇಂದ್ರ ಮುಖ್ಯಸ್ಥರಾದಂತಹ ಶ್ರೀ ಪ್ರದೀಪ ಉದ್ಯೋಗ ಮೇಳದ ಮಹತ್ವದ ಕುರಿತು ಪ್ರಾಸ್ತಾವಿಕ ನುಡಿಗಳನ್ನಾಡಿದರು.  ಮಹಾವಿದ್ಯಾಲಯದ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ರಮೇಶ್ ಸಿ ವಂದಿಸಿದರು. ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಪ್ರೊ. ಜಯಲಕ್ಷ್ಮಿ ಯಂಡಿಗೇರಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಐ ಟಿ ಸಿ ಯ ಕಚೇರಿ ಸಿಬ್ಬಂದಿ, 35ಕ್ಕೂ ಹೆಚ್ಚು ಕಂಪನಿಗಳು, 500ಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳು, ಮಹಾಂತ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಬೋಧಕ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.

Aug 11, 2026 | 02:56 PM
77 0
ಆಷಾಢ ಏಕಾದಶಿ ಅಂಗವಾಗಿ ಕನ್ನಡ ಗ್ರಾಮದ ಶಾಲೆಯಲ್ಲಿ ಭಕ್ತಿಮಯ ದಿಂಡಿ ಪಾದಯಾತ್ರೆ

ಆಷಾಢ ಏಕಾದಶಿ ಅಂಗವಾಗಿ ಕನ್ನಡ ಗ್ರಾಮದ ಶಾಲೆಯಲ್ಲಿ ಭಕ್ತಿಮಯ ದಿಂಡಿ ಪಾದಯಾತ್ರೆ

ಕಣಗಲಾ ಗ್ರಾಮ: ಆಷಾಢ ಏಕಾದಶಿ ಅಂಗವಾಗಿ ಕನ್ನಡ ಗ್ರಾಮದ ಕನ್ನಡ ಹಾಗೂ ಕನ್ನಡ-ಮರಾಠಿ ಪ್ರಾಥಮಿಕ ಕಾನ್ವೆಂಟ್ ಶಾಲೆಯಲ್ಲಿ ಶುಕ್ರವಾರ ಭಕ್ತಿಭಾವದಿಂದ ದಿಂಡಿ ಪಾದಯಾತ್ರೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು.ಕಾರ್ಯಕ್ರಮದಲ್ಲಿ ಶಾಲೆಯ ವಿದ್ಯಾರ್ಥಿಗಳು ವಿಠ್ಠಲ-ರುಕ್ಮಿಣಿ ವೇಷಭೂಷಣ ಧರಿಸಿ ಭಕ್ತಿಗೀತೆಗಳಿಗೆ ಹೆಜ್ಜೆ ಹಾಕಿದರೆ, ವಿವಿಧ ಸಾಂಸ್ಕೃತಿಕ ನೃತ್ಯಗಳು ಮತ್ತು ಭಜನೆಗಳ ಮೂಲಕ ಆಷಾಢ ಏಕಾದಶಿಯ ಮಹತ್ವವನ್ನು ಸಾರಿದರು. ದಿಂಡಿ ಪಾದಯಾತ್ರೆಯಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಗ್ರಾಮಸ್ಥರು ಉತ್ಸಾಹದಿಂದ ಪಾಲ್ಗೊಂಡು ಭಕ್ತಿಮಯ ವಾತಾವರಣ ನಿರ್ಮಿಸಿದರು.ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಎಸ್. ಬಿ. ಹಿರೇಕೊಡಿ, ಉಪಾಧ್ಯಕ್ಷರಾದ ಶ್ರೀ ಬಿ. ಎಸ್. ಖಾಡೆ, ಆಡಳಿತ ಮಂಡಳಿ ಹಾಗೂ ಸಲಹಾ ಮಂಡಳಿಯ ಸದಸ್ಯರು, ಶಾಲೆಯ ಪ್ರಧಾನ ಗುರುಗಳಾದ ಶ್ರೀ ಜೆ. ಎಲ್. ಮಾಳಿ ಸೇರಿದಂತೆ ಸಹಶಿಕ್ಷಕರಾದ ಶ್ರೀ ಎ. ಎಂ. ಪಾಟೀಲ್, ಶ್ರೀಮತಿ ಎನ್. ಎಸ್. ತೊಡಕರ್, ಶ್ರೀಮತಿ ಎ. ಎ. ಬುವಾಚಾರಿ, ಶ್ರೀಮತಿ ಬಿ. ಜಿ. ಭಾಗನ್ನವರ್, ಶ್ರೀಮತಿ ಎಸ್. ಎ. ಕುಂಭಾರ, ಶ್ರೀಮತಿ ಕೆ. ಎಸ್. ಪಾಟೀಲ್, ಶ್ರೀಮತಿ ಜಿ. ಎಸ್. ಹಿರೇಕೊಡಿ, ಕು. ಪಿ. ಕೆ. ನಿಜನ್ನವರ್, ಶ್ರೀಮತಿ ಎಂ. ಯು. ಧಬಾಡೆ, ಶ್ರೀಮತಿ ಐ. ಸಿ. ಹಿರೇಕೊಡಿ, ಶ್ರೀಮತಿ ಪಿ. ಎಸ್. ಬೇಡಗೆ, ಶ್ರೀಮತಿ ಆರ್. ಪಿ. ನಾಯಿಕ, ಶ್ರೀಮತಿ ಡಿ. ಎಸ್. ಕಾಂಬಳೆ, ಕ್ಲರ್ಕ್ ಆರ್. ಕೆ. ನಿರ್ಮಲೆ, ಆಯಾಗಳಾದ ಶ್ರೀಮತಿ ಎಂ. ಎಂ. ಪಾಟೀಲ್ ಹಾಗೂ ಶ್ರೀಮತಿ ವಿ. ಆರ್. ಪಾಟೀಲ್ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ದಿಂಡಿ ಉತ್ಸವದ ಮಹತ್ವದ ಕುರಿತು ಸಂಸ್ಥೆಯ ಕಾರ್ಯಾಧ್ಯಕ್ಷರಾದ ಶ್ರೀ ಎಸ್. ಬಿ. ಹಿರೇಕೊಡಿ ಮಾತನಾಡಿ, ಆಷಾಢ ಏಕಾದಶಿಯಂತಹ ಧಾರ್ಮಿಕ ಹಾಗೂ ಸಾಂಸ್ಕೃತಿಕ ಆಚರಣೆಗಳು ಮಕ್ಕಳಲ್ಲಿ ಭಾರತೀಯ ಸಂಸ್ಕೃತಿ, ಭಕ್ತಿ, ಶಿಸ್ತು ಮತ್ತು ಸಾಮಾಜಿಕ ಮೌಲ್ಯಗಳನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ ಎಂದು ತಿಳಿಸಿದರು. ಇಂತಹ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳಿಗೆ ನಮ್ಮ ಸಂಪ್ರದಾಯಗಳ ಪರಿಚಯವಾಗುವುದರ ಜೊತೆಗೆ ಸಂಸ್ಕೃತಿಯ ಬಗ್ಗೆ ಗೌರವವೂ ಬೆಳೆಯುತ್ತದೆ ಎಂದು ಅಭಿಪ್ರಾಯಪಟ್ಟರು.ಕಾರ್ಯಕ್ರಮವು ಭಕ್ತಿ, ಸಂಸ್ಕೃತಿ ಮತ್ತು ಸಂಪ್ರದಾಯಗಳ ಸಂಗಮವಾಗಿ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

Jul 25, 2026 | 12:10 PM
115 0
ಮುಖ್ಯಮಂತ್ರಿ ಕಚೇರಿ ಮೆಟ್ಟಿಲೇರಿದ ಪೊಲೀಸ್ ಸಿಬ್ಬಂದಿ ಅಳಲು: ಬೀಟ್ ವ್ಯವಸ್ಥೆ ಕುರಿತು ರಾಜ್ಯಾದ್ಯಂತ ಚರ್ಚೆಗೆ ಕಾರಣವಾದ ಪತ್ರ

ಮುಖ್ಯಮಂತ್ರಿ ಕಚೇರಿ ಮೆಟ್ಟಿಲೇರಿದ ಪೊಲೀಸ್ ಸಿಬ್ಬಂದಿ ಅಳಲು: ಬೀಟ್ ವ್ಯವಸ್ಥೆ ಕುರಿತು ರಾಜ್ಯಾದ್ಯಂತ ಚರ್ಚೆಗೆ ಕಾರಣವಾದ ಪತ್ರ

ಹುಬ್ಬಳ್ಳಿ:ರಾಜ್ಯ ಪೊಲೀಸ್ ಇಲಾಖೆಯಲ್ಲಿ ಜಾರಿಯಲ್ಲಿರುವ ಸುಧಾರಿತ ಬೀಟ್ ವ್ಯವಸ್ಥೆ ವಿರುದ್ಧ ಪೊಲೀಸ್ ಸಿಬ್ಬಂದಿಯೊಬ್ಬರು ಮುಖ್ಯಮಂತ್ರಿ ಅವರಿಗೆ ಬರೆದಿರುವ ಪತ್ರವು ಇದೀಗ ಆಡಳಿತಾತ್ಮಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಇಲಾಖೆಯ ಒಳಗಿನ ಕಾರ್ಯವೈಖರಿ, ಮೇಲಾಧಿಕಾರಿಗಳ ಜವಾಬ್ದಾರಿ, ಸಿಬ್ಬಂದಿಯ ಮೇಲಿನ ಒತ್ತಡ ಹಾಗೂ ಭ್ರಷ್ಟಾಚಾರದ ಆರೋಪಗಳನ್ನು ಒಳಗೊಂಡಿರುವ ಈ ಪತ್ರದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಕಚೇರಿ ಕ್ರಮ ಕೈಗೊಂಡಿರುವುದು ಪ್ರಕರಣಕ್ಕೆ ಹೊಸ ತಿರುವು ನೀಡಿದೆ.ಮುಖ್ಯಮಂತ್ರಿ ಕಚೇರಿಗೆ ತಲುಪಿದ ದೂರನ್ನು ಗಂಭೀರವಾಗಿ ಪರಿಗಣಿಸಿರುವ ಉಪ ಕಾರ್ಯದರ್ಶಿ ಅವರು ಒಳಾಡಳಿತ ಇಲಾಖೆಗೆ ಪತ್ರ ರವಾನಿಸಿದ್ದು, ಬಳಿಕ ರಾಜ್ಯ ಪೊಲೀಸ್ ಮಹಾನಿರ್ದೇಶಕರ (ಡಿಜಿಪಿ) ಕಚೇರಿಯಿಂದ ಎಲ್ಲಾ ಪೊಲೀಸ್ ಕಮಿಷನರೇಟ್‌ಗಳು, ಜಿಲ್ಲಾ ಎಸ್‌ಪಿ ಕಚೇರಿಗಳು, ಕೆಜಿಎಫ್ ಹಾಗೂ ರೈಲ್ವೆ ಪೊಲೀಸ್ ಘಟಕಗಳಿಗೆ ನಿಯಮಾನುಸಾರ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ.23 ಅಂಶಗಳ ಮೂಲಕ ಗಂಭೀರ ಆರೋಪಪೊಲೀಸ್ ಸಿಬ್ಬಂದಿಯ ಪತ್ರದಲ್ಲಿ ಒಟ್ಟು 23 ಪ್ರಮುಖ ಅಂಶಗಳನ್ನು ಉಲ್ಲೇಖಿಸಲಾಗಿದೆ. ಸುಧಾರಿತ ಬೀಟ್ ವ್ಯವಸ್ಥೆ ಜಾರಿಯಾದ ನಂತರ ಕ್ಷೇತ್ರ ಮಟ್ಟದ ಸಂಪೂರ್ಣ ಹೊಣೆಗಾರಿಕೆಯನ್ನು ಬೀಟ್ ಸಿಬ್ಬಂದಿಯ ಮೇಲೆಯೇ ಹಾಕಲಾಗಿದ್ದು, ಪಿಎಸ್ಐ ಹಾಗೂ ಅದಕ್ಕಿಂತ ಮೇಲಿನ ಅಧಿಕಾರಿಗಳು ಮೇಲ್ವಿಚಾರಣೆಯ ಜವಾಬ್ದಾರಿಯಿಂದ ಹಿಂದೆ ಸರಿದಿದ್ದಾರೆ ಎಂದು ಆರೋಪಿಸಲಾಗಿದೆ.ಸಣ್ಣಪುಟ್ಟ ಲೋಪಗಳಿಗೂ ಬೀಟ್ ಸಿಬ್ಬಂದಿಯ ವಿರುದ್ಧ ಅಮಾನತು, ನೋಟಿಸ್, ವೇತನ ತಡೆ ಹಾಗೂ ಶಿಸ್ತು ಕ್ರಮ ಜರುಗಿಸಲಾಗುತ್ತಿದೆ. ಆದರೆ ಹಿರಿಯ ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.ಭ್ರಷ್ಟಾಚಾರ, ವರ್ಗಾವಣೆ ಹಾಗೂ ಮಾನಸಿಕ ಕಿರುಕುಳ ಆರೋಪಪತ್ರದಲ್ಲಿ ಅಧಿಕಾರ ದುರ್ಬಳಕೆ, ಮಾನಸಿಕ ಕಿರುಕುಳ, ಅಕ್ರಮ ಹಣ ವಸೂಲಿ, ಠಾಣೆಗಳಿಗೆ ವರ್ಗಾವಣೆಯಲ್ಲಿ ಲಕ್ಷಾಂತರ ರೂಪಾಯಿ ವ್ಯವಹಾರ, ರಾತ್ರಿ ಗಸ್ತಿನ ನಿರ್ವಹಣೆಯಲ್ಲಿನ ನಿರ್ಲಕ್ಷ್ಯ ಸೇರಿದಂತೆ ಹಲವು ಗಂಭೀರ ಆರೋಪಗಳನ್ನು ಮಾಡಲಾಗಿದೆ.ಕೆಲವರು ಶಾಸಕರಿಗೆ ಹಣ ನೀಡಿ ತಮಗೆ ಬೇಕಾದ ಠಾಣೆಗೆ ವರ್ಗಾವಣೆ ಮಾಡಿಕೊಂಡಿರುವುದಾಗಿ ಸಿಬ್ಬಂದಿಯ ಎದುರೇ ಹೇಳಿಕೊಳ್ಳುತ್ತಾರೆ ಎಂಬ ಆರೋಪವೂ ಪತ್ರದಲ್ಲಿದೆ. ಜೊತೆಗೆ, ಕೆಲ ಅಧಿಕಾರಿಗಳು ರಾತ್ರಿ ಗಸ್ತಿಗೆ ತೆರಳದೆ ಚಾಲಕರ ಮೂಲಕ ಮೊಬೈಲ್‌ನಲ್ಲಿ ಪಾಯಿಂಟ್ ಪಂಚ್ ಮಾಡಿಸುತ್ತಾರೆ ಎಂಬ ಅಂಶವೂ ಉಲ್ಲೇಖಿಸಲಾಗಿದೆ.ಕೆಳಹಂತದ ಸಿಬ್ಬಂದಿಯೇ ಬಲಿಪಶು?ಕಳ್ಳತನ, ಅಕ್ರಮ ಚಟುವಟಿಕೆ ಅಥವಾ ಮಾಧ್ಯಮಗಳಲ್ಲಿ ನಕಾರಾತ್ಮಕ ಸುದ್ದಿ ಬಂದರೆ ಮೊದಲಿಗೆ ಅಮಾನತಾಗುವುದು ಬೀಟ್ ಸಿಬ್ಬಂದಿಯೇ ಆಗಿದ್ದಾರೆ. ಮೇಲಾಧಿಕಾರಿಗಳು ಜವಾಬ್ದಾರಿಯಿಂದ ತಪ್ಪಿಸಿಕೊಂಡು ಕೆಳಹಂತದ ಸಿಬ್ಬಂದಿಯ ಮೇಲೆ ಹೊಣೆ ಹೊರಿಸುತ್ತಾರೆ ಎಂದು ಪತ್ರದಲ್ಲಿ ಅಸಮಾಧಾನ ವ್ಯಕ್ತಪಡಿಸಲಾಗಿದೆ.ಅಕ್ರಮ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರೂ "ಅದು ಮೇಲ್ಮಟ್ಟದಲ್ಲಿ ಫಿಕ್ಸ್ ಆಗಿದೆ" ಎಂದು ಹೇಳಿ ಪ್ರಕರಣಗಳನ್ನು ಮುಚ್ಚಿಹಾಕಲಾಗುತ್ತದೆ ಎಂಬ ಆರೋಪವೂ ಪತ್ರದಲ್ಲಿ ದಾಖಲಾಗಿದೆ.ಸರ್ಕಾರದ ಗಮನ ಸೆಳೆದ ದೂರುಸಾಮಾನ್ಯವಾಗಿ ಇಲಾಖೆಯೊಳಗೆ ಇತ್ಯರ್ಥವಾಗುವ ಇಂತಹ ದೂರು ಈ ಬಾರಿ ಮುಖ್ಯಮಂತ್ರಿ ಕಚೇರಿಯ ಗಮನ ಸೆಳೆದಿರುವುದು ವಿಶೇಷವಾಗಿದೆ. ಡಿಜಿಪಿ ಕಚೇರಿಯಿಂದ ರಾಜ್ಯದ ಎಲ್ಲಾ ಪೊಲೀಸ್ ಘಟಕಗಳಿಗೆ ಪರಿಶೀಲನೆ ನಡೆಸುವಂತೆ ಸೂಚನೆ ಹೋಗಿರುವುದರಿಂದ, ಈ ದೂರಿನ ಕುರಿತು ಇಲಾಖೆಯು ಯಾವ ರೀತಿಯ ಕ್ರಮ ಕೈಗೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ.

Jul 23, 2026 | 04:54 AM
143 0
ಕೆಎಂಸಿಆರ್‌ಐ ನಿರ್ದೇಶಕ ಹುದ್ದೆ ಆಯ್ಕೆ ಪ್ರಕ್ರಿಯೆ ಅಂತಿಮ ಹಂತಕ್ಕೆ; 30ರಂದು ಬೆಂಗಳೂರಿನಲ್ಲಿ ಸಂದರ್ಶನ

ಕೆಎಂಸಿಆರ್‌ಐ ನಿರ್ದೇಶಕ ಹುದ್ದೆ ಆಯ್ಕೆ ಪ್ರಕ್ರಿಯೆ ಅಂತಿಮ ಹಂತಕ್ಕೆ; 30ರಂದು ಬೆಂಗಳೂರಿನಲ್ಲಿ ಸಂದರ್ಶನ

ಹುಬ್ಬಳ್ಳಿ: ಕರ್ನಾಟಕ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ (ಕೆಎಂಸಿಆರ್‌ಐ) ನಿರ್ದೇಶಕರ ನೇಮಕಾತಿ ಪ್ರಕ್ರಿಯೆ ಅಂತಿಮ ಹಂತ ತಲುಪಿದೆ. ಜುಲೈ 30ರಂದು ಬೆಂಗಳೂರಿನ ವಿಕಾಸ ಸೌಧದಲ್ಲಿ ಅರ್ಹ ಅಭ್ಯರ್ಥಿಗಳ ಸಂದರ್ಶನ ನಡೆಯಲಿದ್ದು, ಆಯ್ಕೆ ಸಮಿತಿ ನೂತನ ನಿರ್ದೇಶಕರ ಆಯ್ಕೆಗೆ ಅಂತಿಮ ನಿರ್ಧಾರ ಕೈಗೊಳ್ಳಲಿದೆ.ಪ್ರಸ್ತುತ ಹೆಚ್ಚುವರಿ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿರುವ ಡಾ. ಕೆ.ಎಫ್. ಕಮ್ಮಾರ್ ಅವರು ಜುಲೈ 31ರಂದು ಸೇವೆಯಿಂದ ನಿವೃತ್ತಿಯಾಗಲಿರುವ ಹಿನ್ನೆಲೆಯಲ್ಲಿ, ಖಾಯಂ ನಿರ್ದೇಶಕರ ನೇಮಕಾತಿಗೆ ಸರ್ಕಾರ ಕ್ರಮ ಕೈಗೊಂಡಿದೆ. ಹೈಕೋರ್ಟ್ ನಿರ್ದೇಶನದಂತೆ ಪೂರ್ಣಾವಧಿಯ ನಾಲ್ಕು ವರ್ಷಗಳ ಅವಧಿಗೆ ನಿರ್ದೇಶಕರನ್ನು ನೇಮಕ ಮಾಡಬೇಕಿದ್ದು, ಈ ಸಂಬಂಧ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು.ನಿರ್ದೇಶಕ ಹುದ್ದೆಗೆ ಒಟ್ಟು 17 ಮಂದಿ ಹಿರಿಯ ವೈದ್ಯರು ಅರ್ಜಿ ಸಲ್ಲಿಸಿದ್ದರು. ದಾಖಲೆಗಳ ಪರಿಶೀಲನೆಯ ಬಳಿಕ ಆಡಳಿತಾಧಿಕಾರಿಗಳು 10 ಮಂದಿ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಆಯ್ಕೆ ಮಾಡಿದ್ದಾರೆ. ಈ ಆಯ್ಕೆ ಪ್ರಕ್ರಿಯೆ ಕೆಎಂಸಿಆರ್‌ಐ ಆಡಳಿತದಲ್ಲಿ ಮಹತ್ವದ ಘಟ್ಟವೆಂದು ಪರಿಗಣಿಸಲಾಗಿದೆ.ಸಂದರ್ಶನವನ್ನು ವೈದ್ಯಕೀಯ ಶಿಕ್ಷಣ ಸಚಿವರ ಅಧ್ಯಕ್ಷತೆಯಲ್ಲಿ ರಚಿಸಲಾದ ಆಯ್ಕೆ ಸಮಿತಿ ನಡೆಸಲಿದೆ. ಸಮಿತಿಯಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆಯ ಮುಖ್ಯ ಕಾರ್ಯದರ್ಶಿ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಹಾಗೂ ಕೆಎಂಸಿಆರ್‌ಐ ಆಡಳಿತಾಧಿಕಾರಿ ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ.ಈ ಬಾರಿ ನಿರ್ದೇಶಕರ ನೇಮಕಾತಿ ಕುರಿತು ಸಾಕಷ್ಟು ಚರ್ಚೆಗಳು ನಡೆದಿದ್ದು, ಅಧಿಸೂಚನೆಯಲ್ಲಿ ಸೇವಾವಧಿಗೆ ಸಂಬಂಧಿಸಿದ ಷರತ್ತುಗಳ ಕಾರಣ ನಿವೃತ್ತಿಯ ಸಮೀಪದಲ್ಲಿರುವ ಕೆಲ ಹಿರಿಯ ವೈದ್ಯರೂ ಅರ್ಜಿ ಸಲ್ಲಿಸಿರುವುದು ಗಮನ ಸೆಳೆದಿದೆ. ಸಂದರ್ಶನದ ಬಳಿಕ ಸರ್ಕಾರ ನೂತನ ನಿರ್ದೇಶಕರ ಹೆಸರನ್ನು ಅಧಿಕೃತವಾಗಿ ಪ್ರಕಟಿಸುವ ನಿರೀಕ್ಷೆಯಿದೆ.ಕೆಎಂಸಿಆರ್‌ಐ ಆಡಳಿತದ ಮುಂದಿನ ನಾಲ್ಕು ವರ್ಷಗಳ ದಿಕ್ಕನ್ನು ನಿರ್ಧರಿಸುವ ಈ ನೇಮಕಾತಿ ವೈದ್ಯಕೀಯ ವಲಯದಲ್ಲಿ ಕುತೂಹಲ ಮೂಡಿಸಿದ್ದು, ಯಾರು ನೂತನ ನಿರ್ದೇಶಕರಾಗಿ ಆಯ್ಕೆಯಾಗುತ್ತಾರೆ ಎಂಬುದರತ್ತ ಎಲ್ಲರ ಚಿತ್ತ ನೆಟ್ಟಿದೆ.

Jul 22, 2026 | 05:04 AM
35 0
ಪ್ರವಾಸದ ವೇಳೆ ದುರಂತ: ಪುರಾತನ ಬಾವಿಗೆ ಕಾಲು ಜಾರಿ ಬಿದ್ದು 10 ವರ್ಷದ ಬಾಲಕ ಸಾವು

ಪ್ರವಾಸದ ವೇಳೆ ದುರಂತ: ಪುರಾತನ ಬಾವಿಗೆ ಕಾಲು ಜಾರಿ ಬಿದ್ದು 10 ವರ್ಷದ ಬಾಲಕ ಸಾವು

ವಿಜಯನಗರ: ಕುಟುಂಬದೊಂದಿಗೆ ಪ್ರವಾಸಕ್ಕೆ ತೆರಳಿದ್ದ 10 ವರ್ಷದ ಬಾಲಕ ಪುರಾತನ ಬಾವಿಗೆ ಕಾಲು ಜಾರಿ ಬಿದ್ದು ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಬಾಗಳಿಯ ಶ್ರೀ ಕಲ್ಲೇಶ್ವರ ದೇಗುಲದ ಸಮೀಪ ಭಾನುವಾರ ನಡೆದಿದೆ.ಮೃತ ಬಾಲಕನನ್ನು ವಿಷ್ಣು (10) ಎಂದು ಗುರುತಿಸಲಾಗಿದೆ. ಆತ ಹರಪನಹಳ್ಳಿಯ ಗಾಜಿನಕೇರಿಯ ನಿವಾಸಿಗಳಾದ ವಿನೋದ್ ಹಾಗೂ ವಿದ್ಯಾ ದಂಪತಿಯ ಪುತ್ರನಾಗಿದ್ದಾನೆ.ಕುಟುಂಬ ಸದಸ್ಯರು ಭಾನುವಾರ ಪ್ರವಾಸದ ನಿಮಿತ್ತ ಬಾಗಳಿಯ ಶ್ರೀ ಕಲ್ಲೇಶ್ವರ ದೇಗುಲಕ್ಕೆ ತೆರಳಿದ್ದ ವೇಳೆ, ಆಟವಾಡುತ್ತಿದ್ದ ವಿಷ್ಣು ಅಜಾಗರೂಕತೆಯಿಂದ ಪುರಾತನ ಬಾವಿಯ ಬಳಿ ಹೋಗಿದ್ದಾನೆ. ಈ ವೇಳೆ ಕಾಲು ಜಾರಿ ಬಾವಿಗೆ ಬಿದ್ದಿದ್ದು, ಸ್ಥಳದಲ್ಲಿದ್ದವರು ತಕ್ಷಣವೇ ರಕ್ಷಣಾ ಕಾರ್ಯಕ್ಕೆ ಮುಂದಾದರು. ಬಳಿಕ ಅಗ್ನಿಶಾಮಕ ದಳ ಹಾಗೂ ಪೊಲೀಸರಿಗೆ ಮಾಹಿತಿ ನೀಡಲಾಯಿತು.ಘಟನಾ ಸ್ಥಳಕ್ಕೆ ಆಗಮಿಸಿದ ಹರಪನಹಳ್ಳಿ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಕಾರ್ಯಾಚರಣೆ ನಡೆಸಿ ಬಾಲಕನನ್ನು ಬಾವಿಯಿಂದ ಹೊರತೆಗೆದರು. ಆದರೆ ಅಷ್ಟರಲ್ಲಾಗಲೇ ಬಾಲಕ ಮೃತಪಟ್ಟಿರುವುದು ದೃಢಪಟ್ಟಿತು.ಈ ದುರ್ಘಟನೆಯಿಂದ ಮೃತ ಬಾಲಕನ ತಂದೆ-ತಾಯಿ ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.ಈ ಸಂಬಂಧ ಹರಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಘಟನೆಯ ಕುರಿತು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

Jul 20, 2026 | 09:59 AM
33 0
ಮಹಿಳಾ ಪೊಲೀಸ್ ಠಾಣೆಯಲ್ಲಿ ಮಹಿಳಾ ಸಿಬ್ಬಂದಿ ಕೊರತೆ: "ಮಹಿಳೆಯರ ಸಂಕಷ್ಟ ಕೇಳುವವರು ಮಹಿಳೆಯರೇ ಆಗಬೇಕು" – ಸರ್ಕಾರಕ್ಕೆ ಹ್ಯೂಮನ್ ರೈಟ್ಸ್ ಕಮಿಟಿ ಒತ್ತಾಯ

ಮಹಿಳಾ ಪೊಲೀಸ್ ಠಾಣೆಯಲ್ಲಿ ಮಹಿಳಾ ಸಿಬ್ಬಂದಿ ಕೊರತೆ: "ಮಹಿಳೆಯರ ಸಂಕಷ್ಟ ಕೇಳುವವರು ಮಹಿಳೆಯರೇ ಆಗಬೇಕು" – ಸರ್ಕಾರಕ್ಕೆ ಹ್ಯೂಮನ್ ರೈಟ್ಸ್ ಕಮಿಟಿ ಒತ್ತಾಯ

ಬೆಂಗಳೂರು:ಮಹಿಳೆಯರ ಮೇಲಿನ ದೌರ್ಜನ್ಯ, ಕೌಟುಂಬಿಕ ಕಲಹ, ಮಾನಸಿಕ ಮತ್ತು ದೈಹಿಕ ಹಿಂಸೆ ಸೇರಿದಂತೆ ವಿವಿಧ ಪ್ರಕರಣಗಳಿಗೆ ನ್ಯಾಯ ಒದಗಿಸುವ ಉದ್ದೇಶದಿಂದ ರಾಜ್ಯದಲ್ಲಿ ಮಹಿಳಾ ಪೊಲೀಸ್ ಠಾಣೆಗಳನ್ನು ಸ್ಥಾಪಿಸಲಾಗಿದೆ. ಆದರೆ, ಈ ಠಾಣೆಗಳಲ್ಲೇ ಮಹಿಳಾ ಸಿಬ್ಬಂದಿಯ ಕೊರತೆ ಇರುವುದರಿಂದ ಮಹಿಳೆಯರು ತಮ್ಮ ಸಮಸ್ಯೆಗಳನ್ನು ಮುಕ್ತವಾಗಿ ಹೇಳಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬ ಗಂಭೀರ ಆರೋಪ ಕೇಳಿಬಂದಿದೆ.ಈ ಕುರಿತು ಹ್ಯೂಮನ್ ರೈಟ್ಸ್ ಪ್ರೊಟೆಕ್ಷನ್ ಕಮಿಟಿ (RTPWT) ರಾಜ್ಯಾಧ್ಯಕ್ಷ ಬಿ.ಎಂ. ಚಿಕ್ಕಣ್ಣ ಅವರು ಮುಖ್ಯಮಂತ್ರಿ, ಮುಖ್ಯ ಕಾರ್ಯದರ್ಶಿ, ಗೃಹ ಸಚಿವರು, ಗೃಹ ಕಾರ್ಯದರ್ಶಿ ಹಾಗೂ ರಾಜ್ಯದ ಡಿಜಿ ಮತ್ತು ಐಜಿಪಿ ಅವರಿಗೆ ಪತ್ರ ಬರೆದು ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.ಪತ್ರದಲ್ಲಿ, ಮಹಿಳಾ ಪೊಲೀಸ್ ಠಾಣೆಗಳಲ್ಲಿ ದೂರು ಸ್ವೀಕರಿಸುವ ಅಧಿಕಾರಿಗಳು, ಎಸ್.ಓ. ಹಾಗೂ ಎಸ್.ಎಚ್.ಓ. ಹುದ್ದೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪುರುಷ ಸಿಬ್ಬಂದಿಯೇ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಗೃಹಹಿಂಸೆ, ಲೈಂಗಿಕ ಕಿರುಕುಳ, ಕೌಟುಂಬಿಕ ಕಲಹ ಸೇರಿದಂತೆ ಸೂಕ್ಷ್ಮ ಪ್ರಕರಣಗಳ ಬಗ್ಗೆ ಮಹಿಳೆಯರು ಮುಕ್ತವಾಗಿ ಮಾತನಾಡಲು ಮುಜುಗರ ಅನುಭವಿಸುತ್ತಿದ್ದು, ಇದರಿಂದ ಅನೇಕ ಪ್ರಕರಣಗಳು ಸಮರ್ಪಕವಾಗಿ ದಾಖಲಾಗದ ಅಥವಾ ನ್ಯಾಯದಿಂದ ವಂಚಿತವಾಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಲಾಗಿದೆ.ಹೀಗಾಗಿ, **ಮಹಿಳಾ ಪೊಲೀಸ್ ಠಾಣೆಗಳಲ್ಲಿ ಕನಿಷ್ಠ ದೂರು ಸ್ವೀಕರಿಸುವ ಅಧಿಕಾರಿಗಳಾದ ಎಸ್.ಓ. ಮತ್ತು ಇತರೆ ಪ್ರಮುಖ ಹುದ್ದೆಗಳಲ್ಲಿ ಮಹಿಳಾ ಸಿಬ್ಬಂದಿಯನ್ನೇ ಕಡ್ಡಾಯವಾಗಿ ನಿಯೋಜಿಸಬೇಕು** ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ಇದರಿಂದ ಮಹಿಳೆಯರು ತಮ್ಮ ಸಮಸ್ಯೆಗಳನ್ನು ನಿರ್ಭಯವಾಗಿ ಹಂಚಿಕೊಳ್ಳಲು ಸಾಧ್ಯವಾಗುವುದರ ಜೊತೆಗೆ, ಮಹಿಳಾ ಪೊಲೀಸ್ ಠಾಣೆಗಳ ಉದ್ದೇಶವೂ ಪರಿಣಾಮಕಾರಿಯಾಗಿ ಈಡೇರುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಲಾಗಿದೆ.ಮಹಿಳಾ ಸುರಕ್ಷತೆ ಮತ್ತು ನ್ಯಾಯದ ದೃಷ್ಟಿಯಿಂದ ಸರ್ಕಾರ ಈ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಿ, ರಾಜ್ಯದ ಎಲ್ಲಾ ಮಹಿಳಾ ಪೊಲೀಸ್ ಠಾಣೆಗಳಲ್ಲಿ ಮಹಿಳಾ ಸಿಬ್ಬಂದಿಯ ಸಂಖ್ಯೆಯನ್ನು ಹೆಚ್ಚಿಸುವ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಹ್ಯೂಮನ್ ರೈಟ್ಸ್ ಪ್ರೊಟೆಕ್ಷನ್ ಕಮಿಟಿ ಒತ್ತಾಯಿಸಿದೆ.ವರದಿ: ದೇವರಾಜ್ ಜೆ ಪಬ್ಲಿಕ್ ರೈಡ್

Jul 14, 2026 | 04:36 AM
95 0
ವಿದ್ಯುತ್ ಮೂಲ ಸೌಕರ್ಯ, ಇವಿ ಚಾರ್ಜಿಂಗ್‌ಗೆ ಕೆಪಿಟಿಸಿಎಲ್‌ನಿಂದ ಹೈಬ್ರಿಡ್ ಜಾಲ

ವಿದ್ಯುತ್ ಮೂಲ ಸೌಕರ್ಯ, ಇವಿ ಚಾರ್ಜಿಂಗ್‌ಗೆ ಕೆಪಿಟಿಸಿಎಲ್‌ನಿಂದ ಹೈಬ್ರಿಡ್ ಜಾಲ

ವಿದ್ಯುತ್ ಉಪಕೇಂದ್ರಗಳನ್ನು ಬೆಸೆಯುವ ಹೈಬ್ರಿಡ್ ಪ್ರಸರಣ ವ್ಯವಸ್ಥೆ ಮೂಲಕ ಸಮರ್ಪಕ ವಿದ್ಯುತ್ ಪೂರೈಕೆಬೆಳಗಾವಿ, ಜುಲೈ 09, 2026: ವೇಗವಾಗಿ ಬೆಳೆಯುತ್ತಿರುವ ಎರಡನೇ ಹಂತದ ನಗರಗಳಲ್ಲಿ ದೂರದೃಷ್ಟಿಯ ಉದ್ದೇಶದೊಂದಿಗೆ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್)ವು ಸುಭದ್ರ ಮೂಲಸೌಕರ್ಯಕ್ಕೆ ಬುನಾದಿ ಹಾಕುತ್ತಿದ್ದು, ಬೆಳಗಾವಿ ನಗರದಲ್ಲಿ ಭವಿಷ್ಯದ ಕಲ್ಪನೆಗಳು ಸಾಕಾರವಾಗುತ್ತಿವೆ.ವಿದ್ಯುತ್ ಪ್ರಸರಣದಲ್ಲಿ ದಕ್ಷತೆ ಹಾಗೂ ಆಧುನಿಕತೆ ಅಳವಡಿಸಿಕೊಂಡಿರುವ ಕೆಪಿಟಿಸಿಎಲ್, ಹೈಟೆನ್ಷನ್ ಮತ್ತು ಲೋಟೆನ್ಷನ್ ಒಳಗೊಂಡಂತೆ ಸರಿಸುಮಾರು 700 ಕಿ.ಮೀ. 11 ಕೆವಿ ಭೂಗತ ಕೇಬಲ್, 350 ಕಿ.ಮೀ. ಏರಿಯಲ್ ಬಂಚ್ ಕೇಬಲ್ ಗಳನ್ನು ಅಳವಡಿಸುವುದರ ಜತೆಗೆ ವಿದ್ಯುತ್ ಉಪಕೇಂದ್ರಗಳನ್ನು ಮೇಲ್ದರ್ಜೆಗೇರಿಸಿ ಹೈಬ್ರಿಡ್ ವಿದ್ಯುತ್ ವಿತರಣಾ ಜಾಲವನ್ನು ಅಣಿಗೊಳಿಸಿದೆ. ಹೈಬ್ರಿಡ್‌ ಪ್ರಸರಣ ಜಾಲದ ಸಧೃಡತೆಗೆ ಅಗತ್ಯವಿರುವ ವಿದ್ಯುತ್ ಉಪಕೇಂದ್ರಗಳನ್ನು ಅನುಷ್ಠಾನಗೊಳಿಸಲು ಟೆಂಡರ್‌ ಪ್ರಕ್ರಿಯೆ ಮತ್ತು ವಿದ್ಯುತ್ ಉಪಕೇಂದ್ರಗಳನ್ನು ಚಾರ್ಜ್‌ ಮಾಡುವ ಪ್ರಕ್ರಿಯೆಗಳು ಭರದಿಂದ ಸಾಗಿವೆ. ದೂರದೃಷ್ಟಿಯ ಚಿಂತನೆಯಲ್ಲಿ ನೆಹರು ನಗರ 110 ಕೆವಿ (40 ಎಂವಿಎ) ಪೂರ್ಣಗೊಂಡಿದ್ದು ಜತೆಗೆ ಕಣಬರಗಿ 110 ಕೆವಿ (20ಎಂವಿಎ) ಮತ್ತು 33 ಕೆವಿ ಶ್ರೀನಗರ ಜಿಐಎಸ್ (16 ಎಂವಿಎ) ಸಜ್ಜಾಗಿದೆ. ನಗರದ ಫೋರ್ಟ್ 33 ಕೆವಿ (15 ಎಂವಿಎ) ಉನ್ನತೀಕರಿಸುತ್ತಿದ್ದು 110 ಕೆವಿಗೆ (40 ಎಂವಿಎ), ಸದಾಶಿವನಗರ 33 ಕೆವಿ (10 ಎಂವಿಎ) ಉನ್ನತೀಕರಿಸುತ್ತಿದ್ದು 110 ಕೆವಿಗೆ, ಮತ್ತು ಮಚ್ಚೆ 220 ಕೆವಿ (200 ಎಂವಿಎ) ವಿದ್ಯುತ್ ಉಪಕೇಂದ್ರನ್ನು ಪರಿವರ್ತಿಸಲಾಗುತ್ತಿರುವ ಕಾಮಗಾರಿ ಪ್ರಗತಿಯಲ್ಲಿದೆ. ಬೆಳಗಾವಿ ನಗರದ ಹೃದಯಭಾಗಕ್ಕೆ ಸಮರ್ಪಕ ವಿದ್ಯುತ್ ಪೂರೈಸಲು ಈಗಾಗಲೇ ಬೀಮ್ಸ್ ಆವರಣದಲ್ಲಿ 110 ಕೆವಿ (40 ಎಂವಿಎ) ಮತ್ತು ಒಟ್ಟು ನಗರದ ವಿದ್ಯುತ್ ವ್ಯವಸ್ಥೆ ನಿರ್ವಹಿಸಲು 220 ಕೆವಿ ಕಣಬರಗಿ ಸ್ವಿಚಿಂಗ್ ಸ್ಟೇಷನ್ (400 ಎಂವಿಎ) ಮತ್ತು ನಾವಗೆ (40 ಎಂವಿಎ) ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದೆ. ರಾಯಭಾಗದಲ್ಲಿನ ಮೇಖಲಿಯಲ್ಲಿ ಯೋಜಿಸಿರುವ 400 ಕೆವಿ (1000 ಎಂವಿಎ) ವಿದ್ಯುತ್ ಉಪಕೇಂದ್ರ ಸಜ್ಜಾಗುತ್ತಿದ್ದಂತೆ ಬೆಳಗಾವಿಯಲ್ಲಿ ಪ್ರಮುಖ ವಿದ್ಯುತ್ ಉಪಕೇಂದ್ರಗಳನ್ನು ಬೆಸೆಯುತ್ತಿರುವ ಹೊಸ ಪ್ರಸರಣ ವ್ಯವಸ್ಥೆ ವಿದ್ಯುತ್ ಅಡೆತಡೆಗಳನ್ನು ಮೀರಿ ಮುನ್ನುಗ್ಗಲಿದೆ. *ಅತ್ಯಾಧುನಿಕ ವಿದ್ಯುತ್ ಮೂಲಸೌಕರ್ಯ ಸಾಕಾರ*ಜಿಲ್ಲೆಯ ಸಮಗ್ರ ಅಭಿವೃದ್ದಿ ಹಾಗೂ ಹೆಚ್ಚಿನ ಹೂಡಿಕೆಗಳಿಗೆ ಕೈಗಾರಿಕೆ, ಐಟಿ ಮತ್ತು ಸೇವಾ ಕ್ಷೇತ್ರ, ಸ್ಮಾರ್ಟ್‌ ಸಿಟಿ ಮತ್ತು ಮೂಲಸೌಕರ್ಯ ನಿರ್ವಹಣೆಗಾಗಿ ದಕ್ಷ ಹಾಗೂ ವಿಶ್ವಾಸರ್ಹ ವಿದ್ಯುತ್ ಅತ್ಯಗತ್ಯವಾಗಿದೆ. ಇದೆಲ್ಲವನ್ನು ನಿರ್ವಹಿಸಲು ಪರಿಣಾಮಕಾರಿ ವಿದ್ಯುತ್ ಪೂರೈಕೆ ಜಾಲ ಇರಬೇಕು. ಲೋಡ್‌ ನಿರ್ವಹಣೆ, ಅತ್ಯಂತ ವೇಗವಾಗಿ ಫಾಲ್ಟ್ ಗುರುತಿಸಿ ನಿರ್ವಹಣೆ ಮಾಡಲು ಅತ್ಯಾಧುನಿಕ ಕೇಬಲ್ ಫಾಲ್ಟ್ ಡಿಟೆಕ್ಟರ್ ವಾಹನ ವ್ಯವಸ್ಥೆಯನ್ನು ನಿಗಮ ಒಳಗೊಂಡಿದೆ ಮತ್ತು ಸಧೃಡ ಬ್ಯಾಕ್‌ ಅಪ್ ವ್ಯವಸ್ಥೆ ಇದ್ದಾಗ ಮಾತ್ರವೇ ಗುಣಮಟ್ಟದ ವಿದ್ಯುತ್ ಪೂರೈಕೆ ಸಾಧ್ಯವಾಗಲಿದೆ.ವಿದ್ಯುತ್ ವಾಹನ (ಇವಿ) ಬಳಕೆಗೆ ಗ್ರಾಹಕರು ಹೆಚ್ಚು ಒತ್ತು ನೀಡುತ್ತಿದ್ದು, ಭವಿಷ್ಯದಲ್ಲಿ ಚಾರ್ಜಿಂಗ್ ಸೌಕರ್ಯಗಳು ಪ್ರಮುಖ ಪಾತ್ರವಹಿಸಲಿದೆ. ಈ ಎಲ್ಲಾ ಅಂಶಗಳನ್ನು ಗಮನಿಸಿ ನಿಗಮವು ವಿದ್ಯುತ್ ಮೂಲಸೌಕರ್ಯದಲ್ಲಿ ಮಹತ್ತರ ಪರಿವರ್ತನೆಗೆ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ಸದ್ಯದಲ್ಲೇ ಅತ್ಯುತ್ತಮ ಬ್ಯಾಕ್‌ಅಪ್ ವ್ಯವಸ್ಥೆಯೊಂದಿಗೆ ಬೆಳಗಾವಿ ಭವಿಷ್ಯದ ಭರವಸೆಯ ನಗರವಾಗಲು ಸಜ್ಜುಗೊಳ್ಳುತ್ತಿದೆ. ರಾಜ್ಯದಲ್ಲಿ ವಿಶೇಷ ಗಣೇಶೋತ್ಸವದ ಹೆಗ್ಗಳಿಕೆ ಹೊಂದಿರುವ ಬೆಳಗಾವಿಯಲ್ಲಿ ಮೇಲ್ಮಾರ್ಗದ ವಿದ್ಯುತ್ ಲೈನ್‌ಗಳನ್ನು ಭೂಗತವಾಗಿ ಪರಿವರ್ತಿಸಲಾಗಿದ್ದು, ನಗರದ ಸೌಂದರ್ಯ ಕಳೆಗಟ್ಟಿದೆ. ಸ್ಥಳೀಯಾಡಳಿತದ ಆಸಕ್ತಿಯಿಂದ ಆಕರ್ಷಕ ಎಲ್‌ಇಡಿ ಬೀದಿ ದೀಪಗಳು ತಲೆಯೆತ್ತಿವೆ. ನಗರಾಭಿವೃದ್ಧಿ ಯೋಜನೆಯಲ್ಲಿ ಒಳಗೊಂಡಿರುವ ನಗರ ಮತ್ತಷ್ಟು ಬೆಳವಣಿಗೆ ಕಾಣಲು ಜನರ ಆರ್ಥಿಕ ಹಾಗೂ ಸಾಮಾಜಿಕ ಮೌಲ್ಯ ವರ್ಧನೆಗೆ ವಿದ್ಯುತ್ ಪೂರೈಸಲು ಕೆಪಿಟಿಸಿಎಲ್ ಮತ್ತು ಹೆಸ್ಕಾಂನ ಧೃಡ ಸಂಕಲ್ಪ ಹಾಗೂ ಬದ್ದತೆಗೆ ಸಾಕ್ಷಿಯಾಗಿದೆ. *ಹೈಬ್ರಿಡ್ ರೇಡಿಯಲ್ ಸಿಸ್ಟಮ್ -ಕೆಪಿಟಿಸಿಎಲ್ ಭರವಸೆಯ ತಾಂತ್ರಿಕ ಅಳವಡಿಕೆ* ವಿದ್ಯುತ್ ಪ್ರಸರಣದಲ್ಲಿ ರೇಡಿಯಲ್ ಸಿಸ್ಟಮ್, ರಿಂಗ್ ಮೇನ್ ಸಿಸ್ಟಮ್ ಮತ್ತು ಹೈಬ್ರಿಡ್ ರೇಡಿಯಲ್ ಸಿಸ್ಟಮ್ ಎಂಬ ಮೂರು ಪ್ರಮುಖ ಮಾದರಿಗಳಿವೆ. ವಿದೇಶಗಳಲ್ಲಿ ಯಶಸ್ವಿ ವಿದ್ಯುತ್ ಪ್ರಸರಣಕ್ಕಾಗಿ ಹೈಬ್ರಿಡ್ ವ್ಯವಸ್ಥೆ ಬಳಕೆಯಲ್ಲಿದೆ. ಇದನ್ನೇ ಈಗ ಬೆಳಗಾವಿಯಲ್ಲೂ ಅಳವಡಿಸಲು ನಿಗಮ ಹೆಜ್ಜೆ ಇಟ್ಟಿದೆ. ಹೈಬ್ರಿಡ್ ವ್ಯವಸ್ಥೆಯಲ್ಲಿ ಯಾವುದೇ ಘಟಕದಲ್ಲಿ ಅಡಚಣೆಯಾದರೆ ಕೂಡಲೇ ಮತ್ತೊಂದು ಲೈನ್ ಮೂಲಕ ವಿದ್ಯುತ್ ಪ್ರಸರಣ ವ್ಯವಸ್ಥೆಯನ್ನು ಸುಗಮಗೊಳಿಸುವುದು. ಇದು ಕ್ಷಣಮಾತ್ರದಲ್ಲಿ ನಡೆಯುವ ಪ್ರಕ್ರಿಯೆ ಆಗಿರುತ್ತದೆ. ಈ ಹೈಬ್ರಿಡ್ ವ್ಯವಸ್ಥೆಯಲ್ಲಿ ಈಗಾಗಲೇ ಉತ್ತಮ ತಂತ್ರಜ್ಞಾನ ಮಾದರಿ ಎಂಬಂತೆ ಬಳಕೆಯಲ್ಲಿರುವ (ಎನ್‌-1) ಸರಳವಾಗಿ ಹೇಳುವುದಾದರೆ ಲೋಡ್‌ಗೆ ಅಗತ್ಯವಿರುವ ಬ್ಯಾಕಪ್ ವ್ಯವಸ್ಥೆ ಸಿದ್ದವಾಗಿಟ್ಟುಕೊಳ್ಳುವುದೇ ಆಗಿದೆ. ಯಾವುದೇ ಲೈನ್‌ ಸಮಸ್ಯೆ ಎದುರಾದರೆ ಅಥವಾ ಫಾಲ್ಟ್‌ ಆಗಿ ಐಸೋಲೇಟ್‌ ಆದರೆ ಕೂಡಲೇ ಮತ್ತೊಂದು ಲೈನ್‌ ಮೂಲಕ ವಿದ್ಯುತ್ ಪೂರೈಕೆ ಸಾಧ್ಯವಾಗಲಿದೆ. ಇದರಿಂದ ಗ್ರಾಹಕರಿಗೆ ಗುಣಮಟ್ಟದ ಮತ್ತು ಸಮರ್ಪಕ ವಿದ್ಯುತ್ ಪೂರೈಕೆ ಸಾಧ್ಯವಾಗಲಿದೆ. *ಸುಸ್ಥಿರ ಸಾರಿಗೆಗೆ ಭರವಸೆ ಮೂಡಿಸಿದ ವಿದ್ಯುತ್ ಮೂಲಸೌಕರ್ಯ*ಈಗಾಗಲೇ ಎಲೆಕ್ಟ್ರಿಕ್ ವಾಹನಗಳ ಬಳಕೆ ಗಣನೀಯವಾಗಿ ಏರುತ್ತಿದೆ. ರಾಜ್ಯ ಸಾರಿಗೆ ನಿಗಮವು ವಿದ್ಯುತ್ ಬಸ್‌ಗಳ ಕಡೆ ಮುಖಮಾಡಿವೆ. ವಾಯುವ್ಯ ಕರ್ನಾಟಕ ಸಾರಿಗೆ ಅತ್ಯುತ್ತಮ ವಿದ್ಯುತ್ ಮೂಲಸೌಕರ್ಯ ಮನಗಂಡು ಇವಿ ಬಸ್ ಚಾರ್ಜಿಂಗ್ ಘಟಕ ಸ್ಥಾಪನೆಗೆ ಮುಂದಾಗಿ ಇದಕ್ಕೆ ಅಗತ್ಯವಿರುವ 11 ಕೆವಿ ವಿದ್ಯುತ್ ಸಂಪರ್ಕ ಜಾಲವನ್ನು ಬಳಸಿಕೊಳ್ಳಲು ಸನ್ನದ್ಧವಾಗಿದೆ. ಇವಿ ವಾಹನ ಬಳಕೆದಾರರಿಗೆ ಚಾರ್ಜಿಂಗ್ ಮೂಲಸೌಕರ್ಯ ಅಗತ್ಯವಾಗುತ್ತಿರುವ ಈ ಹೊತ್ತಿನಲ್ಲಿ ಮುಂದಿನ ಸುಸ್ಥಿರ ಸಾರಿಗೆಗೆ ಕೆಪಿಟಿಸಿಎಲ್ ನಿರ್ಮಿಸುತ್ತಿರುವ ಮೂಲಸೌಕರ್ಯ ವರದಾನವಾಗಲಿದೆ. “ವಿದ್ಯುತ್ ಸೌಕರ್ಯಗಳು ಈಗ ಪ್ರತಿಯೊಬ್ಬರಿಗೂ ಆರ್ಥಿಕವಾಗಿ ಹಾಗೂ ಸಾಮಾಜಿಕ ಬದಲಾವಣೆಗೆ ಬಹುಮುಖ್ಯವಾಗಿದೆ. ಇಂಧನ ಇಲಾಖೆ ಭವಿಷ್ಯದ ನಗರ ನಿರ್ಮಾಣಕ್ಕೆ ಅಗತ್ಯವಿರುವ ವಿದ್ಯುತ್ ಮೂಲಸೌಕರ್ಯ ಕಲ್ಪಿಸುವಲ್ಲಿ ಮುಂದಾಗಿದೆ. ಬೆಂಗಳೂರು ಹೊರತಾದ ನಗರಗಳಲ್ಲಿ ಬೆಳಗಾವಿ ಪ್ರಗತಿಯತ್ತ ಹೆಜ್ಜೆ ಹಾಕುತ್ತಿರುವ ಜಿಲ್ಲೆ. ಈ ಗಡಿಜಿಲ್ಲೆ ಯಲ್ಲಿ ಸುಭದ್ರ ಹಾಗೂ ಸಧೃಡ ವಿದ್ಯುತ್ ಪ್ರಸರಣ ಸೌಕರ್ಯ ಬಲಗೊಳಿಸಲಾಗುತ್ತಿದೆ.,”- *ಕೆ.ಜೆ.ಜಾರ್ಜ್, ಇಂಧನ ಹಾಗೂ ಪ್ರವಾಸೋದ್ಯಮ ಸಚಿವರು, ಕರ್ನಾಟಕ ಸರ್ಕಾರ* "ವಿದ್ಯುತ್ ಮೂಲ ಸೌಕರ್ಯ ಸುಧಾರಣೆಯಾದರೆ ವಿದ್ಯುತ್ ಪೂರೈಕೆಯೂ ಸಮರ್ಪಕಗೊಳ್ಳುತ್ತದೆ. ಈ ಅಂಶವನ್ನು ಗಮನದಲ್ಲಿಟ್ಟುಕೊಂಡು ಎರಡನೇ ಹಂತದ ನಗರಗಳಲ್ಲಿ ಕೆಪಿಟಿಸಿಎಲ್ ಜೊತೆಗೆ ಹೆಸ್ಕಾಂ ಮೂಲಕ ಹಲವು ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದ್ದು, ಬೆಳಗಾವಿ ಇದಕ್ಕೆ ಉತ್ತಮ ಉದಾಹರಣೆ ಮತ್ತು ಮಾದರಿಯಾಗಲಿದೆ."- *ಗೌರವ್ ಗುಪ್ತ, ಅಪರ ಮುಖ್ಯ ಕಾರ್ಯದರ್ಶಿಗಳು, ಇಂಧನ ಇಲಾಖೆ*“ಕವಿಪ್ರನಿನಿ ವಿದ್ಯುತ್ ಮೂಲಸೌಕರ್ಯವನ್ನು ಸುಸ್ಥಿರ ಹಾಗೂ ಸಧೃಡವಾಗಿ ನಿರ್ಮಿಸಲು ಅಗತ್ಯವಿರುವ ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತಿದೆ. ಜಾಗತಿಕ ವಿದ್ಯುತ್ ಪ್ರಸರಣ ಮತ್ತು ವಿತರಣಾ ತಂತ್ರಜ್ಞಾನ ಅಳವಡಿಕೆ ಎರಡನೇ ಹಂತದ ನಗರಗಳನ್ನು ಭವಿಷ್ಯದ ಸುಸ್ಥಿರ ಹಾಗೂ ಪ್ರಗತಿಯೆಡೆಗೆ ಮುನ್ನಡೆಸುತ್ತಿದೆ. ರೈತರು ಹಾಗೂ ಜನತೆಯ ಸಹಕಾರವಿದ್ದರೆ ನಾವು ಕಾಲಮಿತಿಯೊಳಗೆ ಜನಸ್ನೇಹಿ ಯೋಜನೆಗಳನ್ನು ರೂಪಿಸಲು ಸಿದ್ದರಿದ್ದೇವೆ”. ಡಾ.ವಿ.ರಾಮ್ ಪ್ರಸಾತ್ ಮನೋಹರ್, ವ್ಯವಸ್ಥಾಪಕ ನಿರ್ದೇಶಕ, ಕವಿಪ್ರನಿನಿ

Jul 12, 2026 | 05:59 AM
24 0
ಜನಮೆಚ್ಚುಗೆಗೆ ಹೆಸರುವಾಸಿಯಾದ   ಸರಳ ರಾಜಕಾರಿಣಿ ಹೆಚ್ ಜಿ ಸುರೇಶ್-  ಮಾಜಿ ಶಾಸಕ ಆರ್ ಮಂಜುನಾಥ್

ಜನಮೆಚ್ಚುಗೆಗೆ ಹೆಸರುವಾಸಿಯಾದ ಸರಳ ರಾಜಕಾರಿಣಿ ಹೆಚ್ ಜಿ ಸುರೇಶ್- ಮಾಜಿ ಶಾಸಕ ಆರ್ ಮಂಜುನಾಥ್

ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯ ದಾಸರಹಳ್ಳಿ : ಸಾಮಾನ್ಯರಲ್ಲಿ ಸಾಮಾನ್ಯ ಉದ್ಯಮಿ ರಾಜಕಾರಣಿಯಾಗಿ ಸರಳ ವ್ಯಕ್ತಿತ್ವ ಹೊಂದಿರುವ ಹೆಚ್ ಜಿ ಸುರೇಶ್ ಸ್ಥಳೀಯವಾಗಿ ಮಾಡಿರುವ ಜನಸೇವೆಗೆ ಇಂದು ಜನರ ಅಪಾರ ಪ್ರೀತಿಗಳಿಸಿ ಜನ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎಂದು ಮಾಜಿ ಶಾಸಕ ಅರ್ ಮಂಜುನಾಥ್ ಹೇಳಿದರು.ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ರಾಜಗೋಪಾಲನಗರ ವಾರ್ಡ್ ಜೆಡಿಎಸ್ ಪಕ್ಷದ ಜಿಬಿಎ ಆಕಾಂಕ್ಷಿ ಹೆಚ್‌ ಜಿ ಸುರೇಶ್ ರವರ ಜನ್ಮದಿನದ ಅಂಗವಾಗಿ 3000ಕ್ಕೂ ಹೆಚ್ಚು ಜನರಿಗೆ ಬಿರಿಯಾನಿ ಊಟದ ವ್ಯವಸ್ಥೆ ಮಾಡುವ ಮೂಲಕ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಆರ್ ಮಂಜುನಾಥ್ ಬೆಂಗಳೂರು ನಗರ ಜೆಡಿಎಸ್ ಅಧ್ಯಕ್ಷ ಎಚ್ಎಂ ರಮೇಶ್ ಗೌಡ ಭಾಗವಹಿಸಿ ಜನ್ಮದಿನದ ಶುಭ ಕೋರಿದರು.ನಂತರ  ವಿಧಾನ ಪರಿಷತ್  ಮಾಜಿ ಸದಸ್ಯ ರಮೇಶ್ ಗೌಡ ಮಾತನಾಡಿ ಹೆಗ್ಗನಹಳ್ಳಿ ಭಾಗದಲ್ಲಿ ಚಿರಪರಿಚಿತರಾಗಿರುವ ಹೆಚ್ ಜಿ ಸುರೇಶ್ ಜೆಡಿಎಸ್ ನಲ್ಲಿ ಅನೇಕ ವರ್ಷಗಳಿಂದ ನಿಷ್ಠೆಯಿಂದ ಸಕ್ರಿಯರಾಗಿ ದುಡಿಯುತ್ತಿದ್ದಾರೆ,ಅವರ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ ,ಜಿಬಿಎ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಅವರಿಗೆ ಟಿಕೆಟ್ ಸಿಗುವ ಭರವಸೆಯಿದ್ದು  ಜನಪ್ರತಿನಿಧಿಯಾಗುವ ಯೋಗವಿದೆ.ಈ ಹುಟ್ಟುಹಬ್ಬದಂದು  ಅವರ ಆಸೆಗಳು ಈಡೇರಲಿ ಎಂದು ಶುಭ ಕೋರಿದರು.ಈ ಸಂಧರ್ಭದಲ್ಲಿ  ಮಾಜಿ ನಗರಸಭಾ ಸದಸ್ಯ ಶಿವಣ್ಣ,  ಜೆಡಿಎಸ್ ಮುಖಂಡರಾ ಲಾರಿ  ಮಂಜಣ್ಣ, ಬಿಜೆಪಿ ಮುಖಂಡ ಕಣ್ಣಪ್ಪ, ಶ್ರೀಗಂಧ ನಗರ ವಾರ್ಡಿನ ಜೆಡಿಎಸ್ ಅಧ್ಯಕ್ಷ ಹೇಮಗಿರಿ ಗೌಡ, ಶಿವಪುರ ವಾರ್ಡಿನ ಜಿಬಿಎ ಆಕಾಂಕ್ಷಿ ವಿ ಡಿ ಚಿಕ್ಕಣ್ಣ, ಸುಂಕದಕಟ್ಟೆ ಜೆಡಿಎಸ್ ಮುಖಂಡ ಹನುಮೇಗೌಡ, ಬಿ ಡಿ ರಂಜಿತ್, ಜೆಡಿಎಸ್ ಯುವ ಘಟಕದ ಅಧ್ಯಕ್ಷ ವಿನಯ್ ಕುಮಾರ್ ಶಿವಣ್ಣ ,ಕಾಂಗ್ರೆಸ್ ಮುಖಂಡ ಎನ್ ರಮೇಶ್ ಗೌಡ, ರವಿಕುಮಾರ್ ಗೌಡ, ಲಕ್ಷ್ಮಿ ಸಾಗರ್, ವೀರಪ್ಪ ,ಶ್ರೀಕಂಠೇಗೌಡ, ರಾಜಗೋಪಾಲನಗರದ ರಂಗಣ್ಣ, ರಾಜು ಗೌಡ,  ಚೇತನ್ ಗೌಡ ,ಇನ್ನು ಹಲವಾರು ಸ್ಥಳೀಯ ಮುಖಂಡರು ಮಹಿಳೆಯರು ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಜನ್ಮದಿನದ ಶುಭ ಕೋರಿದರು.ವರದಿ : ಪಬ್ಲಿಕ್ ರೈಡ್ ದೇವರಾಜ್

Jul 10, 2026 | 01:46 PM
147 0
ಕೆ.ಪಿ.ಸಿ.ಸಿ ಕಾರ್ಮಿಕ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಹೆಗ್ಗನಹಳ್ಳಿ ಮುಖಂಡ ಬ.ನಾ.ರವಿ ನೇಮಕ.

ಕೆ.ಪಿ.ಸಿ.ಸಿ ಕಾರ್ಮಿಕ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಹೆಗ್ಗನಹಳ್ಳಿ ಮುಖಂಡ ಬ.ನಾ.ರವಿ ನೇಮಕ.

ಪಬ್ಲಿಕ್ ರೈಡ್ ಸುದ್ದಿ ಪೀಣ್ಯ ದಾಸರಹಳ್ಳಿ : ಕೆ.ಪಿ.ಸಿ.ಸಿ ಅಧ್ಯಕ್ಷರಾದ ಬಿ.ಕೆ.ಹರಿ ಪ್ರಸಾದ್ ರವರ ಆದೇಶದ ಮೇರೆಗೆ, ಕುಣಿಗಲ್ ಕ್ಷೇತ್ರದ ಶಾಸಕರಾದ ಡಾ. ಹೆಚ್.ಡಿ ರಂಗನಾಥ್ ರವರ ಶಿಫಾರಸ್ಸಿನ ಮೇರೆಗೆ ಕೆ.ಪಿ.ಸಿ.ಸಿ ಕಾರ್ಮಿಕ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಬ.ನಾ.ರವಿ ರವರಿಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಮಿಕ ವಿಭಾಗದ ರಾಜ್ಯಾಧ್ಯಕ್ಷ ಕೆ ಪುಟ್ಟಸ್ವಾಮಿಗೌಡ ನೇಮಕಾತಿ ಆದೇಶ ಪತ್ರನೀಡಿದರು.ಈ ವೇಳೆ ಮಾತನಾಡಿದ ಬ ನಾ ರವಿ ರಾಜಕೀಯ ಗುರುಗಳಾದ ಶಾಸಕ ಡಾ. ಹೆಚ್. ಡಿ. ರಂಗನಾಥ್ ಹಾಗೂ ರಾಜ್ಯ ಕಾರ್ಮಿಕ ಘಟಕದ ಅಧ್ಯಕ್ಷ ಕೆ‌.ಪುಟ್ಟಸ್ವಾಮಿಗೌಡರಿಗೆ ಅಭಾರಿಯಾಗುತ್ತೆನೆ ನಾನು ಕಳೆದ18- 20 ವರ್ಷಗಳಿಂದ ನಾನು ನಮ್ಮ ಕುಟುಂಬ ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತರಾಗಿ ದುಡಿಯುತ್ತಿದ್ದು ಕಾಂಗ್ರೆಸ್ ಕಟ್ಟಾಳು ನಮ್ಮ ದೊಡ್ಡಪ್ಪ ಬಿ ವಿ ಪುಟ್ಟರಾಮೇಗೌಡ್ರು ಸಹ ರಾಜಕೀಯ ಕ್ಷೇತ್ರದಲ್ಲಿ ಉನ್ನತ ಸ್ಥಾನಗಳನ್ನು ಅಲಂಕರಿಸಿದವರು ನಾನು ವಯಕ್ತಿಕ ವಾಗಿ ಈಗಾಗಲೇ ಮೂರು ಚುನಾವಣೆಯನ್ನು ಒಂದು ಎಪಿಎಂಸಿ ಒಂದು ತಾಲೂಕು ಪಂಚಾಯಿತಿ ಒಂದು ಗ್ರಾಮ ಪಂಚಾಯಿತಿ ಹಾಗೂ ನಮ್ಮ ತಾಯಿ ನಾಲ್ಕು ಬಾರಿ ಬಂಡಿಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರಾಗಿ ಆಯ್ಕೆಯಾಗಿ ಕರ್ತವ್ಯ ನಿರ್ವಹಿಸಿರುತ್ತಾರೆ ಇಂತಹ ನಿಷ್ಠಾವಂತ ಕಾಂಗ್ರೆಸ್ ಕುಟುಂಬಕ್ಕೆ ಹೆಚ್ಚಿನ ಶಕ್ತಿಯನ್ನು ನೀಡಿದಂತವರಿಗೆ ಧನ್ಯವಾದಗಳು, ತಮಗೆ ವಹಿಸಲಾಗಿರುವ ಹೊಣೆಗಾರಿಕೆಯನ್ನು ನಿಷ್ಠೆಯಿಂದ ನಿರ್ವಹಿಸುತ್ತಾ, ರಾಜ್ಯ ಮತ್ತು ಜಿಲ್ಲಾ ಕಾಂಗ್ರೆಸ್ ಸಮಿತಿಯ ಮಾರ್ಗದರ್ಶನದಲ್ಲಿ ಹಾಗೂ ದಾಸರಹಳ್ಳಿ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸ್ಥಳೀಯ ನಾಯಕರುಗಳ ಸಹಕಾರದೊಂದಿಗೆ ತಮಗೆ ನೀಡಲಾಗಿರುವ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿ. ಪಕ್ಷದ ಸಂಘಟನೆಗೆ ಹಾಗೂ ಕಾರ್ಮಿಕರ ಏಳಿಗೆಗಾಗಿ ಶ್ರಮಿಸುತ್ತನೆ ಎಂದರು.ಈ ಸಂಧರ್ಭದಲ್ಲಿ ಉಮೇಶ್, ಸವಿತಾ, ಸಲ್ಮಾ ,ಶಿಲ್ಪಾ ರಾಣಿ, ರಮಿಜ್ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.ವರದಿ : ಪಬ್ಲಿಕ್ ರೈಡ್ ದೇವರಾಜ್

Jul 10, 2026 | 01:04 PM
197 0
ಮೂಲಭೂತ ಸೌಕರ್ಯ ವಂಚಿತ ನಾಗರೆಡ್ಡಿ ಬಡಾವಣೆ; ಸ್ಥಳೀಯರ ಆಕ್ರೋಶ

ಮೂಲಭೂತ ಸೌಕರ್ಯ ವಂಚಿತ ನಾಗರೆಡ್ಡಿ ಬಡಾವಣೆ; ಸ್ಥಳೀಯರ ಆಕ್ರೋಶ

ಗೌರಿಬಿದನೂರು: ನಗರದ ವಾರ್ಡ್ ನಂ. 1ರ ನಾಗಯ್ಯ ರೆಡ್ಡಿ ಬಡಾವಣೆಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿಂದ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಡವರು ಹೆಚ್ಚಾಗಿ ವಾಸಿಸುವ ಈ ಪ್ರದೇಶಕ್ಕೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕೇವಲ ಭರವಸೆ ನೀಡುತ್ತಿದ್ದಾರೆ ಹೊರತು ಯಾವುದೇ ಅಭಿವೃದ್ಧಿ ಕಾಮಗಾರಿ ನಡೆಯುತ್ತಿಲ್ಲ ಎಂದು ನಿವಾಸಿಗಳು ಆರೋಪಿಸಿದ್ದಾರೆ.ಸ್ಥಳೀಯರ ಪ್ರಕಾರ, ಬಡಾವಣೆಯಲ್ಲಿ ಅಂಗನವಾಡಿ ಮತ್ತು ಶಾಲೆ ಕಾರ್ಯನಿರ್ವಹಿಸುತ್ತಿದ್ದರೂ ಅವುಗಳಿಗೆ ಸಮರ್ಪಕ ಕಾಂಪೌಂಡ್ ಗೋಡೆ ಇಲ್ಲ. ಸರ್ಕಾರ ನಿರ್ಮಿಸಿರುವ ಸಮುದಾಯ ಭವನ ನಿರ್ಲಕ್ಷ್ಯದಿಂದ ಬಾಳುಬಿದ್ದ ಸ್ಥಿತಿಗೆ ತಲುಪಿದ್ದು, ಅದು ಕುಡುಕರ ಅಡ್ಡೆಯಾಗಿ ಮಾರ್ಪಟ್ಟಿದೆ. “ಹೇಳೋರಿಲ್ಲ, ಕೇಳೋರಿಲ್ಲ ಎನ್ನುವಂತಾಗಿದೆ” ಎಂದು ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಇದಲ್ಲದೆ, ಪ್ರದೇಶದಲ್ಲಿ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದಿರುವುದು ಹಾಗೂ ರಸ್ತೆಗಳು ಹದಗೆಟ್ಟಿರುವುದು ಜನರ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿದೆ. ಮಳೆ ಬಂದಾಗ ರಸ್ತೆಗಳ ಮೇಲೆ ನೀರು ನಿಂತುಕೊಳ್ಳುವುದರಿಂದ ಓಡಾಡುವುದೇ ಕಷ್ಟವಾಗುತ್ತದೆ ಎಂದು ಸ್ಥಳೀಯರು ದೂರಿದ್ದಾರೆ.ಈ ಕುರಿತು ಹಲವಾರು ಬಾರಿ ರಾಜಕೀಯ ಮುಖಂಡರು ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಚುನಾವಣೆ ಸಮಯದಲ್ಲಿ ಮಾತ್ರ ಬಂದು ಭರವಸೆ ನೀಡಿ ಹೋಗುತ್ತಾರೆ, ಆದರೆ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿಲ್ಲ ಎಂದು ನಿವಾಸಿಗಳು ಆರೋಪಿಸಿದ್ದಾರೆ.ನಾಗಯ್ಯ ರೆಡ್ಡಿ ಬಡಾವಣೆಯ ಸಮಗ್ರ ಅಭಿವೃದ್ಧಿಗೆ ತಕ್ಷಣ ಕ್ರಮ ಕೈಗೊಂಡು ರಸ್ತೆ, ಚರಂಡಿ, ಕಾಂಪೌಂಡ್ ಗೋಡೆ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎಂದು ಸ್ಥಳೀಯರು ಸರ್ಕಾರ ಮತ್ತು ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ.ವರದಿ: ಜಿಲಾನಿ ಭಾಷಾ, ಗೌರಿಬಿದನೂರು

Jul 10, 2026 | 04:10 AM
97 0