ಕ್ರೈಂ News

Discover the latest headlines in this section.

ಹಣದ ವಿಚಾರಕ್ಕೆ ಹಲ್ಲೆ: ಬೀದಿಬದಿ ವ್ಯಾಪಾರಿ ಸಾವು, ನಾಲ್ವರು ಆರೋಪಿಗಳು ಪರಾರಿ

ಹಣದ ವಿಚಾರಕ್ಕೆ ಹಲ್ಲೆ: ಬೀದಿಬದಿ ವ್ಯಾಪಾರಿ ಸಾವು, ನಾಲ್ವರು ಆರೋಪಿಗಳು ಪರಾರಿ

ಹಾವೇರಿ:ಜಿಲ್ಲೆಯ ರಟ್ಟಿಹಳ್ಳಿ ಪಟ್ಟಣದಲ್ಲಿ ಕ್ಷುಲ್ಲಕ ಕಾರಣಕ್ಕೆ ನಡೆದ ಹಲ್ಲೆಯಲ್ಲಿ ಬೀದಿಬದಿ ವ್ಯಾಪಾರಿಯೊಬ್ಬರು ಮೃತಪಟ್ಟಿರುವ ಘಟನೆ ನಡೆದಿದ್ದು, ಪಟ್ಟಣದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.ಮೃತರನ್ನು ರಟ್ಟಿಹಳ್ಳಿ ಪಟ್ಟಣದ ನಿವಾಸಿ ಶಿವಾಜಿರಾವ್ ಬೈರೋಜಿ (55) ಎಂದು ಗುರುತಿಸಲಾಗಿದೆ.ಪೊಲೀಸರ ಮಾಹಿತಿ ಪ್ರಕಾರ, ಶಿವಾಜಿರಾವ್ ಅವರ ಬೀದಿಬದಿ ಅಂಗಡಿಗೆ ನಾಲ್ವರು ಯುವಕರು ಮೊಟ್ಟೆ ಖರೀದಿಸಲು ಬಂದಿದ್ದರು. ಈ ವೇಳೆ ಹಣದ ಚಿಲ್ಲರೆ (ಚೇಂಜ್) ವಿಚಾರವಾಗಿ ಮಾತಿನ ಚಕಮಕಿ ನಡೆದಿದೆ. ಆರೋಪಿಗಳಲ್ಲಿ ಒಬ್ಬನಾದ ವಾಸೀಮ್, ತಾನು ₹500 ನೋಟು ನೀಡಿದ್ದೇನೆ ಎಂದು ಹೇಳಿದ್ದರೆ, ವ್ಯಾಪಾರಿಯ ಮಗ ₹100 ಮಾತ್ರ ನೀಡಲಾಗಿದೆ ಎಂದು ಪ್ರತಿಪಾದಿಸಿದ್ದಾನೆ.ಈ ವಿಚಾರವಾಗಿ ಗಲಾಟೆ ತೀವ್ರಗೊಂಡಿದ್ದು, ಜಗಳ ಬಿಡಿಸಲು ಮಧ್ಯಪ್ರವೇಶಿಸಿದ ಶಿವಾಜಿರಾವ್ ಅವರ ಮೇಲೆ ನಾಲ್ವರು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಹಲ್ಲೆಯ ವೇಳೆ ಎದೆಗೆ ಕಾಲಿನಿಂದ ಒದ್ದಿರುವ ಆರೋಪ ಕೇಳಿಬಂದಿದ್ದು, ಗಂಭೀರವಾಗಿ ಗಾಯಗೊಂಡ ಶಿವಾಜಿರಾವ್ ಅವರನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆಯೇ ಮೃತಪಟ್ಟಿದ್ದಾರೆ.ಪ್ರಕರಣಕ್ಕೆ ಸಂಬಂಧಿಸಿದಂತೆ ವಾಸೀಮ್ ಮುಲ್ಲಾ, ಸರ್ಫರಾಜ್ ಮುಲ್ಲಾ, ಸಾದಿಕ್ ಮುಲ್ಲಾ ಹಾಗೂ ಶಿರಾಜ್ ಮುಲ್ಲಾ ವಿರುದ್ಧ ಆರೋಪ ಕೇಳಿಬಂದಿದ್ದು, ಘಟನೆ ಬಳಿಕ ನಾಲ್ವರೂ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.ಮೃತರ ಪುತ್ರ ಭರತ್ ನೀಡಿದ ದೂರಿನ ಮೇರೆಗೆ ರಟ್ಟಿಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಬಂಧನಕ್ಕಾಗಿ ಪೊಲೀಸರು ವಿಶೇಷ ತಂಡಗಳನ್ನು ರಚಿಸಿ ಶೋಧ ಕಾರ್ಯ ನಡೆಸುತ್ತಿದ್ದಾರೆ.ಘಟನಾ ಸ್ಥಳಕ್ಕೆ ಐಜಿಪಿ ರವಿಕಾಂತೇಗೌಡ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ವಂಟಗೋಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.ಈ ಘಟನೆ ಹಿನ್ನೆಲೆಯಲ್ಲಿ ರಟ್ಟಿಹಳ್ಳಿ ಪಟ್ಟಣದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಪ್ರಕರಣದ ತನಿಖೆಯನ್ನು ಪೊಲೀಸರು ಮುಂದುವರಿಸಿದ್ದಾರೆ.

Jul 2, 2026 | 05:40 AM
160 0
ಅಪ್ರಾಪ್ತ ಆರೋಪಿಗಳ ಮೇಲೆ ಅಮಾನವೀಯ ಕೃತ್ಯ: ಪಿಎಸ್‌ಐ ಬಂಧನ, ಪೋಕ್ಸೊ ಸೇರಿದಂತೆ ವಿವಿಧ ಸೆಕ್ಷನ್‌ಗಳಡಿ ಪ್ರಕರಣ

ಅಪ್ರಾಪ್ತ ಆರೋಪಿಗಳ ಮೇಲೆ ಅಮಾನವೀಯ ಕೃತ್ಯ: ಪಿಎಸ್‌ಐ ಬಂಧನ, ಪೋಕ್ಸೊ ಸೇರಿದಂತೆ ವಿವಿಧ ಸೆಕ್ಷನ್‌ಗಳಡಿ ಪ್ರಕರಣ

ಬೆಂಗಳೂರು: ಕೊಲೆ ಪ್ರಕರಣದ ತನಿಖೆ ವೇಳೆ ಅಪ್ರಾಪ್ತ ಆರೋಪಿಗಳೊಂದಿಗೆ ಅಮಾನವೀಯವಾಗಿ ವರ್ತಿಸಿದ ಆರೋಪದ ಮೇಲೆ ಬೆಂಗಳೂರಿನ ಅಮೃತಹಳ್ಳಿ ಪೊಲೀಸ್ ಠಾಣೆಯ ಪಿಎಸ್‌ಐ ಪ್ರವೀಣ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.ಲಭ್ಯ ಮಾಹಿತಿಯ ಪ್ರಕಾರ, ಕೆಲವು ತಿಂಗಳ ಹಿಂದೆ ನಡೆದಿದ್ದ ಕೊಲೆ ಪ್ರಕರಣದಲ್ಲಿ ಬಂಧಿತರಾಗಿದ್ದ ಅಪ್ರಾಪ್ತ ಆರೋಪಿಗಳನ್ನು ಕಾನೂನು ಪ್ರಕ್ರಿಯೆಯಂತೆ ಪೊಲೀಸ್ ಠಾಣೆಗೆ ಕರೆತರುವ ಬದಲು, ಪಿಎಸ್‌ಐ ಪ್ರವೀಣ್ ಅವರು ಖಾಸಗಿ ಸ್ಥಳವೊಂದಕ್ಕೆ ಕರೆದೊಯ್ದು ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ.ಆರೋಪದ ಪ್ರಕಾರ, ಬಾಲಕರ ಮೇಲೆ ಬೆಲ್ಟ್‌ನಿಂದ ಹಲ್ಲೆ ನಡೆಸಿದಷ್ಟೇ ಅಲ್ಲದೆ, ಒಬ್ಬ ಬಾಲಕನಿಂದ ಇನ್ನೊಬ್ಬ ಬಾಲಕನ ಮೇಲೆ ಲೈಂಗಿಕ ಸ್ವರೂಪದ ಅವಮಾನಕರ ಕೃತ್ಯವನ್ನು ಬಲವಂತವಾಗಿ ಮಾಡಿಸಿದ್ದಾಗಿ ಹೇಳಲಾಗಿದೆ. ಈ ಘಟನೆಯನ್ನು ಪಿಎಸ್‌ಐ ತಮ್ಮ ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಿಸಿಕೊಂಡಿದ್ದಾರೆ ಎನ್ನಲಾಗಿದೆ.ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ವಿಷಯದ ಗಂಭೀರತೆಯನ್ನು ಪರಿಗಣಿಸಿದ ಹಿರಿಯ ಪೊಲೀಸ್ ಅಧಿಕಾರಿಗಳು ತಕ್ಷಣವೇ ತನಿಖೆಗೆ ಆದೇಶಿಸಿದ್ದಾರೆ.ಈ ಸಂಬಂಧ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಕ್ಕಳ ಮೇಲಿನ ಲೈಂಗಿಕ ಅಪರಾಧಗಳಿಂದ ರಕ್ಷಣೆ ಕಾಯ್ದೆ (ಪೋಕ್ಸೊ) ಸೇರಿದಂತೆ ಅನ್ವಯವಾಗುವ ವಿವಿಧ ಕಾನೂನು ಸೆಕ್ಷನ್‌ಗಳಡಿ ಪಿಎಸ್‌ಐ ಪ್ರವೀಣ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಬಳಿಕ ಅವರನ್ನು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ.ಘಟನೆಯು ಪೊಲೀಸ್ ಇಲಾಖೆಯಲ್ಲಿಯೇ ತೀವ್ರ ಚರ್ಚೆಗೆ ಕಾರಣವಾಗಿದ್ದು, ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿಯ ವಿರುದ್ಧ ಇಂತಹ ಗಂಭೀರ ಆರೋಪ ಕೇಳಿಬಂದಿರುವುದು ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ತನಿಖೆಯ ನಂತರ ಪ್ರಕರಣದ ನಿಜಾಂಶ ಹಾಗೂ ಆರೋಪಗಳ ಬಗ್ಗೆ ಇನ್ನಷ್ಟು ಮಾಹಿತಿ ಹೊರಬೀಳುವ ಸಾಧ್ಯತೆ ಇದೆ.

Jun 30, 2026 | 04:46 AM
82 0
ಮನೆಯ ಮಾಲೀಕರನ್ನೇ ವಂಚಿಸಿದ ಬಾಡಿಗೆದಾರರು: 45 ಗ್ರಾಂ ಚಿನ್ನ ಕಳವು – ದಂಪತಿ ಬಂಧನ

ಮನೆಯ ಮಾಲೀಕರನ್ನೇ ವಂಚಿಸಿದ ಬಾಡಿಗೆದಾರರು: 45 ಗ್ರಾಂ ಚಿನ್ನ ಕಳವು – ದಂಪತಿ ಬಂಧನ

ಮೈಸೂರು:ಮನೆಯ ಮಾಲೀಕರು ಊರಿಗೆ ತೆರಳಿದ್ದ ಸಂದರ್ಭವನ್ನು ದುರುಪಯೋಗಪಡಿಸಿಕೊಂಡ ಬಾಡಿಗೆದಾರರೇ ಮನೆಯಲ್ಲಿದ್ದ ಚಿನ್ನಾಭರಣ ಕಳವು ಮಾಡಿದ ಘಟನೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಆವರ್ತಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.ನಿವೃತ್ತ ಶಿಕ್ಷಕರಾದ ನಾಗಯ್ಯ ಹಾಗೂ ಮಂಜುಳಾ ಅವರು ಜೂನ್ 13ರಂದು ಮನೆಗೆ ಬೀಗ ಹಾಕಿ ಮೈಸೂರಿಗೆ ತೆರಳಿದ್ದರು. ಈ ವೇಳೆ ಮನೆಯಲ್ಲೇ ಬಾಡಿಗೆಗೆ ವಾಸವಾಗಿದ್ದ ಮಂಜುನಾಥ್ ಮತ್ತು ನಯನ ದಂಪತಿ ಮನೆಗೆ ನುಗ್ಗಿ ಬೀರುವಿನಲ್ಲಿ ಇಡಲಾಗಿದ್ದ ಸುಮಾರು 45 ಗ್ರಾಂ ತೂಕದ ಚಿನ್ನಾಭರಣವನ್ನು ಕಳವು ಮಾಡಿದ್ದಾರೆ ಎನ್ನಲಾಗಿದೆ.ಕಳವು ಮಾಡಿದ ಚಿನ್ನಾಭರಣವನ್ನು ಆರೋಪಿಗಳು ಆರ್ಟಿಕ್ ಗೋಲ್ಡ್ ಫೈನಾನ್ಸ್ ಸಂಸ್ಥೆಗೆ ಮಾರಾಟ ಮಾಡಿ ಸುಮಾರು ₹6 ರಿಂದ ₹8 ಲಕ್ಷ ಹಣ ಪಡೆದಿದ್ದು, ಆ ಹಣವನ್ನು ಬಚ್ಚಿಟ್ಟಿದ್ದರು ಎಂದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ.ಈ ಸಂಬಂಧ ಜೂನ್ 21ರಂದು ಬೈಲುಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡ ಪೊಲೀಸರು ತಾಂತ್ರಿಕ ಮಾಹಿತಿ ಹಾಗೂ ಇತರ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಆರೋಪಿಗಳಾದ ಮಂಜುನಾಥ್ ಮತ್ತು ನಯನ ದಂಪತಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಬಂಧಿತರಿಂದ ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿ ಕಲೆಹಾಕಲಾಗುತ್ತಿದ್ದು, ಕಳುವಾದ ಚಿನ್ನಾಭರಣ ಹಾಗೂ ಹಣದ ವಶಪಡಿಸಿಕೊಳ್ಳುವ ಪ್ರಕ್ರಿಯೆ ಮುಂದುವರಿದಿದೆ. ಪ್ರಕರಣದ ಕುರಿತು ಬೈಲುಕೊಪ್ಪ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Jun 27, 2026 | 10:02 AM
227 0
AI ದುರ್ಬಳಕೆಯಿಂದ ಗೃಹಿಣಿಗೆ ಕಿರುಕುಳ: ₹30 ಲಕ್ಷಕ್ಕೆ ಬೇಡಿಕೆ, ಅವಹೇಳನಕಾರಿ ಪೋಸ್ಟ್‌ಗಳಿಂದ ಆತ್ಮಹತ್ಯೆಗೆ ಯತ್ನ

AI ದುರ್ಬಳಕೆಯಿಂದ ಗೃಹಿಣಿಗೆ ಕಿರುಕುಳ: ₹30 ಲಕ್ಷಕ್ಕೆ ಬೇಡಿಕೆ, ಅವಹೇಳನಕಾರಿ ಪೋಸ್ಟ್‌ಗಳಿಂದ ಆತ್ಮಹತ್ಯೆಗೆ ಯತ್ನ

ಚಿಕ್ಕಮಗಳೂರು: ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ದುರ್ಬಳಕೆ ಮೂಲಕ ಗೃಹಿಣಿಯ ಫೋಟೋಗಳನ್ನು ಅಶ್ಲೀಲವಾಗಿ ಎಡಿಟ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿರುವ ಆಘಾತಕಾರಿ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನ ಬಾವಿಕೆರೆ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.ಆರೋಪಿಗಳು ಗೃಹಿಣಿಯ ಫೋಟೋಗಳನ್ನು ಮಾರ್ಪಡಿಸಿ ಮೊಬೈಲ್‌ಗೆ ಕಳುಹಿಸಿದ್ದು, ₹30 ಲಕ್ಷ ಹಣ ನೀಡದಿದ್ದರೆ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಹಣ ನೀಡಲು ನಿರಾಕರಿಸಿದ ನಂತರ ಇನ್‌ಸ್ಟಾಗ್ರಾಂನಲ್ಲಿ ನಕಲಿ ಖಾತೆ ಸೃಷ್ಟಿಸಿ ಎಡಿಟ್ ಮಾಡಿದ ಫೋಟೋಗಳನ್ನು ಹರಿಬಿಟ್ಟಿರುವ ಆರೋಪ ಕೇಳಿಬಂದಿದೆ.ಇದಷ್ಟೇ ಅಲ್ಲದೆ, ಗೃಹಿಣಿಯ ಭಾವಚಿತ್ರವನ್ನು ಬಳಸಿ “₹300ಕ್ಕೆ ಲಭ್ಯ” ಎಂಬ ಅವಹೇಳನಕಾರಿ ಬರಹದೊಂದಿಗೆ ಪೋಸ್ಟ್‌ಗಳನ್ನು ಅಪ್‌ಲೋಡ್ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಪೋಸ್ಟ್‌ಗಳು ವೈರಲ್ ಆಗುತ್ತಿದ್ದಂತೆ ತೀವ್ರ ಮನನೊಂದ ಗೃಹಿಣಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎಂದು ತಿಳಿದುಬಂದಿದೆ.ಈ ಕುರಿತು ಗೃಹಿಣಿಯ ಪತಿ ಲಕ್ಕವಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಬಾವಿಕೆರೆ ಗ್ರಾಮದ ಅಕ್ಷಯ್ ಹಾಗೂ ಸಾಹುಲ್ ಹಮೀದ್ ವಿರುದ್ಧ ಆರೋಪ ಮಾಡಿದ್ದಾರೆ. ಇದೇ ಆರೋಪಿಗಳು ಈ ಹಿಂದೆ ಮತ್ತೊಬ್ಬ ಮಹಿಳೆಗೆ ಸಹ ಇದೇ ರೀತಿಯ ಬೆದರಿಕೆ ಹಾಕಿ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂಬ ಆರೋಪವೂ ಕೇಳಿಬಂದಿದೆ.ದೂರಿನೊಂದಿಗೆ ಮೊಬೈಲ್ ಸಂಖ್ಯೆ ಸೇರಿದಂತೆ ಹಲವು ಸಾಕ್ಷ್ಯಾಧಾರಗಳನ್ನು ಪೊಲೀಸರಿಗೆ ಒದಗಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಲಕ್ಕವಳ್ಳಿ ಪೊಲೀಸರು ಆರೋಪಿಗಳ ಪತ್ತೆ ಹಾಗೂ ಬಂಧನಕ್ಕಾಗಿ ಕಾರ್ಯಾಚರಣೆ ಆರಂಭಿಸಿದ್ದು, ತನಿಖೆ ಮುಂದುವರಿದಿದೆ.AI ತಂತ್ರಜ್ಞಾನದ ದುರ್ಬಳಕೆಯಿಂದ ಮಹಿಳೆಯರ ಗೌರವ ಮತ್ತು ಖಾಸಗಿತನಕ್ಕೆ ಧಕ್ಕೆ ಉಂಟಾಗುತ್ತಿರುವ ಬಗ್ಗೆ ಈ ಘಟನೆ ಮತ್ತೊಮ್ಮೆ ಎಚ್ಚರಿಕೆಯ ಗಂಟೆ ಮೊಳಗಿಸಿದೆ.

Jun 25, 2026 | 02:38 AM
253 0
ಮೃತರು-ನಿವೃತ್ತರ ಹೆಸರಲ್ಲಿ ಹಣ ಲೂಟಿ: 4.24 ಕೋಟಿ ರೂ. ಹಗರಣಕ್ಕೆ ಟ್ವಿಸ್ಟ್

ಮೃತರು-ನಿವೃತ್ತರ ಹೆಸರಲ್ಲಿ ಹಣ ಲೂಟಿ: 4.24 ಕೋಟಿ ರೂ. ಹಗರಣಕ್ಕೆ ಟ್ವಿಸ್ಟ್

ತುಮಕೂರು: ಮಧುಗಿರಿ ತಾಲೂಕು ಪಂಚಾಯಿತಿಯಲ್ಲಿ ಬರೋಬ್ಬರಿ 4.24 ಕೋಟಿ ರೂಪಾಯಿ ಹಣ ದುರುಪಯೋಗ ನಡೆದಿರುವ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾದ ಸುಮಾರು ಎರಡೂವರೆ ತಿಂಗಳ ಬಳಿಕ ಪ್ರಮುಖ ಆರೋಪಿಗಳಾದ ಎ1 ಸೌಮ್ಯ ಹಾಗೂ ಎ2 ರಮೇಶ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ನಿವೃತ್ತ ನೌಕರರ ಗಳಿಕೆ ರಜೆ (Earned Leave) ನಗದೀಕರಣ ಬಿಲ್ಲುಗಳಲ್ಲಿ ಅಕ್ರಮ ನಡೆಸಿ ಸರ್ಕಾರಿ ಹಣವನ್ನು ದುರುಪಯೋಗಪಡಿಸಿಕೊಂಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ದ್ವಿತೀಯ ದರ್ಜೆ ಸಹಾಯಕಿಯಾಗಿದ್ದ ಸೌಮ್ಯ, ಕಾರ್ಯನಿರ್ವಾಹಕ ಅಧಿಕಾರಿ (EO) ಅವರ ಲಾಗಿನ್ ಐಡಿ ಹಾಗೂ ಡಿಜಿಟಲ್ ಸಹಿ ಕೀ ಅನ್ನು ಅಕ್ರಮವಾಗಿ ಬಳಸಿ ಕೋಟ್ಯಂತರ ರೂಪಾಯಿ ಹಣವನ್ನು ವರ್ಗಾವಣೆ ಮಾಡಿರುವ ಆರೋಪ ಎದುರಿಸುತ್ತಿದ್ದಾರೆ.ಹಗರಣದಲ್ಲಿ ಮೃತ ಹಾಗೂ ನಿವೃತ್ತ ನೌಕರರ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಅವರ ಕುಟುಂಬ ಸದಸ್ಯರ ಬ್ಯಾಂಕ್ ಖಾತೆಗಳಿಗೆ ಸರ್ಕಾರಿ ಹಣ ವರ್ಗಾವಣೆ ಮಾಡಲಾಗಿದೆ ಎಂದು ತನಿಖೆಯಿಂದ ತಿಳಿದುಬಂದಿದೆ.2020ರಿಂದ 2025ರವರೆಗೆ ಸುಮಾರು ಐದು ವರ್ಷಗಳ ಕಾಲ ಈ ಅಕ್ರಮ ನಿರಂತರವಾಗಿ ನಡೆದಿದ್ದು, ಒಟ್ಟು 4.24 ಕೋಟಿ ರೂಪಾಯಿ ಹಣ ದುರುಪಯೋಗವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಪ್ರಕರಣದ ಹಿನ್ನೆಲೆಯಲ್ಲಿ ಆಗಿನ ಕಾರ್ಯನಿರ್ವಾಹಕ ಅಧಿಕಾರಿಗಳಾದ ಲಕ್ಷ್ಮಣ್ ಹಾಗೂ ನಿವೃತ್ತ ಇಒ ದೊಡ್ಡಸಿದ್ದಪ್ಪ ಅವರನ್ನು ಜಿಲ್ಲಾ ಪಂಚಾಯಿತಿ ಸಿಇಒ ಬಿ.ವಿ. ಅಶ್ವಿಜಾ ಅಮಾನತುಗೊಳಿಸಿದ್ದಾರೆ.ಈ ಸಂಬಂಧ ಮಧುಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಗರಣದ ಕುರಿತು ತನಿಖೆ ಮುಂದುವರಿದಿದೆ. ಇನ್ನೂ ಹಲವು ಅಂಶಗಳು ಬೆಳಕಿಗೆ ಬರುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Jun 23, 2026 | 10:28 AM
169 0
21 ಕಳ್ಳತನ ಪ್ರಕರಣ ಭೇದಿಸಿದ ಮಂಡ್ಯ ಪೊಲೀಸರು: 86 ಲಕ್ಷ ಮೌಲ್ಯದ ಮಾಲು ವಶ, 6 ಆರೋಪಿಗಳ ಬಂಧನ

21 ಕಳ್ಳತನ ಪ್ರಕರಣ ಭೇದಿಸಿದ ಮಂಡ್ಯ ಪೊಲೀಸರು: 86 ಲಕ್ಷ ಮೌಲ್ಯದ ಮಾಲು ವಶ, 6 ಆರೋಪಿಗಳ ಬಂಧನ

ಮಂಡ್ಯ, ಜೂನ್ 20: ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ 21 ಕಳ್ಳತನ ಪ್ರಕರಣಗಳನ್ನು ಮಂಡ್ಯ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದು, ಈ ಸಂಬಂಧ 6 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.ಜಿಲ್ಲಾ ಪೊಲೀಸ್ ಕಚೇರಿಯ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ. ಶೋಭಾರಾಣಿ ವಿ.ಜೆ., ಬಂಧಿತ ಆರೋಪಿಗಳಿಂದ 553 ಗ್ರಾಂ ಚಿನ್ನಾಭರಣ, 1 ಕೆಜಿ 300 ಗ್ರಾಂ ಬೆಳ್ಳಿ, ಒಂದು ಪ್ಯಾಸೆಂಜರ್ ಆಟೋ, ಒಂದು ದ್ವಿಚಕ್ರ ವಾಹನ ಹಾಗೂ ₹20 ಸಾವಿರ ನಗದು ಸೇರಿದಂತೆ ಒಟ್ಟು ₹86 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.ಪ್ರಕರಣಗಳ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯ ಕಾರ್ಯವನ್ನು ಎಸ್‌ಪಿ ಶ್ಲಾಘಿಸಿದರು. ಇದೇ ವೇಳೆ ಕಳ್ಳತನಕ್ಕೊಳಗಾಗಿದ್ದ ವಸ್ತುಗಳನ್ನು ಸಂಬಂಧಪಟ್ಟ ವಾರಸುದಾರರಿಗೆ ಹಿಂತಿರುಗಿಸಲಾಯಿತು.ಇದರ ಜೊತೆಗೆ, ಕಿರುಗಾವಲು ಪೊಲೀಸ್ ಠಾಣೆ ವ್ಯಾಪ್ತಿಯ ಮೊ.ಸಂ.114/26ರ ಕೊಲೆ ಪ್ರಕರಣವನ್ನು ಸಹ ಪೊಲೀಸರು ಭೇದಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ 5 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.ಪ್ರಕರಣಗಳ ಪತ್ತೆ ಮತ್ತು ಆರೋಪಿಗಳ ಬಂಧನದಲ್ಲಿ ಪ್ರಮುಖ ಪಾತ್ರವಹಿಸಿದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಈ ಸಂದರ್ಭದಲ್ಲಿ ಪ್ರಶಂಸಿಸಿ ಅಭಿನಂದಿಸಲಾಯಿತು.

Jun 20, 2026 | 09:15 AM
171 0
ಬ್ಯಾಹಟ್ಟಿ ಗ್ರಾಮದಲ್ಲಿ ಮಧ್ಯರಾತ್ರಿ ಬರ್ಬರ ಹತ್ಯೆ  ಕೊಡಲಿಯಿಂದ ಹೊಡೆದು ವ್ಯಕ್ತಿಯ ಕೊಲೆ

ಬ್ಯಾಹಟ್ಟಿ ಗ್ರಾಮದಲ್ಲಿ ಮಧ್ಯರಾತ್ರಿ ಬರ್ಬರ ಹತ್ಯೆ ಕೊಡಲಿಯಿಂದ ಹೊಡೆದು ವ್ಯಕ್ತಿಯ ಕೊಲೆ

ಹುಬ್ಬಳ್ಳಿ: ತಾಲೂಕಿನ ಬ್ಯಾಹಟ್ಟಿ ಗ್ರಾಮದಲ್ಲಿ ವ್ಯಕ್ತಿಯೊಬ್ಬನನ್ನು ಕೊಡಲಿಯಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ನಡೆದಿದ್ದು, ಪ್ರಕರಣ ನಡೆದ ಕೇವಲ 12 ಗಂಟೆಯೊಳಗೆ ಆರೋಪಿಯನ್ನು ಬಂಧಿಸುವಲ್ಲಿ ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.ಬ್ಯಾಹಟ್ಟಿ ಗ್ರಾಮದ ಪಕ್ಕೀರಪ್ಪ @ ಬಸವರಾಜ ಅಕ್ಕಿವಳ್ಳಿ (33) ಕೊಲೆಯಾದ ವ್ಯಕ್ತಿ. ಅದೇ ಗ್ರಾಮದ ಪ್ರಕಾಶ್ ಕರಶೆಟ್ಟಿ ಎಂಬಾತ ಹತ್ಯೆ ನಡೆಸಿದ ಆರೋಪದಡಿ ಬಂಧಿತನಾಗಿದ್ದಾನೆ.ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಪ್ರಕಾಶ್ ತನ್ನ ಪತ್ನಿ ಹಾಗೂ ಬಸವರಾಜ ನಡುವಿನ ಅನೈತಿಕ ಸಂಬಂಧದ ಬಗ್ಗೆ ಶಂಕೆ ಹೊಂದಿದ್ದ. ಈ ವಿಚಾರವಾಗಿ ಇಬ್ಬರ ನಡುವೆ ಕೆಲ ದಿನಗಳಿಂದ ಮನಸ್ತಾಪ ಉಂಟಾಗಿತ್ತು ಎನ್ನಲಾಗಿದೆ.ಕಳೆದ ಮಧ್ಯರಾತ್ರಿ ಬ್ಯಾಹಟ್ಟಿ ಗ್ರಾಮದಲ್ಲಿ ಬಸವರಾಜನ ಮೇಲೆ ಕೊಡಲಿಯಿಂದ ಹಲ್ಲೆ ನಡೆಸಿದ ಪ್ರಕಾಶ್, ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ಕಾರ್ಯಾಚರಣೆ ಆರಂಭಿಸಿ, ವಿವಿಧ ಸುಳಿವುಗಳ ಆಧಾರದ ಮೇಲೆ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.ಪ್ರಕರಣ ಸಂಬಂಧ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Jun 20, 2026 | 07:27 AM
380 0
ಲಿವಿಂಗ್ ರಿಲೇಷನ್‌ಶಿಪ್ ಯುವತಿ ಕೊಲೆ: ಪ್ರಿಯಕರ ಸೇರಿ ಮೂವರು ಬಂಧನ

ಲಿವಿಂಗ್ ರಿಲೇಷನ್‌ಶಿಪ್ ಯುವತಿ ಕೊಲೆ: ಪ್ರಿಯಕರ ಸೇರಿ ಮೂವರು ಬಂಧನ

ಬೆಳಗಾವಿ: ಲಿವಿಂಗ್ ರಿಲೇಷನ್‌ಶಿಪ್‌ನಲ್ಲಿದ್ದ ಯುವತಿಯನ್ನು ಬೇರೆ ಮದುವೆಯಾಗಲು ಮುಂದಾಗಿದ್ದ ಪ್ರಿಯಕರನನ್ನು ಪ್ರಶ್ನಿಸಿದ್ದಕ್ಕೆ ಆಕೆಯನ್ನು ಹತ್ಯೆಗೈದು ಶವವನ್ನು ಮಹಾರಾಷ್ಟ್ರದ ದಟ್ಟ ಕಾಡಿನಲ್ಲಿ ಎಸೆದಿದ್ದ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಪ್ರಮುಖ ಆರೋಪಿ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ.ಬೆಳಗಾವಿ ತಾಲೂಕಿನ ವಂಟಮೂರಿ ಗ್ರಾಮದ ಗಂಗವ್ವ ಹಂಚಿನಮನಿ (25) ಕೊಲೆಯಾದ ಯುವತಿಯಾಗಿದ್ದು, ಹುಕ್ಕೇರಿ ತಾಲೂಕಿನ ರಾಜನಕಟ್ಟಿ ಗ್ರಾಮದ ಬಸವರಾಜ್ ಕರ್ನಾವರ್ (33) ಪ್ರಮುಖ ಆರೋಪಿಯಾಗಿದ್ದಾನೆ. ಬಸವರಾಜ್ ತನ್ನ ತಂದೆ ಯಲ್ಲಪ್ಪ ಹಾಗೂ ಮಾವ ಲಗಮಪ್ಪನೊಂದಿಗೆ ಸೇರಿ ಕೃತ್ಯ ಎಸಗಿರುವುದಾಗಿ ತನಿಖೆಯಲ್ಲಿ ಬಹಿರಂಗವಾಗಿದೆ.ಪೊಲೀಸರ ಮಾಹಿತಿ ಪ್ರಕಾರ, ಗಂಗವ್ವ ಮತ್ತು ಬಸವರಾಜ್ ಕೆಲ ವರ್ಷಗಳಿಂದ ಲಿವಿಂಗ್ ರಿಲೇಷನ್‌ಶಿಪ್‌ನಲ್ಲಿ ವಾಸಿಸುತ್ತಿದ್ದರು. ಇದೇ ವೇಳೆ ಬಸವರಾಜ್ ಬೇರೆ ಯುವತಿಯನ್ನು ಮದುವೆಯಾಗಲು ಮುಂದಾಗಿದ್ದನು. ಇದನ್ನು ಗಂಗವ್ವ ಪ್ರಶ್ನಿಸಿದ ಹಿನ್ನೆಲೆಯಲ್ಲಿ ಇಬ್ಬರ ನಡುವೆ ವಾಗ್ವಾದ ನಡೆದಿದ್ದು, ಬಳಿಕ ಆರೋಪಿಗಳು ಆಕೆಯ ಮೇಲೆ ರಾಡ್‌ನಿಂದ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ.ಹತ್ಯೆಯ ಬಳಿಕ ಶವವನ್ನು ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಚಂದಗಡ ತಾಲೂಕಿನ ತಿಲಾರಿ ಘಾಟ್ ಪ್ರದೇಶದ ದಟ್ಟ ಕಾಡಿನಲ್ಲಿ ಎಸೆದು ಪರಾರಿಯಾಗಿದ್ದರು. ಮೇ 29ರಂದು ಕಾಡಿನಲ್ಲಿ ಕೊಳೆತ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆಯಾಗಿದ್ದು, ಚಂದಗಡ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.ರಸ್ತೆಯ ಸಿಸಿಟಿವಿ ದೃಶ್ಯಗಳು ಹಾಗೂ ಟೋಲ್‌ಗೇಟ್ ದಾಖಲೆಗಳನ್ನು ಪರಿಶೀಲಿಸಿದ ವೇಳೆ ಮಹಿಳೆ ಕಾರಿನಲ್ಲಿ ತೆರಳಿದ್ದ ಮಾಹಿತಿ ಲಭ್ಯವಾಗಿತ್ತು. ಬಳಿಕ ವಾಹನದ ಸಂಖ್ಯೆಯನ್ನು ಪತ್ತೆಹಚ್ಚಿದ ಪೊಲೀಸರು ಆರೋಪಿಗಳ ಸುಳಿವು ಕಂಡುಹಿಡಿದು ಕಾರ್ಯಾಚರಣೆ ನಡೆಸಿ ಬಸವರಾಜ್ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ.ಶವಕ್ಕೆ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಪೊಲೀಸರು ಅಂತ್ಯಸಂಸ್ಕಾರ ನೆರವೇರಿಸಿದ್ದು, ಬಂಧಿತ ಆರೋಪಿಗಳ ವಿರುದ್ಧ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

Jun 18, 2026 | 01:35 PM
190 0
"ಬೆಟ್ಟಿಂಗ್ ಚಟಕ್ಕೆ ಬಲಿಯಾದ ಕುಟುಂಬ: ವಿಡಿಯೋ ಮಾಡಿ ಹೋಂ ಗಾರ್ಡ್ ಪತ್ನಿಯ ಬರ್ಬರ ಹತ್ಯೆ, ಪತಿ ಪರಾರಿ"

"ಬೆಟ್ಟಿಂಗ್ ಚಟಕ್ಕೆ ಬಲಿಯಾದ ಕುಟುಂಬ: ವಿಡಿಯೋ ಮಾಡಿ ಹೋಂ ಗಾರ್ಡ್ ಪತ್ನಿಯ ಬರ್ಬರ ಹತ್ಯೆ, ಪತಿ ಪರಾರಿ"

ಬೆಂಗಳೂರು: ಆನ್‌ಲೈನ್ ಬೆಟ್ಟಿಂಗ್ ಚಟಕ್ಕೆ ಸಿಲುಕಿ ಕುಟುಂಬ ಜೀವನ ಹಾಳಾಗಿದ್ದ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮಹಾದೇವಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಮೃತಳನ್ನು ಮಂಜುಳಾ (32) ಎಂದು ಗುರುತಿಸಲಾಗಿದ್ದು, ಅವರು ಮಹಾದೇವಪುರ ಪೊಲೀಸ್ ಠಾಣೆಯಲ್ಲಿ ಹೋಂ ಗಾರ್ಡ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಆರೋಪಿ ಪತಿ ಪ್ರದೀಪ್ ತನ್ನ ಪತ್ನಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾನೆ.ನಗರದ ಪುಷ್ಪಾಂಜಲಿ ಥಿಯೇಟರ್ ಸಮೀಪದ ನಿವಾಸದಲ್ಲಿ ಈ ದುರ್ಘಟನೆ ನಿನ್ನೆ ರಾತ್ರಿ ಸುಮಾರು 9 ಗಂಟೆ ವೇಳೆಗೆ ನಡೆದಿದೆ. ಹತ್ಯೆಗೂ ಮುನ್ನ ಪ್ರದೀಪ್ ವಿಡಿಯೋ ಒಂದನ್ನು ಮಾಡಿ, "ಬೆಟ್ಟಿಂಗ್ ಚಟದಿಂದ ನನ್ನ ಹೆಂಡತಿ ಮತ್ತು ಮಕ್ಕಳು ಬೀದಿಗೆ ಬಂದಿದ್ದಾರೆ. ನಾನು ಸಾಯುತ್ತೇನೆ, ನನ್ನ ಹೆಂಡತಿಯೂ ಸಾಯುತ್ತಾಳೆ" ಎಂದು ಹೇಳಿರುವುದು ಬೆಳಕಿಗೆ ಬಂದಿದೆ.ಅಲ್ಲದೆ, ತನ್ನ ಪತ್ನಿ ಮಂಜುಳಾ ಅತ್ತೆ ಹಾಗೂ ನಾದಿನಿಯ ಪ್ರಭಾವದಿಂದ ತನ್ನಿಂದ ದೂರವಾಗಿದ್ದಾಳೆ ಎಂದು ವಿಡಿಯೋದಲ್ಲಿ ಆರೋಪಿಸಿರುವುದಾಗಿ ತಿಳಿದುಬಂದಿದೆ. ಬಳಿಕ ವಿಡಿಯೋ ಮಾಡಿಟ್ಟುಕೊಂಡೇ ಪತ್ನಿಯನ್ನು ಹತ್ಯೆ ಮಾಡಿರುವುದಾಗಿ ಪೊಲೀಸರು ಶಂಕಿಸಿದ್ದಾರೆ.ಘಟನೆಯ ಬಳಿಕ ಆರೋಪಿ ಪ್ರದೀಪ್ ಪರಾರಿಯಾಗಿದ್ದು, ಆತನ ಬಂಧನಕ್ಕಾಗಿ ಪೊಲೀಸರು ತೀವ್ರ ಶೋಧ ಕಾರ್ಯ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಮಹಾದೇವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.

Jun 15, 2026 | 08:27 AM
122 0
ಹುಬ್ಬಳ್ಳಿಯಲ್ಲಿ ಬೇಕರಿ ಮೇಲೆ ದಾಳಿ: ಮಾಲೀಕನಿಗೆ ಹಲ್ಲೆ, ಅಂಗಡಿಯಲ್ಲಿದ್ದ ವಸ್ತುಗಳ ಧ್ವಂಸ

ಹುಬ್ಬಳ್ಳಿಯಲ್ಲಿ ಬೇಕರಿ ಮೇಲೆ ದಾಳಿ: ಮಾಲೀಕನಿಗೆ ಹಲ್ಲೆ, ಅಂಗಡಿಯಲ್ಲಿದ್ದ ವಸ್ತುಗಳ ಧ್ವಂಸ

ಹುಬ್ಬಳ್ಳಿ, ಜೂನ್ 14: ನಗರದ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಗಣೇಶನಗರ ಪ್ರದೇಶದಲ್ಲಿ ಇರುವ ಬೇಕರಿಯೊಂದರ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿ, ಮಾಲೀಕನ ಮೇಲೆ ಹಲ್ಲೆ ಮಾಡಿ ಅಂಗಡಿಯಲ್ಲಿದ್ದ ವಸ್ತುಗಳನ್ನು ಧ್ವಂಸಗೊಳಿಸಿರುವ ಘಟನೆ ಸೋಮವಾರ ಸಂಜೆ ನಡೆದಿದೆ.ಗಣೇಶನಗರದ ಪವನ್ ಸ್ಕೂಲ್ ಸಮೀಪದ ಮಗವಿರ ಬೇಕರಿಗೆ ನುಗ್ಗಿದ ಕೆಲವರು ಮೊದಲು ಬೇಕರಿ ಮಾಲೀಕರೊಂದಿಗೆ ವಾಗ್ವಾದ ನಡೆಸಿದ್ದಾರೆ. ಮಾತಿನ ಚಕಮಕಿ ತಾರಕಕ್ಕೇರಿದ ವೇಳೆ ದುಷ್ಕರ್ಮಿಗಳು ಮಾಲೀಕನಿಗೆ ಹಲ್ಲೆ ನಡೆಸಿದ್ದು, ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿರುವ ಆರೋಪ ಕೇಳಿಬಂದಿದೆ.ಇದರಿಂದಲೂ ತೃಪ್ತರಾಗದ ಆರೋಪಿಗಳು ಅಂಗಡಿಯೊಳಗಿದ್ದ ಆಹಾರ ಪದಾರ್ಥಗಳು, ಗಾಜಿನ ಸಾಮಗ್ರಿಗಳು ಹಾಗೂ ಇತರ ವಸ್ತುಗಳನ್ನು ಧ್ವಂಸಗೊಳಿಸಿ ಸ್ಥಳದಲ್ಲಿ ದಾಂಧಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.ಹಲ್ಲೆಯಿಂದ ಗಾಯಗೊಂಡ ಬೇಕರಿ ಮಾಲೀಕರನ್ನು ಸ್ಥಳೀಯರು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯ ನಿವಾಸಿಗಳು ಸ್ಥಳಕ್ಕೆ ಜಮಾಯಿಸಿದ್ದು, ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.ಮಾಹಿತಿ ಪಡೆದ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ಕ್ರಮ ಕೈಗೊಂಡಿದ್ದು, ತನಿಖೆ ಮುಂದುವರಿದಿದೆ.ಸ್ಥಳೀಯ ವ್ಯಾಪಾರಿಗಳು ಇಂತಹ ಘಟನೆಗಳು ವ್ಯಾಪಾರಸ್ಥರಲ್ಲಿ ಭಯದ ವಾತಾವರಣ ಸೃಷ್ಟಿಸುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

Jun 15, 2026 | 05:43 AM
285 0
ಬಂಧಿಸಲು ಹೋದ ಪೊಲೀಸರೇ ಲಂಚ ಬಲೆಗೆ: ಜೈಪುರದಲ್ಲಿ ಬೆಂಗಳೂರು ಪೊಲೀಸ್ ತಂಡ ಎಸಿಬಿ ಬಲೆಗೆ!

ಬಂಧಿಸಲು ಹೋದ ಪೊಲೀಸರೇ ಲಂಚ ಬಲೆಗೆ: ಜೈಪುರದಲ್ಲಿ ಬೆಂಗಳೂರು ಪೊಲೀಸ್ ತಂಡ ಎಸಿಬಿ ಬಲೆಗೆ!

ಬೆಂಗಳೂರು/ಜೈಪುರ: ವರದಕ್ಷಿಣೆ ಕಿರುಕುಳ ಪ್ರಕರಣದ ಆರೋಪಿಯನ್ನು ಬಂಧಿಸಲು ರಾಜಸ್ಥಾನದ ಜೈಪುರಕ್ಕೆ ತೆರಳಿದ್ದ ಬೆಂಗಳೂರು ಎಚ್‌ಎಎಲ್ ಪೊಲೀಸ್ ಠಾಣೆಯ ಮೂವರು ಸಿಬ್ಬಂದಿ ಲಂಚ ಸ್ವೀಕರಿಸುವ ವೇಳೆ ರಾಜಸ್ಥಾನ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಬಲೆಗೆ ಬಿದ್ದಿರುವ ಘಟನೆ ಭಾರೀ ಸಂಚಲನ ಮೂಡಿಸಿದೆ.ಎಚ್‌ಎಎಲ್ ಪೊಲೀಸ್ ಠಾಣೆಯ ಪಿಎಸ್‌ಐ ಅನಿತಾ, ಹೆಡ್ ಕಾನ್ಸ್‌ಟೇಬಲ್ ಉಳುವಪ್ಪ ಹಾಗೂ ಕಾನ್ಸ್‌ಟೇಬಲ್ ಯತೀಶ್ ಕಳೆದ ಶುಕ್ರವಾರ ಪ್ರಕರಣದ ಆರೋಪಿಯನ್ನು ಬಂಧಿಸುವ ಉದ್ದೇಶದಿಂದ ಜೈಪುರಕ್ಕೆ ತೆರಳಿದ್ದರು. ಬಂಧನ ಪ್ರಕ್ರಿಯೆ ವೇಳೆ ಆರೋಪಿಯಿಂದ ₹2 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.ಈ ಕುರಿತು ದೂರು ಸ್ವೀಕರಿಸಿದ ರಾಜಸ್ಥಾನ ಎಸಿಬಿ ಅಧಿಕಾರಿಗಳು ಬಲೆ ಬೀಸಿ ಕಾರ್ಯಾಚರಣೆ ನಡೆಸಿದರು. ಆರೋಪಿಯಿಂದ ಮೊದಲ ಕಂತಿನ ₹40 ಸಾವಿರ ಹಣವನ್ನು ಸ್ವೀಕರಿಸುತ್ತಿದ್ದ ವೇಳೆ ಪಿಎಸ್‌ಐ ಅನಿತಾ ಸೇರಿದಂತೆ ಮೂವರು ಪೊಲೀಸರು ಎಸಿಬಿ ಅಧಿಕಾರಿಗಳಿಗೆ ರೆಡ್‌ಹ್ಯಾಂಡಾಗಿ ಸಿಕ್ಕಿಬಿದ್ದರು.ರಾಜಸ್ಥಾನ ಎಸಿಬಿಯ ಎಎಸ್‌ಪಿ ಭೂಪೇಂದ್ರ ಚೌಧರಿ ನೇತೃತ್ವದಲ್ಲಿ ನಡೆದ ಟ್ರ್ಯಾಪ್ ಕಾರ್ಯಾಚರಣೆಯಲ್ಲಿ ಮೂವರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಘಟನೆ ಕುರಿತು ಜೈಪುರ ಎಸಿಬಿ ಅಧಿಕಾರಿಗಳು ಬೆಂಗಳೂರಿನ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.ಆರೋಪಿ ಬಂಧನಕ್ಕೆ ತೆರಳಿದ್ದ ಪೊಲೀಸ್ ತಂಡವೇ ಲಂಚ ಪ್ರಕರಣದಲ್ಲಿ ಸಿಲುಕಿರುವುದು ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದು, ಪ್ರಕರಣದ ಎಲ್ಲಾ ಆಯಾಮಗಳ ಕುರಿತು ಎಸಿಬಿ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ. ಈ ಬೆಳವಣಿಗೆ ಪೊಲೀಸ್ ಇಲಾಖೆಯ ಗೌರವಕ್ಕೆ ಧಕ್ಕೆಯುಂಟು ಮಾಡಿದ್ದು, ಮುಂದಿನ ಕ್ರಮದ ಬಗ್ಗೆ ಕುತೂಹಲ ಮೂಡಿಸಿದೆ.

Jun 15, 2026 | 01:59 AM
198 0
ರತ್ನ ಸ್ಕೂಲ್ ಪಕ್ಕದಲ್ಲೇ ವೇಶ್ಯಾವಾಟಿಕೆ ದಂಧೆ? ವೈರಲ್ ವಿಡಿಯೋದಿಂದ ಹುಬ್ಬಳ್ಳಿಯಲ್ಲಿ ಸಂಚಲನ

ರತ್ನ ಸ್ಕೂಲ್ ಪಕ್ಕದಲ್ಲೇ ವೇಶ್ಯಾವಾಟಿಕೆ ದಂಧೆ? ವೈರಲ್ ವಿಡಿಯೋದಿಂದ ಹುಬ್ಬಳ್ಳಿಯಲ್ಲಿ ಸಂಚಲನ

ಹುಬ್ಬಳ್ಳಿ: ನಗರದ ಹಳೆಯ ಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ರತ್ನ ಸ್ಕೂಲ್ ಸಮೀಪದಲ್ಲಿ ಅಕ್ರಮ ವೇಶ್ಯಾವಾಟಿಕೆ ದಂಧೆ ನಡೆಯುತ್ತಿದೆ ಎಂಬ ಆರೋಪಗಳು ಕೇಳಿಬಂದಿದ್ದು, ಇದಕ್ಕೆ ಸಂಬಂಧಿಸಿದ ಎನ್ನಲಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಭಾರೀ ಚರ್ಚೆಗೆ ಗ್ರಾಸವಾಗಿದೆ.ಸ್ಥಳೀಯರ ಪ್ರಕಾರ, ಶಾಲೆಯ ಪಕ್ಕದಲ್ಲೇ ಇಂತಹ ಅಕ್ರಮ ಚಟುವಟಿಕೆಗಳು ನಡೆಯುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಶಾಲೆಗೆ ಬರುವ ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಸಹ ಈ ಬೆಳವಣಿಗೆ ತೀವ್ರ ಕಳವಳಕ್ಕೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.ವೈರಲ್ ಆಗಿರುವ ವಿಡಿಯೋದಲ್ಲಿ ಕೆಲ ಅಕ್ರಮ ಚಟುವಟಿಕೆಗಳ ದೃಶ್ಯಗಳು ಕಂಡುಬಂದಿವೆ ಎಂದು ಹೇಳಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಸ್ಥಳೀಯರು ಪೊಲೀಸ್ ಇಲಾಖೆಯು ತಕ್ಷಣ ತನಿಖೆ ನಡೆಸಿ ಸತ್ಯಾಸತ್ಯತೆ ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶ್ವನಾಥ್ ಸೋಲಂಕೆ ಎಂಬುವರು ಬಾಡಿಗೆಗೆ ವಾಸವಾಗಿದ್ದಾರೆ ಎಂಬ ಮಾಹಿತಿ ಸ್ಥಳೀಯ ವಲಯಗಳಿಂದ ಕೇಳಿಬಂದಿದೆ. ಆದರೆ ಈ ಕುರಿತು ಪೊಲೀಸ್ ಇಲಾಖೆಯಿಂದ ಯಾವುದೇ ಅಧಿಕೃತ ಮಾಹಿತಿ ಇನ್ನೂ ಹೊರಬಂದಿಲ್ಲ.ಸದ್ಯ ವೈರಲ್ ವಿಡಿಯೋ ಹಾಗೂ ಆರೋಪಗಳು ಹುಬ್ಬಳ್ಳಿ ನಗರದಲ್ಲಿ ಸಂಚಲನ ಸೃಷ್ಟಿಸಿದ್ದು, ಶಾಲೆಯಂತಹ ಸೂಕ್ಷ್ಮ ಪ್ರದೇಶದ ಸಮೀಪದಲ್ಲಿ ಇಂತಹ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ಈ ಆರೋಪಗಳ ಸತ್ಯಾಸತ್ಯತೆ ಕುರಿತು ಪೊಲೀಸ್ ತನಿಖೆಯ ಬಳಿಕವೇ ಸ್ಪಷ್ಟ ಚಿತ್ರಣ ಹೊರಬೀಳಬೇಕಿದ್ದು, ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

Jun 12, 2026 | 11:43 AM
315 0