ಕ್ರೈಂ

ಬ್ಯಾಹಟ್ಟಿ ಗ್ರಾಮದಲ್ಲಿ ಮಧ್ಯರಾತ್ರಿ ಬರ್ಬರ ಹತ್ಯೆ ಕೊಡಲಿಯಿಂದ ಹೊಡೆದು ವ್ಯಕ್ತಿಯ ಕೊಲೆ

ಮೂಲಕ News Desk | ಪ್ರಕಟಿಸಲಾಗಿದೆ June 20, 2026 June 20, 2026 | 07:27 AM 337 ವೀಕ್ಷಣೆಗಳು

ಹುಬ್ಬಳ್ಳಿ: ತಾಲೂಕಿನ ಬ್ಯಾಹಟ್ಟಿ ಗ್ರಾಮದಲ್ಲಿ ವ್ಯಕ್ತಿಯೊಬ್ಬನನ್ನು ಕೊಡಲಿಯಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ನಡೆದಿದ್ದು, ಪ್ರಕರಣ ನಡೆದ ಕೇವಲ 12 ಗಂಟೆಯೊಳಗೆ ಆರೋಪಿಯನ್ನು ಬಂಧಿಸುವಲ್ಲಿ ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.


ಬ್ಯಾಹಟ್ಟಿ ಗ್ರಾಮದ ಪಕ್ಕೀರಪ್ಪ @ ಬಸವರಾಜ ಅಕ್ಕಿವಳ್ಳಿ (33) ಕೊಲೆಯಾದ ವ್ಯಕ್ತಿ. ಅದೇ ಗ್ರಾಮದ ಪ್ರಕಾಶ್ ಕರಶೆಟ್ಟಿ ಎಂಬಾತ ಹತ್ಯೆ ನಡೆಸಿದ ಆರೋಪದಡಿ ಬಂಧಿತನಾಗಿದ್ದಾನೆ.

ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಪ್ರಕಾಶ್ ತನ್ನ ಪತ್ನಿ ಹಾಗೂ ಬಸವರಾಜ ನಡುವಿನ ಅನೈತಿಕ ಸಂಬಂಧದ ಬಗ್ಗೆ ಶಂಕೆ ಹೊಂದಿದ್ದ. ಈ ವಿಚಾರವಾಗಿ ಇಬ್ಬರ ನಡುವೆ ಕೆಲ ದಿನಗಳಿಂದ ಮನಸ್ತಾಪ ಉಂಟಾಗಿತ್ತು ಎನ್ನಲಾಗಿದೆ.


ಕಳೆದ ಮಧ್ಯರಾತ್ರಿ ಬ್ಯಾಹಟ್ಟಿ ಗ್ರಾಮದಲ್ಲಿ ಬಸವರಾಜನ ಮೇಲೆ ಕೊಡಲಿಯಿಂದ ಹಲ್ಲೆ ನಡೆಸಿದ ಪ್ರಕಾಶ್, ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ಕಾರ್ಯಾಚರಣೆ ಆರಂಭಿಸಿ, ವಿವಿಧ ಸುಳಿವುಗಳ ಆಧಾರದ ಮೇಲೆ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.


ಪ್ರಕರಣ ಸಂಬಂಧ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.