ಕರ್ನಾಟಕ News

Discover the latest headlines in this section.

ಮಹಿಳಾ ಪೊಲೀಸ್ ಠಾಣೆಯಲ್ಲಿ ಮಹಿಳಾ ಸಿಬ್ಬಂದಿ ಕೊರತೆ: "ಮಹಿಳೆಯರ ಸಂಕಷ್ಟ ಕೇಳುವವರು ಮಹಿಳೆಯರೇ ಆಗಬೇಕು" – ಸರ್ಕಾರಕ್ಕೆ ಹ್ಯೂಮನ್ ರೈಟ್ಸ್ ಕಮಿಟಿ ಒತ್ತಾಯ

ಮಹಿಳಾ ಪೊಲೀಸ್ ಠಾಣೆಯಲ್ಲಿ ಮಹಿಳಾ ಸಿಬ್ಬಂದಿ ಕೊರತೆ: "ಮಹಿಳೆಯರ ಸಂಕಷ್ಟ ಕೇಳುವವರು ಮಹಿಳೆಯರೇ ಆಗಬೇಕು" – ಸರ್ಕಾರಕ್ಕೆ ಹ್ಯೂಮನ್ ರೈಟ್ಸ್ ಕಮಿಟಿ ಒತ್ತಾಯ

ಬೆಂಗಳೂರು:ಮಹಿಳೆಯರ ಮೇಲಿನ ದೌರ್ಜನ್ಯ, ಕೌಟುಂಬಿಕ ಕಲಹ, ಮಾನಸಿಕ ಮತ್ತು ದೈಹಿಕ ಹಿಂಸೆ ಸೇರಿದಂತೆ ವಿವಿಧ ಪ್ರಕರಣಗಳಿಗೆ ನ್ಯಾಯ ಒದಗಿಸುವ ಉದ್ದೇಶದಿಂದ ರಾಜ್ಯದಲ್ಲಿ ಮಹಿಳಾ ಪೊಲೀಸ್ ಠಾಣೆಗಳನ್ನು ಸ್ಥಾಪಿಸಲಾಗಿದೆ. ಆದರೆ, ಈ ಠಾಣೆಗಳಲ್ಲೇ ಮಹಿಳಾ ಸಿಬ್ಬಂದಿಯ ಕೊರತೆ ಇರುವುದರಿಂದ ಮಹಿಳೆಯರು ತಮ್ಮ ಸಮಸ್ಯೆಗಳನ್ನು ಮುಕ್ತವಾಗಿ ಹೇಳಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬ ಗಂಭೀರ ಆರೋಪ ಕೇಳಿಬಂದಿದೆ.ಈ ಕುರಿತು ಹ್ಯೂಮನ್ ರೈಟ್ಸ್ ಪ್ರೊಟೆಕ್ಷನ್ ಕಮಿಟಿ (RTPWT) ರಾಜ್ಯಾಧ್ಯಕ್ಷ ಬಿ.ಎಂ. ಚಿಕ್ಕಣ್ಣ ಅವರು ಮುಖ್ಯಮಂತ್ರಿ, ಮುಖ್ಯ ಕಾರ್ಯದರ್ಶಿ, ಗೃಹ ಸಚಿವರು, ಗೃಹ ಕಾರ್ಯದರ್ಶಿ ಹಾಗೂ ರಾಜ್ಯದ ಡಿಜಿ ಮತ್ತು ಐಜಿಪಿ ಅವರಿಗೆ ಪತ್ರ ಬರೆದು ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.ಪತ್ರದಲ್ಲಿ, ಮಹಿಳಾ ಪೊಲೀಸ್ ಠಾಣೆಗಳಲ್ಲಿ ದೂರು ಸ್ವೀಕರಿಸುವ ಅಧಿಕಾರಿಗಳು, ಎಸ್.ಓ. ಹಾಗೂ ಎಸ್.ಎಚ್.ಓ. ಹುದ್ದೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪುರುಷ ಸಿಬ್ಬಂದಿಯೇ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಗೃಹಹಿಂಸೆ, ಲೈಂಗಿಕ ಕಿರುಕುಳ, ಕೌಟುಂಬಿಕ ಕಲಹ ಸೇರಿದಂತೆ ಸೂಕ್ಷ್ಮ ಪ್ರಕರಣಗಳ ಬಗ್ಗೆ ಮಹಿಳೆಯರು ಮುಕ್ತವಾಗಿ ಮಾತನಾಡಲು ಮುಜುಗರ ಅನುಭವಿಸುತ್ತಿದ್ದು, ಇದರಿಂದ ಅನೇಕ ಪ್ರಕರಣಗಳು ಸಮರ್ಪಕವಾಗಿ ದಾಖಲಾಗದ ಅಥವಾ ನ್ಯಾಯದಿಂದ ವಂಚಿತವಾಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಲಾಗಿದೆ.ಹೀಗಾಗಿ, **ಮಹಿಳಾ ಪೊಲೀಸ್ ಠಾಣೆಗಳಲ್ಲಿ ಕನಿಷ್ಠ ದೂರು ಸ್ವೀಕರಿಸುವ ಅಧಿಕಾರಿಗಳಾದ ಎಸ್.ಓ. ಮತ್ತು ಇತರೆ ಪ್ರಮುಖ ಹುದ್ದೆಗಳಲ್ಲಿ ಮಹಿಳಾ ಸಿಬ್ಬಂದಿಯನ್ನೇ ಕಡ್ಡಾಯವಾಗಿ ನಿಯೋಜಿಸಬೇಕು** ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ಇದರಿಂದ ಮಹಿಳೆಯರು ತಮ್ಮ ಸಮಸ್ಯೆಗಳನ್ನು ನಿರ್ಭಯವಾಗಿ ಹಂಚಿಕೊಳ್ಳಲು ಸಾಧ್ಯವಾಗುವುದರ ಜೊತೆಗೆ, ಮಹಿಳಾ ಪೊಲೀಸ್ ಠಾಣೆಗಳ ಉದ್ದೇಶವೂ ಪರಿಣಾಮಕಾರಿಯಾಗಿ ಈಡೇರುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಲಾಗಿದೆ.ಮಹಿಳಾ ಸುರಕ್ಷತೆ ಮತ್ತು ನ್ಯಾಯದ ದೃಷ್ಟಿಯಿಂದ ಸರ್ಕಾರ ಈ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಿ, ರಾಜ್ಯದ ಎಲ್ಲಾ ಮಹಿಳಾ ಪೊಲೀಸ್ ಠಾಣೆಗಳಲ್ಲಿ ಮಹಿಳಾ ಸಿಬ್ಬಂದಿಯ ಸಂಖ್ಯೆಯನ್ನು ಹೆಚ್ಚಿಸುವ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಹ್ಯೂಮನ್ ರೈಟ್ಸ್ ಪ್ರೊಟೆಕ್ಷನ್ ಕಮಿಟಿ ಒತ್ತಾಯಿಸಿದೆ.ವರದಿ: ದೇವರಾಜ್ ಜೆ ಪಬ್ಲಿಕ್ ರೈಡ್

Jul 14, 2026 | 04:36 AM
20 0
ವಿದ್ಯುತ್ ಮೂಲ ಸೌಕರ್ಯ, ಇವಿ ಚಾರ್ಜಿಂಗ್‌ಗೆ ಕೆಪಿಟಿಸಿಎಲ್‌ನಿಂದ ಹೈಬ್ರಿಡ್ ಜಾಲ

ವಿದ್ಯುತ್ ಮೂಲ ಸೌಕರ್ಯ, ಇವಿ ಚಾರ್ಜಿಂಗ್‌ಗೆ ಕೆಪಿಟಿಸಿಎಲ್‌ನಿಂದ ಹೈಬ್ರಿಡ್ ಜಾಲ

ವಿದ್ಯುತ್ ಉಪಕೇಂದ್ರಗಳನ್ನು ಬೆಸೆಯುವ ಹೈಬ್ರಿಡ್ ಪ್ರಸರಣ ವ್ಯವಸ್ಥೆ ಮೂಲಕ ಸಮರ್ಪಕ ವಿದ್ಯುತ್ ಪೂರೈಕೆಬೆಳಗಾವಿ, ಜುಲೈ 09, 2026: ವೇಗವಾಗಿ ಬೆಳೆಯುತ್ತಿರುವ ಎರಡನೇ ಹಂತದ ನಗರಗಳಲ್ಲಿ ದೂರದೃಷ್ಟಿಯ ಉದ್ದೇಶದೊಂದಿಗೆ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್)ವು ಸುಭದ್ರ ಮೂಲಸೌಕರ್ಯಕ್ಕೆ ಬುನಾದಿ ಹಾಕುತ್ತಿದ್ದು, ಬೆಳಗಾವಿ ನಗರದಲ್ಲಿ ಭವಿಷ್ಯದ ಕಲ್ಪನೆಗಳು ಸಾಕಾರವಾಗುತ್ತಿವೆ.ವಿದ್ಯುತ್ ಪ್ರಸರಣದಲ್ಲಿ ದಕ್ಷತೆ ಹಾಗೂ ಆಧುನಿಕತೆ ಅಳವಡಿಸಿಕೊಂಡಿರುವ ಕೆಪಿಟಿಸಿಎಲ್, ಹೈಟೆನ್ಷನ್ ಮತ್ತು ಲೋಟೆನ್ಷನ್ ಒಳಗೊಂಡಂತೆ ಸರಿಸುಮಾರು 700 ಕಿ.ಮೀ. 11 ಕೆವಿ ಭೂಗತ ಕೇಬಲ್, 350 ಕಿ.ಮೀ. ಏರಿಯಲ್ ಬಂಚ್ ಕೇಬಲ್ ಗಳನ್ನು ಅಳವಡಿಸುವುದರ ಜತೆಗೆ ವಿದ್ಯುತ್ ಉಪಕೇಂದ್ರಗಳನ್ನು ಮೇಲ್ದರ್ಜೆಗೇರಿಸಿ ಹೈಬ್ರಿಡ್ ವಿದ್ಯುತ್ ವಿತರಣಾ ಜಾಲವನ್ನು ಅಣಿಗೊಳಿಸಿದೆ. ಹೈಬ್ರಿಡ್‌ ಪ್ರಸರಣ ಜಾಲದ ಸಧೃಡತೆಗೆ ಅಗತ್ಯವಿರುವ ವಿದ್ಯುತ್ ಉಪಕೇಂದ್ರಗಳನ್ನು ಅನುಷ್ಠಾನಗೊಳಿಸಲು ಟೆಂಡರ್‌ ಪ್ರಕ್ರಿಯೆ ಮತ್ತು ವಿದ್ಯುತ್ ಉಪಕೇಂದ್ರಗಳನ್ನು ಚಾರ್ಜ್‌ ಮಾಡುವ ಪ್ರಕ್ರಿಯೆಗಳು ಭರದಿಂದ ಸಾಗಿವೆ. ದೂರದೃಷ್ಟಿಯ ಚಿಂತನೆಯಲ್ಲಿ ನೆಹರು ನಗರ 110 ಕೆವಿ (40 ಎಂವಿಎ) ಪೂರ್ಣಗೊಂಡಿದ್ದು ಜತೆಗೆ ಕಣಬರಗಿ 110 ಕೆವಿ (20ಎಂವಿಎ) ಮತ್ತು 33 ಕೆವಿ ಶ್ರೀನಗರ ಜಿಐಎಸ್ (16 ಎಂವಿಎ) ಸಜ್ಜಾಗಿದೆ. ನಗರದ ಫೋರ್ಟ್ 33 ಕೆವಿ (15 ಎಂವಿಎ) ಉನ್ನತೀಕರಿಸುತ್ತಿದ್ದು 110 ಕೆವಿಗೆ (40 ಎಂವಿಎ), ಸದಾಶಿವನಗರ 33 ಕೆವಿ (10 ಎಂವಿಎ) ಉನ್ನತೀಕರಿಸುತ್ತಿದ್ದು 110 ಕೆವಿಗೆ, ಮತ್ತು ಮಚ್ಚೆ 220 ಕೆವಿ (200 ಎಂವಿಎ) ವಿದ್ಯುತ್ ಉಪಕೇಂದ್ರನ್ನು ಪರಿವರ್ತಿಸಲಾಗುತ್ತಿರುವ ಕಾಮಗಾರಿ ಪ್ರಗತಿಯಲ್ಲಿದೆ. ಬೆಳಗಾವಿ ನಗರದ ಹೃದಯಭಾಗಕ್ಕೆ ಸಮರ್ಪಕ ವಿದ್ಯುತ್ ಪೂರೈಸಲು ಈಗಾಗಲೇ ಬೀಮ್ಸ್ ಆವರಣದಲ್ಲಿ 110 ಕೆವಿ (40 ಎಂವಿಎ) ಮತ್ತು ಒಟ್ಟು ನಗರದ ವಿದ್ಯುತ್ ವ್ಯವಸ್ಥೆ ನಿರ್ವಹಿಸಲು 220 ಕೆವಿ ಕಣಬರಗಿ ಸ್ವಿಚಿಂಗ್ ಸ್ಟೇಷನ್ (400 ಎಂವಿಎ) ಮತ್ತು ನಾವಗೆ (40 ಎಂವಿಎ) ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದೆ. ರಾಯಭಾಗದಲ್ಲಿನ ಮೇಖಲಿಯಲ್ಲಿ ಯೋಜಿಸಿರುವ 400 ಕೆವಿ (1000 ಎಂವಿಎ) ವಿದ್ಯುತ್ ಉಪಕೇಂದ್ರ ಸಜ್ಜಾಗುತ್ತಿದ್ದಂತೆ ಬೆಳಗಾವಿಯಲ್ಲಿ ಪ್ರಮುಖ ವಿದ್ಯುತ್ ಉಪಕೇಂದ್ರಗಳನ್ನು ಬೆಸೆಯುತ್ತಿರುವ ಹೊಸ ಪ್ರಸರಣ ವ್ಯವಸ್ಥೆ ವಿದ್ಯುತ್ ಅಡೆತಡೆಗಳನ್ನು ಮೀರಿ ಮುನ್ನುಗ್ಗಲಿದೆ. *ಅತ್ಯಾಧುನಿಕ ವಿದ್ಯುತ್ ಮೂಲಸೌಕರ್ಯ ಸಾಕಾರ*ಜಿಲ್ಲೆಯ ಸಮಗ್ರ ಅಭಿವೃದ್ದಿ ಹಾಗೂ ಹೆಚ್ಚಿನ ಹೂಡಿಕೆಗಳಿಗೆ ಕೈಗಾರಿಕೆ, ಐಟಿ ಮತ್ತು ಸೇವಾ ಕ್ಷೇತ್ರ, ಸ್ಮಾರ್ಟ್‌ ಸಿಟಿ ಮತ್ತು ಮೂಲಸೌಕರ್ಯ ನಿರ್ವಹಣೆಗಾಗಿ ದಕ್ಷ ಹಾಗೂ ವಿಶ್ವಾಸರ್ಹ ವಿದ್ಯುತ್ ಅತ್ಯಗತ್ಯವಾಗಿದೆ. ಇದೆಲ್ಲವನ್ನು ನಿರ್ವಹಿಸಲು ಪರಿಣಾಮಕಾರಿ ವಿದ್ಯುತ್ ಪೂರೈಕೆ ಜಾಲ ಇರಬೇಕು. ಲೋಡ್‌ ನಿರ್ವಹಣೆ, ಅತ್ಯಂತ ವೇಗವಾಗಿ ಫಾಲ್ಟ್ ಗುರುತಿಸಿ ನಿರ್ವಹಣೆ ಮಾಡಲು ಅತ್ಯಾಧುನಿಕ ಕೇಬಲ್ ಫಾಲ್ಟ್ ಡಿಟೆಕ್ಟರ್ ವಾಹನ ವ್ಯವಸ್ಥೆಯನ್ನು ನಿಗಮ ಒಳಗೊಂಡಿದೆ ಮತ್ತು ಸಧೃಡ ಬ್ಯಾಕ್‌ ಅಪ್ ವ್ಯವಸ್ಥೆ ಇದ್ದಾಗ ಮಾತ್ರವೇ ಗುಣಮಟ್ಟದ ವಿದ್ಯುತ್ ಪೂರೈಕೆ ಸಾಧ್ಯವಾಗಲಿದೆ.ವಿದ್ಯುತ್ ವಾಹನ (ಇವಿ) ಬಳಕೆಗೆ ಗ್ರಾಹಕರು ಹೆಚ್ಚು ಒತ್ತು ನೀಡುತ್ತಿದ್ದು, ಭವಿಷ್ಯದಲ್ಲಿ ಚಾರ್ಜಿಂಗ್ ಸೌಕರ್ಯಗಳು ಪ್ರಮುಖ ಪಾತ್ರವಹಿಸಲಿದೆ. ಈ ಎಲ್ಲಾ ಅಂಶಗಳನ್ನು ಗಮನಿಸಿ ನಿಗಮವು ವಿದ್ಯುತ್ ಮೂಲಸೌಕರ್ಯದಲ್ಲಿ ಮಹತ್ತರ ಪರಿವರ್ತನೆಗೆ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ಸದ್ಯದಲ್ಲೇ ಅತ್ಯುತ್ತಮ ಬ್ಯಾಕ್‌ಅಪ್ ವ್ಯವಸ್ಥೆಯೊಂದಿಗೆ ಬೆಳಗಾವಿ ಭವಿಷ್ಯದ ಭರವಸೆಯ ನಗರವಾಗಲು ಸಜ್ಜುಗೊಳ್ಳುತ್ತಿದೆ. ರಾಜ್ಯದಲ್ಲಿ ವಿಶೇಷ ಗಣೇಶೋತ್ಸವದ ಹೆಗ್ಗಳಿಕೆ ಹೊಂದಿರುವ ಬೆಳಗಾವಿಯಲ್ಲಿ ಮೇಲ್ಮಾರ್ಗದ ವಿದ್ಯುತ್ ಲೈನ್‌ಗಳನ್ನು ಭೂಗತವಾಗಿ ಪರಿವರ್ತಿಸಲಾಗಿದ್ದು, ನಗರದ ಸೌಂದರ್ಯ ಕಳೆಗಟ್ಟಿದೆ. ಸ್ಥಳೀಯಾಡಳಿತದ ಆಸಕ್ತಿಯಿಂದ ಆಕರ್ಷಕ ಎಲ್‌ಇಡಿ ಬೀದಿ ದೀಪಗಳು ತಲೆಯೆತ್ತಿವೆ. ನಗರಾಭಿವೃದ್ಧಿ ಯೋಜನೆಯಲ್ಲಿ ಒಳಗೊಂಡಿರುವ ನಗರ ಮತ್ತಷ್ಟು ಬೆಳವಣಿಗೆ ಕಾಣಲು ಜನರ ಆರ್ಥಿಕ ಹಾಗೂ ಸಾಮಾಜಿಕ ಮೌಲ್ಯ ವರ್ಧನೆಗೆ ವಿದ್ಯುತ್ ಪೂರೈಸಲು ಕೆಪಿಟಿಸಿಎಲ್ ಮತ್ತು ಹೆಸ್ಕಾಂನ ಧೃಡ ಸಂಕಲ್ಪ ಹಾಗೂ ಬದ್ದತೆಗೆ ಸಾಕ್ಷಿಯಾಗಿದೆ. *ಹೈಬ್ರಿಡ್ ರೇಡಿಯಲ್ ಸಿಸ್ಟಮ್ -ಕೆಪಿಟಿಸಿಎಲ್ ಭರವಸೆಯ ತಾಂತ್ರಿಕ ಅಳವಡಿಕೆ* ವಿದ್ಯುತ್ ಪ್ರಸರಣದಲ್ಲಿ ರೇಡಿಯಲ್ ಸಿಸ್ಟಮ್, ರಿಂಗ್ ಮೇನ್ ಸಿಸ್ಟಮ್ ಮತ್ತು ಹೈಬ್ರಿಡ್ ರೇಡಿಯಲ್ ಸಿಸ್ಟಮ್ ಎಂಬ ಮೂರು ಪ್ರಮುಖ ಮಾದರಿಗಳಿವೆ. ವಿದೇಶಗಳಲ್ಲಿ ಯಶಸ್ವಿ ವಿದ್ಯುತ್ ಪ್ರಸರಣಕ್ಕಾಗಿ ಹೈಬ್ರಿಡ್ ವ್ಯವಸ್ಥೆ ಬಳಕೆಯಲ್ಲಿದೆ. ಇದನ್ನೇ ಈಗ ಬೆಳಗಾವಿಯಲ್ಲೂ ಅಳವಡಿಸಲು ನಿಗಮ ಹೆಜ್ಜೆ ಇಟ್ಟಿದೆ. ಹೈಬ್ರಿಡ್ ವ್ಯವಸ್ಥೆಯಲ್ಲಿ ಯಾವುದೇ ಘಟಕದಲ್ಲಿ ಅಡಚಣೆಯಾದರೆ ಕೂಡಲೇ ಮತ್ತೊಂದು ಲೈನ್ ಮೂಲಕ ವಿದ್ಯುತ್ ಪ್ರಸರಣ ವ್ಯವಸ್ಥೆಯನ್ನು ಸುಗಮಗೊಳಿಸುವುದು. ಇದು ಕ್ಷಣಮಾತ್ರದಲ್ಲಿ ನಡೆಯುವ ಪ್ರಕ್ರಿಯೆ ಆಗಿರುತ್ತದೆ. ಈ ಹೈಬ್ರಿಡ್ ವ್ಯವಸ್ಥೆಯಲ್ಲಿ ಈಗಾಗಲೇ ಉತ್ತಮ ತಂತ್ರಜ್ಞಾನ ಮಾದರಿ ಎಂಬಂತೆ ಬಳಕೆಯಲ್ಲಿರುವ (ಎನ್‌-1) ಸರಳವಾಗಿ ಹೇಳುವುದಾದರೆ ಲೋಡ್‌ಗೆ ಅಗತ್ಯವಿರುವ ಬ್ಯಾಕಪ್ ವ್ಯವಸ್ಥೆ ಸಿದ್ದವಾಗಿಟ್ಟುಕೊಳ್ಳುವುದೇ ಆಗಿದೆ. ಯಾವುದೇ ಲೈನ್‌ ಸಮಸ್ಯೆ ಎದುರಾದರೆ ಅಥವಾ ಫಾಲ್ಟ್‌ ಆಗಿ ಐಸೋಲೇಟ್‌ ಆದರೆ ಕೂಡಲೇ ಮತ್ತೊಂದು ಲೈನ್‌ ಮೂಲಕ ವಿದ್ಯುತ್ ಪೂರೈಕೆ ಸಾಧ್ಯವಾಗಲಿದೆ. ಇದರಿಂದ ಗ್ರಾಹಕರಿಗೆ ಗುಣಮಟ್ಟದ ಮತ್ತು ಸಮರ್ಪಕ ವಿದ್ಯುತ್ ಪೂರೈಕೆ ಸಾಧ್ಯವಾಗಲಿದೆ. *ಸುಸ್ಥಿರ ಸಾರಿಗೆಗೆ ಭರವಸೆ ಮೂಡಿಸಿದ ವಿದ್ಯುತ್ ಮೂಲಸೌಕರ್ಯ*ಈಗಾಗಲೇ ಎಲೆಕ್ಟ್ರಿಕ್ ವಾಹನಗಳ ಬಳಕೆ ಗಣನೀಯವಾಗಿ ಏರುತ್ತಿದೆ. ರಾಜ್ಯ ಸಾರಿಗೆ ನಿಗಮವು ವಿದ್ಯುತ್ ಬಸ್‌ಗಳ ಕಡೆ ಮುಖಮಾಡಿವೆ. ವಾಯುವ್ಯ ಕರ್ನಾಟಕ ಸಾರಿಗೆ ಅತ್ಯುತ್ತಮ ವಿದ್ಯುತ್ ಮೂಲಸೌಕರ್ಯ ಮನಗಂಡು ಇವಿ ಬಸ್ ಚಾರ್ಜಿಂಗ್ ಘಟಕ ಸ್ಥಾಪನೆಗೆ ಮುಂದಾಗಿ ಇದಕ್ಕೆ ಅಗತ್ಯವಿರುವ 11 ಕೆವಿ ವಿದ್ಯುತ್ ಸಂಪರ್ಕ ಜಾಲವನ್ನು ಬಳಸಿಕೊಳ್ಳಲು ಸನ್ನದ್ಧವಾಗಿದೆ. ಇವಿ ವಾಹನ ಬಳಕೆದಾರರಿಗೆ ಚಾರ್ಜಿಂಗ್ ಮೂಲಸೌಕರ್ಯ ಅಗತ್ಯವಾಗುತ್ತಿರುವ ಈ ಹೊತ್ತಿನಲ್ಲಿ ಮುಂದಿನ ಸುಸ್ಥಿರ ಸಾರಿಗೆಗೆ ಕೆಪಿಟಿಸಿಎಲ್ ನಿರ್ಮಿಸುತ್ತಿರುವ ಮೂಲಸೌಕರ್ಯ ವರದಾನವಾಗಲಿದೆ. “ವಿದ್ಯುತ್ ಸೌಕರ್ಯಗಳು ಈಗ ಪ್ರತಿಯೊಬ್ಬರಿಗೂ ಆರ್ಥಿಕವಾಗಿ ಹಾಗೂ ಸಾಮಾಜಿಕ ಬದಲಾವಣೆಗೆ ಬಹುಮುಖ್ಯವಾಗಿದೆ. ಇಂಧನ ಇಲಾಖೆ ಭವಿಷ್ಯದ ನಗರ ನಿರ್ಮಾಣಕ್ಕೆ ಅಗತ್ಯವಿರುವ ವಿದ್ಯುತ್ ಮೂಲಸೌಕರ್ಯ ಕಲ್ಪಿಸುವಲ್ಲಿ ಮುಂದಾಗಿದೆ. ಬೆಂಗಳೂರು ಹೊರತಾದ ನಗರಗಳಲ್ಲಿ ಬೆಳಗಾವಿ ಪ್ರಗತಿಯತ್ತ ಹೆಜ್ಜೆ ಹಾಕುತ್ತಿರುವ ಜಿಲ್ಲೆ. ಈ ಗಡಿಜಿಲ್ಲೆ ಯಲ್ಲಿ ಸುಭದ್ರ ಹಾಗೂ ಸಧೃಡ ವಿದ್ಯುತ್ ಪ್ರಸರಣ ಸೌಕರ್ಯ ಬಲಗೊಳಿಸಲಾಗುತ್ತಿದೆ.,”- *ಕೆ.ಜೆ.ಜಾರ್ಜ್, ಇಂಧನ ಹಾಗೂ ಪ್ರವಾಸೋದ್ಯಮ ಸಚಿವರು, ಕರ್ನಾಟಕ ಸರ್ಕಾರ* "ವಿದ್ಯುತ್ ಮೂಲ ಸೌಕರ್ಯ ಸುಧಾರಣೆಯಾದರೆ ವಿದ್ಯುತ್ ಪೂರೈಕೆಯೂ ಸಮರ್ಪಕಗೊಳ್ಳುತ್ತದೆ. ಈ ಅಂಶವನ್ನು ಗಮನದಲ್ಲಿಟ್ಟುಕೊಂಡು ಎರಡನೇ ಹಂತದ ನಗರಗಳಲ್ಲಿ ಕೆಪಿಟಿಸಿಎಲ್ ಜೊತೆಗೆ ಹೆಸ್ಕಾಂ ಮೂಲಕ ಹಲವು ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದ್ದು, ಬೆಳಗಾವಿ ಇದಕ್ಕೆ ಉತ್ತಮ ಉದಾಹರಣೆ ಮತ್ತು ಮಾದರಿಯಾಗಲಿದೆ."- *ಗೌರವ್ ಗುಪ್ತ, ಅಪರ ಮುಖ್ಯ ಕಾರ್ಯದರ್ಶಿಗಳು, ಇಂಧನ ಇಲಾಖೆ*“ಕವಿಪ್ರನಿನಿ ವಿದ್ಯುತ್ ಮೂಲಸೌಕರ್ಯವನ್ನು ಸುಸ್ಥಿರ ಹಾಗೂ ಸಧೃಡವಾಗಿ ನಿರ್ಮಿಸಲು ಅಗತ್ಯವಿರುವ ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತಿದೆ. ಜಾಗತಿಕ ವಿದ್ಯುತ್ ಪ್ರಸರಣ ಮತ್ತು ವಿತರಣಾ ತಂತ್ರಜ್ಞಾನ ಅಳವಡಿಕೆ ಎರಡನೇ ಹಂತದ ನಗರಗಳನ್ನು ಭವಿಷ್ಯದ ಸುಸ್ಥಿರ ಹಾಗೂ ಪ್ರಗತಿಯೆಡೆಗೆ ಮುನ್ನಡೆಸುತ್ತಿದೆ. ರೈತರು ಹಾಗೂ ಜನತೆಯ ಸಹಕಾರವಿದ್ದರೆ ನಾವು ಕಾಲಮಿತಿಯೊಳಗೆ ಜನಸ್ನೇಹಿ ಯೋಜನೆಗಳನ್ನು ರೂಪಿಸಲು ಸಿದ್ದರಿದ್ದೇವೆ”. ಡಾ.ವಿ.ರಾಮ್ ಪ್ರಸಾತ್ ಮನೋಹರ್, ವ್ಯವಸ್ಥಾಪಕ ನಿರ್ದೇಶಕ, ಕವಿಪ್ರನಿನಿ

Jul 12, 2026 | 05:59 AM
11 0
ಜನಮೆಚ್ಚುಗೆಗೆ ಹೆಸರುವಾಸಿಯಾದ   ಸರಳ ರಾಜಕಾರಿಣಿ ಹೆಚ್ ಜಿ ಸುರೇಶ್-  ಮಾಜಿ ಶಾಸಕ ಆರ್ ಮಂಜುನಾಥ್

ಜನಮೆಚ್ಚುಗೆಗೆ ಹೆಸರುವಾಸಿಯಾದ ಸರಳ ರಾಜಕಾರಿಣಿ ಹೆಚ್ ಜಿ ಸುರೇಶ್- ಮಾಜಿ ಶಾಸಕ ಆರ್ ಮಂಜುನಾಥ್

ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯ ದಾಸರಹಳ್ಳಿ : ಸಾಮಾನ್ಯರಲ್ಲಿ ಸಾಮಾನ್ಯ ಉದ್ಯಮಿ ರಾಜಕಾರಣಿಯಾಗಿ ಸರಳ ವ್ಯಕ್ತಿತ್ವ ಹೊಂದಿರುವ ಹೆಚ್ ಜಿ ಸುರೇಶ್ ಸ್ಥಳೀಯವಾಗಿ ಮಾಡಿರುವ ಜನಸೇವೆಗೆ ಇಂದು ಜನರ ಅಪಾರ ಪ್ರೀತಿಗಳಿಸಿ ಜನ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎಂದು ಮಾಜಿ ಶಾಸಕ ಅರ್ ಮಂಜುನಾಥ್ ಹೇಳಿದರು.ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ರಾಜಗೋಪಾಲನಗರ ವಾರ್ಡ್ ಜೆಡಿಎಸ್ ಪಕ್ಷದ ಜಿಬಿಎ ಆಕಾಂಕ್ಷಿ ಹೆಚ್‌ ಜಿ ಸುರೇಶ್ ರವರ ಜನ್ಮದಿನದ ಅಂಗವಾಗಿ 3000ಕ್ಕೂ ಹೆಚ್ಚು ಜನರಿಗೆ ಬಿರಿಯಾನಿ ಊಟದ ವ್ಯವಸ್ಥೆ ಮಾಡುವ ಮೂಲಕ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಆರ್ ಮಂಜುನಾಥ್ ಬೆಂಗಳೂರು ನಗರ ಜೆಡಿಎಸ್ ಅಧ್ಯಕ್ಷ ಎಚ್ಎಂ ರಮೇಶ್ ಗೌಡ ಭಾಗವಹಿಸಿ ಜನ್ಮದಿನದ ಶುಭ ಕೋರಿದರು.ನಂತರ  ವಿಧಾನ ಪರಿಷತ್  ಮಾಜಿ ಸದಸ್ಯ ರಮೇಶ್ ಗೌಡ ಮಾತನಾಡಿ ಹೆಗ್ಗನಹಳ್ಳಿ ಭಾಗದಲ್ಲಿ ಚಿರಪರಿಚಿತರಾಗಿರುವ ಹೆಚ್ ಜಿ ಸುರೇಶ್ ಜೆಡಿಎಸ್ ನಲ್ಲಿ ಅನೇಕ ವರ್ಷಗಳಿಂದ ನಿಷ್ಠೆಯಿಂದ ಸಕ್ರಿಯರಾಗಿ ದುಡಿಯುತ್ತಿದ್ದಾರೆ,ಅವರ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ ,ಜಿಬಿಎ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಅವರಿಗೆ ಟಿಕೆಟ್ ಸಿಗುವ ಭರವಸೆಯಿದ್ದು  ಜನಪ್ರತಿನಿಧಿಯಾಗುವ ಯೋಗವಿದೆ.ಈ ಹುಟ್ಟುಹಬ್ಬದಂದು  ಅವರ ಆಸೆಗಳು ಈಡೇರಲಿ ಎಂದು ಶುಭ ಕೋರಿದರು.ಈ ಸಂಧರ್ಭದಲ್ಲಿ  ಮಾಜಿ ನಗರಸಭಾ ಸದಸ್ಯ ಶಿವಣ್ಣ,  ಜೆಡಿಎಸ್ ಮುಖಂಡರಾ ಲಾರಿ  ಮಂಜಣ್ಣ, ಬಿಜೆಪಿ ಮುಖಂಡ ಕಣ್ಣಪ್ಪ, ಶ್ರೀಗಂಧ ನಗರ ವಾರ್ಡಿನ ಜೆಡಿಎಸ್ ಅಧ್ಯಕ್ಷ ಹೇಮಗಿರಿ ಗೌಡ, ಶಿವಪುರ ವಾರ್ಡಿನ ಜಿಬಿಎ ಆಕಾಂಕ್ಷಿ ವಿ ಡಿ ಚಿಕ್ಕಣ್ಣ, ಸುಂಕದಕಟ್ಟೆ ಜೆಡಿಎಸ್ ಮುಖಂಡ ಹನುಮೇಗೌಡ, ಬಿ ಡಿ ರಂಜಿತ್, ಜೆಡಿಎಸ್ ಯುವ ಘಟಕದ ಅಧ್ಯಕ್ಷ ವಿನಯ್ ಕುಮಾರ್ ಶಿವಣ್ಣ ,ಕಾಂಗ್ರೆಸ್ ಮುಖಂಡ ಎನ್ ರಮೇಶ್ ಗೌಡ, ರವಿಕುಮಾರ್ ಗೌಡ, ಲಕ್ಷ್ಮಿ ಸಾಗರ್, ವೀರಪ್ಪ ,ಶ್ರೀಕಂಠೇಗೌಡ, ರಾಜಗೋಪಾಲನಗರದ ರಂಗಣ್ಣ, ರಾಜು ಗೌಡ,  ಚೇತನ್ ಗೌಡ ,ಇನ್ನು ಹಲವಾರು ಸ್ಥಳೀಯ ಮುಖಂಡರು ಮಹಿಳೆಯರು ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಜನ್ಮದಿನದ ಶುಭ ಕೋರಿದರು.ವರದಿ : ಪಬ್ಲಿಕ್ ರೈಡ್ ದೇವರಾಜ್

Jul 10, 2026 | 01:46 PM
135 0
ಕೆ.ಪಿ.ಸಿ.ಸಿ ಕಾರ್ಮಿಕ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಹೆಗ್ಗನಹಳ್ಳಿ ಮುಖಂಡ ಬ.ನಾ.ರವಿ ನೇಮಕ.

ಕೆ.ಪಿ.ಸಿ.ಸಿ ಕಾರ್ಮಿಕ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಹೆಗ್ಗನಹಳ್ಳಿ ಮುಖಂಡ ಬ.ನಾ.ರವಿ ನೇಮಕ.

ಪಬ್ಲಿಕ್ ರೈಡ್ ಸುದ್ದಿ ಪೀಣ್ಯ ದಾಸರಹಳ್ಳಿ : ಕೆ.ಪಿ.ಸಿ.ಸಿ ಅಧ್ಯಕ್ಷರಾದ ಬಿ.ಕೆ.ಹರಿ ಪ್ರಸಾದ್ ರವರ ಆದೇಶದ ಮೇರೆಗೆ, ಕುಣಿಗಲ್ ಕ್ಷೇತ್ರದ ಶಾಸಕರಾದ ಡಾ. ಹೆಚ್.ಡಿ ರಂಗನಾಥ್ ರವರ ಶಿಫಾರಸ್ಸಿನ ಮೇರೆಗೆ ಕೆ.ಪಿ.ಸಿ.ಸಿ ಕಾರ್ಮಿಕ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಬ.ನಾ.ರವಿ ರವರಿಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಮಿಕ ವಿಭಾಗದ ರಾಜ್ಯಾಧ್ಯಕ್ಷ ಕೆ ಪುಟ್ಟಸ್ವಾಮಿಗೌಡ ನೇಮಕಾತಿ ಆದೇಶ ಪತ್ರನೀಡಿದರು.ಈ ವೇಳೆ ಮಾತನಾಡಿದ ಬ ನಾ ರವಿ ರಾಜಕೀಯ ಗುರುಗಳಾದ ಶಾಸಕ ಡಾ. ಹೆಚ್. ಡಿ. ರಂಗನಾಥ್ ಹಾಗೂ ರಾಜ್ಯ ಕಾರ್ಮಿಕ ಘಟಕದ ಅಧ್ಯಕ್ಷ ಕೆ‌.ಪುಟ್ಟಸ್ವಾಮಿಗೌಡರಿಗೆ ಅಭಾರಿಯಾಗುತ್ತೆನೆ ನಾನು ಕಳೆದ18- 20 ವರ್ಷಗಳಿಂದ ನಾನು ನಮ್ಮ ಕುಟುಂಬ ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತರಾಗಿ ದುಡಿಯುತ್ತಿದ್ದು ಕಾಂಗ್ರೆಸ್ ಕಟ್ಟಾಳು ನಮ್ಮ ದೊಡ್ಡಪ್ಪ ಬಿ ವಿ ಪುಟ್ಟರಾಮೇಗೌಡ್ರು ಸಹ ರಾಜಕೀಯ ಕ್ಷೇತ್ರದಲ್ಲಿ ಉನ್ನತ ಸ್ಥಾನಗಳನ್ನು ಅಲಂಕರಿಸಿದವರು ನಾನು ವಯಕ್ತಿಕ ವಾಗಿ ಈಗಾಗಲೇ ಮೂರು ಚುನಾವಣೆಯನ್ನು ಒಂದು ಎಪಿಎಂಸಿ ಒಂದು ತಾಲೂಕು ಪಂಚಾಯಿತಿ ಒಂದು ಗ್ರಾಮ ಪಂಚಾಯಿತಿ ಹಾಗೂ ನಮ್ಮ ತಾಯಿ ನಾಲ್ಕು ಬಾರಿ ಬಂಡಿಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರಾಗಿ ಆಯ್ಕೆಯಾಗಿ ಕರ್ತವ್ಯ ನಿರ್ವಹಿಸಿರುತ್ತಾರೆ ಇಂತಹ ನಿಷ್ಠಾವಂತ ಕಾಂಗ್ರೆಸ್ ಕುಟುಂಬಕ್ಕೆ ಹೆಚ್ಚಿನ ಶಕ್ತಿಯನ್ನು ನೀಡಿದಂತವರಿಗೆ ಧನ್ಯವಾದಗಳು, ತಮಗೆ ವಹಿಸಲಾಗಿರುವ ಹೊಣೆಗಾರಿಕೆಯನ್ನು ನಿಷ್ಠೆಯಿಂದ ನಿರ್ವಹಿಸುತ್ತಾ, ರಾಜ್ಯ ಮತ್ತು ಜಿಲ್ಲಾ ಕಾಂಗ್ರೆಸ್ ಸಮಿತಿಯ ಮಾರ್ಗದರ್ಶನದಲ್ಲಿ ಹಾಗೂ ದಾಸರಹಳ್ಳಿ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸ್ಥಳೀಯ ನಾಯಕರುಗಳ ಸಹಕಾರದೊಂದಿಗೆ ತಮಗೆ ನೀಡಲಾಗಿರುವ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿ. ಪಕ್ಷದ ಸಂಘಟನೆಗೆ ಹಾಗೂ ಕಾರ್ಮಿಕರ ಏಳಿಗೆಗಾಗಿ ಶ್ರಮಿಸುತ್ತನೆ ಎಂದರು.ಈ ಸಂಧರ್ಭದಲ್ಲಿ ಉಮೇಶ್, ಸವಿತಾ, ಸಲ್ಮಾ ,ಶಿಲ್ಪಾ ರಾಣಿ, ರಮಿಜ್ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.ವರದಿ : ಪಬ್ಲಿಕ್ ರೈಡ್ ದೇವರಾಜ್

Jul 10, 2026 | 01:04 PM
175 0
ಮೂಲಭೂತ ಸೌಕರ್ಯ ವಂಚಿತ ನಾಗರೆಡ್ಡಿ ಬಡಾವಣೆ; ಸ್ಥಳೀಯರ ಆಕ್ರೋಶ

ಮೂಲಭೂತ ಸೌಕರ್ಯ ವಂಚಿತ ನಾಗರೆಡ್ಡಿ ಬಡಾವಣೆ; ಸ್ಥಳೀಯರ ಆಕ್ರೋಶ

ಗೌರಿಬಿದನೂರು: ನಗರದ ವಾರ್ಡ್ ನಂ. 1ರ ನಾಗಯ್ಯ ರೆಡ್ಡಿ ಬಡಾವಣೆಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿಂದ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಡವರು ಹೆಚ್ಚಾಗಿ ವಾಸಿಸುವ ಈ ಪ್ರದೇಶಕ್ಕೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕೇವಲ ಭರವಸೆ ನೀಡುತ್ತಿದ್ದಾರೆ ಹೊರತು ಯಾವುದೇ ಅಭಿವೃದ್ಧಿ ಕಾಮಗಾರಿ ನಡೆಯುತ್ತಿಲ್ಲ ಎಂದು ನಿವಾಸಿಗಳು ಆರೋಪಿಸಿದ್ದಾರೆ.ಸ್ಥಳೀಯರ ಪ್ರಕಾರ, ಬಡಾವಣೆಯಲ್ಲಿ ಅಂಗನವಾಡಿ ಮತ್ತು ಶಾಲೆ ಕಾರ್ಯನಿರ್ವಹಿಸುತ್ತಿದ್ದರೂ ಅವುಗಳಿಗೆ ಸಮರ್ಪಕ ಕಾಂಪೌಂಡ್ ಗೋಡೆ ಇಲ್ಲ. ಸರ್ಕಾರ ನಿರ್ಮಿಸಿರುವ ಸಮುದಾಯ ಭವನ ನಿರ್ಲಕ್ಷ್ಯದಿಂದ ಬಾಳುಬಿದ್ದ ಸ್ಥಿತಿಗೆ ತಲುಪಿದ್ದು, ಅದು ಕುಡುಕರ ಅಡ್ಡೆಯಾಗಿ ಮಾರ್ಪಟ್ಟಿದೆ. “ಹೇಳೋರಿಲ್ಲ, ಕೇಳೋರಿಲ್ಲ ಎನ್ನುವಂತಾಗಿದೆ” ಎಂದು ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಇದಲ್ಲದೆ, ಪ್ರದೇಶದಲ್ಲಿ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದಿರುವುದು ಹಾಗೂ ರಸ್ತೆಗಳು ಹದಗೆಟ್ಟಿರುವುದು ಜನರ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿದೆ. ಮಳೆ ಬಂದಾಗ ರಸ್ತೆಗಳ ಮೇಲೆ ನೀರು ನಿಂತುಕೊಳ್ಳುವುದರಿಂದ ಓಡಾಡುವುದೇ ಕಷ್ಟವಾಗುತ್ತದೆ ಎಂದು ಸ್ಥಳೀಯರು ದೂರಿದ್ದಾರೆ.ಈ ಕುರಿತು ಹಲವಾರು ಬಾರಿ ರಾಜಕೀಯ ಮುಖಂಡರು ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಚುನಾವಣೆ ಸಮಯದಲ್ಲಿ ಮಾತ್ರ ಬಂದು ಭರವಸೆ ನೀಡಿ ಹೋಗುತ್ತಾರೆ, ಆದರೆ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿಲ್ಲ ಎಂದು ನಿವಾಸಿಗಳು ಆರೋಪಿಸಿದ್ದಾರೆ.ನಾಗಯ್ಯ ರೆಡ್ಡಿ ಬಡಾವಣೆಯ ಸಮಗ್ರ ಅಭಿವೃದ್ಧಿಗೆ ತಕ್ಷಣ ಕ್ರಮ ಕೈಗೊಂಡು ರಸ್ತೆ, ಚರಂಡಿ, ಕಾಂಪೌಂಡ್ ಗೋಡೆ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎಂದು ಸ್ಥಳೀಯರು ಸರ್ಕಾರ ಮತ್ತು ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ.ವರದಿ: ಜಿಲಾನಿ ಭಾಷಾ, ಗೌರಿಬಿದನೂರು

Jul 10, 2026 | 04:10 AM
79 0
ಸುರಪುರದಲ್ಲಿ ಕಂದಕಕ್ಕೆ ಉರುಳಿದ ಕೆಎಸ್‌ಆರ್‌ಟಿಸಿ ಬಸ್; 6 ಮಂದಿಗೆ ಗಾಯ, ಭಾರೀ ಅನಾಹುತ ತಪ್ಪಿತು

ಸುರಪುರದಲ್ಲಿ ಕಂದಕಕ್ಕೆ ಉರುಳಿದ ಕೆಎಸ್‌ಆರ್‌ಟಿಸಿ ಬಸ್; 6 ಮಂದಿಗೆ ಗಾಯ, ಭಾರೀ ಅನಾಹುತ ತಪ್ಪಿತು

ಯಾದಗಿರಿ, ಜು. 9: ಜಿಲ್ಲೆಯ ಸುರಪುರ ತಾಲೂಕಿನ ಸಿದ್ದಾಪುರ ಸಮೀಪ ಕೆಎಸ್‌ಆರ್‌ಟಿಸಿ ಬಸ್ ಕಂದಕಕ್ಕೆ ಉರುಳಿದ ಪರಿಣಾಮ ಆರು ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ. ಸುರಪುರದಿಂದ ಕೆಂಭಾವಿ ಕಡೆಗೆ ತೆರಳುತ್ತಿದ್ದ ಬಸ್ ಅಪಘಾತಕ್ಕೀಡಾಗಿದ್ದು, ಬಸ್‌ನಲ್ಲಿ ಸುಮಾರು 50 ರಿಂದ 60 ಮಂದಿ ಪ್ರಯಾಣಿಸುತ್ತಿದ್ದರು.ಅಪಘಾತ ಸಂಭವಿಸಿದ ತಕ್ಷಣ ಸ್ಥಳೀಯರು ಹಾಗೂ ಪೊಲೀಸರು ರಕ್ಷಣಾ ಕಾರ್ಯಾಚರಣೆ ನಡೆಸಿ ಗಾಯಾಳುಗಳನ್ನು ಹೊರತೆಗೆದರು. ಘಟನೆಯಲ್ಲಿ ಗಾಯಗೊಂಡ ಆರು ಮಂದಿಯನ್ನು ಸುರಪುರ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಇತರ ಪ್ರಯಾಣಿಕರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದು, ಸಂಭವಿಸಬಹುದಾಗಿದ್ದ ಭಾರೀ ಅನಾಹುತ ತಪ್ಪಿದೆ.ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸುರಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಸ್ ನಿಯಂತ್ರಣ ತಪ್ಪಲು ಕಾರಣವೇನು ಎಂಬುದರ ಕುರಿತು ತನಿಖೆ ಆರಂಭಿಸಿದ್ದು, ಅಪಘಾತಕ್ಕೆ ನಿಖರ ಕಾರಣ ಇನ್ನಷ್ಟೇ ತಿಳಿದು ಬರಬೇಕಿದೆ.ಈ ಘಟನೆ ಕೆಲಕಾಲ ಸಂಚಾರದಲ್ಲಿ ಅಸ್ತವ್ಯಸ್ತತೆ ಉಂಟುಮಾಡಿದ್ದು, ಸ್ಥಳೀಯರ ನೆರವಿನಿಂದ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಯಿತು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Jul 9, 2026 | 04:55 AM
34 0
ನಿಪ್ಪಾಣಿಯಲ್ಲಿ ಭೀಕರ ರಸ್ತೆ ಅಪಘಾತ: ಕಾರು–ಟ್ರಕ್ ಡಿಕ್ಕಿ, ಇಬ್ಬರ ದುರ್ಮರಣ – ಇಬ್ಬರಿಗೆ ಗಂಭೀರ ಗಾಯ

ನಿಪ್ಪಾಣಿಯಲ್ಲಿ ಭೀಕರ ರಸ್ತೆ ಅಪಘಾತ: ಕಾರು–ಟ್ರಕ್ ಡಿಕ್ಕಿ, ಇಬ್ಬರ ದುರ್ಮರಣ – ಇಬ್ಬರಿಗೆ ಗಂಭೀರ ಗಾಯ

ನಿಪ್ಪಾಣಿ, ಜು. 7: ರಾಷ್ಟ್ರೀಯ ಹೆದ್ದಾರಿ–48ರ ಸ್ಥವನಿಧಿ ಘಾಟ್ ಸಮೀಪ ಕಾರು ಮತ್ತು ಟ್ರಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿರುವ ದುರ್ಘಟನೆ ನಡೆದಿದೆ.ಮೃತರನ್ನು ಮಹಾರಾಷ್ಟ್ರದ ಕೊಲ್ಲಾಪುರ ನಿವಾಸಿ ಸೋಯಲ್ ಮುನೇರ (36) ಹಾಗೂ ಇಂಚಲಕರಂಜಿ ಗ್ರಾಮದ ವಿನಯ ಪಾಟೀಲ ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಗಾಯಗೊಂಡಿರುವ ಇಬ್ಬರನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.ಪೊಲೀಸರ ಪ್ರಾಥಮಿಕ ಮಾಹಿತಿಯ ಪ್ರಕಾರ, ಬ್ರೇಕ್ ವೈಫಲ್ಯಗೊಂಡ ಟ್ರಕ್ ಮುಂದೆ ಸಾಗುತ್ತಿದ್ದ ಕಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.ಘಟನಾ ಸ್ಥಳಕ್ಕೆ ನಿಪ್ಪಾಣಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಅಪಘಾತದ ನಿಖರ ಕಾರಣ ಕುರಿತು ತನಿಖೆ ಮುಂದುವರಿಸಿದ್ದಾರೆ.

Jul 7, 2026 | 02:08 PM
88 0
108 ಆಂಬುಲೆನ್ಸ್ 15 ನಿಮಿಷದಲ್ಲಿ ತಲುಪದಿದ್ದರೆ ₹5,000 ದಂಡ; ರಾಜ್ಯ ಸರ್ಕಾರದಿಂದ ಹೊಸ ನಿಯಮಕ್ಕೆ ಸಿದ್ಧತೆ

108 ಆಂಬುಲೆನ್ಸ್ 15 ನಿಮಿಷದಲ್ಲಿ ತಲುಪದಿದ್ದರೆ ₹5,000 ದಂಡ; ರಾಜ್ಯ ಸರ್ಕಾರದಿಂದ ಹೊಸ ನಿಯಮಕ್ಕೆ ಸಿದ್ಧತೆ

ಬೆಂಗಳೂರು, ಜು. 6: ರಾಜ್ಯದಲ್ಲಿ ತುರ್ತು ವೈದ್ಯಕೀಯ ಸೇವೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿಸುವ ಉದ್ದೇಶದಿಂದ 108 ಆಂಬುಲೆನ್ಸ್ ಸೇವೆಗೆ ಕರ್ನಾಟಕ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಜಾರಿಗೆ ತರಲು ಮುಂದಾಗಿದೆ. ತುರ್ತು ಕರೆ ಬಂದ ಬಳಿಕ 15 ನಿಮಿಷಗಳೊಳಗೆ ಆಂಬುಲೆನ್ಸ್ ಘಟನಾ ಸ್ಥಳಕ್ಕೆ ತಲುಪದಿದ್ದರೆ ಸಂಬಂಧಿತ ಸೇವಾ ಸಂಸ್ಥೆ ಅಥವಾ ಜವಾಬ್ದಾರರ ಮೇಲೆ ₹5,000 ದಂಡ ವಿಧಿಸುವ ಪ್ರಸ್ತಾವನೆಗೆ ಸರ್ಕಾರ ಅಂತಿಮ ರೂಪ ನೀಡುತ್ತಿದೆ.ಆರೋಗ್ಯ ಸಚಿವ ಯು.ಟಿ. ಖಾದರ್ ಈ ಕುರಿತು ಮಾಹಿತಿ ನೀಡಿದ್ದು, ಪ್ರಸ್ತುತ ದೇಶದಲ್ಲಿ 20 ನಿಮಿಷಗಳ ಮಾನದಂಡ ಜಾರಿಯಲ್ಲಿದ್ದರೂ, ಕರ್ನಾಟಕದಲ್ಲಿ ಅದನ್ನು 15 ನಿಮಿಷಗಳಿಗೆ ಇಳಿಸುವ ಮೂಲಕ ತುರ್ತು ಸೇವೆಯನ್ನು ಮತ್ತಷ್ಟು ವೇಗಗೊಳಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದ್ದಾರೆ.ಈ ಪ್ರಸ್ತಾವನೆಯನ್ನು ಶೀಘ್ರದಲ್ಲೇ ಸಚಿವ ಸಂಪುಟ ಸಭೆಗೆ ಮಂಡಿಸಲಾಗುವುದು. ಸಚಿವ ಸಂಪುಟದ ಅನುಮೋದನೆ ದೊರೆತ ಬಳಿಕ ಮೂರು ತಿಂಗಳೊಳಗೆ ರಾಜ್ಯಾದ್ಯಂತ ಹೊಸ ನಿಯಮ ಜಾರಿಗೆ ಬರಲಿದೆ ಎಂದು ತಿಳಿಸಲಾಗಿದೆ.ಇದರೊಂದಿಗೆ ತುರ್ತು ವೈದ್ಯಕೀಯ ಸೇವೆಯ ಗುಣಮಟ್ಟವನ್ನು ಹೆಚ್ಚಿಸಲು ಅತ್ಯಾಧುನಿಕ ನಿಯಂತ್ರಣ ಕೊಠಡಿ ಸ್ಥಾಪನೆ, ಹೊಸ ಆಂಬುಲೆನ್ಸ್ ವಾಹನಗಳ ಸೇರ್ಪಡೆ ಹಾಗೂ ರಿಯಲ್-ಟೈಮ್ ಟ್ರ್ಯಾಕಿಂಗ್ ವ್ಯವಸ್ಥೆ ಅಳವಡಿಸುವ ಯೋಜನೆಯೂ ಸರ್ಕಾರದ ಮುಂದಿದೆ.ನಗರ ಪ್ರದೇಶಗಳ ಟ್ರಾಫಿಕ್ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು, ತುರ್ತು ಸಂದರ್ಭಗಳಲ್ಲಿ ಶೀಘ್ರ ಪ್ರಾಥಮಿಕ ಚಿಕಿತ್ಸೆ ಒದಗಿಸಲು ಬೈಕ್ ಆಂಬುಲೆನ್ಸ್ ಸೇವೆಯನ್ನು ಪುನರಾರಂಭಿಸುವುದಕ್ಕೂ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ಈ ಹೊಸ ಕ್ರಮಗಳಿಂದ ಅಪಘಾತ, ಹೃದಯಾಘಾತ, ಗರ್ಭಿಣಿಯರ ತುರ್ತು ಚಿಕಿತ್ಸೆಯಂತಹ ಸಂದರ್ಭಗಳಲ್ಲಿ ವೈದ್ಯಕೀಯ ಸೇವೆ ಇನ್ನಷ್ಟು ವೇಗವಾಗಿ ದೊರೆಯಲಿದ್ದು, ಸಮಯೋಚಿತ ಚಿಕಿತ್ಸೆಯಿಂದ ಅಮೂಲ್ಯ ಜೀವಗಳನ್ನು ಉಳಿಸಲು ನೆರವಾಗಲಿದೆ ಎಂಬ ವಿಶ್ವಾಸವನ್ನು ಸರ್ಕಾರ ವ್ಯಕ್ತಪಡಿಸಿದೆ.

Jul 6, 2026 | 06:11 AM
204 0
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ನೂತನ ಮೇಯರ್, ಉಪಮೇಯರ್ ಆಯ್ಕೆ: ಬಿಜೆಪಿಗೆ ಮತ್ತೆ ಅಧಿಕಾರ

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ನೂತನ ಮೇಯರ್, ಉಪಮೇಯರ್ ಆಯ್ಕೆ: ಬಿಜೆಪಿಗೆ ಮತ್ತೆ ಅಧಿಕಾರ

ಹುಬ್ಬಳ್ಳಿ, ಜು. 4: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ 25ನೇ ಅವಧಿಯ ಮೇಯರ್ ಹಾಗೂ ಉಪಮೇಯರ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಭರ್ಜರಿ ಗೆಲುವು ಸಾಧಿಸಿದ್ದು, ಪಾಲಿಕೆಯ ಆಡಳಿತ ಮತ್ತೊಮ್ಮೆ ಬಿಜೆಪಿಯ ಪಾಲಾಗಿದೆ.ನಗರದ ಮಹಾನಗರ ಪಾಲಿಕೆ ಸಭಾಭವನದಲ್ಲಿ ಶನಿವಾರ ನಡೆದ ಚುನಾವಣೆಯಲ್ಲಿ ಪರಿಶಿಷ್ಟ ಜಾತಿ ಮೀಸಲು ಮೇಯರ್ ಸ್ಥಾನಕ್ಕೆ ಬಿಜೆಪಿ ಅಭ್ಯರ್ಥಿ ಹಾಗೂ ಮಾಜಿ ಉಪಮೇಯರ್ ದುರ್ಗಮ್ಮ ಬಿಜವಾಡ ಆಯ್ಕೆಯಾಗಿದ್ದು, ಸಾಮಾನ್ಯ ವರ್ಗದ ಉಪಮೇಯರ್ ಸ್ಥಾನಕ್ಕೆ ರತ್ನಾಭಾಯಿ ನಾಝರೆ ವಿಜಯಶಾಲಿಯಾಗಿದ್ದಾರೆ.24ನೇ ಅವಧಿಯಲ್ಲಿ ಧಾರವಾಡಕ್ಕೆ ಮೇಯರ್ ಸ್ಥಾನ ಲಭಿಸಿದ್ದರೆ, ಈ ಬಾರಿ ಹುಬ್ಬಳ್ಳಿಗೆ ಮೇಯರ್ ಸ್ಥಾನ ದೊರಕಿತ್ತು. ಹುಬ್ಬಳ್ಳಿಯ ವಾರ್ಡ್ ಸಂಖ್ಯೆ 69ರ ದುರ್ಗಮ್ಮ ಬಿಜವಾಡ ಹಾಗೂ ಧಾರವಾಡದ ವಾರ್ಡ್ ಸಂಖ್ಯೆ 9ರ ರತ್ನಾಭಾಯಿ ನಾಝರೆ ಬಿಜೆಪಿ ಅಭ್ಯರ್ಥಿಗಳಾಗಿ ಕಣಕ್ಕಿಳಿದಿದ್ದರು. ಕಾಂಗ್ರೆಸ್ ಪಕ್ಷವು ಮೇಯರ್ ಸ್ಥಾನಕ್ಕೆ ವಾರ್ಡ್ ಸಂಖ್ಯೆ 20ರ ಕವಿತಾ ಕಬ್ಬೇರ್ ಹಾಗೂ ಉಪಮೇಯರ್ ಸ್ಥಾನಕ್ಕೆ ವಾರ್ಡ್ ಸಂಖ್ಯೆ 6ರ ದಿಲ್ಶಾದ್ ಬೇಗಂ ನದಾಫ್ ಅವರನ್ನು ಅಭ್ಯರ್ಥಿಗಳಾಗಿ ಘೋಷಿಸಿತ್ತು.92 ಸದಸ್ಯ ಬಲ ಹೊಂದಿರುವ ಪಾಲಿಕೆಯಲ್ಲಿ 88 ಸದಸ್ಯರು ಮತದಾನದಲ್ಲಿ ಭಾಗವಹಿಸಿದ್ದು, ನಾಲ್ವರು ಸದಸ್ಯರು ಗೈರಾಗಿದ್ದರು. ಮೇಯರ್ ಸ್ಥಾನಕ್ಕೆ ನಡೆದ ಮತದಾನದಲ್ಲಿ ದುರ್ಗಮ್ಮ ಬಿಜವಾಡ 50 ಮತಗಳನ್ನು ಪಡೆದು ಜಯಗಳಿಸಿದರೆ, ಕಾಂಗ್ರೆಸ್ ಅಭ್ಯರ್ಥಿ ಕವಿತಾ ಕಬ್ಬೇರ್ 32 ಮತಗಳನ್ನು ಪಡೆದರು. ಉಪಮೇಯರ್ ಸ್ಥಾನಕ್ಕೆ ಬಿಜೆಪಿ ಅಭ್ಯರ್ಥಿ ರತ್ನಾಭಾಯಿ ನಾಝರೆ 50 ಮತಗಳನ್ನು ಪಡೆದು ಆಯ್ಕೆಯಾದರು.ಚುನಾವಣೆಯ ಫಲಿತಾಂಶವನ್ನು ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತ ಕೆ.ಎಂ. ಜಾನಕಿ ಅಧಿಕೃತವಾಗಿ ಘೋಷಿಸಿದರು.ಬಿಜೆಪಿ ಅಭ್ಯರ್ಥಿಗಳ ಪರವಾಗಿ ಕೇಂದ್ರ ಸಚಿವ ಹಾಗೂ ಸಂಸದ ಪ್ರಲ್ಹಾದ್ ಜೋಶಿ, ರಾಜ್ಯಸಭಾ ಸದಸ್ಯ ಎಂ. ನಾಗರಾಜ್, ಶಾಸಕರಾದ ಅರವಿಂದ ಬೆಲ್ಲದ್, ಮಹೇಶ್ ಟೆಂಗಿನಕಾಯಿ, ವಿಧಾನ ಪರಿಷತ್ ಸದಸ್ಯರಾದ ಪ್ರದೀಪ್ ಶೆಟ್ಟರ್, ಎಸ್.ವಿ. ಸಂಕನೂರ ಹಾಗೂ ಲಿಂಗರಾಜ ಪಾಟೀಲ ಬೆಂಬಲ ವ್ಯಕ್ತಪಡಿಸಿದರು. ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಶಾಸಕ ಪ್ರಸಾದ್ ಅಬ್ಬಯ್ಯ ಹಾಗೂ ವಿಧಾನ ಪರಿಷತ್ ಸದಸ್ಯ ಎಚ್.ಎಫ್. ಜಕ್ಕಪ್ಪನವರ ಬೆಂಬಲ ಸೂಚಿಸಿದರು.ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ಪಾಲಿಕೆ ಆವರಣದಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಿದರು.ಒಂದೇ ಅವಧಿಯಲ್ಲಿ ಉಪಮೇಯರ್ ಹುದ್ದೆಯಿಂದ ಮೇಯರ್ ಸ್ಥಾನಕ್ಕೆ ಏರಿದ ದುರ್ಗಮ್ಮ ಬಿಜವಾಡ ಅವರ ಸಾಧನೆ ವಿಶೇಷವಾಗಿ ಗಮನ ಸೆಳೆದಿದೆ.ಚುನಾವಣಾ ಪ್ರಕ್ರಿಯೆಯಲ್ಲಿ ಹೆಚ್ಚುವರಿ ಆಯುಕ್ತ ಎಸ್.ಎಸ್. ಬಿರಾದಾರ ಹಾಗೂ ಪಾಲಿಕೆ ಆಯುಕ್ತ ರುದ್ರೇಶ ಘಾಳಿ ಉಪಸ್ಥಿತರಿದ್ದರು.

Jul 4, 2026 | 11:07 AM
147 0
ಗೃಹಜ್ಯೋತಿ ಫಲಾನುಭವಿಗಳ ದಾಖಲೆ ಪರಿಶೀಲನೆಗೆ ಸಹಕರಿಸಿ: ಹೆಸ್ಕಾಂ ಅಧ್ಯಕ್ಷ ಸೈಯದ್ ಅಜೀಮ್‌ಪೀರ್ ಎಸ್. ಖಾದ್ರಿ

ಗೃಹಜ್ಯೋತಿ ಫಲಾನುಭವಿಗಳ ದಾಖಲೆ ಪರಿಶೀಲನೆಗೆ ಸಹಕರಿಸಿ: ಹೆಸ್ಕಾಂ ಅಧ್ಯಕ್ಷ ಸೈಯದ್ ಅಜೀಮ್‌ಪೀರ್ ಎಸ್. ಖಾದ್ರಿ

ಹಾವೇರಿ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗೃಹಜ್ಯೋತಿ ಯೋಜನೆಯ ಫಲಾನುಭವಿಗಳ ದಾಖಲೆಗಳ ಪರಿಶೀಲನಾ ಕಾರ್ಯ ಆರಂಭವಾಗಿದ್ದು, ಸಾರ್ವಜನಿಕರು ಅಗತ್ಯ ದಾಖಲೆಗಳನ್ನು ಒದಗಿಸಿ ಹೆಸ್ಕಾಂ ಸಿಬ್ಬಂದಿಗೆ ಸಂಪೂರ್ಣ ಸಹಕಾರ ನೀಡಬೇಕು ಎಂದು ಹೆಸ್ಕಾಂ ಅಧ್ಯಕ್ಷ ಸೈಯದ್ ಅಜೀಮ್‌ಪೀರ್ ಎಸ್. ಖಾದ್ರಿ ಮನವಿ ಮಾಡಿದರು.ಜಿಲ್ಲೆಯ ಶಿಗ್ಗಾಂವ ಪಟ್ಟಣದ ಮೆಹಬೂಬ್ ನಗರದಲ್ಲಿ ಗುರುವಾರ ನಡೆಯುತ್ತಿದ್ದ ಗೃಹಜ್ಯೋತಿ ಫಲಾನುಭವಿಗಳ ದಾಖಲೆ ಪರಿಶೀಲನಾ ಕಾರ್ಯವನ್ನು ವೀಕ್ಷಿಸಿದ ಬಳಿಕ ಅವರು ಮಾತನಾಡಿದರು.ರಾಜ್ಯ ಸರ್ಕಾರ ಕಳೆದ ಮೂರು ವರ್ಷಗಳಿಂದ ಗೃಹಜ್ಯೋತಿ ಯೋಜನೆಯಡಿ ಪ್ರತಿ ಕುಟುಂಬಕ್ಕೆ ತಿಂಗಳಿಗೆ 200 ಯೂನಿಟ್‌ವರೆಗೆ ಉಚಿತ ವಿದ್ಯುತ್‌ ಒದಗಿಸುತ್ತಿದ್ದು, ಈ ಯೋಜನೆ ರಾಜ್ಯದ ಜನರಿಂದ ಉತ್ತಮ ಸ್ಪಂದನೆ ಪಡೆದಿದೆ ಎಂದು ಹೇಳಿದರು.ಹೆಸ್ಕಾಂ ವ್ಯಾಪ್ತಿಯಲ್ಲಿ ಜುಲೈ 1ರಿಂದ ಮನೆ-ಮನೆಗೆ ತೆರಳಿ ಫಲಾನುಭವಿಗಳ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ. ಈ ವೇಳೆ ಫಲಾನುಭವಿಗಳು ಆಧಾರ್ ಕಾರ್ಡ್, ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ, ಮತದಾರರ ಗುರುತಿನ ಚೀಟಿ, ಪ್ಯಾನ್ ಕಾರ್ಡ್, ಬಾಡಿಗೆ ಒಪ್ಪಂದ ಪತ್ರ (ಅನ್ವಯಿಸುವಲ್ಲಿ), ರೇಷನ್ ಕಾರ್ಡ್ ಸೇರಿದಂತೆ ಅಗತ್ಯ ದಾಖಲೆಗಳನ್ನು ಹೆಸ್ಕಾಂ ಸಿಬ್ಬಂದಿಗೆ ನೀಡಬೇಕು ಎಂದು ತಿಳಿಸಿದರು.ಮನೆ ಮಾಲೀಕರು ಅಥವಾ ಬಾಡಿಗೆದಾರರಿಂದ ಮಾಹಿತಿ ಪಡೆದು ಸೇವಾ ಸಿಂಧು ತಂತ್ರಾಂಶದಲ್ಲಿ ದಾಖಲು ಮಾಡುವ ಕಾರ್ಯ ನಡೆಯುತ್ತಿರುವುದರಿಂದ ಸಾರ್ವಜನಿಕರು ಯಾವುದೇ ಗೊಂದಲಕ್ಕೆ ಒಳಗಾಗದೆ ಸಿಬ್ಬಂದಿಗೆ ಸಹಕರಿಸುವಂತೆ ಅವರು ಮನವಿ ಮಾಡಿದರು.ಈ ಸಂದರ್ಭದಲ್ಲಿ ಗೃಹಜ್ಯೋತಿ ಯೋಜನೆಯ ದಾಖಲೆ ಪರಿಶೀಲನೆ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಿದ ಸೈಯದ್ ಅಜೀಮ್‌ಪೀರ್ ಎಸ್. ಖಾದ್ರಿ, ಸ್ವತಃ ಒಂದು ಅರ್ಜಿಯನ್ನು ಭರ್ತಿ ಮಾಡಿ ಜಾಗೃತಿ ಮೂಡಿಸಿದರು.ಕಾರ್ಯಕ್ರಮದಲ್ಲಿ ಹೆಸ್ಕಾಂ ಅಧಿಕಾರಿಗಳು, ಸ್ಥಳೀಯ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

Jul 2, 2026 | 02:32 PM
656 0
ಹುಬ್ಬಳ್ಳಿ: ರಾಜಕಾಲುವೆ ಕಾಮಗಾರಿ ವೇಳೆ ಮಣ್ಣು ಕುಸಿದು ಕಾರ್ಮಿಕ ಸಾವು

ಹುಬ್ಬಳ್ಳಿ: ರಾಜಕಾಲುವೆ ಕಾಮಗಾರಿ ವೇಳೆ ಮಣ್ಣು ಕುಸಿದು ಕಾರ್ಮಿಕ ಸಾವು

ಹುಬ್ಬಳ್ಳಿ: ನಗರದ ಗುಜರಾತ್ ಭವನದ ಸಮೀಪ ರಾಜಕಾಲುವೆ ಕಾಮಗಾರಿ ವೇಳೆ ಸಂಭವಿಸಿದ ದುರ್ಘಟನೆಯಲ್ಲಿ ಕೂಲಿ ಕಾರ್ಮಿಕನೊಬ್ಬ ಮೃತಪಟ್ಟಿರುವ ಘಟನೆ ನಡೆದಿದೆ.ಮೃತ ಕಾರ್ಮಿಕನನ್ನು ಅಣ್ಣಿಗೇರಿ ತಾಲೂಕಿನ ಹಳ್ಳಿಕೇರಿ ಗ್ರಾಮದ ನಿವಾಸಿ ಮಲ್ಲಪ್ಪ ಜೋಗಿನ್ (41) ಎಂದು ಗುರುತಿಸಲಾಗಿದೆ.ರಾಜಕಾಲುವೆಗೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಒಳಚರಂಡಿ ನಿರ್ಮಾಣ ಕಾಮಗಾರಿ ನಡೆಯುತ್ತಿತ್ತು. ಈ ವೇಳೆ ಗುಂಡಿಯೊಳಗೆ ಇಳಿದು ಮಣ್ಣು ತೆಗೆಯುತ್ತಿದ್ದ ಮಲ್ಲಪ್ಪ ಅವರ ಮೇಲೆ ಏಕಾಏಕಿ ಮಣ್ಣು ಕುಸಿದು ಬಿದ್ದಿದೆ. ಇತ್ತೀಚಿನ ಮಳೆಯಿಂದ ಮಣ್ಣು ನೆನೆದಿದ್ದ ಪರಿಣಾಮ ಗುಂಡಿಯ ಬದಿಯ ಮಣ್ಣು ಜಾರಿದ್ದು, ಮಲ್ಲಪ್ಪ ಮಣ್ಣಿನಡಿ ಸಿಲುಕಿದ್ದಾರೆ.ಸ್ಥಳೀಯರು ಹಾಗೂ ಸಹೋದ್ಯೋಗಿಗಳು ರಕ್ಷಣಾ ಕಾರ್ಯ ನಡೆಸಿ ಅವರನ್ನು ಹೊರತೆಗೆದರೂ, ಅಷ್ಟರಲ್ಲೇ ಅವರು ಮೃತಪಟ್ಟಿದ್ದರು ಎಂದು ತಿಳಿದುಬಂದಿದೆ.ಈ ಕಾಮಗಾರಿಯನ್ನು ಮಂಜುನಾಥ ಬೊಮ್ಮಶೆಟ್ಟಿ ಎಂಬ ಗುತ್ತಿಗೆದಾರ ನಡೆಸುತ್ತಿದ್ದು, ಅಗತ್ಯ ಸುರಕ್ಷತಾ ಕ್ರಮಗಳನ್ನು ಪಾಲಿಸದೇ ಕಾಮಗಾರಿ ನಡೆಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ. ಕಾಮಗಾರಿ ವೇಳೆ ಸುರಕ್ಷತಾ ಕ್ರಮಗಳಲ್ಲಿ ನಿರ್ಲಕ್ಷ್ಯವಿದೆಯೇ ಎಂಬ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

Jul 2, 2026 | 12:39 PM
29 0
ಕಲ್ಲು ಕ್ವಾರಿಯಲ್ಲಿ ಭೀಕರ ದುರಂತ: ಬಂಡೆ ಕುಸಿದು 7 ಕಾರ್ಮಿಕರ ದುರ್ಮರಣ

ಕಲ್ಲು ಕ್ವಾರಿಯಲ್ಲಿ ಭೀಕರ ದುರಂತ: ಬಂಡೆ ಕುಸಿದು 7 ಕಾರ್ಮಿಕರ ದುರ್ಮರಣ

ಬೆಂಗಳೂರು: ಬೆಂಗಳೂರು ದಕ್ಷಿಣ ಜಿಲ್ಲೆಯ ತಾವರೆಕೆರೆ ಪೊಲೀಸ್ ಠಾಣೆ ವ್ಯಾಪ್ತಿಯ ಮಾದಪಟ್ಟಣ ಸಮೀಪದ ಕಾವೇರಿ ಕ್ರಷರ್‌ನಲ್ಲಿ ನಡೆದ ಭೀಕರ ಕಲ್ಲು ಕ್ವಾರಿ ದುರಂತದಲ್ಲಿ ಏಳು ಕಾರ್ಮಿಕರು ಮೃತಪಟ್ಟಿರುವ ಘಟನೆ ನಡೆದಿದೆ.ಲಭ್ಯವಾದ ಪ್ರಾಥಮಿಕ ಮಾಹಿತಿಯ ಪ್ರಕಾರ, ಕಲ್ಲು ಕ್ವಾರಿಯಲ್ಲಿ ಕಾಮಗಾರಿ ನಡೆಯುತ್ತಿದ್ದ ವೇಳೆ ಮೇಲ್ಭಾಗದಲ್ಲಿದ್ದ ಬೃಹತ್ ಬಂಡೆಯನ್ನು ಟ್ರ್ಯಾಕ್ಟರ್ ಸಹಾಯದಿಂದ ಜರುಗಿಸಲಾಗುತ್ತಿತ್ತು. ಈ ವೇಳೆ ಬಂಡೆ ನಿಯಂತ್ರಣ ತಪ್ಪಿ ಕೆಳಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕರ ಮೇಲೆ ಬಿದ್ದಿದೆ. ಪರಿಣಾಮ ಸ್ಥಳದಲ್ಲೇ ಏಳು ಮಂದಿ ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.ಮೃತರು ಬಿಹಾರ ಮೂಲದ ವಲಸೆ ಕಾರ್ಮಿಕರಾಗಿದ್ದು, ದುರಂತ ಸಂಭವಿಸಿದ ತಕ್ಷಣ ಸ್ಥಳೀಯರು ಹಾಗೂ ಸಿಬ್ಬಂದಿ ರಕ್ಷಣಾ ಕಾರ್ಯ ಕೈಗೊಂಡು ಮೃತದೇಹಗಳನ್ನು ಹೊರತೆಗೆದಿದ್ದಾರೆ.ಸುದ್ದಿ ತಿಳಿಯುತ್ತಿದ್ದಂತೆಯೇ ತಾವರೆಕೆರೆ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಮಾರುತಿ ಹಾಗೂ ಸಿಬ್ಬಂದಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕ್ವಾರಿ ಕಾಮಗಾರಿಯ ಗುತ್ತಿಗೆ ಪಡೆದ ಮೇಸ್ತ್ರಿಯನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದು, ಸುರಕ್ಷತಾ ಕ್ರಮಗಳ ನಿರ್ಲಕ್ಷ್ಯವೇ ದುರಂತಕ್ಕೆ ಕಾರಣವೇ ಎಂಬ ಸೇರಿದಂತೆ ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿದಿದೆ.ಅಪಘಾತದ ನಿಖರ ಕಾರಣ ಪೊಲೀಸ್ ತನಿಖೆಯ ಬಳಿಕವೇ ಸ್ಪಷ್ಟವಾಗಲಿದೆ.

Jul 2, 2026 | 05:26 AM
112 0