ಬೆಂಗಳೂರು: ಆನ್‌ಲೈನ್ ಬೆಟ್ಟಿಂಗ್ ಚಟಕ್ಕೆ ಸಿಲುಕಿ ಕುಟುಂಬ ಜೀವನ ಹಾಳಾಗಿದ್ದ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮಹಾದೇವಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮೃತಳನ್ನು ಮಂಜುಳಾ (32) ಎಂದು ಗುರುತಿಸಲಾಗಿದ್ದು, ಅವರು ಮಹಾದೇವಪುರ ಪೊಲೀಸ್ ಠಾಣೆಯಲ್ಲಿ ಹೋಂ ಗಾರ್ಡ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಆರೋಪಿ ಪತಿ ಪ್ರದೀಪ್ ತನ್ನ ಪತ್ನಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾನೆ.
ನಗರದ ಪುಷ್ಪಾಂಜಲಿ ಥಿಯೇಟರ್ ಸಮೀಪದ ನಿವಾಸದಲ್ಲಿ ಈ ದುರ್ಘಟನೆ ನಿನ್ನೆ ರಾತ್ರಿ ಸುಮಾರು 9 ಗಂಟೆ ವೇಳೆಗೆ ನಡೆದಿದೆ. ಹತ್ಯೆಗೂ ಮುನ್ನ ಪ್ರದೀಪ್ ವಿಡಿಯೋ ಒಂದನ್ನು ಮಾಡಿ, "ಬೆಟ್ಟಿಂಗ್ ಚಟದಿಂದ ನನ್ನ ಹೆಂಡತಿ ಮತ್ತು ಮಕ್ಕಳು ಬೀದಿಗೆ ಬಂದಿದ್ದಾರೆ. ನಾನು ಸಾಯುತ್ತೇನೆ, ನನ್ನ ಹೆಂಡತಿಯೂ ಸಾಯುತ್ತಾಳೆ" ಎಂದು ಹೇಳಿರುವುದು ಬೆಳಕಿಗೆ ಬಂದಿದೆ.
ಅಲ್ಲದೆ, ತನ್ನ ಪತ್ನಿ ಮಂಜುಳಾ ಅತ್ತೆ ಹಾಗೂ ನಾದಿನಿಯ ಪ್ರಭಾವದಿಂದ ತನ್ನಿಂದ ದೂರವಾಗಿದ್ದಾಳೆ ಎಂದು ವಿಡಿಯೋದಲ್ಲಿ ಆರೋಪಿಸಿರುವುದಾಗಿ ತಿಳಿದುಬಂದಿದೆ. ಬಳಿಕ ವಿಡಿಯೋ ಮಾಡಿಟ್ಟುಕೊಂಡೇ ಪತ್ನಿಯನ್ನು ಹತ್ಯೆ ಮಾಡಿರುವುದಾಗಿ ಪೊಲೀಸರು ಶಂಕಿಸಿದ್ದಾರೆ.
ಘಟನೆಯ ಬಳಿಕ ಆರೋಪಿ ಪ್ರದೀಪ್ ಪರಾರಿಯಾಗಿದ್ದು, ಆತನ ಬಂಧನಕ್ಕಾಗಿ ಪೊಲೀಸರು ತೀವ್ರ ಶೋಧ ಕಾರ್ಯ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಮಹಾದೇವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.