ಕರ್ನಾಟಕ

ವಿದ್ಯುತ್ ಮೂಲ ಸೌಕರ್ಯ, ಇವಿ ಚಾರ್ಜಿಂಗ್‌ಗೆ ಕೆಪಿಟಿಸಿಎಲ್‌ನಿಂದ ಹೈಬ್ರಿಡ್ ಜಾಲ

ಮೂಲಕ News Desk | ಪ್ರಕಟಿಸಲಾಗಿದೆ July 12, 2026 July 12, 2026 | 05:59 AM 5 ವೀಕ್ಷಣೆಗಳು

ವಿದ್ಯುತ್ ಉಪಕೇಂದ್ರಗಳನ್ನು ಬೆಸೆಯುವ ಹೈಬ್ರಿಡ್ ಪ್ರಸರಣ ವ್ಯವಸ್ಥೆ ಮೂಲಕ ಸಮರ್ಪಕ ವಿದ್ಯುತ್ ಪೂರೈಕೆ



ಬೆಳಗಾವಿ, ಜುಲೈ 09, 2026: ವೇಗವಾಗಿ ಬೆಳೆಯುತ್ತಿರುವ ಎರಡನೇ ಹಂತದ ನಗರಗಳಲ್ಲಿ ದೂರದೃಷ್ಟಿಯ ಉದ್ದೇಶದೊಂದಿಗೆ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್)ವು ಸುಭದ್ರ ಮೂಲಸೌಕರ್ಯಕ್ಕೆ ಬುನಾದಿ ಹಾಕುತ್ತಿದ್ದು, ಬೆಳಗಾವಿ ನಗರದಲ್ಲಿ ಭವಿಷ್ಯದ ಕಲ್ಪನೆಗಳು ಸಾಕಾರವಾಗುತ್ತಿವೆ.


ವಿದ್ಯುತ್ ಪ್ರಸರಣದಲ್ಲಿ ದಕ್ಷತೆ ಹಾಗೂ ಆಧುನಿಕತೆ ಅಳವಡಿಸಿಕೊಂಡಿರುವ ಕೆಪಿಟಿಸಿಎಲ್, ಹೈಟೆನ್ಷನ್ ಮತ್ತು ಲೋಟೆನ್ಷನ್ ಒಳಗೊಂಡಂತೆ ಸರಿಸುಮಾರು 700 ಕಿ.ಮೀ. 11 ಕೆವಿ ಭೂಗತ ಕೇಬಲ್, 350 ಕಿ.ಮೀ. ಏರಿಯಲ್ ಬಂಚ್ ಕೇಬಲ್ ಗಳನ್ನು ಅಳವಡಿಸುವುದರ ಜತೆಗೆ ವಿದ್ಯುತ್ ಉಪಕೇಂದ್ರಗಳನ್ನು ಮೇಲ್ದರ್ಜೆಗೇರಿಸಿ ಹೈಬ್ರಿಡ್ ವಿದ್ಯುತ್ ವಿತರಣಾ ಜಾಲವನ್ನು ಅಣಿಗೊಳಿಸಿದೆ. 


ಹೈಬ್ರಿಡ್‌ ಪ್ರಸರಣ ಜಾಲದ ಸಧೃಡತೆಗೆ ಅಗತ್ಯವಿರುವ ವಿದ್ಯುತ್ ಉಪಕೇಂದ್ರಗಳನ್ನು ಅನುಷ್ಠಾನಗೊಳಿಸಲು ಟೆಂಡರ್‌ ಪ್ರಕ್ರಿಯೆ ಮತ್ತು ವಿದ್ಯುತ್ ಉಪಕೇಂದ್ರಗಳನ್ನು ಚಾರ್ಜ್‌ ಮಾಡುವ ಪ್ರಕ್ರಿಯೆಗಳು ಭರದಿಂದ ಸಾಗಿವೆ. ದೂರದೃಷ್ಟಿಯ ಚಿಂತನೆಯಲ್ಲಿ ನೆಹರು ನಗರ 110 ಕೆವಿ (40 ಎಂವಿಎ) ಪೂರ್ಣಗೊಂಡಿದ್ದು ಜತೆಗೆ ಕಣಬರಗಿ 110 ಕೆವಿ (20ಎಂವಿಎ) ಮತ್ತು 33 ಕೆವಿ ಶ್ರೀನಗರ ಜಿಐಎಸ್ (16 ಎಂವಿಎ) ಸಜ್ಜಾಗಿದೆ. 


ನಗರದ ಫೋರ್ಟ್ 33 ಕೆವಿ (15 ಎಂವಿಎ) ಉನ್ನತೀಕರಿಸುತ್ತಿದ್ದು 110 ಕೆವಿಗೆ (40 ಎಂವಿಎ), ಸದಾಶಿವನಗರ 33 ಕೆವಿ (10 ಎಂವಿಎ) ಉನ್ನತೀಕರಿಸುತ್ತಿದ್ದು 110 ಕೆವಿಗೆ, ಮತ್ತು ಮಚ್ಚೆ 220 ಕೆವಿ (200 ಎಂವಿಎ) ವಿದ್ಯುತ್ ಉಪಕೇಂದ್ರನ್ನು ಪರಿವರ್ತಿಸಲಾಗುತ್ತಿರುವ ಕಾಮಗಾರಿ ಪ್ರಗತಿಯಲ್ಲಿದೆ. 


ಬೆಳಗಾವಿ ನಗರದ ಹೃದಯಭಾಗಕ್ಕೆ ಸಮರ್ಪಕ ವಿದ್ಯುತ್ ಪೂರೈಸಲು ಈಗಾಗಲೇ ಬೀಮ್ಸ್ ಆವರಣದಲ್ಲಿ 110 ಕೆವಿ (40 ಎಂವಿಎ) ಮತ್ತು ಒಟ್ಟು ನಗರದ ವಿದ್ಯುತ್ ವ್ಯವಸ್ಥೆ ನಿರ್ವಹಿಸಲು 220 ಕೆವಿ ಕಣಬರಗಿ ಸ್ವಿಚಿಂಗ್ ಸ್ಟೇಷನ್ (400 ಎಂವಿಎ) ಮತ್ತು ನಾವಗೆ (40 ಎಂವಿಎ) ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದೆ. ರಾಯಭಾಗದಲ್ಲಿನ ಮೇಖಲಿಯಲ್ಲಿ ಯೋಜಿಸಿರುವ 400 ಕೆವಿ (1000 ಎಂವಿಎ) ವಿದ್ಯುತ್ ಉಪಕೇಂದ್ರ ಸಜ್ಜಾಗುತ್ತಿದ್ದಂತೆ ಬೆಳಗಾವಿಯಲ್ಲಿ ಪ್ರಮುಖ ವಿದ್ಯುತ್ ಉಪಕೇಂದ್ರಗಳನ್ನು ಬೆಸೆಯುತ್ತಿರುವ ಹೊಸ ಪ್ರಸರಣ ವ್ಯವಸ್ಥೆ ವಿದ್ಯುತ್ ಅಡೆತಡೆಗಳನ್ನು ಮೀರಿ ಮುನ್ನುಗ್ಗಲಿದೆ. 


*ಅತ್ಯಾಧುನಿಕ ವಿದ್ಯುತ್ ಮೂಲಸೌಕರ್ಯ ಸಾಕಾರ*


ಜಿಲ್ಲೆಯ ಸಮಗ್ರ ಅಭಿವೃದ್ದಿ ಹಾಗೂ ಹೆಚ್ಚಿನ ಹೂಡಿಕೆಗಳಿಗೆ ಕೈಗಾರಿಕೆ, ಐಟಿ ಮತ್ತು ಸೇವಾ ಕ್ಷೇತ್ರ, ಸ್ಮಾರ್ಟ್‌ ಸಿಟಿ ಮತ್ತು ಮೂಲಸೌಕರ್ಯ ನಿರ್ವಹಣೆಗಾಗಿ ದಕ್ಷ ಹಾಗೂ ವಿಶ್ವಾಸರ್ಹ ವಿದ್ಯುತ್ ಅತ್ಯಗತ್ಯವಾಗಿದೆ. ಇದೆಲ್ಲವನ್ನು ನಿರ್ವಹಿಸಲು ಪರಿಣಾಮಕಾರಿ ವಿದ್ಯುತ್ ಪೂರೈಕೆ ಜಾಲ ಇರಬೇಕು. ಲೋಡ್‌ ನಿರ್ವಹಣೆ, ಅತ್ಯಂತ ವೇಗವಾಗಿ ಫಾಲ್ಟ್ ಗುರುತಿಸಿ ನಿರ್ವಹಣೆ ಮಾಡಲು ಅತ್ಯಾಧುನಿಕ ಕೇಬಲ್ ಫಾಲ್ಟ್ ಡಿಟೆಕ್ಟರ್ ವಾಹನ ವ್ಯವಸ್ಥೆಯನ್ನು ನಿಗಮ ಒಳಗೊಂಡಿದೆ ಮತ್ತು ಸಧೃಡ ಬ್ಯಾಕ್‌ ಅಪ್ ವ್ಯವಸ್ಥೆ ಇದ್ದಾಗ ಮಾತ್ರವೇ ಗುಣಮಟ್ಟದ ವಿದ್ಯುತ್ ಪೂರೈಕೆ ಸಾಧ್ಯವಾಗಲಿದೆ.


ವಿದ್ಯುತ್ ವಾಹನ (ಇವಿ) ಬಳಕೆಗೆ ಗ್ರಾಹಕರು ಹೆಚ್ಚು ಒತ್ತು ನೀಡುತ್ತಿದ್ದು, ಭವಿಷ್ಯದಲ್ಲಿ ಚಾರ್ಜಿಂಗ್ ಸೌಕರ್ಯಗಳು ಪ್ರಮುಖ ಪಾತ್ರವಹಿಸಲಿದೆ. ಈ ಎಲ್ಲಾ ಅಂಶಗಳನ್ನು ಗಮನಿಸಿ ನಿಗಮವು ವಿದ್ಯುತ್ ಮೂಲಸೌಕರ್ಯದಲ್ಲಿ ಮಹತ್ತರ ಪರಿವರ್ತನೆಗೆ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ಸದ್ಯದಲ್ಲೇ ಅತ್ಯುತ್ತಮ ಬ್ಯಾಕ್‌ಅಪ್ ವ್ಯವಸ್ಥೆಯೊಂದಿಗೆ ಬೆಳಗಾವಿ ಭವಿಷ್ಯದ ಭರವಸೆಯ ನಗರವಾಗಲು ಸಜ್ಜುಗೊಳ್ಳುತ್ತಿದೆ.


 ರಾಜ್ಯದಲ್ಲಿ ವಿಶೇಷ ಗಣೇಶೋತ್ಸವದ ಹೆಗ್ಗಳಿಕೆ ಹೊಂದಿರುವ ಬೆಳಗಾವಿಯಲ್ಲಿ ಮೇಲ್ಮಾರ್ಗದ ವಿದ್ಯುತ್ ಲೈನ್‌ಗಳನ್ನು ಭೂಗತವಾಗಿ ಪರಿವರ್ತಿಸಲಾಗಿದ್ದು, ನಗರದ ಸೌಂದರ್ಯ ಕಳೆಗಟ್ಟಿದೆ. ಸ್ಥಳೀಯಾಡಳಿತದ ಆಸಕ್ತಿಯಿಂದ ಆಕರ್ಷಕ ಎಲ್‌ಇಡಿ ಬೀದಿ ದೀಪಗಳು ತಲೆಯೆತ್ತಿವೆ. ನಗರಾಭಿವೃದ್ಧಿ ಯೋಜನೆಯಲ್ಲಿ ಒಳಗೊಂಡಿರುವ ನಗರ ಮತ್ತಷ್ಟು ಬೆಳವಣಿಗೆ ಕಾಣಲು ಜನರ ಆರ್ಥಿಕ ಹಾಗೂ ಸಾಮಾಜಿಕ ಮೌಲ್ಯ ವರ್ಧನೆಗೆ ವಿದ್ಯುತ್ ಪೂರೈಸಲು ಕೆಪಿಟಿಸಿಎಲ್ ಮತ್ತು ಹೆಸ್ಕಾಂನ ಧೃಡ ಸಂಕಲ್ಪ ಹಾಗೂ ಬದ್ದತೆಗೆ ಸಾಕ್ಷಿಯಾಗಿದೆ. 



*ಹೈಬ್ರಿಡ್ ರೇಡಿಯಲ್ ಸಿಸ್ಟಮ್ -ಕೆಪಿಟಿಸಿಎಲ್ ಭರವಸೆಯ ತಾಂತ್ರಿಕ ಅಳವಡಿಕೆ* 


ವಿದ್ಯುತ್ ಪ್ರಸರಣದಲ್ಲಿ ರೇಡಿಯಲ್ ಸಿಸ್ಟಮ್, ರಿಂಗ್ ಮೇನ್ ಸಿಸ್ಟಮ್ ಮತ್ತು ಹೈಬ್ರಿಡ್ ರೇಡಿಯಲ್ ಸಿಸ್ಟಮ್ ಎಂಬ ಮೂರು ಪ್ರಮುಖ ಮಾದರಿಗಳಿವೆ. ವಿದೇಶಗಳಲ್ಲಿ ಯಶಸ್ವಿ ವಿದ್ಯುತ್ ಪ್ರಸರಣಕ್ಕಾಗಿ ಹೈಬ್ರಿಡ್ ವ್ಯವಸ್ಥೆ ಬಳಕೆಯಲ್ಲಿದೆ. ಇದನ್ನೇ ಈಗ ಬೆಳಗಾವಿಯಲ್ಲೂ ಅಳವಡಿಸಲು ನಿಗಮ ಹೆಜ್ಜೆ ಇಟ್ಟಿದೆ. ಹೈಬ್ರಿಡ್ ವ್ಯವಸ್ಥೆಯಲ್ಲಿ ಯಾವುದೇ ಘಟಕದಲ್ಲಿ ಅಡಚಣೆಯಾದರೆ ಕೂಡಲೇ ಮತ್ತೊಂದು ಲೈನ್ ಮೂಲಕ ವಿದ್ಯುತ್ ಪ್ರಸರಣ ವ್ಯವಸ್ಥೆಯನ್ನು ಸುಗಮಗೊಳಿಸುವುದು. ಇದು ಕ್ಷಣಮಾತ್ರದಲ್ಲಿ ನಡೆಯುವ ಪ್ರಕ್ರಿಯೆ ಆಗಿರುತ್ತದೆ. ಈ ಹೈಬ್ರಿಡ್ ವ್ಯವಸ್ಥೆಯಲ್ಲಿ ಈಗಾಗಲೇ ಉತ್ತಮ ತಂತ್ರಜ್ಞಾನ ಮಾದರಿ ಎಂಬಂತೆ ಬಳಕೆಯಲ್ಲಿರುವ (ಎನ್‌-1) ಸರಳವಾಗಿ ಹೇಳುವುದಾದರೆ ಲೋಡ್‌ಗೆ ಅಗತ್ಯವಿರುವ ಬ್ಯಾಕಪ್ ವ್ಯವಸ್ಥೆ ಸಿದ್ದವಾಗಿಟ್ಟುಕೊಳ್ಳುವುದೇ ಆಗಿದೆ. ಯಾವುದೇ ಲೈನ್‌ ಸಮಸ್ಯೆ ಎದುರಾದರೆ ಅಥವಾ ಫಾಲ್ಟ್‌ ಆಗಿ ಐಸೋಲೇಟ್‌ ಆದರೆ ಕೂಡಲೇ ಮತ್ತೊಂದು ಲೈನ್‌ ಮೂಲಕ ವಿದ್ಯುತ್ ಪೂರೈಕೆ ಸಾಧ್ಯವಾಗಲಿದೆ. ಇದರಿಂದ ಗ್ರಾಹಕರಿಗೆ ಗುಣಮಟ್ಟದ ಮತ್ತು ಸಮರ್ಪಕ ವಿದ್ಯುತ್ ಪೂರೈಕೆ ಸಾಧ್ಯವಾಗಲಿದೆ. 


*ಸುಸ್ಥಿರ ಸಾರಿಗೆಗೆ ಭರವಸೆ ಮೂಡಿಸಿದ ವಿದ್ಯುತ್ ಮೂಲಸೌಕರ್ಯ*


ಈಗಾಗಲೇ ಎಲೆಕ್ಟ್ರಿಕ್ ವಾಹನಗಳ ಬಳಕೆ ಗಣನೀಯವಾಗಿ ಏರುತ್ತಿದೆ. ರಾಜ್ಯ ಸಾರಿಗೆ ನಿಗಮವು ವಿದ್ಯುತ್ ಬಸ್‌ಗಳ ಕಡೆ ಮುಖಮಾಡಿವೆ. ವಾಯುವ್ಯ ಕರ್ನಾಟಕ ಸಾರಿಗೆ ಅತ್ಯುತ್ತಮ ವಿದ್ಯುತ್ ಮೂಲಸೌಕರ್ಯ ಮನಗಂಡು ಇವಿ ಬಸ್ ಚಾರ್ಜಿಂಗ್ ಘಟಕ ಸ್ಥಾಪನೆಗೆ ಮುಂದಾಗಿ ಇದಕ್ಕೆ ಅಗತ್ಯವಿರುವ 11 ಕೆವಿ ವಿದ್ಯುತ್ ಸಂಪರ್ಕ ಜಾಲವನ್ನು ಬಳಸಿಕೊಳ್ಳಲು ಸನ್ನದ್ಧವಾಗಿದೆ. ಇವಿ ವಾಹನ ಬಳಕೆದಾರರಿಗೆ ಚಾರ್ಜಿಂಗ್ ಮೂಲಸೌಕರ್ಯ ಅಗತ್ಯವಾಗುತ್ತಿರುವ ಈ ಹೊತ್ತಿನಲ್ಲಿ ಮುಂದಿನ ಸುಸ್ಥಿರ ಸಾರಿಗೆಗೆ ಕೆಪಿಟಿಸಿಎಲ್ ನಿರ್ಮಿಸುತ್ತಿರುವ ಮೂಲಸೌಕರ್ಯ ವರದಾನವಾಗಲಿದೆ. 


“ವಿದ್ಯುತ್ ಸೌಕರ್ಯಗಳು ಈಗ ಪ್ರತಿಯೊಬ್ಬರಿಗೂ ಆರ್ಥಿಕವಾಗಿ ಹಾಗೂ ಸಾಮಾಜಿಕ ಬದಲಾವಣೆಗೆ ಬಹುಮುಖ್ಯವಾಗಿದೆ. ಇಂಧನ ಇಲಾಖೆ ಭವಿಷ್ಯದ ನಗರ ನಿರ್ಮಾಣಕ್ಕೆ ಅಗತ್ಯವಿರುವ ವಿದ್ಯುತ್ ಮೂಲಸೌಕರ್ಯ ಕಲ್ಪಿಸುವಲ್ಲಿ ಮುಂದಾಗಿದೆ. ಬೆಂಗಳೂರು ಹೊರತಾದ ನಗರಗಳಲ್ಲಿ ಬೆಳಗಾವಿ ಪ್ರಗತಿಯತ್ತ ಹೆಜ್ಜೆ ಹಾಕುತ್ತಿರುವ ಜಿಲ್ಲೆ. ಈ ಗಡಿಜಿಲ್ಲೆ ಯಲ್ಲಿ ಸುಭದ್ರ ಹಾಗೂ ಸಧೃಡ ವಿದ್ಯುತ್ ಪ್ರಸರಣ ಸೌಕರ್ಯ ಬಲಗೊಳಿಸಲಾಗುತ್ತಿದೆ.,”

- *ಕೆ.ಜೆ.ಜಾರ್ಜ್, ಇಂಧನ ಹಾಗೂ ಪ್ರವಾಸೋದ್ಯಮ ಸಚಿವರು, ಕರ್ನಾಟಕ ಸರ್ಕಾರ* 


"ವಿದ್ಯುತ್ ಮೂಲ ಸೌಕರ್ಯ ಸುಧಾರಣೆಯಾದರೆ ವಿದ್ಯುತ್ ಪೂರೈಕೆಯೂ ಸಮರ್ಪಕಗೊಳ್ಳುತ್ತದೆ. ಈ ಅಂಶವನ್ನು ಗಮನದಲ್ಲಿಟ್ಟುಕೊಂಡು ಎರಡನೇ ಹಂತದ ನಗರಗಳಲ್ಲಿ ಕೆಪಿಟಿಸಿಎಲ್ ಜೊತೆಗೆ ಹೆಸ್ಕಾಂ ಮೂಲಕ ಹಲವು ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದ್ದು, ಬೆಳಗಾವಿ ಇದಕ್ಕೆ ಉತ್ತಮ ಉದಾಹರಣೆ ಮತ್ತು ಮಾದರಿಯಾಗಲಿದೆ."

- *ಗೌರವ್ ಗುಪ್ತ, ಅಪರ ಮುಖ್ಯ ಕಾರ್ಯದರ್ಶಿಗಳು, ಇಂಧನ ಇಲಾಖೆ*



“ಕವಿಪ್ರನಿನಿ ವಿದ್ಯುತ್ ಮೂಲಸೌಕರ್ಯವನ್ನು ಸುಸ್ಥಿರ ಹಾಗೂ ಸಧೃಡವಾಗಿ ನಿರ್ಮಿಸಲು ಅಗತ್ಯವಿರುವ ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತಿದೆ. ಜಾಗತಿಕ ವಿದ್ಯುತ್ ಪ್ರಸರಣ ಮತ್ತು ವಿತರಣಾ ತಂತ್ರಜ್ಞಾನ ಅಳವಡಿಕೆ ಎರಡನೇ ಹಂತದ ನಗರಗಳನ್ನು ಭವಿಷ್ಯದ ಸುಸ್ಥಿರ ಹಾಗೂ ಪ್ರಗತಿಯೆಡೆಗೆ ಮುನ್ನಡೆಸುತ್ತಿದೆ. ರೈತರು ಹಾಗೂ ಜನತೆಯ ಸಹಕಾರವಿದ್ದರೆ ನಾವು ಕಾಲಮಿತಿಯೊಳಗೆ ಜನಸ್ನೇಹಿ ಯೋಜನೆಗಳನ್ನು ರೂಪಿಸಲು ಸಿದ್ದರಿದ್ದೇವೆ”. 


ಡಾ.ವಿ.ರಾಮ್ ಪ್ರಸಾತ್ ಮನೋಹರ್, ವ್ಯವಸ್ಥಾಪಕ ನಿರ್ದೇಶಕ, ಕವಿಪ್ರನಿನಿ