ಬೆಂಗಳೂರು: ಯಶವಂತಪುರ ರೈಲ್ವೆ ಪಾರ್ಸಲ್ ಯಾರ್ಡ್‌ನಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಭಾರಿ ಪ್ರಮಾಣದ ಶಂಕಿತ ನಕಲಿ ವಿದೇಶಿ ಮದ್ಯವನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಹಾಗೂ ರೈಲ್ವೆ ರಕ್ಷಣಾ ಪಡೆ (RPF) ಸಿಬ್ಬಂದಿ ಜಂಟಿಯಾಗಿ ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ.
ದೆಹಲಿ ಮೂಲದಿಂದ ಬಂದ ಗೂಡ್ಸ್ ರೈಲಿನ ಪಾರ್ಸಲ್‌ಗಳನ್ನು ಪರಿಶೀಲನೆ ನಡೆಸಿದ ವೇಳೆ 17 ಬಾಕ್ಸ್‌ಗಳಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಪ್ರೀಮಿಯಂ ಬ್ರಾಂಡ್‌ನ 285 ಸಿಂಗಲ್ ಮಾಲ್ಟ್ ವಿಸ್ಕಿ ಬಾಟಲಿಗಳು ಪತ್ತೆಯಾಗಿವೆ. ಒಟ್ಟು 231 ಲೀಟರ್ ಮದ್ಯವನ್ನು ಅಧಿಕಾರಿಗಳು ಜಪ್ತಿ ಮಾಡಿದ್ದು, ಇದರ ಮೌಲ್ಯ ಸುಮಾರು ₹17.10 ಲಕ್ಷ ಎಂದು ಅಂದಾಜಿಸಲಾಗಿದೆ.
ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಅಬಕಾರಿ ಅಧಿಕಾರಿಗಳು, ನಕಲಿ ಮದ್ಯವನ್ನು ರಾಜ್ಯಕ್ಕೆ ಸಾಗಿಸಲಾಗುತ್ತಿತ್ತೇ ಅಥವಾ ಬೇರೆಡೆ ವಿತರಣೆಗಾಗಿ ತರಲಾಗಿತ್ತೇ ಎಂಬ ಕುರಿತು ತನಿಖೆ ಆರಂಭಿಸಿದ್ದಾರೆ.
ಈ ಅಕ್ರಮ ಜಾಲದ ಹಿಂದೆ ಯಾರು ಇದ್ದಾರೆ? ಮದ್ಯವನ್ನು ಯಾರು ಕಳುಹಿಸಿದ್ದರು? ಯಾರಿಗೆ ತಲುಪಬೇಕಿತ್ತು? ಎಂಬ ಎಲ್ಲಾ ಆಯಾಮಗಳ ಬಗ್ಗೆ ತನಿಖೆ ಮುಂದುವರಿದಿದೆ. ಪ್ರಕರಣ ದಾಖಲಿಸಿಕೊಂಡಿರುವ ಅಧಿಕಾರಿಗಳು, ಈ ದಂಧೆಯ ಕಿಂಗ್‌ಪಿನ್ ಪತ್ತೆಗೆ ಮುಂದಾಗಿದ್ದಾರೆ.
ಅಬಕಾರಿ ಇಲಾಖೆ ಹಾಗೂ RPF ಸಿಬ್ಬಂದಿಯ ಈ ಜಂಟಿ ಕಾರ್ಯಾಚರಣೆ ಯಶಸ್ವಿಯಾಗಿದ್ದು, ದೊಡ್ಡ ಮಟ್ಟದ ಅಕ್ರಮ ಮದ್ಯ ಜಾಲವೊಂದನ್ನು ಬಯಲಿಗೆಳೆಯುವ ಸಾಧ್ಯತೆ ಇದೆ ಎಂದು ಮೂಲಗಳು
ತಿಳಿಸಿವೆ.