ಹುಬ್ಬಳ್ಳಿ, ಜೂನ್ 12: ಭಾರತೀಯ ಸೇನೆಗೆ ಅಗ್ನಿವೀರರಾಗಿ ಆಯ್ಕೆಯಾಗಿರುವ ಹುಬ್ಬಳ್ಳಿಯ 11 ಯುವ ಕ್ರೀಡಾಪಟುಗಳಿಗೆ ಹಾಗೂ ಅಲ್ಟ್ರಾ ಮ್ಯಾನ್ ಸದಾನಂದ ಅಮರಾಪುರ ಅವರಿಗೆ ನಗರದ ಶ್ರೀ ಕಾರುಣ್ಯ ಸ್ಪೋರ್ಟ್ಸ್ ಅಸೋಸಿಯೇಶನ್ ಮತ್ತು ಮಾತೃಸ್ವರೂಪಿ ಶ್ರೀಮತಿ ಗಂಗವ್ವ ಬಳ್ಳಾರಿ ಸೇವಾ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಅದ್ಧೂರಿ ಸನ್ಮಾನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಸದಸ್ಯೆ ಸೀಮಾ ಸಿದ್ದು ಮೊಗಲಿಶೆಟ್ಟರ ಹಾಗೂ ಸಮಾಜಸೇವಕ ಸಿದ್ದು ಮೊಗಲಿಶೆಟ್ಟರ, ಯುವಕರು ಕ್ರೀಡೆ ಮತ್ತು ಶಿಸ್ತಿನ ಮೂಲಕ ದೇಶಸೇವೆಗೆ ಮುಂದಾಗುತ್ತಿರುವುದು ಹೆಮ್ಮೆಯ ಸಂಗತಿ ಎಂದು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಂಚಾರಿ ವಿಭಾಗದ ಎಸಿಪಿ ವೀರನಗೌಡ ಪಾಟೀಲ, ಸೇನೆಗೆ ಆಯ್ಕೆಯಾದ ಯುವಕರು ಸಮಾಜಕ್ಕೆ ಮಾದರಿಯಾಗಿದ್ದು, ಇತರ ಯುವಕರಿಗೂ ಸ್ಫೂರ್ತಿಯಾಗಲಿದ್ದಾರೆ ಎಂದು ಶ್ಲಾಘಿಸಿದರು. ಮಹಿಳಾ ಪೊಲೀಸ್ ಠಾಣೆಯ ಸಿಪಿಐ ಡಾ. ಜ್ಯೋತಿರ್ಲಿಂಗ ಹೊನಕಟ್ಟಿ ಅವರು ಕಠಿಣ ಪರಿಶ್ರಮ ಮತ್ತು ನಿರಂತರ ಅಭ್ಯಾಸದಿಂದ ಯುವಕರು ಈ ಸಾಧನೆ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅಗ್ನಿವೀರರ ಯಶಸ್ಸಿನ ಹಿಂದೆ ತರಬೇತುದಾರ ಮಹಾಂತೇಶ ಬಳ್ಳಾರಿ ಅವರ ಪರಿಶ್ರಮ ಮತ್ತು ಮಾರ್ಗದರ್ಶನ ಮಹತ್ವದ ಪಾತ್ರ ವಹಿಸಿದೆ. ಗ್ರಾಮೀಣ ಹಾಗೂ ಆರ್ಥಿಕವಾಗಿ ಹಿಂದುಳಿದ ಯುವಕರಿಗೆ ಉಚಿತ ಕ್ರೀಡಾ ಹಾಗೂ ರಕ್ಷಣಾ ಪಡೆಗಳ ತರಬೇತಿ ನೀಡುವ ಮೂಲಕ ಅವರು ಅನೇಕ ಪ್ರತಿಭೆಗಳನ್ನು ಬೆಳೆಸುತ್ತಿದ್ದಾರೆ.
ಸನ್ಮಾನ ಸ್ವೀಕರಿಸಿದ ಅಗ್ನಿವೀರರು ತಮ್ಮ ಸಾಧನೆಗೆ ಕುಟುಂಬದ ಬೆಂಬಲ ಮತ್ತು ಮಹಾಂತೇಶ ಬಳ್ಳಾರಿ ಅವರ ಮಾರ್ಗದರ್ಶನವೇ ಕಾರಣ ಎಂದು ಕೃತಜ್ಞತೆ ಸಲ್ಲಿಸಿದರು. ದೇಶದ ಗಡಿಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸುವ ಸಂಕಲ್ಪವನ್ನೂ ವ್ಯಕ್ತಪಡಿಸಿದರು.
ಈ ವೇಳೆ ಅಲ್ಟ್ರಾ ಮ್ಯಾನ್ ಸದಾನಂದ ಅಮರಾಪುರ ಮಾತನಾಡಿ, ಕಠಿಣ ಪರಿಶ್ರಮ, ಆತ್ಮವಿಶ್ವಾಸ ಮತ್ತು ನಿರಂತರ ಪ್ರಯತ್ನದಿಂದ ಯಾವುದೇ ಗುರಿಯನ್ನು ಸಾಧಿಸಬಹುದು ಎಂದು ಯುವಕರಿಗೆ ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ನಗರದ ಹಲವು ಗಣ್ಯರು, ಕ್ರೀಡಾಭಿಮಾನಿಗಳು, ಪಾಲಕರು ಹಾಗೂ ಸಾರ್ವಜನಿಕರು ಭಾಗವಹಿಸಿ ಸಾಧಕರಿಗೆ ಅಭಿನಂದನೆ ಸಲ್ಲಿಸಿದರು. ಗೀತಾ ತಡಸದ ಕಾರ್ಯಕ್ರಮ ನಿರೂಪಿಸಿದರೆ, ಮುತ್ತಣ್ಣ ಸುರಪುರ ವಂದನಾರ್ಪಣೆ ನೆರವೇರಿಸಿದರು.