ಹುಬ್ಬಳ್ಳಿ: ನಗರದ ಹಳೆಯ ಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ರತ್ನ ಸ್ಕೂಲ್ ಸಮೀಪದಲ್ಲಿ ಅಕ್ರಮ ವೇಶ್ಯಾವಾಟಿಕೆ ದಂಧೆ ನಡೆಯುತ್ತಿದೆ ಎಂಬ ಆರೋಪಗಳು ಕೇಳಿಬಂದಿದ್ದು, ಇದಕ್ಕೆ ಸಂಬಂಧಿಸಿದ ಎನ್ನಲಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಸ್ಥಳೀಯರ ಪ್ರಕಾರ, ಶಾಲೆಯ ಪಕ್ಕದಲ್ಲೇ ಇಂತಹ ಅಕ್ರಮ ಚಟುವಟಿಕೆಗಳು ನಡೆಯುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಶಾಲೆಗೆ ಬರುವ ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಸಹ ಈ ಬೆಳವಣಿಗೆ ತೀವ್ರ ಕಳವಳಕ್ಕೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ಕೆಲ ಅಕ್ರಮ ಚಟುವಟಿಕೆಗಳ ದೃಶ್ಯಗಳು ಕಂಡುಬಂದಿವೆ ಎಂದು ಹೇಳಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಸ್ಥಳೀಯರು ಪೊಲೀಸ್ ಇಲಾಖೆಯು ತಕ್ಷಣ ತನಿಖೆ ನಡೆಸಿ ಸತ್ಯಾಸತ್ಯತೆ ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶ್ವನಾಥ್ ಸೋಲಂಕೆ ಎಂಬುವರು ಬಾಡಿಗೆಗೆ ವಾಸವಾಗಿದ್ದಾರೆ ಎಂಬ ಮಾಹಿತಿ ಸ್ಥಳೀಯ ವಲಯಗಳಿಂದ ಕೇಳಿಬಂದಿದೆ. ಆದರೆ ಈ ಕುರಿತು ಪೊಲೀಸ್ ಇಲಾಖೆಯಿಂದ ಯಾವುದೇ ಅಧಿಕೃತ ಮಾಹಿತಿ ಇನ್ನೂ ಹೊರಬಂದಿಲ್ಲ.
ಸದ್ಯ ವೈರಲ್ ವಿಡಿಯೋ ಹಾಗೂ ಆರೋಪಗಳು ಹುಬ್ಬಳ್ಳಿ ನಗರದಲ್ಲಿ ಸಂಚಲನ ಸೃಷ್ಟಿಸಿದ್ದು, ಶಾಲೆಯಂತಹ ಸೂಕ್ಷ್ಮ ಪ್ರದೇಶದ ಸಮೀಪದಲ್ಲಿ ಇಂತಹ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಈ ಆರೋಪಗಳ ಸತ್ಯಾಸತ್ಯತೆ ಕುರಿತು ಪೊಲೀಸ್ ತನಿಖೆಯ ಬಳಿಕವೇ ಸ್ಪಷ್ಟ ಚಿತ್ರಣ ಹೊರಬೀಳಬೇಕಿದ್ದು, ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.