ಬೆಂಗಳೂರು:ಪ್ರಿಯಕರನೊಂದಿಗೆ ಜೀವನ ನಡೆಸುವ ಉದ್ದೇಶದಿಂದ ತಾಯಿಯೇ ತನ್ನ 6 ವರ್ಷದ ಮಗಳನ್ನು ಕೊಲೆ ಮಾಡಿರುವ ಆರೋಪ ಕೇಳಿಬಂದಿದ್ದು, ಘಟನೆ ನಡೆದ ಸುಮಾರು ಮೂರು ತಿಂಗಳ ಬಳಿಕ ಪ್ರಕರಣ ದಾಖಲಾಗಿರುವುದು ಬೆಳಕಿಗೆ ಬಂದಿದೆ.
ಬೆಂಗಳೂರಿನ ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಈ ಪ್ರಕರಣದಲ್ಲಿ ವೆನ್ನಿಲಾ ಎಂಬ 6 ವರ್ಷದ ಬಾಲಕಿಯ ಸಾವಿನ ಸಂಬಂಧ ತಾಯಿ ಪ್ರಿಯಾಂಕ ಹಾಗೂ ಆಕೆಯ ಪ್ರಿಯಕರ ಮೋಹನ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮೃತ ಬಾಲಕಿಯ ತಂದೆ ಪ್ರವೀಣ್ ನೀಡಿದ ದೂರಿನ ಮೇರೆಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ದಾವಣಗೆರೆ ಮೂಲದ ಪ್ರವೀಣ್ ಹಾಗೂ ಬೆಂಗಳೂರಿನ ಪ್ರಿಯಾಂಕ ಅವರು 2007ರಲ್ಲಿ ವಿವಾಹವಾಗಿದ್ದರು. ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಹಿರಿಯ ಮಗಳಿಗೆ 17 ವರ್ಷ ಹಾಗೂ ಕಿರಿಯ ಮಗಳಿಗೆ 6 ವರ್ಷ ವಯಸ್ಸಾಗಿತ್ತು. ಕೆಲ ವರ್ಷಗಳ ಹಿಂದೆ ಪ್ರಿಯಾಂಕಗೆ ತನ್ನ ಕಾಲೇಜು ಸ್ನೇಹಿತ ಮೋಹನ್ ಮತ್ತೆ ಪರಿಚಯವಾಗಿದ್ದು, ನಂತರ ಇಬ್ಬರ ನಡುವೆ ಆಪ್ತತೆ ಬೆಳೆದು ಲಿವ್-ಇನ್ ಸಂಬಂಧದಲ್ಲಿ ವಾಸಿಸುತ್ತಿದ್ದರು ಎನ್ನಲಾಗಿದೆ.
ಈ ವಿಚಾರವಾಗಿ ಪತಿ ಪ್ರಶ್ನಿಸಿದಾಗ ಪ್ರಿಯಾಂಕ ವಿಚ್ಛೇದನಕ್ಕಾಗಿ ಒತ್ತಾಯಿಸುತ್ತಿದ್ದಳು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಬಳಿಕ ಪ್ರಿಯಾಂಕ ಹಾಗೂ ಮೋಹನ್ ಕಾಡುಗೋಡಿಯಲ್ಲಿ ವಾಸವಾಗಿದ್ದು, ಕಿರಿಯ ಮಗಳು ವೆನ್ನಿಲಾ ಕೂಡ ಅವರೊಂದಿಗೇ ಇದ್ದಳು.
ಕಳೆದ ಮಾರ್ಚ್ 24ರಂದು ಬಾಲಕಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಳು. ಮಗಳ ಸಾವಿನ ಕುರಿತು ವಿಚಾರಿಸಿದಾಗ, ಒಮ್ಮೆ ಬಿರಿಯಾನಿ ತಿನ್ನಿಸಿದ್ದೆ, ಮತ್ತೊಮ್ಮೆ ಐಸ್‌ಕ್ರೀಂ ಕೊಟ್ಟು ಕಾರಿನಲ್ಲಿ ಎಸಿ ಹಾಕಿ ಮಲಗಿಸಿದ್ದೆ. ನಂತರ ಮನೆಗೆ ಬಂದ ಮೇಲೆ ಬೆಳಿಗ್ಗೆ ನೋಡಿದಾಗ ಮಗು ಮೃತಪಟ್ಟಿತ್ತು ಎಂದು ಪ್ರಿಯಾಂಕ ತಿಳಿಸಿದ್ದಳು ಎನ್ನಲಾಗಿದೆ.
ಆದರೆ ಬಾಲಕಿಯ ಮರಣೋತ್ತರ ಪರೀಕ್ಷೆಯ ವರದಿಯನ್ನು ವಿದೇಶದಲ್ಲಿರುವ ಸಂಬಂಧಿ ವೈದ್ಯೆಗೆ ಕಳುಹಿಸಿದಾಗ, ಸಾವಿನ ಹಿಂದೆ ಅನುಮಾನಾಸ್ಪದ ಅಂಶಗಳಿರುವ ಸಾಧ್ಯತೆ ಇದೆ ಎಂದು ತಿಳಿಸಿದ್ದರಿಂದ ತಂದೆ ಪ್ರವೀಣ್ ಪೊಲೀಸರಿಗೆ ದೂರು ನೀಡಿದ್ದಾರೆ.
ತಾಯಿ ಪ್ರಿಯಾಂಕ ಹಾಗೂ ಆಕೆಯ ಪ್ರಿಯಕರ ಮೋಹನ್ ಮಗುವಿಗೆ ಹಲ್ಲೆ ನಡೆಸಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಮಗುವಿನ ಬಣ್ಣದ ಕಾರಣಕ್ಕೂ ತಾಯಿಗೆ ಅಸಮಾಧಾನವಿದ್ದು, ಅಕ್ರಮ ಸಂಬಂಧಕ್ಕೆ ಮಗು ಅಡ್ಡಿಯಾಗಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಪ್ರಕರಣ ದಾಖಲಿಸಿಕೊಂಡಿರುವ ಕಾಡುಗೋಡಿ ಪೊಲೀಸರು ಮೋಹನ್‌ನನ್ನು ಬಂಧಿಸಿದ್ದು, ತಲೆಮರೆಸಿಕೊಂಡಿರುವ ಪ್ರಿಯಾಂಕಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ. ಇದೇ ವೇಳೆ ಬಾಲಕಿಯ FSL ವರದಿಗಾಗಿ ಪೊಲೀಸರು ಕಾಯುತ್ತಿದ್ದು, ವರದಿ ಬಂದ ಬಳಿಕ ಪ್ರಕರಣದ ನಿಜಾಂಶ ಮತ್ತಷ್ಟು ಸ್ಪಷ್ಟವಾಗುವ ನಿರೀಕ್ಷೆಯಿದೆ.
ಸದ್ಯ ಪ್ರಕರಣದ ತನಿಖೆ ಮುಂದುವರಿದಿದೆ.