ಕರ್ನಾಟಕ

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ನೂತನ ಮೇಯರ್, ಉಪಮೇಯರ್ ಆಯ್ಕೆ: ಬಿಜೆಪಿಗೆ ಮತ್ತೆ ಅಧಿಕಾರ

ಮೂಲಕ News Desk | ಪ್ರಕಟಿಸಲಾಗಿದೆ July 4, 2026 July 4, 2026 | 11:07 AM 67 ವೀಕ್ಷಣೆಗಳು

ಹುಬ್ಬಳ್ಳಿ, ಜು. 4: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ 25ನೇ ಅವಧಿಯ ಮೇಯರ್ ಹಾಗೂ ಉಪಮೇಯರ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಭರ್ಜರಿ ಗೆಲುವು ಸಾಧಿಸಿದ್ದು, ಪಾಲಿಕೆಯ ಆಡಳಿತ ಮತ್ತೊಮ್ಮೆ ಬಿಜೆಪಿಯ ಪಾಲಾಗಿದೆ.


ನಗರದ ಮಹಾನಗರ ಪಾಲಿಕೆ ಸಭಾಭವನದಲ್ಲಿ ಶನಿವಾರ ನಡೆದ ಚುನಾವಣೆಯಲ್ಲಿ ಪರಿಶಿಷ್ಟ ಜಾತಿ ಮೀಸಲು ಮೇಯರ್ ಸ್ಥಾನಕ್ಕೆ ಬಿಜೆಪಿ ಅಭ್ಯರ್ಥಿ ಹಾಗೂ ಮಾಜಿ ಉಪಮೇಯರ್ ದುರ್ಗಮ್ಮ ಬಿಜವಾಡ ಆಯ್ಕೆಯಾಗಿದ್ದು, ಸಾಮಾನ್ಯ ವರ್ಗದ ಉಪಮೇಯರ್ ಸ್ಥಾನಕ್ಕೆ ರತ್ನಾಭಾಯಿ ನಾಝರೆ ವಿಜಯಶಾಲಿಯಾಗಿದ್ದಾರೆ.


24ನೇ ಅವಧಿಯಲ್ಲಿ ಧಾರವಾಡಕ್ಕೆ ಮೇಯರ್ ಸ್ಥಾನ ಲಭಿಸಿದ್ದರೆ, ಈ ಬಾರಿ ಹುಬ್ಬಳ್ಳಿಗೆ ಮೇಯರ್ ಸ್ಥಾನ ದೊರಕಿತ್ತು. ಹುಬ್ಬಳ್ಳಿಯ ವಾರ್ಡ್ ಸಂಖ್ಯೆ 69ರ ದುರ್ಗಮ್ಮ ಬಿಜವಾಡ ಹಾಗೂ ಧಾರವಾಡದ ವಾರ್ಡ್ ಸಂಖ್ಯೆ 9ರ ರತ್ನಾಭಾಯಿ ನಾಝರೆ ಬಿಜೆಪಿ ಅಭ್ಯರ್ಥಿಗಳಾಗಿ ಕಣಕ್ಕಿಳಿದಿದ್ದರು. ಕಾಂಗ್ರೆಸ್ ಪಕ್ಷವು ಮೇಯರ್ ಸ್ಥಾನಕ್ಕೆ ವಾರ್ಡ್ ಸಂಖ್ಯೆ 20ರ ಕವಿತಾ ಕಬ್ಬೇರ್ ಹಾಗೂ ಉಪಮೇಯರ್ ಸ್ಥಾನಕ್ಕೆ ವಾರ್ಡ್ ಸಂಖ್ಯೆ 6ರ ದಿಲ್ಶಾದ್ ಬೇಗಂ ನದಾಫ್ ಅವರನ್ನು ಅಭ್ಯರ್ಥಿಗಳಾಗಿ ಘೋಷಿಸಿತ್ತು.

92 ಸದಸ್ಯ ಬಲ ಹೊಂದಿರುವ ಪಾಲಿಕೆಯಲ್ಲಿ 88 ಸದಸ್ಯರು ಮತದಾನದಲ್ಲಿ ಭಾಗವಹಿಸಿದ್ದು, ನಾಲ್ವರು ಸದಸ್ಯರು ಗೈರಾಗಿದ್ದರು. ಮೇಯರ್ ಸ್ಥಾನಕ್ಕೆ ನಡೆದ ಮತದಾನದಲ್ಲಿ ದುರ್ಗಮ್ಮ ಬಿಜವಾಡ 50 ಮತಗಳನ್ನು ಪಡೆದು ಜಯಗಳಿಸಿದರೆ, ಕಾಂಗ್ರೆಸ್ ಅಭ್ಯರ್ಥಿ ಕವಿತಾ ಕಬ್ಬೇರ್ 32 ಮತಗಳನ್ನು ಪಡೆದರು. ಉಪಮೇಯರ್ ಸ್ಥಾನಕ್ಕೆ ಬಿಜೆಪಿ ಅಭ್ಯರ್ಥಿ ರತ್ನಾಭಾಯಿ ನಾಝರೆ 50 ಮತಗಳನ್ನು ಪಡೆದು ಆಯ್ಕೆಯಾದರು.


ಚುನಾವಣೆಯ ಫಲಿತಾಂಶವನ್ನು ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತ ಕೆ.ಎಂ. ಜಾನಕಿ ಅಧಿಕೃತವಾಗಿ ಘೋಷಿಸಿದರು.


ಬಿಜೆಪಿ ಅಭ್ಯರ್ಥಿಗಳ ಪರವಾಗಿ ಕೇಂದ್ರ ಸಚಿವ ಹಾಗೂ ಸಂಸದ ಪ್ರಲ್ಹಾದ್ ಜೋಶಿ, ರಾಜ್ಯಸಭಾ ಸದಸ್ಯ ಎಂ. ನಾಗರಾಜ್, ಶಾಸಕರಾದ ಅರವಿಂದ ಬೆಲ್ಲದ್, ಮಹೇಶ್ ಟೆಂಗಿನಕಾಯಿ, ವಿಧಾನ ಪರಿಷತ್ ಸದಸ್ಯರಾದ ಪ್ರದೀಪ್ ಶೆಟ್ಟರ್, ಎಸ್.ವಿ. ಸಂಕನೂರ ಹಾಗೂ ಲಿಂಗರಾಜ ಪಾಟೀಲ ಬೆಂಬಲ ವ್ಯಕ್ತಪಡಿಸಿದರು. ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಶಾಸಕ ಪ್ರಸಾದ್ ಅಬ್ಬಯ್ಯ ಹಾಗೂ ವಿಧಾನ ಪರಿಷತ್ ಸದಸ್ಯ ಎಚ್.ಎಫ್. ಜಕ್ಕಪ್ಪನವರ ಬೆಂಬಲ ಸೂಚಿಸಿದರು.


ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ಪಾಲಿಕೆ ಆವರಣದಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಿದರು.

ಒಂದೇ ಅವಧಿಯಲ್ಲಿ ಉಪಮೇಯರ್ ಹುದ್ದೆಯಿಂದ ಮೇಯರ್ ಸ್ಥಾನಕ್ಕೆ ಏರಿದ ದುರ್ಗಮ್ಮ ಬಿಜವಾಡ ಅವರ ಸಾಧನೆ ವಿಶೇಷವಾಗಿ ಗಮನ ಸೆಳೆದಿದೆ.

ಚುನಾವಣಾ ಪ್ರಕ್ರಿಯೆಯಲ್ಲಿ ಹೆಚ್ಚುವರಿ ಆಯುಕ್ತ ಎಸ್.ಎಸ್. ಬಿರಾದಾರ ಹಾಗೂ ಪಾಲಿಕೆ ಆಯುಕ್ತ ರುದ್ರೇಶ ಘಾಳಿ ಉಪಸ್ಥಿತರಿದ್ದರು.