ಕ್ರೈಂ News

Discover the latest headlines in this section.

ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಹೊಸ ತಿರುವು: 9 ಆರೋಪಿಗಳು ಜೈಲು ಪಾಲು

ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಹೊಸ ತಿರುವು: 9 ಆರೋಪಿಗಳು ಜೈಲು ಪಾಲು

ದಾವಣಗೆರೆ:ಚನ್ನಗಿರಿ ತಾಲೂಕಿನ ಬಸವಾಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಹಿಳೆಯೊಬ್ಬರ ಮೇಲೆ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಬಂಧಿತರಾಗಿದ್ದ 9 ಆರೋಪಿಗಳನ್ನು ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಪ್ರಕರಣದಲ್ಲಿ ಭಾಗಿಯಾಗಿದ್ದ ಮತ್ತೋರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ರಿಮ್ಯಾಂಡ್ ಹೋಂಗೆ ಕಳುಹಿಸಲಾಗಿದೆ.ಜೂನ್ 3ರಂದು ನಡೆದಿದ್ದ ಈ ಅಮಾನವೀಯ ಕೃತ್ಯದ ವಿಡಿಯೋವನ್ನು ಆರೋಪಿಗಳು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದು, ಬಳಿಕ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು ಎನ್ನಲಾಗಿದೆ. ಈ ಕುರಿತು ದೂರು ದಾಖಲಾಗುತ್ತಿದ್ದಂತೆ ಬಸವಾಪಟ್ಟಣ ಪೊಲೀಸರು ತ್ವರಿತ ಕಾರ್ಯಾಚರಣೆ ನಡೆಸಿ ಬಾಲಕ ಸೇರಿದಂತೆ ಒಟ್ಟು 10 ಮಂದಿಯನ್ನು ಬಂಧಿಸಿದ್ದರು.ಬಂಧಿತ 9 ಆರೋಪಿಗಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ಬಳಿಕ ದಾವಣಗೆರೆಯ 1ನೇ ಹೆಚ್ಚುವರಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ವಿಚಾರಣೆ ನಡೆಸಿದ ನ್ಯಾಯಾಲಯವು ಆರೋಪಿಗಳಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಜಿಲ್ಲಾ ಕಾರಾಗೃಹಕ್ಕೆ ಕಳುಹಿಸುವಂತೆ ಆದೇಶಿಸಿತು.ಪ್ರಕರಣ ಬೆಳಕಿಗೆ ಬಂದ ಬಳಿಕ ಆರೋಪಿಗಳು ತಮ್ಮ ಮೊಬೈಲ್‌ಗಳಲ್ಲಿ ಇದ್ದ ವಿಡಿಯೋ ಹಾಗೂ ಫೋಟೋಗಳನ್ನು ಅಳಿಸಿ ಸಾಕ್ಷ್ಯ ನಾಶಪಡಿಸಲು ಯತ್ನಿಸಿದ್ದರೆಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ಈ ಹಿನ್ನೆಲೆ ಡಿಜಿಟಲ್ ಸಾಕ್ಷ್ಯ ಸಂಗ್ರಹ ಹಾಗೂ ಹೆಚ್ಚಿನ ತನಿಖೆಗಾಗಿ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ಪಡೆಯಲು ತನಿಖಾ ತಂಡ ಮುಂದಾಗಿದೆ.ಘಟನೆ ಜಿಲ್ಲೆಯಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

Jun 11, 2026 | 03:04 AM
119 0
ಆಸ್ತಿಗಾಗಿ ತಂದೆಯ ಹತ್ಯೆ: ಶವ ತುಂಡರಿಸಿ ಪೂಜಾ ಕೊಠಡಿಯಲ್ಲಿ ಬಚ್ಚಿಟ್ಟ ಮಕ್ಕಳಿಗೆ ಗಲ್ಲು ಶಿಕ್ಷೆ

ಆಸ್ತಿಗಾಗಿ ತಂದೆಯ ಹತ್ಯೆ: ಶವ ತುಂಡರಿಸಿ ಪೂಜಾ ಕೊಠಡಿಯಲ್ಲಿ ಬಚ್ಚಿಟ್ಟ ಮಕ್ಕಳಿಗೆ ಗಲ್ಲು ಶಿಕ್ಷೆ

ಹೈದರಾಬಾದ್:ಆಸ್ತಿ ಮತ್ತು ಪಿಂಚಣಿ ಹಣದ ಆಸೆಗೆ ಹೆತ್ತ ತಂದೆಯನ್ನೇ ವಿಷ ನೀಡಿ ಕೊಂದು, ಬಳಿಕ ಶವವನ್ನು ತುಂಡು ತುಂಡು ಮಾಡಿ ಬಕೆಟ್‌ಗಳಲ್ಲಿ ತುಂಬಿ ಮನೆಯ ಪೂಜಾ ಕೊಠಡಿಯಲ್ಲಿ ಬಚ್ಚಿಟ್ಟಿದ್ದ ಮಗ ಹಾಗೂ ಮಗಳಿಗೆ ನ್ಯಾಯಾಲಯ ಮರಣದಂಡನೆ ವಿಧಿಸಿದೆ. ಈ ಕೃತ್ಯಕ್ಕೆ ಸಹಕರಿಸಿದ್ದ ತಾಯಿಗೆ ಜೀವಾವಧಿ ಶಿಕ್ಷೆ ನೀಡಲಾಗಿದೆ.ತೆಲಂಗಾಣದ ಮೇಡ್ಚಲ್–ಮಲ್ಕಾಜಿಗಿರಿ ಜಿಲ್ಲಾ ನ್ಯಾಯಾಲಯವು ಏಳು ವರ್ಷಗಳ ಸುದೀರ್ಘ ವಿಚಾರಣೆಯ ಬಳಿಕ ಈ ಮಹತ್ವದ ತೀರ್ಪು ಪ್ರಕಟಿಸಿದೆ.ಪ್ರಕರಣದ ಪ್ರಕಾರ, ರೈಲ್ವೆ ಇಲಾಖೆಯಿಂದ ನಿವೃತ್ತರಾಗಿದ್ದ ಮಹಾರಾಷ್ಟ್ರ ಮೂಲದ ಮಾರುತಿ ಸುತಾರ ಅವರು ತಮ್ಮ ಕುಟುಂಬದೊಂದಿಗೆ ಮಲ್ಕಾಜಿಗಿರಿಯ ಕೃಷ್ಣಾನಗರದಲ್ಲಿ ವಾಸಿಸುತ್ತಿದ್ದರು. ಉದ್ಯೋಗವಿಲ್ಲದೆ ಮನೆಯಲ್ಲೇ ಇದ್ದ ಮಗ ಕಿಶನ್ ಹಾಗೂ ಮಗಳು ಪ್ರಫುಲ್ಲಾ ಹಣಕ್ಕಾಗಿ ತಂದೆಯ ಮೇಲೆ ಒತ್ತಡ ಹೇರುತ್ತಿದ್ದರು. ಆದರೆ ಪಿಂಚಣಿ ಹಣವನ್ನು ಮಕ್ಕಳ ಹೆಸರಿಗೆ ವರ್ಗಾಯಿಸಲು ಮಾರುತಿ ನಿರಾಕರಿಸಿದ್ದರಿಂದ ಕುಟುಂಬದಲ್ಲೇ ವೈಮನಸ್ಸು ಉಂಟಾಗಿತ್ತು.ತಂದೆಯನ್ನು ಹೇಗೆ ಹತ್ಯೆ ಮಾಡಬೇಕು ಎಂಬ ಕುರಿತು ಮಗಳು ಯೂಟ್ಯೂಬ್‌ನಲ್ಲಿ ಮಾಹಿತಿ ಹುಡುಕಿ, ಉಮ್ಮತ್ತಿ ಬೀಜಗಳ ವಿಷವನ್ನು ಆಹಾರದಲ್ಲಿ ಬೆರೆಸಿ ಹಲವು ದಿನಗಳ ಕಾಲ ನೀಡಿದ್ದಾಳೆ ಎನ್ನಲಾಗಿದೆ. ಇದರ ಪರಿಣಾಮವಾಗಿ 2019ರ ಆಗಸ್ಟ್ 16ರಂದು ಮಾರುತಿ ಮೃತಪಟ್ಟಿದ್ದರು.ಸಾಕ್ಷ್ಯಗಳನ್ನು ನಾಶಪಡಿಸುವ ಉದ್ದೇಶದಿಂದ ಮಗ ಮತ್ತು ಮಗಳು ಸೇರಿ ಶವವನ್ನು ಹಲವು ತುಂಡುಗಳಾಗಿ ಕತ್ತರಿಸಿ ಬಕೆಟ್‌ಗಳಲ್ಲಿ ತುಂಬಿ ಮನೆಯ ಪೂಜಾ ಕೊಠಡಿಯಲ್ಲಿ ಅಡಗಿಸಿದ್ದರು. ದುರ್ವಾಸನೆ ಬಾರದಂತೆ ಅಗರಬತ್ತಿ ಮತ್ತು ಸುಗಂಧ ದ್ರವ್ಯಗಳನ್ನು ಬಳಸುತ್ತಿದ್ದರು ಎಂದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.ಎರಡು ದಿನಗಳ ಬಳಿಕ ಶವದ ತುಂಡುಗಳನ್ನು ಚರಂಡಿಗೆ ಎಸೆಯಲು ಯತ್ನಿಸಿದ ವೇಳೆ ದುರ್ವಾಸನೆಯಿಂದ ಸ್ಥಳೀಯರಿಗೆ ಅನುಮಾನ ಮೂಡಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಪ್ರಕರಣ ಬಹಿರಂಗಗೊಂಡು ಮೂವರನ್ನೂ ಬಂಧಿಸಲಾಗಿತ್ತು.ಪ್ರಕರಣದ ಅಂತಿಮ ವಿಚಾರಣೆ ನಡೆಸಿದ ನ್ಯಾಯಾಧೀಶ ವಿ. ಬಾಲಭಾಸ್ಕರ್ ರಾವ್ ಅವರು, ಅಪರೂಪದ ಮತ್ತು ಅತ್ಯಂತ ಕ್ರೂರ ಸ್ವರೂಪದ ಅಪರಾಧವೆಂದು ಪರಿಗಣಿಸಿ ಮಗ ಕಿಶನ್ ಹಾಗೂ ಮಗಳು ಪ್ರಫುಲ್ಲಾಗೆ ಮರಣದಂಡನೆ ವಿಧಿಸಿದ್ದಾರೆ. ಕೊಲೆಗೆ ಸಹಕರಿಸಿದ್ದ ತಾಯಿ ಗಂಗಾಬಾಯಿಗೆ ವಯಸ್ಸಿನ ಆಧಾರದ ಮೇಲೆ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದ್ದಾರೆ.ಈ ತೀರ್ಪು ತೆಲಂಗಾಣ ರಾಜ್ಯದ ಇತ್ತೀಚಿನ ವರ್ಷಗಳಲ್ಲಿನ ಅತ್ಯಂತ ಗಮನಾರ್ಹ ಕ್ರಿಮಿನಲ್ ಪ್ರಕರಣಗಳಲ್ಲೊಂದು ಎಂದು ಪರಿಗಣಿಸಲಾಗಿದೆ.

Jun 11, 2026 | 01:59 AM
38 0
ಪ್ರಿಯಕರನ ಜೊತೆ ಬಾಳಲು 6 ವರ್ಷದ ಮಗಳನ್ನೇ ಕೊಂದ ತಾಯಿ?; ಮೂರು ತಿಂಗಳ ಬಳಿಕ FIR ದಾಖಲು

ಪ್ರಿಯಕರನ ಜೊತೆ ಬಾಳಲು 6 ವರ್ಷದ ಮಗಳನ್ನೇ ಕೊಂದ ತಾಯಿ?; ಮೂರು ತಿಂಗಳ ಬಳಿಕ FIR ದಾಖಲು

ಬೆಂಗಳೂರು:ಪ್ರಿಯಕರನೊಂದಿಗೆ ಜೀವನ ನಡೆಸುವ ಉದ್ದೇಶದಿಂದ ತಾಯಿಯೇ ತನ್ನ 6 ವರ್ಷದ ಮಗಳನ್ನು ಕೊಲೆ ಮಾಡಿರುವ ಆರೋಪ ಕೇಳಿಬಂದಿದ್ದು, ಘಟನೆ ನಡೆದ ಸುಮಾರು ಮೂರು ತಿಂಗಳ ಬಳಿಕ ಪ್ರಕರಣ ದಾಖಲಾಗಿರುವುದು ಬೆಳಕಿಗೆ ಬಂದಿದೆ.ಬೆಂಗಳೂರಿನ ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಈ ಪ್ರಕರಣದಲ್ಲಿ ವೆನ್ನಿಲಾ ಎಂಬ 6 ವರ್ಷದ ಬಾಲಕಿಯ ಸಾವಿನ ಸಂಬಂಧ ತಾಯಿ ಪ್ರಿಯಾಂಕ ಹಾಗೂ ಆಕೆಯ ಪ್ರಿಯಕರ ಮೋಹನ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮೃತ ಬಾಲಕಿಯ ತಂದೆ ಪ್ರವೀಣ್ ನೀಡಿದ ದೂರಿನ ಮೇರೆಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.ದಾವಣಗೆರೆ ಮೂಲದ ಪ್ರವೀಣ್ ಹಾಗೂ ಬೆಂಗಳೂರಿನ ಪ್ರಿಯಾಂಕ ಅವರು 2007ರಲ್ಲಿ ವಿವಾಹವಾಗಿದ್ದರು. ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಹಿರಿಯ ಮಗಳಿಗೆ 17 ವರ್ಷ ಹಾಗೂ ಕಿರಿಯ ಮಗಳಿಗೆ 6 ವರ್ಷ ವಯಸ್ಸಾಗಿತ್ತು. ಕೆಲ ವರ್ಷಗಳ ಹಿಂದೆ ಪ್ರಿಯಾಂಕಗೆ ತನ್ನ ಕಾಲೇಜು ಸ್ನೇಹಿತ ಮೋಹನ್ ಮತ್ತೆ ಪರಿಚಯವಾಗಿದ್ದು, ನಂತರ ಇಬ್ಬರ ನಡುವೆ ಆಪ್ತತೆ ಬೆಳೆದು ಲಿವ್-ಇನ್ ಸಂಬಂಧದಲ್ಲಿ ವಾಸಿಸುತ್ತಿದ್ದರು ಎನ್ನಲಾಗಿದೆ.ಈ ವಿಚಾರವಾಗಿ ಪತಿ ಪ್ರಶ್ನಿಸಿದಾಗ ಪ್ರಿಯಾಂಕ ವಿಚ್ಛೇದನಕ್ಕಾಗಿ ಒತ್ತಾಯಿಸುತ್ತಿದ್ದಳು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಬಳಿಕ ಪ್ರಿಯಾಂಕ ಹಾಗೂ ಮೋಹನ್ ಕಾಡುಗೋಡಿಯಲ್ಲಿ ವಾಸವಾಗಿದ್ದು, ಕಿರಿಯ ಮಗಳು ವೆನ್ನಿಲಾ ಕೂಡ ಅವರೊಂದಿಗೇ ಇದ್ದಳು.ಕಳೆದ ಮಾರ್ಚ್ 24ರಂದು ಬಾಲಕಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಳು. ಮಗಳ ಸಾವಿನ ಕುರಿತು ವಿಚಾರಿಸಿದಾಗ, ಒಮ್ಮೆ ಬಿರಿಯಾನಿ ತಿನ್ನಿಸಿದ್ದೆ, ಮತ್ತೊಮ್ಮೆ ಐಸ್‌ಕ್ರೀಂ ಕೊಟ್ಟು ಕಾರಿನಲ್ಲಿ ಎಸಿ ಹಾಕಿ ಮಲಗಿಸಿದ್ದೆ. ನಂತರ ಮನೆಗೆ ಬಂದ ಮೇಲೆ ಬೆಳಿಗ್ಗೆ ನೋಡಿದಾಗ ಮಗು ಮೃತಪಟ್ಟಿತ್ತು ಎಂದು ಪ್ರಿಯಾಂಕ ತಿಳಿಸಿದ್ದಳು ಎನ್ನಲಾಗಿದೆ.ಆದರೆ ಬಾಲಕಿಯ ಮರಣೋತ್ತರ ಪರೀಕ್ಷೆಯ ವರದಿಯನ್ನು ವಿದೇಶದಲ್ಲಿರುವ ಸಂಬಂಧಿ ವೈದ್ಯೆಗೆ ಕಳುಹಿಸಿದಾಗ, ಸಾವಿನ ಹಿಂದೆ ಅನುಮಾನಾಸ್ಪದ ಅಂಶಗಳಿರುವ ಸಾಧ್ಯತೆ ಇದೆ ಎಂದು ತಿಳಿಸಿದ್ದರಿಂದ ತಂದೆ ಪ್ರವೀಣ್ ಪೊಲೀಸರಿಗೆ ದೂರು ನೀಡಿದ್ದಾರೆ.ತಾಯಿ ಪ್ರಿಯಾಂಕ ಹಾಗೂ ಆಕೆಯ ಪ್ರಿಯಕರ ಮೋಹನ್ ಮಗುವಿಗೆ ಹಲ್ಲೆ ನಡೆಸಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಮಗುವಿನ ಬಣ್ಣದ ಕಾರಣಕ್ಕೂ ತಾಯಿಗೆ ಅಸಮಾಧಾನವಿದ್ದು, ಅಕ್ರಮ ಸಂಬಂಧಕ್ಕೆ ಮಗು ಅಡ್ಡಿಯಾಗಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.ಪ್ರಕರಣ ದಾಖಲಿಸಿಕೊಂಡಿರುವ ಕಾಡುಗೋಡಿ ಪೊಲೀಸರು ಮೋಹನ್‌ನನ್ನು ಬಂಧಿಸಿದ್ದು, ತಲೆಮರೆಸಿಕೊಂಡಿರುವ ಪ್ರಿಯಾಂಕಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ. ಇದೇ ವೇಳೆ ಬಾಲಕಿಯ FSL ವರದಿಗಾಗಿ ಪೊಲೀಸರು ಕಾಯುತ್ತಿದ್ದು, ವರದಿ ಬಂದ ಬಳಿಕ ಪ್ರಕರಣದ ನಿಜಾಂಶ ಮತ್ತಷ್ಟು ಸ್ಪಷ್ಟವಾಗುವ ನಿರೀಕ್ಷೆಯಿದೆ.ಸದ್ಯ ಪ್ರಕರಣದ ತನಿಖೆ ಮುಂದುವರಿದಿದೆ.

Jun 6, 2026 | 11:33 AM
299 0
ಟೀ ಕುಡಿಯಲು ತೆರಳುತ್ತಿದ್ದ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರಕ್ಕೆ ಯತ್ನ: ಆರೋಪಿ ಬಂಧನ

ಟೀ ಕುಡಿಯಲು ತೆರಳುತ್ತಿದ್ದ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರಕ್ಕೆ ಯತ್ನ: ಆರೋಪಿ ಬಂಧನ

ಬೆಂಗಳೂರು: ಟೀ ಕುಡಿಯಲು ತೆರಳುತ್ತಿದ್ದ ವಿದ್ಯಾರ್ಥಿನಿಯೊಬ್ಬಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಬೆಂಗಳೂರಿನ ವೈಟ್‌ಫೀಲ್ಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.ಮಾಹಿತಿಯ ಪ್ರಕಾರ, ವಿದ್ಯಾರ್ಥಿನಿಯೊಬ್ಬಳು ಬೆಳಗಿನ ಜಾವ ತನ್ನ ಪಿಜಿಯಿಂದ ಹೊರಬಂದು ಟೀ ಕುಡಿಯಲು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ದುಷ್ಕರ್ಮಿಯೊಬ್ಬ ಆಕೆಯನ್ನು ಗಮನಿಸಿದ್ದಾನೆ. ಬಳಿಕ ಯುವತಿಯನ್ನು ಬಲವಂತವಾಗಿ ಎತ್ತಿಕೊಂಡು ಹೋಗಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎನ್ನಲಾಗಿದೆ.ಈ ವೇಳೆ ಯುವತಿ ಜೋರಾಗಿ ಕಿರುಚಿಕೊಂಡಿದ್ದು, ಆಕೆಯ ಕಿರುಚಾಟ ಕೇಳಿದ ಸ್ಥಳೀಯರು ಹಾಗೂ ಸುತ್ತಮುತ್ತಲಿನ ನಿವಾಸಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. ಜನರು ಬರುತ್ತಿರುವುದನ್ನು ಗಮನಿಸಿದ ಆರೋಪಿ ಅಲ್ಲಿಂದ ಪರಾರಿಯಾಗಿದ್ದಾನೆ.ಘಟನೆಯ ಬಳಿಕ ವಿದ್ಯಾರ್ಥಿನಿ ವೈಟ್‌ಫೀಲ್ಡ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ತನಿಖೆ ಕೈಗೊಂಡ ಪೊಲೀಸರು ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಬಂಧಿತ ಆರೋಪಿಯನ್ನು ಸೈಬುಲ್ ಎಂದು ಗುರುತಿಸಲಾಗಿದ್ದು, ಆತ ರಸ್ತೆ ಬದಿಯಲ್ಲಿ ಕಸ ಹಾಗೂ ಕಬ್ಬಿಣ ಸಂಗ್ರಹಿಸುವ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಒಂಟಿಯಾಗಿ ತೆರಳುತ್ತಿದ್ದ ಯುವತಿಯನ್ನು ಕಂಡು ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.ಪ್ರಕರಣ ದಾಖಲಿಸಿಕೊಂಡ ವೈಟ್‌ಫೀಲ್ಡ್ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದು, ಘಟನೆಯ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.

Jun 4, 2026 | 08:13 AM
126 0
ಖಾತೆ ಬದಲಾವಣೆಗೆ ₹25 ಸಾವಿರ ಲಂಚ: ನಗರಸಭೆ ಅಧಿಕಾರಿಗಳು ಲೋಕಾಯುಕ್ತ ಬಲೆಗೆ

ಖಾತೆ ಬದಲಾವಣೆಗೆ ₹25 ಸಾವಿರ ಲಂಚ: ನಗರಸಭೆ ಅಧಿಕಾರಿಗಳು ಲೋಕಾಯುಕ್ತ ಬಲೆಗೆ

ಪಬ್ಲಿಕ್ ರೈಡ್ ಚಾಮರಾಜನಗರ:ಖಾತೆ ಬದಲಾವಣೆ ಮಾಡಿಕೊಡುವ ಸಂಬಂಧ ಲಂಚ ಸ್ವೀಕರಿಸುತ್ತಿದ್ದ ವೇಳೆ ಚಾಮರಾಜನಗರ ನಗರಸಭೆಯ ಇಬ್ಬರು ಅಧಿಕಾರಿಗಳು ಹಾಗೂ ಓರ್ವ ಮಧ್ಯವರ್ತಿಯನ್ನು ಲೋಕಾಯುಕ್ತ ಅಧಿಕಾರಿಗಳು ಬಲೆಗೆ ಬೀಳಿಸಿ ಬಂಧಿಸಿರುವ ಘಟನೆ ಬೆಳಕಿಗೆ ಬಂದಿದೆ.ನಗರಸಭೆಯ ಕಂದಾಯ ಅಧಿಕಾರಿ ಹೇಮಂತಕುಮಾರ್, ಕಂದಾಯ ನಿರೀಕ್ಷಕ ಶಕೀಲ್ ಅಹಮದ್ ಹಾಗೂ ಮಧ್ಯವರ್ತಿ ಹಬೀಬ್ ಬಂಧಿತ ಆರೋಪಿಗಳಾಗಿದ್ದಾರೆ.ಮೀಸೆ ನಾಗರಾಜು ಎಂಬುವರ ಖಾತೆ ಬದಲಾವಣೆ ಪ್ರಕ್ರಿಯೆಗಾಗಿ ₹25 ಸಾವಿರ ಲಂಚ ನೀಡುವಂತೆ ಆರೋಪಿಗಳು ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಈ ಕುರಿತು ನಾಗರಾಜು ಅವರು ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಿದ್ದರು.ದೂರಿನ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಅಧಿಕಾರಿಗಳು, ಲಂಚದ ಹಣ ಸ್ವೀಕರಿಸುತ್ತಿದ್ದ ವೇಳೆ ದಾಳಿ ನಡೆಸಿ ಆರೋಪಿಗಳನ್ನು ರೆಡ್‌ಹ್ಯಾಂಡ್ ಆಗಿ ಬಂಧಿಸಿದ್ದಾರೆ.ಬಂಧಿತರಿಂದ ಲಂಚದ ಹಣವನ್ನು ವಶಪಡಿಸಿಕೊಂಡಿರುವ ಅಧಿಕಾರಿಗಳು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.ಈ ಘಟನೆ ನಗರಸಭೆ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರದ ವಿರುದ್ಧ ಲೋಕಾಯುಕ್ತ ಇಲಾಖೆ ನಡೆಸುತ್ತಿರುವ ಕಾರ್ಯಾಚರಣೆಗೆ ಮತ್ತೊಂದು ಯಶಸ್ಸು ಸಿಕ್ಕಂತಾಗಿದೆ.

Jun 3, 2026 | 03:30 AM
61 0
ಪ್ರಿಯಕರನ ಕೈಯಲ್ಲಿ ಮಹಿಳೆಯ ದಾರುಣ ಹತ್ಯೆ: ಐದು ದಿನಗಳಲ್ಲಿ ಪ್ರಕರಣ ಭೇದಿಸಿದ ಪೊಲೀಸರು

ಪ್ರಿಯಕರನ ಕೈಯಲ್ಲಿ ಮಹಿಳೆಯ ದಾರುಣ ಹತ್ಯೆ: ಐದು ದಿನಗಳಲ್ಲಿ ಪ್ರಕರಣ ಭೇದಿಸಿದ ಪೊಲೀಸರು

ವಾರಂಗಲ್: ಜಿಲ್ಲೆಯ ದುಗ್ಗೊಂಡಿ ಮಂಡಲದಲ್ಲಿ ಸಂಚಲನ ಸೃಷ್ಟಿಸಿದ್ದ ಮಹಿಳೆಯ ಹತ್ಯೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಅನೈತಿಕ ಸಂಬಂಧದ ಅನುಮಾನವೇ ಕೊಲೆಗೆ ಕಾರಣ ಎಂಬ ಅಂಶ ತನಿಖೆಯಲ್ಲಿ ಬೆಳಕಿಗೆ ಬಂದಿದೆ.ಮೃತ ಮಹಿಳೆಯನ್ನು ದುಗ್ಗೊಂಡಿ ಮಂಡಲದ ಲಕ್ಷ್ಮೀಪುರಂ ಗ್ರಾಮದ ಸುಮಲತಾ ಎಂದು ಗುರುತಿಸಲಾಗಿದೆ. ಐದು ವರ್ಷಗಳ ಹಿಂದೆ ಪತಿಯನ್ನು ಕಳೆದುಕೊಂಡಿದ್ದ ಸುಮಲತಾ ತನ್ನ ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದು, ಪತಿಯ ಸಾವಿನ ಬಳಿಕ ಸುರೇಶ್ ಎಂಬಾತನೊಂದಿಗೆ ಸಹಜೀವನ ನಡೆಸುತ್ತಿದ್ದಳು ಎಂದು ತಿಳಿದುಬಂದಿದೆ.ಪೊಲೀಸರ ತನಿಖೆ ಪ್ರಕಾರ, ಸುಮಲತಾ ತನ್ನನ್ನು ಬಿಟ್ಟು ಮತ್ತೊಬ್ಬ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿದ್ದಾಳೆ ಎಂಬ ಅನುಮಾನ ಸುರೇಶ್‌ಗೆ ಇತ್ತು. ಇದೇ ವಿಚಾರವಾಗಿ ಕಳೆದ ಕೆಲವು ದಿನಗಳಿಂದ ಇಬ್ಬರ ನಡುವೆ ಪದೇ ಪದೇ ಜಗಳಗಳು ನಡೆಯುತ್ತಿದ್ದವು ಎನ್ನಲಾಗಿದೆ.ಈ ಹಿನ್ನೆಲೆಯಲ್ಲಿ ಕೋಪಗೊಂಡ ಸುರೇಶ್, ಸುಮಲತಾಳನ್ನು ಕೊಲೆ ಮಾಡಲು ಸಂಚು ರೂಪಿಸಿದ್ದಾನೆ. ಯೋಜನೆಯಂತೆ ಆಕೆಯನ್ನು ಗ್ರಾಮದ ಹೊರವಲಯದಲ್ಲಿರುವ ಎಸ್‌ಆರ್‌ಎಸ್‌ಪಿ ಕಾಲುವೆ ಬಳಿ ಕರೆದುಕೊಂಡು ಹೋಗಿ, ಚಾಕುವಿನಿಂದ ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ವಿಶೇಷ ತನಿಖೆ ನಡೆಸಿ, ಕೇವಲ ಐದು ದಿನಗಳಲ್ಲೇ ಹತ್ಯೆಯ ಹಿಂದಿನ ಸತ್ಯಾಂಶವನ್ನು ಬಹಿರಂಗಪಡಿಸಿದ್ದಾರೆ. ಆರೋಪಿ ಸುರೇಶ್‌ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.ಈ ಘಟನೆ ವಾರಂಗಲ್ ಜಿಲ್ಲೆಯಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಸಂಬಂಧಗಳಲ್ಲಿ ಮೂಡುವ ಅನುಮಾನ ಮತ್ತು ವೈಮನಸ್ಸು ಎಂತಹ ದುರ್ಘಟನೆಗಳಿಗೆ ಕಾರಣವಾಗಬಹುದು ಎಂಬುದಕ್ಕೆ ಮತ್ತೊಂದು ಉದಾಹರಣೆಯಾಗಿದೆ.

Jun 2, 2026 | 04:09 AM
225 0
ದಾರಿ ಕೇಳುವ ನೆಪದಲ್ಲಿ ಚಿನ್ನದ ಸರ ಕಳವು: ಇಬ್ಬರು ಆರೋಪಿಗಳ ಬಂಧನ

ದಾರಿ ಕೇಳುವ ನೆಪದಲ್ಲಿ ಚಿನ್ನದ ಸರ ಕಳವು: ಇಬ್ಬರು ಆರೋಪಿಗಳ ಬಂಧನ

ಕೋಲಾರ,: ದಾರಿ ಕೇಳುವ ನೆಪದಲ್ಲಿ ವ್ಯಕ್ತಿಯೊಬ್ಬರ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಕಳವು ಮಾಡಿ ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಕೋಲಾರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಮೇ 16ರಂದು ಕೋಲಾರದ ಗಾಂಧಿನಗರ ನಿವಾಸಿ ಶಿವಶಂಕರ್ ಅವರು ಶ್ಯಾನಬೋಗನಹಳ್ಳಿ ರಸ್ತೆಯಲ್ಲಿ ಸಂಚರಿಸುತ್ತಿದ್ದ ವೇಳೆ, ಬೈಕ್‌ನಲ್ಲಿ ಬಂದ ಇಬ್ಬರು ಯುವಕರು ಶ್ಯಾನಬೋಗನಹಳ್ಳಿಗೆ ಹೋಗುವ ದಾರಿ ಯಾವುದು ಎಂದು ಕೇಳಿದ್ದಾರೆ. ಈ ವೇಳೆ ಶಿವಶಂಕರ್ ಅವರು ಬೈಕ್ ನಿಲ್ಲಿಸಿ ದಾರಿ ತಿಳಿಸುತ್ತಿದ್ದಾಗ, ಆರೋಪಿಗಳು ಅವರ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಕಸಿದುಕೊಂಡು ಪರಾರಿಯಾಗಿದ್ದರು.ಈ ಕುರಿತು ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಂಡ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು. ತನಿಖೆಯ ವೇಳೆ ಬೆಂಗಳೂರಿನ ಮೂಲದ ಹೇಮಂತ್ ಮತ್ತು ಆದರ್ಶ್ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.ಬಂಧಿತರಿಂದ ಸುಮಾರು 23 ಗ್ರಾಂ ತೂಕದ ಚಿನ್ನದ ಸರ ಹಾಗೂ ಕೃತ್ಯಕ್ಕೆ ಬಳಸಿದ್ದ ಬೈಕ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.ಪ್ರಕರಣದ ಯಶಸ್ವಿ ಭೇದನೆಗಾಗಿ ಕೋಲಾರ ಗ್ರಾಮಾಂತರ ಠಾಣೆ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

May 31, 2026 | 05:31 AM
153 0
ಹಣ ವಸೂಲಾತಿ ಹೆಸರಿನಲ್ಲಿ ಮನೆಗೆ ನುಗ್ಗಿ ಕಿರುಕುಳ ಆರೋಪ: ಅಮರಗೋಳದಲ್ಲಿ ಉದ್ವಿಗ್ನತೆ

ಹಣ ವಸೂಲಾತಿ ಹೆಸರಿನಲ್ಲಿ ಮನೆಗೆ ನುಗ್ಗಿ ಕಿರುಕುಳ ಆರೋಪ: ಅಮರಗೋಳದಲ್ಲಿ ಉದ್ವಿಗ್ನತೆ

ಹುಬ್ಬಳ್ಳಿ:ನಗರದ ಹೊರವಲಯದ ಅಮರಗೋಳ ಗ್ರಾಮದ ಹೊಸಪೇಟೆ ಓಣಿಯಲ್ಲಿ ಮಹಿಳೆಯೊಬ್ಬರ ಮನೆಗೆ ನುಗ್ಗಿ ಹಣ ವಸೂಲಾತಿ ಸಿಬ್ಬಂದಿ ಕಿರುಕುಳ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.ಸುವರ್ಣ ಎಂಬ ಮಹಿಳೆ ಈ ಕುರಿತು ಆರೋಪ ಮಾಡಿದ್ದು, ಬಜಾಜ್ ಫೈನಾನ್ಸ್‌ನ ಸಾಲದ ಹಣ ವಸೂಲಾತಿಗೆ ಬಂದಿದ್ದ ವ್ಯಕ್ತಿಗಳು ತಮ್ಮ ಮನೆಗೆ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು ಮಾತ್ರವಲ್ಲದೆ ಬೆದರಿಕೆ ಹಾಕಿದ್ದಾರೆ ಎಂದು ದೂರಿದ್ದಾರೆ.ಮಹಿಳೆಯ ಆರೋಪದ ಪ್ರಕಾರ, ವಸೂಲಾತಿಗೆ ಬಂದಿದ್ದ ರಾಹುಲ್ ಹಾಗೂ ಆತನ ಸಹಚರರು "ದುಡ್ಡು ಕಟ್ಟದಿದ್ದರೆ ನಿಮ್ಮ ಸೀರೆ ಕೊಡಿ, ಇಲ್ಲವೇ ನಿಮ್ಮ ಮನೆಯಲ್ಲಿ ಸಾಯುತ್ತೇನೆ" ಎಂಬ ರೀತಿಯ ಮಾತುಗಳನ್ನಾಡಿ ಮಾನಸಿಕ ಕಿರುಕುಳ ನೀಡಿದ್ದಾರೆ ಎನ್ನಲಾಗಿದೆ.ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆಯೇ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ. ಬಳಿಕ ಹಣ ವಸೂಲಾತಿಗೆ ಬಂದಿದ್ದ ರಾಹುಲ್ ಮತ್ತು ಆತನ ಸಹಚರರನ್ನು ಹೆಚ್ಚಿನ ವಿಚಾರಣೆಗಾಗಿ ಠಾಣೆಗೆ ಕರೆದುಕೊಂಡು ಹೋಗಲಾಗಿದೆ.ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಮಹಿಳೆ ಮಾಡಿದ ಆರೋಪಗಳ ಸತ್ಯಾಸತ್ಯತೆ ಕುರಿತು ತನಿಖೆ ಮುಂದುವರಿದಿದೆ. ತನಿಖೆಯ ಬಳಿಕವೇ ಘಟನೆಯ ಸಂಪೂರ್ಣ ವಿವರ ಹಾಗೂ ವಾಸ್ತವಾಂಶ ಹೊರಬರಬೇಕಿದೆ.ಈ ಘಟನೆ ಅಮರಗೋಳ ಗ್ರಾಮದಲ್ಲಿ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಸಿದ್ದು, ಸಾಲ ವಸೂಲಾತಿ ಪ್ರಕ್ರಿಯೆಯಲ್ಲಿ ನಿಯಮಗಳನ್ನು ಪಾಲಿಸುವ ಅಗತ್ಯದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

May 30, 2026 | 02:53 PM
140 0
ಯಶವಂತಪುರದಲ್ಲಿ ಅಬಕಾರಿ ಇಲಾಖೆ ಬಿಗ್ ರೇಡ್: ₹17.10 ಲಕ್ಷ ಮೌಲ್ಯದ ನಕಲಿ ಮದ್ಯ ವಶ!

ಯಶವಂತಪುರದಲ್ಲಿ ಅಬಕಾರಿ ಇಲಾಖೆ ಬಿಗ್ ರೇಡ್: ₹17.10 ಲಕ್ಷ ಮೌಲ್ಯದ ನಕಲಿ ಮದ್ಯ ವಶ!

ಬೆಂಗಳೂರು: ಯಶವಂತಪುರ ರೈಲ್ವೆ ಪಾರ್ಸಲ್ ಯಾರ್ಡ್‌ನಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಭಾರಿ ಪ್ರಮಾಣದ ಶಂಕಿತ ನಕಲಿ ವಿದೇಶಿ ಮದ್ಯವನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಹಾಗೂ ರೈಲ್ವೆ ರಕ್ಷಣಾ ಪಡೆ (RPF) ಸಿಬ್ಬಂದಿ ಜಂಟಿಯಾಗಿ ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ.ದೆಹಲಿ ಮೂಲದಿಂದ ಬಂದ ಗೂಡ್ಸ್ ರೈಲಿನ ಪಾರ್ಸಲ್‌ಗಳನ್ನು ಪರಿಶೀಲನೆ ನಡೆಸಿದ ವೇಳೆ 17 ಬಾಕ್ಸ್‌ಗಳಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಪ್ರೀಮಿಯಂ ಬ್ರಾಂಡ್‌ನ 285 ಸಿಂಗಲ್ ಮಾಲ್ಟ್ ವಿಸ್ಕಿ ಬಾಟಲಿಗಳು ಪತ್ತೆಯಾಗಿವೆ. ಒಟ್ಟು 231 ಲೀಟರ್ ಮದ್ಯವನ್ನು ಅಧಿಕಾರಿಗಳು ಜಪ್ತಿ ಮಾಡಿದ್ದು, ಇದರ ಮೌಲ್ಯ ಸುಮಾರು ₹17.10 ಲಕ್ಷ ಎಂದು ಅಂದಾಜಿಸಲಾಗಿದೆ.ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಅಬಕಾರಿ ಅಧಿಕಾರಿಗಳು, ನಕಲಿ ಮದ್ಯವನ್ನು ರಾಜ್ಯಕ್ಕೆ ಸಾಗಿಸಲಾಗುತ್ತಿತ್ತೇ ಅಥವಾ ಬೇರೆಡೆ ವಿತರಣೆಗಾಗಿ ತರಲಾಗಿತ್ತೇ ಎಂಬ ಕುರಿತು ತನಿಖೆ ಆರಂಭಿಸಿದ್ದಾರೆ.ಈ ಅಕ್ರಮ ಜಾಲದ ಹಿಂದೆ ಯಾರು ಇದ್ದಾರೆ? ಮದ್ಯವನ್ನು ಯಾರು ಕಳುಹಿಸಿದ್ದರು? ಯಾರಿಗೆ ತಲುಪಬೇಕಿತ್ತು? ಎಂಬ ಎಲ್ಲಾ ಆಯಾಮಗಳ ಬಗ್ಗೆ ತನಿಖೆ ಮುಂದುವರಿದಿದೆ. ಪ್ರಕರಣ ದಾಖಲಿಸಿಕೊಂಡಿರುವ ಅಧಿಕಾರಿಗಳು, ಈ ದಂಧೆಯ ಕಿಂಗ್‌ಪಿನ್ ಪತ್ತೆಗೆ ಮುಂದಾಗಿದ್ದಾರೆ.ಅಬಕಾರಿ ಇಲಾಖೆ ಹಾಗೂ RPF ಸಿಬ್ಬಂದಿಯ ಈ ಜಂಟಿ ಕಾರ್ಯಾಚರಣೆ ಯಶಸ್ವಿಯಾಗಿದ್ದು, ದೊಡ್ಡ ಮಟ್ಟದ ಅಕ್ರಮ ಮದ್ಯ ಜಾಲವೊಂದನ್ನು ಬಯಲಿಗೆಳೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

May 28, 2026 | 09:36 AM
42 0
ವಿದೇಶದಿಂದ ಸ್ನಾಕ್ಸ್ ಬಾಕ್ಸ್‌ನಲ್ಲಿ ಡ್ರಗ್ಸ್ ಸಾಗಣೆ: 3 ಕೋಟಿ ಮೌಲ್ಯದ ಹೈಡ್ರೋ ಗಾಂಜಾ ಸೀಜ್

ವಿದೇಶದಿಂದ ಸ್ನಾಕ್ಸ್ ಬಾಕ್ಸ್‌ನಲ್ಲಿ ಡ್ರಗ್ಸ್ ಸಾಗಣೆ: 3 ಕೋಟಿ ಮೌಲ್ಯದ ಹೈಡ್ರೋ ಗಾಂಜಾ ಸೀಜ್

ಬೆಂಗಳೂರು:ನಗರದಲ್ಲಿ ಮಾದಕ ದ್ರವ್ಯ ಜಾಲದ ವಿರುದ್ಧ ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ವಿದೇಶಗಳಿಂದ ಪಾರ್ಸೆಲ್ ಮೂಲಕ ತರಲಾಗುತ್ತಿದ್ದ ಕೋಟಿ ಕೋಟಿ ಮೌಲ್ಯದ ಹೈಡ್ರೋ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.ಬೆಂಗಳೂರಿನ ಫಾರಿನ್ ಪೋಸ್ಟ್ ಆಫೀಸ್‌ಗೆ ಬಂದಿದ್ದ ಪಾರ್ಸೆಲ್‌ಗಳ ಮೇಲೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು, ಸ್ನಾಕ್ಸ್ ಬಾಕ್ಸ್‌ಗಳಲ್ಲಿ ಅಡಗಿಸಿ ಸಾಗಿಸಲಾಗುತ್ತಿದ್ದ ಡ್ರಗ್ ಪತ್ತೆ ಹಚ್ಚಿದ್ದಾರೆ. ಕಾರ್ಯಾಚರಣೆಯಲ್ಲಿ ಸುಮಾರು 3 ಕೋಟಿ ರೂಪಾಯಿ ಮೌಲ್ಯದ 3 ಕೆಜಿ 312 ಗ್ರಾಂ ಹೈಡ್ರೋ ಗಾಂಜಾವನ್ನು ಸೀಜ್ ಮಾಡಲಾಗಿದೆ.ಪ್ರಾಥಮಿಕ ತನಿಖೆಯಲ್ಲಿ ಅಮೆರಿಕಾ ಹಾಗೂ ಥೈಲ್ಯಾಂಡ್‌ನಿಂದ ಈ ಮಾದಕ ವಸ್ತುಗಳನ್ನು ಪಾರ್ಸೆಲ್ ಮೂಲಕ ಕಳುಹಿಸಲಾಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ಡ್ರಗ್ ಜಾಲದ ಹಿಂದಿರುವ ಆರೋಪಿಗಳ ಬಗ್ಗೆ ಸಿಸಿಬಿ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.ಸ್ನಾಕ್ಸ್ ಪ್ಯಾಕೆಟ್‌ಗಳ ಹೆಸರಿನಲ್ಲಿ ಮಾದಕ ವಸ್ತುಗಳನ್ನು ಅಡಗಿಸಿ ನಗರಕ್ಕೆ ಸಾಗಿಸಲು ಯತ್ನಿಸಿದ್ದ ಜಾಲವನ್ನು ಪತ್ತೆ ಹಚ್ಚಿರುವುದು ಪೊಲೀಸರ ಮಹತ್ವದ ಕಾರ್ಯಾಚರಣೆಯಾಗಿ ಪರಿಗಣಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಸಿಸಿಬಿ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

May 26, 2026 | 01:24 PM
115 0
ಕೆಆರ್ ಪುರ ಅಪೋಲೋ ಆಸ್ಪತ್ರೆಯಲ್ಲಿ ಮಹಿಳೆ ಫೋಟೋ-ವೀಡಿಯೋ ಚಿತ್ರೀಕರಣ ಆರೋಪ: ಆಡಳಿತ ಮಂಡಳಿ ವಿರುದ್ಧ FIR

ಕೆಆರ್ ಪುರ ಅಪೋಲೋ ಆಸ್ಪತ್ರೆಯಲ್ಲಿ ಮಹಿಳೆ ಫೋಟೋ-ವೀಡಿಯೋ ಚಿತ್ರೀಕರಣ ಆರೋಪ: ಆಡಳಿತ ಮಂಡಳಿ ವಿರುದ್ಧ FIR

ಬೆಂಗಳೂರು: ಕೆಆರ್ ಪುರ ವ್ಯಾಪ್ತಿಯ ಸರ್ಜಾಪುರ ರಸ್ತೆಯಲ್ಲಿರುವ ಪ್ರತಿಷ್ಠಿತ ಅಪೋಲೋ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರ ಶೌಚಾಲಯದ ಗೌಪ್ಯತೆ ಭಂಗಕ್ಕೆ ಯತ್ನ ನಡೆದಿರುವ ಆರೋಪ ಕೇಳಿಬಂದಿದ್ದು, ಆಸ್ಪತ್ರೆ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವಿರುದ್ಧ ವರ್ತೂರು ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.ಮ್ಯಾಥ್ಯೂ ಎಂಬ ಮಹಿಳೆ ನೀಡಿದ ದೂರಿನ ಅನ್ವಯ ಆಸ್ಪತ್ರೆಯ ಹೌಸ್ ಕೀಪಿಂಗ್ ಸಿಬ್ಬಂದಿ ಕೃಷ್ಣರಾಮ ಹಾಗೂ ಆಸ್ಪತ್ರೆ ಆಡಳಿತ ಮಂಡಳಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮಹಿಳೆ ಶೌಚಾಲಯದಲ್ಲಿದ್ದ ವೇಳೆ ಸಿಬ್ಬಂದಿ ಅನುಮಾನಾಸ್ಪದವಾಗಿ ವರ್ತಿಸಿ, ಮೊಬೈಲ್ ಮೂಲಕ ಫೋಟೋ ಹಾಗೂ ವೀಡಿಯೋ ಚಿತ್ರೀಕರಣ ಮಾಡಲು ಯತ್ನಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.ಘಟನೆ ಕುರಿತು ಮಾಹಿತಿ ಪಡೆದ ವರ್ತೂರು ಪೊಲೀಸರು ಆರೋಪಿಯ ಮೊಬೈಲ್ ವಶಪಡಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ. ಪ್ರಾಥಮಿಕ ತಪಾಸಣೆಯಲ್ಲಿ ಯಾವುದೇ ಫೋಟೋ ಅಥವಾ ವೀಡಿಯೋ ಪತ್ತೆಯಾಗದ ಹಿನ್ನೆಲೆ, ಮೊಬೈಲ್ ಅನ್ನು ಹೆಚ್ಚಿನ ತಾಂತ್ರಿಕ ಪರಿಶೀಲನೆಗಾಗಿ FSLಗೆ ರವಾನಿಸಲಾಗಿದೆ.ಈ ಪ್ರಕರಣ ಸಂಬಂಧ ಅಪೋಲೋ ಆಸ್ಪತ್ರೆ ಆಡಳಿತ ಮಂಡಳಿಗೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದು, ಘಟನೆ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.

May 26, 2026 | 04:43 AM
66 0
ಧಾರವಾಡದಲ್ಲಿ ಅಕ್ರಮ ಗೋವು ಕಸಾಯಿಖಾನೆ ಮೇಲೆ ಬಜರಂಗದಳ ದಾಳಿ

ಧಾರವಾಡದಲ್ಲಿ ಅಕ್ರಮ ಗೋವು ಕಸಾಯಿಖಾನೆ ಮೇಲೆ ಬಜರಂಗದಳ ದಾಳಿ

ಧಾರವಾಡ: ಜಿಲ್ಲೆಯ ಉಪ್ಪಿನ ಬೆಟಗೇರಿ ಪ್ರದೇಶದ ಕಟುಕರ ಓಣಿಯಲ್ಲಿ ಅಕ್ರಮವಾಗಿ ಹಸು, ಆಕಳು ಹಾಗೂ ಕರುಗಳನ್ನು ಕಡಿದು ಮಾಂಸ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆ, ಬಜರಂಗದಳ ಕಾರ್ಯಕರ್ತರು ಸ್ಥಳಕ್ಕೆ ದಾಳಿ ನಡೆಸಿದ ಘಟನೆ ನಡೆದಿದೆ.ದಾಳಿಯ ವೇಳೆ ಸ್ಥಳದಲ್ಲಿ ಗೋವುಗಳ ಚರ್ಮ, ಮಾಂಸ ಸೇರಿದಂತೆ ವಿವಿಧ ಅವಶೇಷಗಳನ್ನು ಬಕೆಟ್ ಹಾಗೂ ಬ್ಯಾರೆಲ್‌ಗಳಲ್ಲಿ ಸಂಗ್ರಹಿಸಿಟ್ಟಿರುವುದು ಕಂಡುಬಂದಿದೆ ಎಂದು ಕಾರ್ಯಕರ್ತರು ಆರೋಪಿಸಿದ್ದಾರೆ. ಸ್ಥಳದಲ್ಲಿದ್ದ ದೃಶ್ಯಗಳನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಘಟನೆ ಕುರಿತು ಮಾಹಿತಿ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳದಲ್ಲಿದ್ದ ಮಾಂಸ ಹಾಗೂ ಇತರೆ ವಸ್ತುಗಳನ್ನು ವಶಕ್ಕೆ ಪಡೆದು ತನಿಖೆ ಆರಂಭಿಸಿರುವುದಾಗಿ ತಿಳಿದುಬಂದಿದೆ.ಈ ಪ್ರಕರಣ ಸಂಬಂಧವಾಗಿ ಅಕ್ರಮ ಗೋಹತ್ಯೆ ಮತ್ತು ಕಾನೂನುಬಾಹಿರ ಚಟುವಟಿಕೆಗಳ ಕುರಿತು ಕ್ರಮ ಕೈಗೊಳ್ಳುವಂತೆ ಬಜರಂಗದಳ ಕಾರ್ಯಕರ್ತರು ಒತ್ತಾಯಿಸಿದ್ದಾರೆ. ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.ಪ್ರಕರಣ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.

May 25, 2026 | 02:55 PM
80 0