ಗೌರಿಬಿದನೂರು: ನಗರದ ವಾರ್ಡ್ ನಂ. 1ರ ನಾಗಯ್ಯ ರೆಡ್ಡಿ ಬಡಾವಣೆಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿಂದ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಡವರು ಹೆಚ್ಚಾಗಿ ವಾಸಿಸುವ ಈ ಪ್ರದೇಶಕ್ಕೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕೇವಲ ಭರವಸೆ ನೀಡುತ್ತಿದ್ದಾರೆ ಹೊರತು ಯಾವುದೇ ಅಭಿವೃದ್ಧಿ ಕಾಮಗಾರಿ ನಡೆಯುತ್ತಿಲ್ಲ ಎಂದು ನಿವಾಸಿಗಳು ಆರೋಪಿಸಿದ್ದಾರೆ.
ಸ್ಥಳೀಯರ ಪ್ರಕಾರ, ಬಡಾವಣೆಯಲ್ಲಿ ಅಂಗನವಾಡಿ ಮತ್ತು ಶಾಲೆ ಕಾರ್ಯನಿರ್ವಹಿಸುತ್ತಿದ್ದರೂ ಅವುಗಳಿಗೆ ಸಮರ್ಪಕ ಕಾಂಪೌಂಡ್ ಗೋಡೆ ಇಲ್ಲ. ಸರ್ಕಾರ ನಿರ್ಮಿಸಿರುವ ಸಮುದಾಯ ಭವನ ನಿರ್ಲಕ್ಷ್ಯದಿಂದ ಬಾಳುಬಿದ್ದ ಸ್ಥಿತಿಗೆ ತಲುಪಿದ್ದು, ಅದು ಕುಡುಕರ ಅಡ್ಡೆಯಾಗಿ ಮಾರ್ಪಟ್ಟಿದೆ. “ಹೇಳೋರಿಲ್ಲ, ಕೇಳೋರಿಲ್ಲ ಎನ್ನುವಂತಾಗಿದೆ” ಎಂದು ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದಲ್ಲದೆ, ಪ್ರದೇಶದಲ್ಲಿ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದಿರುವುದು ಹಾಗೂ ರಸ್ತೆಗಳು ಹದಗೆಟ್ಟಿರುವುದು ಜನರ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿದೆ. ಮಳೆ ಬಂದಾಗ ರಸ್ತೆಗಳ ಮೇಲೆ ನೀರು ನಿಂತುಕೊಳ್ಳುವುದರಿಂದ ಓಡಾಡುವುದೇ ಕಷ್ಟವಾಗುತ್ತದೆ ಎಂದು ಸ್ಥಳೀಯರು ದೂರಿದ್ದಾರೆ.
ಈ ಕುರಿತು ಹಲವಾರು ಬಾರಿ ರಾಜಕೀಯ ಮುಖಂಡರು ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಚುನಾವಣೆ ಸಮಯದಲ್ಲಿ ಮಾತ್ರ ಬಂದು ಭರವಸೆ ನೀಡಿ ಹೋಗುತ್ತಾರೆ, ಆದರೆ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿಲ್ಲ ಎಂದು ನಿವಾಸಿಗಳು ಆರೋಪಿಸಿದ್ದಾರೆ.
ನಾಗಯ್ಯ ರೆಡ್ಡಿ ಬಡಾವಣೆಯ ಸಮಗ್ರ ಅಭಿವೃದ್ಧಿಗೆ ತಕ್ಷಣ ಕ್ರಮ ಕೈಗೊಂಡು ರಸ್ತೆ, ಚರಂಡಿ, ಕಾಂಪೌಂಡ್ ಗೋಡೆ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎಂದು ಸ್ಥಳೀಯರು ಸರ್ಕಾರ ಮತ್ತು ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ.
ವರದಿ: ಜಿಲಾನಿ ಭಾಷಾ, ಗೌರಿಬಿದನೂರು