ಕ್ರೈಂ

ಕೆಆರ್ ಪುರ ಅಪೋಲೋ ಆಸ್ಪತ್ರೆಯಲ್ಲಿ ಮಹಿಳೆ ಫೋಟೋ-ವೀಡಿಯೋ ಚಿತ್ರೀಕರಣ ಆರೋಪ: ಆಡಳಿತ ಮಂಡಳಿ ವಿರುದ್ಧ FIR

ಮೂಲಕ News Desk | ಪ್ರಕಟಿಸಲಾಗಿದೆ May 26, 2026 May 26, 2026 | 04:43 AM 40 ವೀಕ್ಷಣೆಗಳು


ಬೆಂಗಳೂರು: ಕೆಆರ್ ಪುರ ವ್ಯಾಪ್ತಿಯ ಸರ್ಜಾಪುರ ರಸ್ತೆಯಲ್ಲಿರುವ ಪ್ರತಿಷ್ಠಿತ ಅಪೋಲೋ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರ ಶೌಚಾಲಯದ ಗೌಪ್ಯತೆ ಭಂಗಕ್ಕೆ ಯತ್ನ ನಡೆದಿರುವ ಆರೋಪ ಕೇಳಿಬಂದಿದ್ದು, ಆಸ್ಪತ್ರೆ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವಿರುದ್ಧ ವರ್ತೂರು ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.

ಮ್ಯಾಥ್ಯೂ ಎಂಬ ಮಹಿಳೆ ನೀಡಿದ ದೂರಿನ ಅನ್ವಯ ಆಸ್ಪತ್ರೆಯ ಹೌಸ್ ಕೀಪಿಂಗ್ ಸಿಬ್ಬಂದಿ ಕೃಷ್ಣರಾಮ ಹಾಗೂ ಆಸ್ಪತ್ರೆ ಆಡಳಿತ ಮಂಡಳಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮಹಿಳೆ ಶೌಚಾಲಯದಲ್ಲಿದ್ದ ವೇಳೆ ಸಿಬ್ಬಂದಿ ಅನುಮಾನಾಸ್ಪದವಾಗಿ ವರ್ತಿಸಿ, ಮೊಬೈಲ್ ಮೂಲಕ ಫೋಟೋ ಹಾಗೂ ವೀಡಿಯೋ ಚಿತ್ರೀಕರಣ ಮಾಡಲು ಯತ್ನಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಘಟನೆ ಕುರಿತು ಮಾಹಿತಿ ಪಡೆದ ವರ್ತೂರು ಪೊಲೀಸರು ಆರೋಪಿಯ ಮೊಬೈಲ್ ವಶಪಡಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ. ಪ್ರಾಥಮಿಕ ತಪಾಸಣೆಯಲ್ಲಿ ಯಾವುದೇ ಫೋಟೋ ಅಥವಾ ವೀಡಿಯೋ ಪತ್ತೆಯಾಗದ ಹಿನ್ನೆಲೆ, ಮೊಬೈಲ್ ಅನ್ನು ಹೆಚ್ಚಿನ ತಾಂತ್ರಿಕ ಪರಿಶೀಲನೆಗಾಗಿ FSLಗೆ ರವಾನಿಸಲಾಗಿದೆ.

ಈ ಪ್ರಕರಣ ಸಂಬಂಧ ಅಪೋಲೋ ಆಸ್ಪತ್ರೆ ಆಡಳಿತ ಮಂಡಳಿಗೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದು, ಘಟನೆ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.