ಕ್ರೈಂ

ಆಸ್ತಿಗಾಗಿ ತಂದೆಯ ಹತ್ಯೆ: ಶವ ತುಂಡರಿಸಿ ಪೂಜಾ ಕೊಠಡಿಯಲ್ಲಿ ಬಚ್ಚಿಟ್ಟ ಮಕ್ಕಳಿಗೆ ಗಲ್ಲು ಶಿಕ್ಷೆ

ಮೂಲಕ News Desk | ಪ್ರಕಟಿಸಲಾಗಿದೆ June 11, 2026 June 11, 2026 | 01:59 AM 16 ವೀಕ್ಷಣೆಗಳು

ಹೈದರಾಬಾದ್:ಆಸ್ತಿ ಮತ್ತು ಪಿಂಚಣಿ ಹಣದ ಆಸೆಗೆ ಹೆತ್ತ ತಂದೆಯನ್ನೇ ವಿಷ ನೀಡಿ ಕೊಂದು, ಬಳಿಕ ಶವವನ್ನು ತುಂಡು ತುಂಡು ಮಾಡಿ ಬಕೆಟ್‌ಗಳಲ್ಲಿ ತುಂಬಿ ಮನೆಯ ಪೂಜಾ ಕೊಠಡಿಯಲ್ಲಿ ಬಚ್ಚಿಟ್ಟಿದ್ದ ಮಗ ಹಾಗೂ ಮಗಳಿಗೆ ನ್ಯಾಯಾಲಯ ಮರಣದಂಡನೆ ವಿಧಿಸಿದೆ. ಈ ಕೃತ್ಯಕ್ಕೆ ಸಹಕರಿಸಿದ್ದ ತಾಯಿಗೆ ಜೀವಾವಧಿ ಶಿಕ್ಷೆ ನೀಡಲಾಗಿದೆ.

ತೆಲಂಗಾಣದ ಮೇಡ್ಚಲ್–ಮಲ್ಕಾಜಿಗಿರಿ ಜಿಲ್ಲಾ ನ್ಯಾಯಾಲಯವು ಏಳು ವರ್ಷಗಳ ಸುದೀರ್ಘ ವಿಚಾರಣೆಯ ಬಳಿಕ ಈ ಮಹತ್ವದ ತೀರ್ಪು ಪ್ರಕಟಿಸಿದೆ.


ಪ್ರಕರಣದ ಪ್ರಕಾರ, ರೈಲ್ವೆ ಇಲಾಖೆಯಿಂದ ನಿವೃತ್ತರಾಗಿದ್ದ ಮಹಾರಾಷ್ಟ್ರ ಮೂಲದ ಮಾರುತಿ ಸುತಾರ ಅವರು ತಮ್ಮ ಕುಟುಂಬದೊಂದಿಗೆ ಮಲ್ಕಾಜಿಗಿರಿಯ ಕೃಷ್ಣಾನಗರದಲ್ಲಿ ವಾಸಿಸುತ್ತಿದ್ದರು. ಉದ್ಯೋಗವಿಲ್ಲದೆ ಮನೆಯಲ್ಲೇ ಇದ್ದ ಮಗ ಕಿಶನ್ ಹಾಗೂ ಮಗಳು ಪ್ರಫುಲ್ಲಾ ಹಣಕ್ಕಾಗಿ ತಂದೆಯ ಮೇಲೆ ಒತ್ತಡ ಹೇರುತ್ತಿದ್ದರು. ಆದರೆ ಪಿಂಚಣಿ ಹಣವನ್ನು ಮಕ್ಕಳ ಹೆಸರಿಗೆ ವರ್ಗಾಯಿಸಲು ಮಾರುತಿ ನಿರಾಕರಿಸಿದ್ದರಿಂದ ಕುಟುಂಬದಲ್ಲೇ ವೈಮನಸ್ಸು ಉಂಟಾಗಿತ್ತು.

ತಂದೆಯನ್ನು ಹೇಗೆ ಹತ್ಯೆ ಮಾಡಬೇಕು ಎಂಬ ಕುರಿತು ಮಗಳು ಯೂಟ್ಯೂಬ್‌ನಲ್ಲಿ ಮಾಹಿತಿ ಹುಡುಕಿ, ಉಮ್ಮತ್ತಿ ಬೀಜಗಳ ವಿಷವನ್ನು ಆಹಾರದಲ್ಲಿ ಬೆರೆಸಿ ಹಲವು ದಿನಗಳ ಕಾಲ ನೀಡಿದ್ದಾಳೆ ಎನ್ನಲಾಗಿದೆ. ಇದರ ಪರಿಣಾಮವಾಗಿ 2019ರ ಆಗಸ್ಟ್ 16ರಂದು ಮಾರುತಿ ಮೃತಪಟ್ಟಿದ್ದರು.


ಸಾಕ್ಷ್ಯಗಳನ್ನು ನಾಶಪಡಿಸುವ ಉದ್ದೇಶದಿಂದ ಮಗ ಮತ್ತು ಮಗಳು ಸೇರಿ ಶವವನ್ನು ಹಲವು ತುಂಡುಗಳಾಗಿ ಕತ್ತರಿಸಿ ಬಕೆಟ್‌ಗಳಲ್ಲಿ ತುಂಬಿ ಮನೆಯ ಪೂಜಾ ಕೊಠಡಿಯಲ್ಲಿ ಅಡಗಿಸಿದ್ದರು. ದುರ್ವಾಸನೆ ಬಾರದಂತೆ ಅಗರಬತ್ತಿ ಮತ್ತು ಸುಗಂಧ ದ್ರವ್ಯಗಳನ್ನು ಬಳಸುತ್ತಿದ್ದರು ಎಂದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಎರಡು ದಿನಗಳ ಬಳಿಕ ಶವದ ತುಂಡುಗಳನ್ನು ಚರಂಡಿಗೆ ಎಸೆಯಲು ಯತ್ನಿಸಿದ ವೇಳೆ ದುರ್ವಾಸನೆಯಿಂದ ಸ್ಥಳೀಯರಿಗೆ ಅನುಮಾನ ಮೂಡಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಪ್ರಕರಣ ಬಹಿರಂಗಗೊಂಡು ಮೂವರನ್ನೂ ಬಂಧಿಸಲಾಗಿತ್ತು.

ಪ್ರಕರಣದ ಅಂತಿಮ ವಿಚಾರಣೆ ನಡೆಸಿದ ನ್ಯಾಯಾಧೀಶ ವಿ. ಬಾಲಭಾಸ್ಕರ್ ರಾವ್ ಅವರು, ಅಪರೂಪದ ಮತ್ತು ಅತ್ಯಂತ ಕ್ರೂರ ಸ್ವರೂಪದ ಅಪರಾಧವೆಂದು ಪರಿಗಣಿಸಿ ಮಗ ಕಿಶನ್ ಹಾಗೂ ಮಗಳು ಪ್ರಫುಲ್ಲಾಗೆ ಮರಣದಂಡನೆ ವಿಧಿಸಿದ್ದಾರೆ. ಕೊಲೆಗೆ ಸಹಕರಿಸಿದ್ದ ತಾಯಿ ಗಂಗಾಬಾಯಿಗೆ ವಯಸ್ಸಿನ ಆಧಾರದ ಮೇಲೆ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದ್ದಾರೆ.

ಈ ತೀರ್ಪು ತೆಲಂಗಾಣ ರಾಜ್ಯದ ಇತ್ತೀಚಿನ ವರ್ಷಗಳಲ್ಲಿನ ಅತ್ಯಂತ ಗಮನಾರ್ಹ ಕ್ರಿಮಿನಲ್ ಪ್ರಕರಣಗಳಲ್ಲೊಂದು ಎಂದು ಪರಿಗಣಿಸಲಾಗಿದೆ.