ಕ್ರೈಂ

ಲಿವಿಂಗ್ ರಿಲೇಷನ್‌ಶಿಪ್ ಯುವತಿ ಕೊಲೆ: ಪ್ರಿಯಕರ ಸೇರಿ ಮೂವರು ಬಂಧನ

ಮೂಲಕ News Desk | ಪ್ರಕಟಿಸಲಾಗಿದೆ June 18, 2026 June 18, 2026 | 01:35 PM 86 ವೀಕ್ಷಣೆಗಳು

ಬೆಳಗಾವಿ: ಲಿವಿಂಗ್ ರಿಲೇಷನ್‌ಶಿಪ್‌ನಲ್ಲಿದ್ದ ಯುವತಿಯನ್ನು ಬೇರೆ ಮದುವೆಯಾಗಲು ಮುಂದಾಗಿದ್ದ ಪ್ರಿಯಕರನನ್ನು ಪ್ರಶ್ನಿಸಿದ್ದಕ್ಕೆ ಆಕೆಯನ್ನು ಹತ್ಯೆಗೈದು ಶವವನ್ನು ಮಹಾರಾಷ್ಟ್ರದ ದಟ್ಟ ಕಾಡಿನಲ್ಲಿ ಎಸೆದಿದ್ದ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಪ್ರಮುಖ ಆರೋಪಿ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ.


ಬೆಳಗಾವಿ ತಾಲೂಕಿನ ವಂಟಮೂರಿ ಗ್ರಾಮದ ಗಂಗವ್ವ ಹಂಚಿನಮನಿ (25) ಕೊಲೆಯಾದ ಯುವತಿಯಾಗಿದ್ದು, ಹುಕ್ಕೇರಿ ತಾಲೂಕಿನ ರಾಜನಕಟ್ಟಿ ಗ್ರಾಮದ ಬಸವರಾಜ್ ಕರ್ನಾವರ್ (33) ಪ್ರಮುಖ ಆರೋಪಿಯಾಗಿದ್ದಾನೆ. ಬಸವರಾಜ್ ತನ್ನ ತಂದೆ ಯಲ್ಲಪ್ಪ ಹಾಗೂ ಮಾವ ಲಗಮಪ್ಪನೊಂದಿಗೆ ಸೇರಿ ಕೃತ್ಯ ಎಸಗಿರುವುದಾಗಿ ತನಿಖೆಯಲ್ಲಿ ಬಹಿರಂಗವಾಗಿದೆ.

ಪೊಲೀಸರ ಮಾಹಿತಿ ಪ್ರಕಾರ, ಗಂಗವ್ವ ಮತ್ತು ಬಸವರಾಜ್ ಕೆಲ ವರ್ಷಗಳಿಂದ ಲಿವಿಂಗ್ ರಿಲೇಷನ್‌ಶಿಪ್‌ನಲ್ಲಿ ವಾಸಿಸುತ್ತಿದ್ದರು. ಇದೇ ವೇಳೆ ಬಸವರಾಜ್ ಬೇರೆ ಯುವತಿಯನ್ನು ಮದುವೆಯಾಗಲು ಮುಂದಾಗಿದ್ದನು. ಇದನ್ನು ಗಂಗವ್ವ ಪ್ರಶ್ನಿಸಿದ ಹಿನ್ನೆಲೆಯಲ್ಲಿ ಇಬ್ಬರ ನಡುವೆ ವಾಗ್ವಾದ ನಡೆದಿದ್ದು, ಬಳಿಕ ಆರೋಪಿಗಳು ಆಕೆಯ ಮೇಲೆ ರಾಡ್‌ನಿಂದ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ.

ಹತ್ಯೆಯ ಬಳಿಕ ಶವವನ್ನು ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಚಂದಗಡ ತಾಲೂಕಿನ ತಿಲಾರಿ ಘಾಟ್ ಪ್ರದೇಶದ ದಟ್ಟ ಕಾಡಿನಲ್ಲಿ ಎಸೆದು ಪರಾರಿಯಾಗಿದ್ದರು. ಮೇ 29ರಂದು ಕಾಡಿನಲ್ಲಿ ಕೊಳೆತ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆಯಾಗಿದ್ದು, ಚಂದಗಡ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.


ರಸ್ತೆಯ ಸಿಸಿಟಿವಿ ದೃಶ್ಯಗಳು ಹಾಗೂ ಟೋಲ್‌ಗೇಟ್ ದಾಖಲೆಗಳನ್ನು ಪರಿಶೀಲಿಸಿದ ವೇಳೆ ಮಹಿಳೆ ಕಾರಿನಲ್ಲಿ ತೆರಳಿದ್ದ ಮಾಹಿತಿ ಲಭ್ಯವಾಗಿತ್ತು. ಬಳಿಕ ವಾಹನದ ಸಂಖ್ಯೆಯನ್ನು ಪತ್ತೆಹಚ್ಚಿದ ಪೊಲೀಸರು ಆರೋಪಿಗಳ ಸುಳಿವು ಕಂಡುಹಿಡಿದು ಕಾರ್ಯಾಚರಣೆ ನಡೆಸಿ ಬಸವರಾಜ್ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ.


ಶವಕ್ಕೆ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಪೊಲೀಸರು ಅಂತ್ಯಸಂಸ್ಕಾರ ನೆರವೇರಿಸಿದ್ದು, ಬಂಧಿತ ಆರೋಪಿಗಳ ವಿರುದ್ಧ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.