ಕರ್ನಾಟಕ

ಹುಬ್ಬಳ್ಳಿ: ರಾಜಕಾಲುವೆ ಕಾಮಗಾರಿ ವೇಳೆ ಮಣ್ಣು ಕುಸಿದು ಕಾರ್ಮಿಕ ಸಾವು

ಮೂಲಕ News Desk | ಪ್ರಕಟಿಸಲಾಗಿದೆ July 2, 2026 July 2, 2026 | 12:39 PM 21 ವೀಕ್ಷಣೆಗಳು

ಹುಬ್ಬಳ್ಳಿ: ನಗರದ ಗುಜರಾತ್ ಭವನದ ಸಮೀಪ ರಾಜಕಾಲುವೆ ಕಾಮಗಾರಿ ವೇಳೆ ಸಂಭವಿಸಿದ ದುರ್ಘಟನೆಯಲ್ಲಿ ಕೂಲಿ ಕಾರ್ಮಿಕನೊಬ್ಬ ಮೃತಪಟ್ಟಿರುವ ಘಟನೆ ನಡೆದಿದೆ.

ಮೃತ ಕಾರ್ಮಿಕನನ್ನು ಅಣ್ಣಿಗೇರಿ ತಾಲೂಕಿನ ಹಳ್ಳಿಕೇರಿ ಗ್ರಾಮದ ನಿವಾಸಿ ಮಲ್ಲಪ್ಪ ಜೋಗಿನ್ (41) ಎಂದು ಗುರುತಿಸಲಾಗಿದೆ.


ರಾಜಕಾಲುವೆಗೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಒಳಚರಂಡಿ ನಿರ್ಮಾಣ ಕಾಮಗಾರಿ ನಡೆಯುತ್ತಿತ್ತು. ಈ ವೇಳೆ ಗುಂಡಿಯೊಳಗೆ ಇಳಿದು ಮಣ್ಣು ತೆಗೆಯುತ್ತಿದ್ದ ಮಲ್ಲಪ್ಪ ಅವರ ಮೇಲೆ ಏಕಾಏಕಿ ಮಣ್ಣು ಕುಸಿದು ಬಿದ್ದಿದೆ. ಇತ್ತೀಚಿನ ಮಳೆಯಿಂದ ಮಣ್ಣು ನೆನೆದಿದ್ದ ಪರಿಣಾಮ ಗುಂಡಿಯ ಬದಿಯ ಮಣ್ಣು ಜಾರಿದ್ದು, ಮಲ್ಲಪ್ಪ ಮಣ್ಣಿನಡಿ ಸಿಲುಕಿದ್ದಾರೆ.

ಸ್ಥಳೀಯರು ಹಾಗೂ ಸಹೋದ್ಯೋಗಿಗಳು ರಕ್ಷಣಾ ಕಾರ್ಯ ನಡೆಸಿ ಅವರನ್ನು ಹೊರತೆಗೆದರೂ, ಅಷ್ಟರಲ್ಲೇ ಅವರು ಮೃತಪಟ್ಟಿದ್ದರು ಎಂದು ತಿಳಿದುಬಂದಿದೆ.


ಈ ಕಾಮಗಾರಿಯನ್ನು ಮಂಜುನಾಥ ಬೊಮ್ಮಶೆಟ್ಟಿ ಎಂಬ ಗುತ್ತಿಗೆದಾರ ನಡೆಸುತ್ತಿದ್ದು, ಅಗತ್ಯ ಸುರಕ್ಷತಾ ಕ್ರಮಗಳನ್ನು ಪಾಲಿಸದೇ ಕಾಮಗಾರಿ ನಡೆಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.


ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ. ಕಾಮಗಾರಿ ವೇಳೆ ಸುರಕ್ಷತಾ ಕ್ರಮಗಳಲ್ಲಿ ನಿರ್ಲಕ್ಷ್ಯವಿದೆಯೇ ಎಂಬ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.