ಲಕ್ಷ್ಮೇಶ್ವರ: ಗದಗ್ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಅಗಡಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಆರೋಗ್ಯ ಮತ್ತು ಮೂಲಭೂತ ಸೌಲಭ್ಯಗಳಿಗೆ ಸಂಬಂಧಿಸಿದ ಗಂಭೀರ ಅವ್ಯವಸ್ಥೆಗಳು ಬೆಳಕಿಗೆ ಬಂದಿದ್ದು, ವಿದ್ಯಾರ್ಥಿಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಕಾಲೇಜಿನ ಹಾಸ್ಟೆಲ್ ಅಡುಗೆ ಕೋಣೆಯಲ್ಲಿ ಸ್ವಚ್ಛತೆಯ ಕೊರತೆ ಕಂಡುಬಂದಿದ್ದು, ಆಹಾರ ತಯಾರಿಕೆಗೆ ಬಳಸುವ ರುಬ್ಬುವ ಮಷೀನ್ ಅಸ್ವಚ್ಛ ಸ್ಥಿತಿಯಲ್ಲಿ ಇರುವುದಾಗಿ ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಇದಲ್ಲದೆ, ವಿದ್ಯಾರ್ಥಿಗಳಿಗೆ ನೀಡಲಾದ ಊಟದಲ್ಲಿ ಜಿರಳೆಗಳು ಪತ್ತೆಯಾಗಿರುವ ಘಟನೆ ವಿದ್ಯಾರ್ಥಿಗಳನ್ನು ಬೆಚ್ಚಿಬೀಳುವಂತೆ ಮಾಡಿದೆ.
ಆಹಾರದ ಗುಣಮಟ್ಟ ಮತ್ತು ಸ್ವಚ್ಛತೆ ಬಗ್ಗೆ ಹಲವು ಬಾರಿ ಕಾಲೇಜು ಆಡಳಿತದ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ವಿದ್ಯಾರ್ಥಿಗಳು ದೂರಿದ್ದಾರೆ. ಅಸ್ವಚ್ಛ ವಾತಾವರಣದಿಂದ ವಿದ್ಯಾರ್ಥಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದ್ದು, ಸಂಬಂಧಿಸಿದ ಅಧಿಕಾರಿಗಳು ತಕ್ಷಣ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಘಟನೆಯ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಪೋಷಕರಲ್ಲಿಯೂ ಆತಂಕ ಹೆಚ್ಚಾಗಿದೆ. ವಿದ್ಯಾರ್ಥಿಗಳಿಗೆ ಸುರಕ್ಷಿತ ಹಾಗೂ ಗುಣಮಟ್ಟದ ಆಹಾರ ಒದಗಿಸುವ ಜವಾಬ್ದಾರಿ ಕಾಲೇಜು ಆಡಳಿತದ ಮೇಲಿದೆ. ಆದ್ದರಿಂದ ಸಂಬಂಧಪಟ್ಟ ಇಲಾಖೆಗಳು ಹಾಗೂ ಶಿಕ್ಷಣ ಅಧಿಕಾರಿಗಳು ಕಾಲೇಜಿನ ಅಡುಗೆ ವ್ಯವಸ್ಥೆ ಮತ್ತು ಹಾಸ್ಟೆಲ್ ನಿರ್ವಹಣೆಯನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಈ ಘಟನೆ ಕಾಲೇಜಿನ ಆಡಳಿತ ವೈಫಲ್ಯವನ್ನು ಬಯಲಿಗೆಳೆದಿದ್ದು, ವಿದ್ಯಾರ್ಥಿಗಳ ಆರೋಗ್ಯದ ವಿಚಾರದಲ್ಲಿ ನಿರ್ಲಕ್ಷ್ಯ ತೋರಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಗಳು ಕೇಳಿಬರುತ್ತಿವೆ.