ಬಂಡೀಪುರ:ವನ್ಯಜೀವಿಗಳನ್ನು ಅಕ್ರಮವಾಗಿ ಬೇಟೆಯಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಡೀಪುರ ವಿಶೇಷ ಕಾರ್ಯಪಡೆ (STF) ಸಿಬ್ಬಂದಿ ಬಂಧಿಸಿದ್ದಾರೆ.
ಖಚಿತ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿದ STF ಅಧಿಕಾರಿಗಳು, ಆರೋಪಿಗಳನ್ನು ವಶಕ್ಕೆ ಪಡೆದು ಅವರಿಂದ ಬೇಟೆಯಾಡಲು ಬಳಸುತ್ತಿದ್ದ ಕೋವಿ, ಜೀವಂತ ಗುಂಡುಗಳು ಹಾಗೂ ಇತರೆ ಬೇಟೆ ಸಾಮಗ್ರಿಗಳನ್ನು ಜಪ್ತಿ ಮಾಡಿದ್ದಾರೆ.
ಆರೋಪಿಗಳು ಅರಣ್ಯ ಪ್ರದೇಶದಲ್ಲಿ ವನ್ಯಜೀವಿಗಳ ಬೇಟೆಗೆ ಸಂಚು ರೂಪಿಸಿದ್ದರೆಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಬಂಧಿತರಿಂದ ವಶಪಡಿಸಿಕೊಂಡ ವಸ್ತುಗಳನ್ನು ಪರಿಶೀಲನೆಗೆ ಒಳಪಡಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಅಧಿಕಾರಿಗಳು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.
ಅರಣ್ಯ ಸಂಪತ್ತಿನ ರಕ್ಷಣೆಗಾಗಿ ಇಲಾಖೆ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದ್ದು, ವನ್ಯಜೀವಿಗಳ ಬೇಟೆ ಹಾಗೂ ಅಕ್ರಮ ಚಟುವಟಿಕೆಗಳಲ್ಲಿ ತೊಡಗುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.