ಕ್ರೈಂ News

Discover the latest headlines in this section.

ಹೊಸ ಕಮಿಷನರ್ ಎಫೆಕ್ಟ್: ಹುಬ್ಬಳ್ಳಿಯಲ್ಲಿ ಸಿಸಿಬಿ ದಾಳಿ, ನಾಲ್ವರ ಬಂಧನ

ಹೊಸ ಕಮಿಷನರ್ ಎಫೆಕ್ಟ್: ಹುಬ್ಬಳ್ಳಿಯಲ್ಲಿ ಸಿಸಿಬಿ ದಾಳಿ, ನಾಲ್ವರ ಬಂಧನ

ಹುಬ್ಬಳ್ಳಿ: ಹೊಸ ಪೊಲೀಸ್ ಕಮಿಷನರ್ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಹುಬ್ಬಳ್ಳಿ-ಧಾರವಾಡದಲ್ಲಿ ಮಾದಕ ವಸ್ತುಗಳ ವಿರುದ್ಧ ಸಿಸಿಬಿ ಪೊಲೀಸರು ಕಾರ್ಯಾಚರಣೆ ಚುರುಕುಗೊಳಿಸಿದ್ದಾರೆ. ಹುಬ್ಬಳ್ಳಿ ರೈಲ್ವೆ ಪೊಲೀಸ್ ಠಾಣೆ ಸಮೀಪದ ಪಾರ್ಕಿಂಗ್ ಸ್ಥಳದ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ನಾಲ್ವರನ್ನು ಬಂಧಿಸಲಾಗಿದೆ.ಖಚಿತ ಮಾಹಿತಿಯ ಆಧಾರದ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಮಾಂತೇಶ್ ಹೊಸಮನಿ, ಅಲಿನಾ, ಫಯಾಜ್ ಉಂಟವಾಲೆ ಹಾಗೂ ಶೋಯಬ್ ಧಾರವಾಡ ಎಂಬ ನಾಲ್ವರನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.ಆರೋಪಿಗಳಿಂದ 6.135 ಕೆಜಿ ಗಾಂಜಾ, ನಾಲ್ಕು ಮೊಬೈಲ್ ಫೋನ್‌ಗಳು ಹಾಗೂ ಒಂದು ದ್ವಿಚಕ್ರ ವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ರೈಲ್ವೆ ನಿಲ್ದಾಣದ ಪಾರ್ಕಿಂಗ್ ಸ್ಥಳದ ಸಮೀಪ ಗಾಂಜಾ ಮಾರಾಟಕ್ಕೆ ಮುಂದಾಗಿದ್ದ ವೇಳೆ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಈ ಸಂಬಂಧ ಹುಬ್ಬಳ್ಳಿಯ ಶಹರ್ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಬಂಧಿತ ನಾಲ್ವರನ್ನು ಮುಂದಿನ ಕಾನೂನು ಪ್ರಕ್ರಿಯೆಗೆ ಒಳಪಡಿಸಲಾಗಿದೆ.ಹೊಸ ಪೊಲೀಸ್ ಕಮಿಷನರ್ ಅಧಿಕಾರ ವಹಿಸಿಕೊಂಡ ಬಳಿಕ ಮಾದಕ ವಸ್ತುಗಳ ವಿರುದ್ಧದ ಕಾರ್ಯಾಚರಣೆ ಮತ್ತೆ ಚುರುಕುಗೊಂಡಿರುವುದು ಸಾರ್ವಜನಿಕ ವಲಯದಲ್ಲಿ ಗಮನ ಸೆಳೆದಿದೆ. ನಗರದಲ್ಲಿ ಗಾಂಜಾ ಸೇರಿದಂತೆ ಮಾದಕ ವಸ್ತುಗಳ ಅಕ್ರಮ ಮಾರಾಟಕ್ಕೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ಕೈಗೊಳ್ಳುತ್ತಿರುವ ಕ್ರಮಗಳ ಬಗ್ಗೆ ಇದೀಗ ನಿರೀಕ್ಷೆ ಹೆಚ್ಚಾಗಿದೆ.

Sep 6, 2026 | 11:59 AM
243 0
ಹುಬ್ಬಳ್ಳಿಯನ್ನೇ ಬೆಚ್ಚಿಬೀಳಿಸಿದ್ದ ದಾದಾಪೀರ್ ಕೊಲೆ ಪ್ರಕರಣಕ್ಕೆ ಟ್ವಿಸ್ಟ್: ಇಬ್ಬರು ಆರೋಪಿಗಳು ಪೊಲೀಸರ ವಶಕ್ಕೆ!

ಹುಬ್ಬಳ್ಳಿಯನ್ನೇ ಬೆಚ್ಚಿಬೀಳಿಸಿದ್ದ ದಾದಾಪೀರ್ ಕೊಲೆ ಪ್ರಕರಣಕ್ಕೆ ಟ್ವಿಸ್ಟ್: ಇಬ್ಬರು ಆರೋಪಿಗಳು ಪೊಲೀಸರ ವಶಕ್ಕೆ!

ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯನ್ನೇ ಬೆಚ್ಚಿಬೀಳಿಸಿದ್ದ ಹಾಡಹಗಲೇ ನಡೆದ ದಾದಾಪೀರ್ ಬರ್ಬರ ಹತ್ಯೆ ಪ್ರಕರಣಕ್ಕೆ ಇದೀಗ ಮಹತ್ವದ ತಿರುವು ಸಿಕ್ಕಿದೆ. ನಡು ರಸ್ತೆಯಲ್ಲೇ ಯುವಕನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಗಳಿಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಕಳೆದ ಶುಕ್ರವಾರ ಮಟಮಟ ಮಧ್ಯಾಹ್ನ ಹುಬ್ಬಳ್ಳಿಯ ಲಿಂಗರಾಜನಗರದ ಸಿದ್ದೇಶ್ವರ ಪಾರ್ಕ್ ಬಳಿ ದಾದಾಪೀರ್ ಉದಯಕರ್ ಎಂಬ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಘಟನೆ ಬಳಿಕ ಆರೋಪಿಗಳಿಗಾಗಿ ಪೊಲೀಸರು ತೀವ್ರ ಶೋಧ ನಡೆಸಿದ್ದರು.ಇದೀಗ ಎಸಿಪಿ ಶಿವಾನಂದ ಚಲವಾದಿ ನೇತೃತ್ವದ ಪೊಲೀಸ್ ತಂಡ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದೆ ಎಂದು ತಿಳಿದುಬಂದಿದೆ. ಆರೋಪಿಗಳನ್ನು ಹುಬ್ಬಳ್ಳಿಯ ಈಶ್ವರ ನಗರದ ವೀರೇಂದ್ರ ಮಟ್ಟಿ ತಳಕಲ್ ಹಾಗೂ ದೀಪಕ್ ಛಲವಾದಿ ಎಂದು ಗುರುತಿಸಲಾಗಿದೆ ಎನ್ನಲಾಗಿದೆ.ಈ ಪ್ರಕರಣದ ಹಿಂದೆ 2015ರ ಹಳೆ ಕೊಲೆ ಪ್ರಕರಣದ ದ್ವೇಷ ಇರಬಹುದೆಂಬ ಶಂಕೆ ಈಗ ಮತ್ತಷ್ಟು ಬಲಗೊಂಡಿದೆ. 2015ರಲ್ಲಿ ಈಶ್ವರನಗರದಲ್ಲಿ ಮಾರುತಿ ತಳಕಲ್ ಎಂಬಾತನ ಕೊಲೆ ನಡೆದಿತ್ತು. ಆ ಪ್ರಕರಣದಲ್ಲಿ ದಾದಾಪೀರ್ ಕೂಡ ಆರೋಪಿಯಾಗಿದ್ದ ಎನ್ನಲಾಗಿದೆ. ಬಳಿಕ ಪ್ರಕರಣದಲ್ಲಿ ರಾಜಿ ನಡೆದು ದಾದಾಪೀರ್ ಖುಲಾಸೆಯಾಗಿದ್ದ ಎಂದು ತಿಳಿದುಬಂದಿದೆ.ಇದೀಗ ಪೊಲೀಸರ ವಶದಲ್ಲಿರುವ ವೀರೇಂದ್ರ ಮಟ್ಟಿ ತಳಕಲ್, ಹತ್ಯೆಯಾಗಿದ್ದ ಮಾರುತಿ ತಳಕಲ್ ಅವರ ಸಹೋದರ ಎನ್ನಲಾಗಿದ್ದು, ಮತ್ತೊಬ್ಬ ಆರೋಪಿ ದೀಪಕ್ ಛಲವಾದಿ, ಮಾರುತಿ ಅವರ ಅಳಿಯ ಎನ್ನಲಾಗಿದೆ.ಹೀಗಾಗಿ, 2015ರ ಕೊಲೆ ಪ್ರಕರಣದ ದ್ವೇಷವೇ ದಾದಾಪೀರ್ ಹತ್ಯೆಗೆ ಕಾರಣವಾಗಿದೆಯೇ ಎಂಬುದು ತನಿಖೆಯ ಪ್ರಮುಖ ಅಂಶವಾಗಿದೆ.ಈಗಾಗಲೇ ಇಬ್ಬರು ಆರೋಪಿಗಳನ್ನು ಹುಬ್ಬಳ್ಳಿಯ ಗಬ್ಬೂರು ಬೈಪಾಸ್ ಬಳಿ ವಶಕ್ಕೆ ಪಡೆದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಹತ್ಯೆಗೆ ನಿಖರ ಕಾರಣವೇನು? ಕೊಲೆಗೆ ಸಂಚು ಹೇಗೆ ರೂಪಿಸಲಾಗಿತ್ತು? ಮತ್ತಷ್ಟು ಮಂದಿ ಇದರಲ್ಲಿ ಭಾಗಿಯಾಗಿದ್ದಾರೆಯೇ? ಎಂಬ ಹಲವು ಪ್ರಶ್ನೆಗಳಿಗೆ ಪೊಲೀಸರ ತನಿಖೆಯಲ್ಲಿ ಉತ್ತರ ಸಿಗಬೇಕಿದೆ.ಹಳೆ ಕೊಲೆ ಪ್ರಕರಣದ ದ್ವೇಷ... ವರ್ಷಗಳ ಬಳಿಕ ನಡೆದ ಬರ್ಬರ ಹತ್ಯೆ... ಇದೀಗ ಪೊಲೀಸರ ಕೈಗೆ ಸಿಕ್ಕ ಇಬ್ಬರು ಆರೋಪಿಗಳು! ದಾದಾಪೀರ್ ಕೊಲೆ ಪ್ರಕರಣದ ಸಂಪೂರ್ಣ ರಹಸ್ಯ ವಿಚಾರಣೆ ಬಳಿಕ ಮತ್ತಷ್ಟು ಬಹಿರಂಗವಾಗುವ ಸಾಧ್ಯತೆಯಿದೆ.

Aug 30, 2026 | 09:57 AM
112 0
ಹುಬ್ಬಳ್ಳಿ ದಾದಾಪೀರ್ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಮೂವರ ವಿರುದ್ಧ ದೂರು ದಾಖಲು

ಹುಬ್ಬಳ್ಳಿ ದಾದಾಪೀರ್ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಮೂವರ ವಿರುದ್ಧ ದೂರು ದಾಖಲು

ಹುಬ್ಬಳ್ಳಿ:ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಹಾಡಹಗಲೇ ನಡೆದ ದಾದಾಪೀರ್ ಉದೆಯಕರ (34) ಬರ್ಬರ ಹತ್ಯೆ ಪ್ರಕರಣಕ್ಕೆ ಇದೀಗ ಮಹತ್ವದ ತಿರುವು ಸಿಕ್ಕಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ಧ ದೂರು ದಾಖಲಾಗಿದೆ.ಹುಬ್ಬಳ್ಳಿಯ ಲಿಂಗರಾಜನಗರದ ಸಿದ್ದೇಶ್ವರ ಪಾರ್ಕ್ ಬಳಿ ಬೋಗೇನಾಗರಕೊಪ್ಪ ಗ್ರಾಮದ ದಾದಾಪೀರ್ ಉದೆಯಕರ ಅವರನ್ನು ತಲ್ವಾರ್‌ನಿಂದ ಹಲ್ಲೆ ನಡೆಸಿ ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಮೃತರ ಸಹೋದರ ಮೊಹಮ್ಮದ್ ಸಾಧಿಕ್ ಉದೆಯಕರ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.ದೂರಿನಲ್ಲಿ ವೀರೇಂದ್ರ ತಳಕಲ್, ದೀಪಕ್ ಚಲವಾದಿ ಸೇರಿದಂತೆ ಮೂವರ ವಿರುದ್ಧ ಆರೋಪ ಮಾಡಲಾಗಿದೆ.ದೂರುದಾರರ ಪ್ರಕಾರ, 2015ರಲ್ಲಿ ಕಸಬಾಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಗಿರಿಯಾಲ ರಸ್ತೆ ಈಶ್ವರನಗರದ ಬಳಿ ಮಾರುತಿ ತಳಕಲ್ ಎಂಬಾತನ ಕೊಲೆ ಪ್ರಕರಣದಲ್ಲಿ ದಾದಾಪೀರ್ ಭಾಗಿಯಾಗಿದ್ದ ಎನ್ನಲಾಗಿದೆ. ಇದೇ ಹಳೆಯ ದ್ವೇಷವನ್ನು ಇಟ್ಟುಕೊಂಡು ಕೊಲೆಯಾದ ಮಾರುತಿ ಅವರ ಸಂಬಂಧಿಕರಾದ ವೀರೇಂದ್ರ ತಳಕಲ್, ದೀಪಕ್ ಚಲವಾದಿ ಹಾಗೂ ಇತರರು ದಾದಾಪೀರ್‌ಗೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.ಆ.28ರಂದು ಸಂಚು ರೂಪಿಸಿ, ಲಿಂಗರಾಜನಗರದ ಸಿದ್ದೇಶ್ವರ ಪಾರ್ಕ್ ಬಳಿ ದಾದಾಪೀರ್‌ನನ್ನು ಹಿಂಬಾಲಿಸಿಕೊಂಡು ಬಂದ ಆರೋಪಿಗಳು, ತಲ್ವಾರ್‌ನಿಂದ ಮುಖದ ಭಾಗಕ್ಕೆ ಹಲ್ಲೆ ನಡೆಸಿ ಭೀಕರವಾಗಿ ಕೊಲೆ ಮಾಡಿದ್ದಾರೆ. ಬಳಿಕ ಆಟೋದಲ್ಲಿ ಪರಾರಿಯಾಗಿದ್ದಾರೆ ಎಂದು ಮೃತರ ಸಹೋದರ ದೂರಿನಲ್ಲಿ ಆರೋಪಿಸಿದ್ದಾರೆ.ಘಟನೆಯ ಬಳಿಕ ಪೊಲೀಸರು ಸ್ಥಳದಲ್ಲಿನ ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸುತ್ತಿದ್ದು, ಆರೋಪಿಗಳ ಚಲನವಲನದ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ. ಆರೋಪಿಗಳ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.ಪ್ರಕರಣದ ತನಿಖೆಗಾಗಿ ಎಸಿಪಿ ಶಿವಾನಂದ ಚಲವಾದಿ ನೇತೃತ್ವದಲ್ಲಿ ವಿಶೇಷ ಪೊಲೀಸ್ ತಂಡ ರಚಿಸಲಾಗಿದೆ.ಹಳೆಯ ಕೊಲೆ ಪ್ರಕರಣದ ದ್ವೇಷವೇ ಈ ಹತ್ಯೆಗೆ ಕಾರಣವೇ? ಅಥವಾ ಇದರ ಹಿಂದೆ ಬೇರೆಯೇ ಕಾರಣವಿದೆಯೇ ಎಂಬುದರ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.ಒಟ್ಟಿನಲ್ಲಿ, ಹಳೆ ಕೊಲೆ ಪ್ರಕರಣದ ದ್ವೇಷ, ಬೆದರಿಕೆ, ಹಾಡಹಗಲೇ ತಲ್ವಾರ್ ದಾಳಿ ಮತ್ತು ಸಿಸಿಟಿವಿ ದೃಶ್ಯಗಳು ಇದೀಗ ದಾದಾಪೀರ್ ಕೊಲೆ ಪ್ರಕರಣದ ತನಿಖೆಯಲ್ಲಿ ಪ್ರಮುಖ ಅಂಶಗಳಾಗಿವೆ. ಆರೋಪಿಗಳ ಬಂಧನದ ಬಳಿಕವೇ ಪ್ರಕರಣದ ಸಂಪೂರ್ಣ ಹಿನ್ನೆಲೆ ಹಾಗೂ ಕೊಲೆಗೆ ನಿಖರ ಕಾರಣ ಹೊರಬರಬೇಕಿದೆ.

Aug 29, 2026 | 05:10 AM
598 0
ಹುಬ್ಬಳ್ಳಿಯಲ್ಲಿ ಹಾಡಹಗಲೇ ಸಿನಿಮೀಯ ಶೈಲಿಯಲ್ಲಿ ವ್ಯಕ್ತಿಯ ಬರ್ಬರ ಹತ್ಯೆ; ವಿಡಿಯೋ ವೈರಲ್

ಹುಬ್ಬಳ್ಳಿಯಲ್ಲಿ ಹಾಡಹಗಲೇ ಸಿನಿಮೀಯ ಶೈಲಿಯಲ್ಲಿ ವ್ಯಕ್ತಿಯ ಬರ್ಬರ ಹತ್ಯೆ; ವಿಡಿಯೋ ವೈರಲ್

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಹಾಡಹಗಲೇ ವ್ಯಕ್ತಿಯೊಬ್ಬರನ್ನು ನಡು ರಸ್ತೆಯಲ್ಲೇ ಬರ್ಬರವಾಗಿ ಕೊಚ್ಚಿ ಹತ್ಯೆ ಮಾಡಿರುವ ಘಟನೆ ಸಂಚಲನ ಮೂಡಿಸಿದೆ.ಹುಬ್ಬಳ್ಳಿಯ ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯ ಸಿದ್ದೇಶ್ವರ ಪಾರ್ಕ್ ಬಳಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, ವ್ಯಕ್ತಿಯ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಹತ್ಯೆ ಮಾಡಲಾಗಿದೆ ಎಂದು ತಿಳಿದುಬಂದಿದೆ.ಘಟನೆಯ ದೃಶ್ಯಗಳ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ.ಮಾಹಿತಿ ತಿಳಿದು ಸ್ಥಳಕ್ಕೆ ವಿದ್ಯಾನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹತ್ಯೆಗೆ ಕಾರಣವೇನು ಹಾಗೂ ಮೃತ ವ್ಯಕ್ತಿಯ ಗುರುತು ಸೇರಿದಂತೆ ಘಟನೆಯ ಸಂಪೂರ್ಣ ವಿವರಗಳು ಸದ್ಯಕ್ಕೆ ಲಭ್ಯವಾಗಿಲ್ಲ.ಹತ್ಯೆ ನಡೆಸಿದ ಆರೋಪಿಗಳ ಪತ್ತೆಗಾಗಿ ಪೊಲೀಸರು ತೀವ್ರ ಶೋಧಕಾರ್ಯ ನಡೆಸುತ್ತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಪೊಲೀಸ್ ತನಿಖೆಯ ಬಳಿಕವಷ್ಟೇ ಲಭ್ಯವಾಗಬೇಕಿದೆ.ಹುಬ್ಬಳ್ಳಿಯಲ್ಲಿ ಹಾಡಹಗಲೇ ನಡೆದ ಬರ್ಬರ ಹತ್ಯೆ ಪ್ರಕರಣ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ.

Aug 28, 2026 | 09:55 AM
374 0
15ಕ್ಕೂ ಹೆಚ್ಚು ಆರೋಪಿಗಳ ವಿರುದ್ಧ ಪ್ರಕರಣ ದಾಖಲು; ಜಾಮೀನು ರಹಿತ ಕಲಂಗಳು ಸೇರಿವೆ ಎನ್ನಲಾಗಿದ್ದರೂ ಬಂಧನವಾಗಿಲ್ಲವೆಂದು ಸಂತ್ರಸ್ತೆ ಆರೋಪ

15ಕ್ಕೂ ಹೆಚ್ಚು ಆರೋಪಿಗಳ ವಿರುದ್ಧ ಪ್ರಕರಣ ದಾಖಲು; ಜಾಮೀನು ರಹಿತ ಕಲಂಗಳು ಸೇರಿವೆ ಎನ್ನಲಾಗಿದ್ದರೂ ಬಂಧನವಾಗಿಲ್ಲವೆಂದು ಸಂತ್ರಸ್ತೆ ಆರೋಪ

ಹುಬ್ಬಳ್ಳಿ: ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದ್ದರೂ ಆರೋಪಿಗಳ ವಿರುದ್ಧ ಇದುವರೆಗೆ ಯಾವುದೇ ಬಂಧನ ಕ್ರಮ ಕೈಗೊಳ್ಳಲಾಗಿಲ್ಲ ಎಂಬ ಆರೋಪ ಇದೀಗ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.ಶರೀನ್ ಭಜಂತ್ರಿ ಅವರ ದೂರಿನ ಆಧಾರದ ಮೇಲೆ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ FIR ಸಂಖ್ಯೆ 88/2026 ದಾಖಲಾಗಿದ್ದು, ಪ್ರಕರಣದಲ್ಲಿ ಸುಮಾರು 15ಕ್ಕೂ ಹೆಚ್ಚು ಮಂದಿಯ ವಿರುದ್ಧ ಆರೋಪಗಳನ್ನು ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಪ್ರಕರಣದಲ್ಲಿ ಕೆಲವು ಜಾಮೀನು ರಹಿತ (Non-Bailable) ಕಲಂಗಳು ಕೂಡ ಅನ್ವಯಿಸಲಾಗಿದೆ ಎಂದು ತಿಳಿದುಬಂದಿದೆ.ಆದರೆ FIR ದಾಖಲಾಗಿದ್ದು ಹಲವು ದಿನಗಳು ಕಳೆದರೂ ಆರೋಪಿಗಳನ್ನು ಬಂಧಿಸುವ ಅಥವಾ ಕಾನೂನು ಪ್ರಕಾರ ಮುಂದಿನ ತನಿಖಾ ಕ್ರಮ ಕೈಗೊಳ್ಳುವಲ್ಲಿ ಪೊಲೀಸರು ವಿಳಂಬ ಮಾಡುತ್ತಿದ್ದಾರೆ ಎಂದು ಶರೀನ್ ಭಜಂತ್ರಿ ಆರೋಪಿಸಿದ್ದಾರೆ.‘FIR ಇದೆ… ಆದರೆ ಆರೋಪಿಗಳು ಹೊರಗಡೆ’ ಎಂಬ ಆರೋಪಶರೀನ್ ಪರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾಗುತ್ತಿರುವ ಸುದ್ದಿಗಳು ಹಾಗೂ ಪೋಸ್ಟ್‌ಗಳಿಗೆ ಸಂಬಂಧಿಸಿದಂತೆ, ಪ್ರಕರಣದಲ್ಲಿ ಆರೋಪಿಗಳೆಂದು ಹೆಸರಿಸಲ್ಪಟ್ಟ ಕೆಲವರು ಕಾಮೆಂಟ್ ಮಾಡುತ್ತಾ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.ಇದು ನಿಜವಾಗಿದ್ದರೆ, ಪ್ರಕರಣದ ತನಿಖೆಯ ಸಂದರ್ಭದಲ್ಲಿ ಆರೋಪಿಗಳ ಚಲನವಲನ, ಸಾಕ್ಷಿಗಳ ಮೇಲೆ ಯಾವುದೇ ಪ್ರಭಾವ ಬೀರುವ ಸಾಧ್ಯತೆ, ಸಾಕ್ಷ್ಯಾಧಾರಗಳಿಗೆ ಧಕ್ಕೆ ಉಂಟಾಗುವ ಸಾಧ್ಯತೆ ಸೇರಿದಂತೆ ಹಲವು ಅಂಶಗಳ ಬಗ್ಗೆ ಪೊಲೀಸರು ಗಮನ ಹರಿಸಬೇಕಾದ ಅಗತ್ಯವಿದೆ ಎಂಬ ಪ್ರಶ್ನೆ ಉದ್ಭವಿಸಿದೆ.ಆದಾಗ್ಯೂ, ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡಿರುವುದನ್ನು ಮಾತ್ರ ಆಧರಿಸಿ ಆರೋಪಿಗಳು ತಪ್ಪಿತಸ್ಥರು ಎಂದು ನಿರ್ಧರಿಸಲಾಗುವುದಿಲ್ಲ. ಪ್ರಕರಣದ ಸತ್ಯಾಸತ್ಯತೆಯನ್ನು ತನಿಖೆಯ ಮೂಲಕವೇ ಪೊಲೀಸರು ನಿರ್ಧರಿಸಬೇಕಾಗಿದೆ.ಒಂದೇ ಪ್ರಕರಣವಲ್ಲ… ಮೂರು FIRಗಳಿದ್ದರೂ ಕ್ರಮದ ವೇಗ ಏಕೆ ಕಡಿಮೆ?ಶರೀನ್ ಅವರ ಹೇಳಿಕೆಯ ಪ್ರಕಾರ, ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಒಂದಲ್ಲ, ಎರಡಲ್ಲ, ಮೂರು FIRಗಳು ದಾಖಲಾಗಿವೆ ಎಂಬ ಆರೋಪವಿದೆ. ಆದರೆ ಈ ಪ್ರಕರಣಗಳ ತನಿಖೆ ಹಾಗೂ ಆರೋಪಿಗಳ ವಿರುದ್ಧದ ಮುಂದಿನ ಕಾನೂನು ಕ್ರಮದಲ್ಲಿ ನಿರೀಕ್ಷಿತ ವೇಗ ಕಂಡುಬರುತ್ತಿಲ್ಲ ಎಂಬುದು ಅವರ ಅಳಲು.ಈ ಹಿನ್ನೆಲೆಯಲ್ಲಿ,FIR ದಾಖಲಾಗಿದೆ.ಆರೋಪಗಳಿವೆ.ತನಿಖೆ ನಡೆಯಬೇಕಿದೆ.ಆದರೆ ಬಂಧನ ಏಕೆ ಆಗಿಲ್ಲ?ಎಂಬ ಪ್ರಶ್ನೆಗಳು ಇದೀಗ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.ಪೊಲೀಸ್ ಅಧಿಕಾರಿಗಳ ವಿರುದ್ಧದ ಹಿಂದಿನ ಆರೋಪಗಳೂ ಮತ್ತೆ ಚರ್ಚೆಗೆಬೆಂಡಿಗೇರಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಹಾಗೂ ಪೊಲೀಸ್ ಕಾರ್ಯವೈಖರಿ ಕುರಿತು ಈ ಹಿಂದೆಯೂ ಸಾರ್ವಜನಿಕರಿಂದ ವಿವಿಧ ರೀತಿಯ ಆರೋಪಗಳು ಕೇಳಿಬಂದಿದ್ದವು ಎಂಬ ಮಾತುಗಳು ಇದೀಗ ಮತ್ತೆ ಮುನ್ನೆಲೆಗೆ ಬಂದಿವೆ.ಅದೇ ರೀತಿಯ ಆರೋಪಗಳು ಮತ್ತೊಮ್ಮೆ ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ, ಪ್ರಕರಣದ ತನಿಖೆ ನಿಷ್ಪಕ್ಷಪಾತವಾಗಿ ಮತ್ತು ಯಾವುದೇ ಬಾಹ್ಯ ಒತ್ತಡವಿಲ್ಲದೆ ನಡೆಯುತ್ತಿದೆಯೇ? ಎಂಬ ಪ್ರಶ್ನೆಯೂ ಉದ್ಭವಿಸಿದೆ.‘ಕಾಣದ ಕೈಗಳ’ ಆರೋಪಕ್ಕೆ ಪೊಲೀಸ್ ಸ್ಪಷ್ಟನೆ ಅಗತ್ಯಆರೋಪಿಗಳು ಬಂಧನವಾಗದೆ ಹೊರಗಡೆ ಇರುವುದರ ಹಿಂದೆ ಯಾವುದೇ **ರಾಜಕೀಯ ಅಥವಾ ಪ್ರಭಾವಿ ವ್ಯಕ್ತಿಗಳ ಹಸ್ತಕ್ಷೇಪವಿದೆಯೇ?** ಎಂಬ ಅನುಮಾನವನ್ನು ಶರೀನ್ ಅವರ ಪರದವರು ವ್ಯಕ್ತಪಡಿಸುತ್ತಿದ್ದಾರೆ.ಆದರೆ ಈ ಆರೋಪಗಳಿಗೆ ಇದುವರೆಗೆ ಯಾವುದೇ ಅಧಿಕೃತ ದೃಢೀಕರಣವಿಲ್ಲ. ಆದ್ದರಿಂದ ರಾಜಕೀಯ ಹಸ್ತಕ್ಷೇಪ ಅಥವಾ ಬಾಹ್ಯ ಒತ್ತಡವಿದೆ ಎಂದು ನಿರ್ಣಾಯಕವಾಗಿ ಹೇಳಲು ಸಾಧ್ಯವಿಲ್ಲ.ಹೀಗಾಗಿ ಪೊಲೀಸ್ ಇಲಾಖೆ ಈ ಕುರಿತು ಸ್ಪಷ್ಟನೆ ನೀಡಬೇಕಾಗಿದೆ ಎಂಬ ಒತ್ತಾಯ ಕೇಳಿಬರುತ್ತಿದೆ.Non-Bailable ಕಲಂ ಎಂದರೆ ತಕ್ಷಣ ಬಂಧನ ಕಡ್ಡಾಯವೇ?ಇಲ್ಲಿ ಒಂದು ಪ್ರಮುಖ ಕಾನೂನು ಅಂಶವನ್ನೂ ಗಮನಿಸಬೇಕಾಗಿದೆ. ಪ್ರಕರಣದಲ್ಲಿ Non-Bailable Offences ಇದ್ದರೆ ಮಾತ್ರ ಆರೋಪಿಯನ್ನು ಯಾವುದೇ ಸಂದರ್ಭದಲ್ಲೂ ತಕ್ಷಣ ಬಂಧಿಸಲೇಬೇಕು ಎಂಬ ಸರಳ ನಿಯಮವಿಲ್ಲ. ಬಂಧನದ ಅಗತ್ಯತೆ, ಆರೋಪದ ಸ್ವರೂಪ, ಸಾಕ್ಷ್ಯಾಧಾರಗಳು, ತನಿಖೆಯ ಅಗತ್ಯತೆ, ಆರೋಪಿಯು ತನಿಖೆಗೆ ಸಹಕರಿಸುತ್ತಿದ್ದಾನೆಯೇ, ಸಾಕ್ಷ್ಯವನ್ನು ಹಾಳು ಮಾಡುವ ಅಥವಾ ಸಾಕ್ಷಿದಾರರನ್ನು ಪ್ರಭಾವಿಸುವ ಸಾಧ್ಯತೆ ಇದೆಯೇ ಮುಂತಾದ ಅಂಶಗಳನ್ನು ಪೊಲೀಸರು ಕಾನೂನುಬದ್ಧವಾಗಿ ಪರಿಗಣಿಸಬೇಕು.ಆದರೆ ಬಂಧನ ಮಾಡದಿದ್ದರೆ, ಬಂಧನ ಏಕೆ ಅಗತ್ಯವಾಗಿಲ್ಲ ಎಂಬುದಕ್ಕೂ ತನಿಖಾಧಿಕಾರಿಯ ಕಾನೂನುಬದ್ಧ ಕಾರಣ ಮತ್ತು ದಾಖಲೆ ಇರಬೇಕಾಗುತ್ತದೆ. ತನಿಖೆ ವಿಳಂಬವಾಗುತ್ತಿದೆ ಅಥವಾ ಪೊಲೀಸ್ ಕ್ರಮದ ಬಗ್ಗೆ ಅನುಮಾನವಿದೆ ಎಂಬ ದೂರು ಇದ್ದರೆ, ಮೇಲಾಧಿಕಾರಿಗಳು ಪ್ರಕರಣವನ್ನು ಪರಿಶೀಲಿಸುವುದು ಅಗತ್ಯವಾಗುತ್ತದೆ.ಸಂತ್ರಸ್ತೆಗೆ ನ್ಯಾಯ ಸಿಗುತ್ತದೆಯೇ?FIR ದಾಖಲಾಗಿರುವ ಪ್ರಕರಣದಲ್ಲಿ ಆರೋಪಿಗಳ ವಿರುದ್ಧದ ಆರೋಪಗಳು ತನಿಖೆಯಲ್ಲಿ ಸಾಬೀತಾಗಬೇಕಿದೆ. ಅದೇ ವೇಳೆ ದೂರುದಾರರ ಆರೋಪಗಳನ್ನು ನಿರ್ಲಕ್ಷಿಸದೇ, ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ, ಸಂಬಂಧಪಟ್ಟ ಎಲ್ಲ ವ್ಯಕ್ತಿಗಳ ಹೇಳಿಕೆಗಳನ್ನು ದಾಖಲಿಸಿ, ಅಗತ್ಯವಿದ್ದರೆ ಕಾನೂನುಬದ್ಧ ಬಂಧನ ಸೇರಿದಂತೆ ಸೂಕ್ತ ಕ್ರಮ ಕೈಗೊಳ್ಳುವುದು ತನಿಖಾಧಿಕಾರಿಯ ಕರ್ತವ್ಯವಾಗಿದೆ.ಈ ಹಿನ್ನೆಲೆಯಲ್ಲಿ FIR ಸಂಖ್ಯೆ 88/2026ರ ತನಿಖೆ ಯಾವ ಹಂತದಲ್ಲಿದೆ? ಎಷ್ಟು ಮಂದಿಯನ್ನು ವಿಚಾರಣೆ ಮಾಡಲಾಗಿದೆ? ಯಾರನ್ನು ಬಂಧಿಸಲಾಗಿದೆ ಅಥವಾ ಬಂಧಿಸದಿರಲು ಕಾರಣವೇನು? ಪ್ರಕರಣದಲ್ಲಿ ಜಪ್ತಿ ಅಥವಾ ಸಾಕ್ಷ್ಯ ಸಂಗ್ರಹ ನಡೆದಿದೆಯೇ? ಎಂಬ ಪ್ರಶ್ನೆಗಳಿಗೆ ಬೆಂಡಿಗೇರಿ ಪೊಲೀಸರು ಸ್ಪಷ್ಟನೆ ನೀಡಬೇಕಾಗಿದೆ.ಈಗ ಸಾರ್ವಜನಿಕರ ಪ್ರಶ್ನೆ ಒಂದೇ — FIR ದಾಖಲಾಗಿದ್ದರೂ ಕ್ರಮ ಎಲ್ಲಿದೆ?ಒಂದಕ್ಕಿಂತ ಹೆಚ್ಚು ಪ್ರಕರಣಗಳು ದಾಖಲಾಗಿವೆ ಎಂಬ ಆರೋಪ, 15ಕ್ಕೂ ಹೆಚ್ಚು ಆರೋಪಿಗಳ ವಿರುದ್ಧ FIR ಇದೆ ಎನ್ನಲಾಗಿರುವುದು ಹಾಗೂ ಕೆಲವು Non-Bailable ಕಲಂಗಳು ಅನ್ವಯಿಸಲಾಗಿದೆ ಎಂಬ ಮಾಹಿತಿ ನಡುವೆ ಕೂಡ ಆರೋಪಿಗಳ ವಿರುದ್ಧ ಯಾವುದೇ ಗೋಚರ ಬಂಧನ ಕ್ರಮ ಕಂಡುಬರದಿದ್ದರೆ, ಪೊಲೀಸ್ ತನಿಖೆಯ ವೇಗ ಮತ್ತು ನಿಷ್ಪಕ್ಷಪಾತತೆಯ ಬಗ್ಗೆ ಪ್ರಶ್ನೆಗಳು ಮೂಡುವುದು ಸಹಜ.ಆರೋಪಿಗಳು ತಪ್ಪಿತಸ್ಥರೇ ಅಥವಾ ನಿರ್ದೋಷಿಗಳೇ ಎಂಬುದನ್ನು ನ್ಯಾಯಾಲಯ ನಿರ್ಧರಿಸಲಿದೆ. ಆದರೆ FIR ದಾಖಲಾಗಿರುವ ಪ್ರಕರಣದಲ್ಲಿ ತನಿಖೆ ಯಾವ ಹಂತದಲ್ಲಿದೆ ಎಂಬುದನ್ನು ಸಾರ್ವಜನಿಕರಿಗೆ ಮತ್ತು ದೂರುದಾರರಿಗೆ ಕಾನೂನುಬದ್ಧವಾಗಿ ಸ್ಪಷ್ಟಪಡಿಸುವ ಜವಾಬ್ದಾರಿ ಪೊಲೀಸ್ ಇಲಾಖೆಯ ಮೇಲಿದೆ.ಈ ಪ್ರಕರಣದಲ್ಲಿ ಯಾವುದೇ ರಾಜಕೀಯ ಅಥವಾ ಬಾಹ್ಯ ಹಸ್ತಕ್ಷೇಪವಿಲ್ಲದೆ, ನಿಷ್ಪಕ್ಷಪಾತ ತನಿಖೆ ನಡೆದು ಸತ್ಯ ಹೊರಬರಬೇಕು ಹಾಗೂ ತಪ್ಪಿತಸ್ಥರು ಯಾರೇ ಆಗಿದ್ದರೂ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

Aug 7, 2026 | 06:59 AM
348 0
ಒಂದು ವರ್ಷದ ಬಳಿಕ ದಾಖಲಾಗಿದ ಹಲ್ಲೆ ಪ್ರಕರಣ: ಡಿಸಿಪಿ ಶ್ರುತಿ ಎನ್.ಎಸ್. ಅವರ ಸೂಚನೆ ಮೇರೆಗೆ ಎಫ್‌ಐಆರ್ ದಾಖಲು

ಒಂದು ವರ್ಷದ ಬಳಿಕ ದಾಖಲಾಗಿದ ಹಲ್ಲೆ ಪ್ರಕರಣ: ಡಿಸಿಪಿ ಶ್ರುತಿ ಎನ್.ಎಸ್. ಅವರ ಸೂಚನೆ ಮೇರೆಗೆ ಎಫ್‌ಐಆರ್ ದಾಖಲು

ಹುಬ್ಬಳ್ಳಿ: ಕ್ಯಾನ್ಸರ್‌ನಿಂದ ಬಳಲುತ್ತಿರುವ ಶರೀನ ಭಜಂತ್ರಿ ಅವರ ಮೇಲೆ ಸುಮಾರು ಒಂದು ವರ್ಷದ ಹಿಂದೆ ನಡೆದಿತ್ತೆಂದು ಆರೋಪಿಸಲಾಗಿರುವ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಕೊನೆಗೂ ಹುಬ್ಬಳ್ಳಿಯ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿರುವುದಾಗಿ ತಿಳಿದು ಬಂದಿದೆ.ಲಭ್ಯ ಮಾಹಿತಿಯ ಪ್ರಕಾರ, ಪ್ರಕರಣ ದಾಖಲಿಸಲು ವಿಳಂಬವಾಗಿರುವ ಹಿನ್ನೆಲೆಯಲ್ಲಿ ಶರೀನ ಭಜಂತ್ರಿ ಅವರು ಹುಬ್ಬಳ್ಳಿ-ಧಾರವಾಡ ಪೊಲೀಸ್ ಉಪ ಆಯುಕ್ತೆ (ಡಿಸಿಪಿ) ಶ್ರುತಿ ಎನ್.ಎಸ್. ಅವರಿಗೆ ದೂರು ಸಲ್ಲಿಸಿದ್ದರು. ಬಳಿಕ ಡಿಸಿಪಿ ಅವರ ಸೂಚನೆ ಮೇರೆಗೆ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.ಈ ಬೆಳವಣಿಗೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಒಂದು ಕಡೆ ನಾಗರಿಕರ ದೂರುಗಳಿಗೆ ಸ್ಪಂದಿಸಿ ಅಗತ್ಯ ಕ್ರಮ ಕೈಗೊಳ್ಳುವಲ್ಲಿ ಡಿಸಿಪಿ ಶ್ರುತಿ ಎನ್.ಎಸ್. ಅವರು ತೋರಿದ ಕರ್ತವ್ಯನಿಷ್ಠೆ, ಮಾನವೀಯತೆ ಹಾಗೂ ತ್ವರಿತ ಸ್ಪಂದನೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಮತ್ತೊಂದೆಡೆ, ಒಂದು ಹಲ್ಲೆ ಪ್ರಕರಣದ ಎಫ್‌ಐಆರ್ ದಾಖಲಿಸಲು ಸುಮಾರು ಒಂದು ವರ್ಷ ಸಮಯ ಹಿಡಿದಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.ಪ್ರಕರಣ ದಾಖಲಿಸುವಲ್ಲಿ ಅನಗತ್ಯ ವಿಳಂಬವಾಗಿದೆಯೇ? ಸಂಬಂಧಪಟ್ಟ ಅಧಿಕಾರಿಗಳು ಕರ್ತವ್ಯಲೋಪ ಎಸಗಿದ್ದಾರೆಯೇ? ಎಂಬ ಚರ್ಚೆಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ. ಈ ಕುರಿತು ಪೊಲೀಸ್ ಇಲಾಖೆ ಸೂಕ್ತ ಸ್ಪಷ್ಟನೆ ನೀಡಬೇಕೆಂಬ ಆಗ್ರಹವೂ ವ್ಯಕ್ತವಾಗಿದೆ.ಇದೇ ವೇಳೆ, ಶರೀನ ಭಜಂತ್ರಿ ಅವರ ಹೇಳಿಕೆಯ ಪ್ರಕಾರ, ಪ್ರಕರಣ ದಾಖಲಾಗಿದ ಬಳಿಕವೂ ರಾಘವೇಂದ್ರ ಗೋಕಾಕ ಅವರ ಕುಟುಂಬದ ಸದಸ್ಯರು ತಮ್ಮ ಕುಟುಂಬದ ಮೇಲೆ ಕಿರುಕುಳ ಮುಂದುವರಿಸಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೆ, ತಮ್ಮ ಹಾಗೂ ಕುಟುಂಬದ ವಿರುದ್ಧ ಜಾತಿ ನಿಂದನೆ ಪ್ರಕರಣವನ್ನು ದುರುದ್ದೇಶದಿಂದ ದಾಖಲಿಸಲಾಗಿದೆ ಎಂದು ಶರೀನ ಆರೋಪಿಸಿದ್ದಾರೆ. ಈ ಆರೋಪಗಳ ಕುರಿತು ಸಂಬಂಧಪಟ್ಟವರ ಪ್ರತಿಕ್ರಿಯೆ ಇನ್ನಷ್ಟೇ ಲಭ್ಯವಾಗಬೇಕಿದೆ.ಒಂದೆಡೆ ಕ್ಯಾನ್ಸರ್‌ನಂತಹ ಗಂಭೀರ ಕಾಯಿಲೆಯೊಂದಿಗೆ ಹೋರಾಡುತ್ತಿರುವ ಮಹಿಳೆ ಹಾಗೂ ಮತ್ತೊಂದೆಡೆ ಆರ್ಥಿಕವಾಗಿ ದುರ್ಬಲ ಕುಟುಂಬ ಕಾನೂನು ರಕ್ಷಣೆಯ ನಿರೀಕ್ಷೆಯಲ್ಲಿರುವುದು ಗಮನಾರ್ಹ ಸಂಗತಿಯಾಗಿದೆ. ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿ-ಧಾರವಾಡ ಪೊಲೀಸ್ ಇಲಾಖೆ ಪ್ರಕರಣದ ಸಂಪೂರ್ಣ ತನಿಖೆ ನಡೆಸಿ, ಸತ್ಯಾಂಶವನ್ನು ಬಹಿರಂಗಪಡಿಸಿ, ತಪ್ಪಿತಸ್ಥರ ವಿರುದ್ಧ ಕಾನೂನುಬದ್ಧ ಹಾಗೂ ನಿಷ್ಪಕ್ಷಪಾತ ಕ್ರಮ ಕೈಗೊಳ್ಳಬೇಕೆಂಬುದು ಸಾರ್ವಜನಿಕರ ನಿರೀಕ್ಷೆಯಾಗಿದೆ.ಡಿಸಿಪಿ ಶ್ರುತಿ ಎನ್.ಎಸ್. ಅವರು ನಾಗರಿಕರ ದೂರುಗಳಿಗೆ ಸ್ಪಂದಿಸಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿರುವುದು ಪೊಲೀಸ್ ಇಲಾಖೆಯ ಮೇಲಿನ ಸಾರ್ವಜನಿಕರ ವಿಶ್ವಾಸವನ್ನು ಬಲಪಡಿಸುವ ಹೆಜ್ಜೆಯಾಗಿ ಹಲವರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಇದೇ ರೀತಿಯ ಜವಾಬ್ದಾರಿಯುತ ಹಾಗೂ ಮಾನವೀಯ ಪೊಲೀಸ್ ವ್ಯವಸ್ಥೆ ಇನ್ನಷ್ಟು ಬಲಗೊಳ್ಳಬೇಕೆಂಬ ಆಶಯವೂ ವ್ಯಕ್ತವಾಗಿದೆ.ಪ್ರಕರಣದ ತನಿಖೆ ಮುಂದುವರಿದಿದ್ದು, ತನಿಖೆಯ ಅಂತಿಮ ವರದಿ ಹಾಗೂ ನ್ಯಾಯಾಲಯದ ಮುಂದಿನ ಬೆಳವಣಿಗೆಗಳೇ ಪ್ರಕರಣದ ವಾಸ್ತವಾಂಶವನ್ನು ನಿರ್ಧರಿಸಲಿವೆ.

Aug 6, 2026 | 02:24 AM
214 0
ತಾರಿಹಾಳದ ರಾಮನಗರ ಬಳಿ ಅಂದರ್-ಬಾಹರ್ ಜೂಜಾಟಕ್ಕೆ ಪೊಲೀಸರ ದಾಳಿ; 5 ಮಂದಿ ಬಂಧನ

ತಾರಿಹಾಳದ ರಾಮನಗರ ಬಳಿ ಅಂದರ್-ಬಾಹರ್ ಜೂಜಾಟಕ್ಕೆ ಪೊಲೀಸರ ದಾಳಿ; 5 ಮಂದಿ ಬಂಧನ

ಹುಬ್ಬಳ್ಳಿ: ನಗರದ ಹೊರವಲಯದ ತಾರಿಹಾಳ ಗ್ರಾಮದ ರಾಮನಗರ ಸಮೀಪ ಖುಲ್ಲಾ ಜಾಗದಲ್ಲಿ ಅಂದರ್-ಬಾಹರ್ ಜೂಜಾಟದಲ್ಲಿ ತೊಡಗಿದ್ದವರ ಮೇಲೆ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸರು ದಾಳಿ ನಡೆಸಿ ಐವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ.ಪೊಲೀಸರು ನಿನ್ನೆ ಸಂಜೆ ನಡೆಸಿದ ಕಾರ್ಯಾಚರಣೆಯಲ್ಲಿ ಜೂಜಾಟದಲ್ಲಿ ತೊಡಗಿದ್ದವರನ್ನು ವಶಕ್ಕೆ ಪಡೆದು, ಅವರ ವಿರುದ್ಧ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.ಪ್ರಾಥಮಿಕ ಮಾಹಿತಿಯ ಪ್ರಕಾರ, ಬಂಧಿತರಿಂದ ಜೂಜಾಟಕ್ಕೆ ಬಳಸುತ್ತಿದ್ದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಸುಮಾರು ಐದು ಮಂದಿಯನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.ಹುಬ್ಬಳ್ಳಿ ಹೊರವಲಯದಲ್ಲಿ ಈ ರೀತಿಯ ಜೂಜಾಟ ಪ್ರಕರಣಗಳು ಪದೇಪದೇ ಬೆಳಕಿಗೆ ಬರುತ್ತಿರುವ ಹಿನ್ನೆಲೆಯಲ್ಲಿ, ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಇಂತಹ ಅಕ್ರಮ ಚಟುವಟಿಕೆಗಳಿಗೆ ಶಾಶ್ವತವಾಗಿ ಕಡಿವಾಣ ಬೀಳುತ್ತದೆಯೇ ಅಥವಾ ಮತ್ತೆ ಯಥಾಸ್ಥಿತಿ ಮುಂದುವರಿಯುತ್ತದೆಯೇ ಎಂಬುದು ಸಾರ್ವಜನಿಕರಲ್ಲಿ ಚರ್ಚೆಗೆ ಕಾರಣವಾಗಿದೆ.ಪೊಲೀಸರು ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

Jul 22, 2026 | 12:40 PM
47 0
ದೇವಸ್ಥಾನದ ಬಳಿ ಮದ್ಯಪಾನ ಪ್ರಶ್ನಿಸಿದ ವ್ಯಕ್ತಿಯ ಮೇಲೆ ಹಲ್ಲೆ; ಮೂವರ ವಿರುದ್ಧ ಪ್ರಕರಣ ದಾಖಲು

ದೇವಸ್ಥಾನದ ಬಳಿ ಮದ್ಯಪಾನ ಪ್ರಶ್ನಿಸಿದ ವ್ಯಕ್ತಿಯ ಮೇಲೆ ಹಲ್ಲೆ; ಮೂವರ ವಿರುದ್ಧ ಪ್ರಕರಣ ದಾಖಲು

ಹುಬ್ಬಳ್ಳಿ:ದೇವಸ್ಥಾನದ ಸಮೀಪ ಮದ್ಯಪಾನ ಮಾಡಬಾರದು ಎಂದು ಬುದ್ಧಿವಾದ ಹೇಳಿದ ವ್ಯಕ್ತಿಯ ಮೇಲೆ ಮೂವರು ಸೇರಿ ಹಲ್ಲೆ ನಡೆಸಿರುವ ಘಟನೆ ನಗರದ ಬಾಣತಿ ಕಟ್ಟೆ ಪ್ರದೇಶದಲ್ಲಿ ನಡೆದಿದ್ದು, ಈ ಸಂಬಂಧ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಗಾಯಗೊಂಡಿರುವ ವ್ಯಕ್ತಿಯನ್ನು ಅಯೋಧ್ಯ ನಗರದ ನಿವಾಸಿ ದೀಪಕ್ ಎಂದು ಗುರುತಿಸಲಾಗಿದೆ. ಆರೋಪಿಗಳಾಗಿ ಸಾಗರ್, ಪ್ರವೀಣ್ ಕುಮಾರ್ ಸೇರಿದಂತೆ ಮೂವರ ವಿರುದ್ಧ ದೂರು ದಾಖಲಾಗಿದೆ.ದೂರಿನ ಪ್ರಕಾರ, ದೇವಸ್ಥಾನದ ಸಮೀಪ ಆರೋಪಿಗಳು ಮದ್ಯಪಾನ ಮಾಡುತ್ತಿರುವುದನ್ನು ಕಂಡ ದೀಪಕ್, ಸಾರ್ವಜನಿಕ ಸ್ಥಳ ಹಾಗೂ ಧಾರ್ಮಿಕ ಕ್ಷೇತ್ರದ ಬಳಿ ಮದ್ಯಪಾನ ಮಾಡಬಾರದು ಎಂದು ಬುದ್ಧಿವಾದ ಹೇಳಿದ್ದಾರೆ. ಇದರಿಂದ ಕೋಪಗೊಂಡ ಆರೋಪಿಗಳು ದೀಪಕ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಕಲ್ಲು ಹಾಗೂ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.ಹಲ್ಲೆಯಿಂದ ಗಾಯಗೊಂಡ ದೀಪಕ್ ಅವರಿಗೆ ಚಿಕಿತ್ಸೆ ನೀಡಲಾಗಿದ್ದು, ಘಟನೆ ಕುರಿತು ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಕೊಲೆಗೆ ಯತ್ನ ಸೇರಿದಂತೆ ವಿವಿಧ ಆರೋಪಗಳಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Jul 22, 2026 | 05:14 AM
88 0
ಶಿವಾಜಿನಗರದಲ್ಲಿ 'ಸುರಕ್ಷಿತ ಪಾದಚಾರಿ ಮಾರ್ಗ' ಅಭಿಯಾನ ವೇಳೆ ಅಧಿಕಾರಿಗಳ ಮೇಲೆ ಹಲ್ಲೆ: ಐವರು ವಶಕ್ಕೆ

ಶಿವಾಜಿನಗರದಲ್ಲಿ 'ಸುರಕ್ಷಿತ ಪಾದಚಾರಿ ಮಾರ್ಗ' ಅಭಿಯಾನ ವೇಳೆ ಅಧಿಕಾರಿಗಳ ಮೇಲೆ ಹಲ್ಲೆ: ಐವರು ವಶಕ್ಕೆ

ಬೆಂಗಳೂರು: ನಗರದ ಶಿವಾಜಿನಗರದಲ್ಲಿ ನಡೆದ 'ಸುರಕ್ಷಿತ ಪಾದಚಾರಿ ಮಾರ್ಗ' (Safe Footpath) ಅಭಿಯಾನದ ವೇಳೆ ಜಿಬಿಎ (GBA) ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಐವರನ್ನು ವಶಕ್ಕೆ ಪಡೆದಿದ್ದಾರೆ.ಈ ಕುರಿತು ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಮಾಹಿತಿ ನೀಡಿ, ಪ್ರಕರಣದ ಪ್ರಮುಖ ಪ್ರಚೋದಕರೆಂದು ಗುರುತಿಸಲಾದ ಬಸವರಾಜ ಪುಡುಕೋಟೆ ಅವರನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ.ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲರ ವಿರುದ್ಧವೂ ಭಾರತೀಯ ನ್ಯಾಯ ಸಂಹಿತೆಯ (BNS) ಅನ್ವಯ ಅನ್ವಯವಾಗುವ ಗಂಭೀರ ಆರೋಪಗಳಡಿ, ಕೊಲೆ ಯತ್ನಕ್ಕೆ ಸಮಾನವಾದ ಆರೋಪ ಸೇರಿದಂತೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದರು.ಹಲ್ಲೆ ನಡೆಸಿದವರನ್ನು "ಸಮಾಜಘಾತುಕ ಶಕ್ತಿಗಳು" ಎಂದು ಬಣ್ಣಿಸಿದ ಸಚಿವ ಕೃಷ್ಣ ಬೈರೇಗೌಡ, ಸಾರ್ವಜನಿಕರ ಹಿತದೃಷ್ಟಿಯಿಂದ ಹಾಗೂ ಪಾದಚಾರಿಗಳ ಸುರಕ್ಷತೆಯನ್ನು ಖಚಿತಪಡಿಸುವ ಉದ್ದೇಶದಿಂದ ಸರ್ಕಾರ ಈ ಅಭಿಯಾನವನ್ನು ನಡೆಸುತ್ತಿದೆ. ಕರ್ತವ್ಯನಿರತ ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿ ಮೇಲೆ ಹಲ್ಲೆ ನಡೆಸುವ ಯಾವುದೇ ವ್ಯಕ್ತಿಯನ್ನು ಸರ್ಕಾರ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದು, ಪ್ರಕರಣದಲ್ಲಿ ಭಾಗಿಯಾಗಿರುವ ಇತರ ಆರೋಪಿಗಳನ್ನು ಗುರುತಿಸಿ ಬಂಧಿಸುವ ಕಾರ್ಯವೂ ನಡೆಯುತ್ತಿದೆ.

Jul 21, 2026 | 11:31 AM
384 0
ಧಾರವಾಡದಲ್ಲಿ ಬೆಚ್ಚಿಬೀಳಿಸುವ ಆಸ್ತಿ ಕಬಳಿಕೆ ಜಾಲ? ನ್ಯಾಯಾಲಯದಲ್ಲೇ 'ಸತ್ತ ಮಹಿಳೆ' ಹೆಸರಿನಲ್ಲಿ ಸುಳ್ಳು ದಾಖಲೆ ಸಲ್ಲಿಕೆ ಆರೋಪ – ಬಳಿಕ ಜೀವಂತವಾಗಿ ಬಂದು ಪಾಲುದಾರಿಕೆಯಲ್ಲಿ ಮತ್ತೊಂದು ಆಸ್ತಿ ಕಬಳಿಕೆ?

ಧಾರವಾಡದಲ್ಲಿ ಬೆಚ್ಚಿಬೀಳಿಸುವ ಆಸ್ತಿ ಕಬಳಿಕೆ ಜಾಲ? ನ್ಯಾಯಾಲಯದಲ್ಲೇ 'ಸತ್ತ ಮಹಿಳೆ' ಹೆಸರಿನಲ್ಲಿ ಸುಳ್ಳು ದಾಖಲೆ ಸಲ್ಲಿಕೆ ಆರೋಪ – ಬಳಿಕ ಜೀವಂತವಾಗಿ ಬಂದು ಪಾಲುದಾರಿಕೆಯಲ್ಲಿ ಮತ್ತೊಂದು ಆಸ್ತಿ ಕಬಳಿಕೆ?

ಧಾರವಾಡ: ಧಾರವಾಡ ಜಿಲ್ಲೆಯಲ್ಲಿ ನಕಲಿ ದಾಖಲೆಗಳ ಮೂಲಕ ಆಸ್ತಿಗಳನ್ನು ಕಬಳಿಸುವ ಪ್ರಕರಣಗಳು ಆಗಾಗ್ಗೆ ಬೆಳಕಿಗೆ ಬರುತ್ತಲೇ ಇವೆ. ಆದರೆ ಈಗ ಹೊರಬಿದ್ದಿರುವ ಆರೋಪಗಳು ಇನ್ನಷ್ಟು ಗಂಭೀರ ಸ್ವರೂಪದ್ದಾಗಿದ್ದು, ನ್ಯಾಯಾಂಗ ವ್ಯವಸ್ಥೆಯನ್ನೇ ದುರುಪಯೋಗಪಡಿಸಿಕೊಂಡು ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಯನ್ನು ಕಬಳಿಸಲು ಸಂಚು ರೂಪಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.ಲಭ್ಯವಿರುವ ದಾಖಲೆಗಳು ಹಾಗೂ ಸಂತ್ರಸ್ತರ ಆರೋಪಗಳ ಪ್ರಕಾರ, 2021–22ರ ಅವಧಿಯಲ್ಲಿ ನಡೆದ ಈ ಪ್ರಕರಣದಲ್ಲಿ ಒಬ್ಬ ವ್ಯಕ್ತಿ ನ್ಯಾಯಾಲಯಕ್ಕೆ ಸಲ್ಲಿಸಿದ ದಾಖಲೆಗಳಲ್ಲಿ ಒಬ್ಬ ಮಹಿಳೆ ಮೃತಪಟ್ಟಿದ್ದಾಳೆ ಎಂದು ಸುಳ್ಳು ಮಾಹಿತಿ ನೀಡಿ, ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸೃಷ್ಟಿಸಿ ನ್ಯಾಯಾಲಯವನ್ನು ದಾರಿತಪ್ಪಿಸುವ ಪ್ರಯತ್ನ ನಡೆಸಿದ್ದಾನೆ ಎನ್ನಲಾಗಿದೆ.ಆದರೆ ಪ್ರಕರಣದ ಮತ್ತೊಂದು ಅಚ್ಚರಿಯ ಸಂಗತಿ ಏನೆಂದರೆ, ನ್ಯಾಯಾಲಯದ ದಾಖಲೆಗಳಲ್ಲಿ "ಮೃತ" ಎಂದು ತೋರಿಸಲ್ಪಟ್ಟಿದ್ದ ಅದೇ ಮಹಿಳೆ ನಂತರ ಜೀವಂತವಾಗಿದ್ದು, ಆರೋಪಿತ ವ್ಯಕ್ತಿಯೊಂದಿಗೆ ಪಾಲುದಾರಿಕೆಯಲ್ಲಿ ಮತ್ತೊಂದು ಆಸ್ತಿಯ ವ್ಯವಹಾರದಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ ಎಂದು ದೂರುದಾರರು ಆರೋಪಿಸಿದ್ದಾರೆ.ಇದರಿಂದ ನ್ಯಾಯಾಲಯಕ್ಕೆ ಸಲ್ಲಿಸಲಾದ ದಾಖಲೆಗಳ ಸತ್ಯಾಸತ್ಯತೆ, ಅವುಗಳನ್ನು ಸಿದ್ಧಪಡಿಸಿದವರು ಯಾರು, ಹಾಗೂ ಈ ಪ್ರಕ್ರಿಯೆಯಲ್ಲಿ ಇನ್ನಾರಾದರೂ ಕೈಜೋಡಿಸಿದ್ದಾರೆಯೇ ಎಂಬ ಪ್ರಶ್ನೆಗಳು ಉದ್ಭವಿಸಿವೆ.ಇದೇ ವೇಳೆ, ಮೂಲ ಆಸ್ತಿ ಮಾಲೀಕರು ಸಲ್ಲಿಸಿದ್ದ ತಕರಾರು ಅರ್ಜಿ ತಹಶೀಲ್ದಾರ್ ಕಚೇರಿಯಲ್ಲಿ ಇದ್ದರೂ ಅದನ್ನು ಸಮರ್ಪಕವಾಗಿ ಪರಿಗಣಿಸದೇ, ಆರೋಪಿತರಿಗೆ ಅನುಕೂಲವಾಗುವ ರೀತಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂಬ ಗಂಭೀರ ಆರೋಪಗಳೂ ಕೇಳಿಬಂದಿವೆ. ಈ ಆರೋಪಗಳ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಂದ ಸ್ಪಷ್ಟನೆ ಹೊರಬರಬೇಕಿದೆ.ಪ್ರಕರಣದ ಸಂಪೂರ್ಣ ಸತ್ಯಾಸತ್ಯತೆ ಹೊರಬರಲು ದಾಖಲೆಗಳ ಪರಿಶೀಲನೆ, ನ್ಯಾಯಾಲಯದ ಆದೇಶಗಳು, ಕಂದಾಯ ಇಲಾಖೆಯ ದಾಖಲೆಗಳು ಹಾಗೂ ಸಂಬಂಧಿತ ಅಧಿಕಾರಿಗಳ ಪಾತ್ರದ ಬಗ್ಗೆ ಸಮಗ್ರ ತನಿಖೆ ಅಗತ್ಯವಾಗಿದೆ ಎಂದು ಕಾನೂನು ತಜ್ಞರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.ಪಬ್ಲಿಕ್ ರೈಡ್ ಈ ಪ್ರಕರಣಕ್ಕೆ ಸಂಬಂಧಿಸಿದ ಮೂಲ ದಾಖಲೆಗಳು, ನ್ಯಾಯಾಲಯಕ್ಕೆ ಸಲ್ಲಿಸಲಾದ ಅರ್ಜಿಗಳು, ಕಂದಾಯ ಇಲಾಖೆಯ ಕಡತಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಪಾತ್ರದ ಕುರಿತು **ಪಿನ್-ಟು-ಪಿನ್ ತನಿಖಾತ್ಮಕ ವರದಿಯನ್ನು** ತನ್ನ ಮುಂದಿನ ಸಂಚಿಕೆಯಲ್ಲಿ ಪ್ರಕಟಿಸಲಿದೆ.

Jul 14, 2026 | 03:33 AM
155 0
ಅಪ್ರಾಪ್ತೆಗೆ ಹೆರಿಗೆ ಪ್ರಕರಣ: ಆಶಾ ಕಾರ್ಯಕರ್ತೆಯರಿಂದ ಆರೋಗ್ಯ ಇಲಾಖೆಯವರೆಗೆ... ಪ್ರತಿಯೊಂದು ಹಂತದ ತನಿಖೆಗೆ ಒತ್ತಾಯ; ಎಳೆ ಎಳೆಯಾಗಿ ಬಯಲಿಗೆ ತರಲಿದೆ ಪಬ್ಲಿಕ್ ರೈಡ್

ಅಪ್ರಾಪ್ತೆಗೆ ಹೆರಿಗೆ ಪ್ರಕರಣ: ಆಶಾ ಕಾರ್ಯಕರ್ತೆಯರಿಂದ ಆರೋಗ್ಯ ಇಲಾಖೆಯವರೆಗೆ... ಪ್ರತಿಯೊಂದು ಹಂತದ ತನಿಖೆಗೆ ಒತ್ತಾಯ; ಎಳೆ ಎಳೆಯಾಗಿ ಬಯಲಿಗೆ ತರಲಿದೆ ಪಬ್ಲಿಕ್ ರೈಡ್

ಹುಬ್ಬಳ್ಳಿ, ಜು. 12: 14 ವರ್ಷದ ಅಪ್ರಾಪ್ತೆಗೆ ಹೆರಿಗೆ ನಡೆದಿರುವ ಪ್ರಕರಣ ಕೇವಲ ಒಂದು ಅಪರಾಧ ಪ್ರಕರಣವಾಗಿ ಉಳಿಯದೆ, ಆರೋಗ್ಯ ವ್ಯವಸ್ಥೆ, ಮಕ್ಕಳ ರಕ್ಷಣೆ ವ್ಯವಸ್ಥೆ ಹಾಗೂ ಸಂಬಂಧಪಟ್ಟ ಇಲಾಖೆಗಳ ಕಾರ್ಯವೈಖರಿಯ ಬಗ್ಗೆಯೂ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.ಗ್ರಾಮ ಅಥವಾ ನಗರ ಮಟ್ಟದಲ್ಲಿ ಗರ್ಭಿಣಿಯರ ಆರೋಗ್ಯದ ಮೇಲ್ವಿಚಾರಣೆಯಲ್ಲಿ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಸಿಬ್ಬಂದಿ, ಆರೋಗ್ಯ ಸಿಬ್ಬಂದಿ ಹಾಗೂ ಸಂಬಂಧಪಟ್ಟ ವೈದ್ಯಕೀಯ ಅಧಿಕಾರಿಗಳು ವಿವಿಧ ಹಂತಗಳಲ್ಲಿ ನಿರ್ದಿಷ್ಟ ಜವಾಬ್ದಾರಿಗಳನ್ನು ನಿರ್ವಹಿಸುತ್ತಾರೆ. ಈ ಹಿನ್ನೆಲೆಯಲ್ಲಿ, ಈ ಪ್ರಕರಣದಲ್ಲಿ ಅಪ್ರಾಪ್ತೆ ಗರ್ಭಿಣಿಯಾಗಿದ್ದ ಮಾಹಿತಿ ಯಾವುದೇ ಹಂತದಲ್ಲಿ ಆರೋಗ್ಯ ವ್ಯವಸ್ಥೆಯ ಗಮನಕ್ಕೆ ಬಂದಿತ್ತೇ? ಬಂದಿದ್ದರೆ ಯಾವ ಕ್ರಮ ಕೈಗೊಳ್ಳಲಾಯಿತು? ಅಥವಾ ಯಾವುದೇ ಹಂತದಲ್ಲಿ ಮಾಹಿತಿ ವ್ಯವಸ್ಥೆಯಲ್ಲಿ ಲೋಪವಾಗಿದೆಯೇ? ಎಂಬ ಪ್ರಶ್ನೆಗಳಿಗೆ ತನಿಖೆಯಲ್ಲೇ ಉತ್ತರ ಸಿಗಬೇಕಿದೆ.ಅಲ್ಲದೆ,* ಅಪ್ರಾಪ್ತೆಯ ಗರ್ಭಧಾರಣೆ ಮೊದಲ ಬಾರಿಗೆ ಯಾವಾಗ ಪತ್ತೆಯಾಯಿತು?* ಯಾವುದೇ ಆರೋಗ್ಯ ಕೇಂದ್ರದಲ್ಲಿ ಪರೀಕ್ಷೆ ಅಥವಾ ಸ್ಕ್ಯಾನಿಂಗ್ ನಡೆದಿತ್ತೇ?* ನಡೆದಿದ್ದರೆ ಕಾನೂನು ಪ್ರಕಾರ ಅಗತ್ಯ ಮಾಹಿತಿ ಸಂಬಂಧಪಟ್ಟ ಅಧಿಕಾರಿಗಳಿಗೆ ರವಾನೆಯಾಗಿತ್ತೇ?* ಮಕ್ಕಳ ರಕ್ಷಣೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಮಾಹಿತಿ ನೀಡಲಾಗಿತ್ತೇ?* ಯಾವುದೇ ಹಂತದಲ್ಲಿ ನಿರ್ಲಕ್ಷ್ಯ ಅಥವಾ ಕರ್ತವ್ಯ ಲೋಪ ನಡೆದಿದೆಯೇ?ಈ ಎಲ್ಲ ಪ್ರಶ್ನೆಗಳು ಈಗ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿವೆ.ಈ ಪ್ರಕರಣದಲ್ಲಿ ಕೇವಲ ಅಪರಾಧ ಎಸಗಿದ ವ್ಯಕ್ತಿಯಷ್ಟೇ ಅಲ್ಲ, ತನಿಖೆಯಲ್ಲಿ ಯಾರದ್ದೇ ಕರ್ತವ್ಯ ಲೋಪ ಅಥವಾ ಕಾನೂನು ಉಲ್ಲಂಘನೆ ಕಂಡುಬಂದರೆ ಅವರ ವಿರುದ್ಧವೂ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ವ್ಯಕ್ತವಾಗುತ್ತಿದೆ.ಈ ಪ್ರಕರಣದ ಪ್ರತಿಯೊಂದು ಆಯಾಮವನ್ನು "ಪಬ್ಲಿಕ್ ರೈಡ್" ನಿರಂತರವಾಗಿ ಪರಿಶೀಲಿಸಲಿದೆ. ಪೊಲೀಸ್ ತನಿಖೆ, ಆರೋಗ್ಯ ಇಲಾಖೆಯ ಕ್ರಮ, ಮಕ್ಕಳ ರಕ್ಷಣಾ ವ್ಯವಸ್ಥೆಯ ಪಾತ್ರ ಹಾಗೂ ಅಧಿಕೃತ ದಾಖಲೆಗಳ ಆಧಾರದ ಮೇಲೆ ಪ್ರಕರಣದ ಎಳೆ ಎಳೆಯನ್ನೂ ಸಾರ್ವಜನಿಕರ ಮುಂದಿಡುವ ವಿಶೇಷ ವರದಿ ಸರಣಿಯನ್ನು ಪಬ್ಲಿಕ್ ರೈಡ್ ಪ್ರಕಟಿಸಲಿದೆ.

Jul 12, 2026 | 06:26 AM
70 0
ಹುಬ್ಬಳ್ಳಿ: 14 ವರ್ಷದ ಅಪ್ರಾಪ್ತೆಗೆ ಹೆರಿಗೆ; ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು, ತನಿಖೆ ಮುಂದುವರಿಕೆ

ಹುಬ್ಬಳ್ಳಿ: 14 ವರ್ಷದ ಅಪ್ರಾಪ್ತೆಗೆ ಹೆರಿಗೆ; ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು, ತನಿಖೆ ಮುಂದುವರಿಕೆ

ಹುಬ್ಬಳ್ಳಿ, ಜು. 11: ನಗರದಲ್ಲಿ 14 ವರ್ಷದ ಅಪ್ರಾಪ್ತೆಯೊಬ್ಬಳು ಮಗುವಿಗೆ ಜನ್ಮ ನೀಡಿರುವ ಘಟನೆ ಬೆಳಕಿಗೆ ಬಂದಿದ್ದು, ಸದ್ಯ ತಾಯಿ ಮತ್ತು ನವಜಾತ ಶಿಶು ಇಬ್ಬರೂ ಕೆಎಂಸಿಆರ್‌ಐ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿಯ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.ಆಸ್ಪತ್ರೆಯ ಮೂಲಗಳ ಪ್ರಕಾರ, ಅಪ್ರಾಪ್ತೆಯನ್ನು ಜುಲೈ 8ರಂದು ಕೆಎಂಸಿಆರ್‌ಐ ಆಸ್ಪತ್ರೆಗೆ ದಾಖಲಿಸಲಾಗಿದೆ. ಈಕೆಗೆ ಮನೆಯಲ್ಲಿಯೇ ಹೆರಿಗೆ ಆಗಿರುವ ಸಾಧ್ಯತೆ ಇದ್ದು, ಬಳಿಕ ಖಾಸಗಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದ ನಂತರ ಹೆಚ್ಚಿನ ಚಿಕಿತ್ಸೆಗೆ ನವಜಾತ ಶಿಶುವಿನೊಂದಿಗೆ ಕೆಎಂಸಿಆರ್‌ಐ ಆಸ್ಪತ್ರೆಗೆ ಕರೆತರಲಾಗಿದೆ ಎಂದು ತಿಳಿದುಬಂದಿದೆ.ಅಪ್ರಾಪ್ತೆ ಆಗಿರುವ ಹಿನ್ನೆಲೆಯಲ್ಲಿ ಆಕೆಗೆ ಆಸ್ಪತ್ರೆಯ ನಿರ್ಭಯಾ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ತಾಯಿ ಹಾಗೂ ಮಗು ಇಬ್ಬರ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಅಪ್ರಾಪ್ತೆ ಯಾವಾಗ ಗರ್ಭಿಣಿಯಾಗಿದ್ದಳು ಹಾಗೂ ಹೆರಿಗೆಯ ನಿಖರ ದಿನಾಂಕ ಸೇರಿದಂತೆ ಹಲವು ಮಾಹಿತಿಗಳು ಇನ್ನೂ ಸ್ಪಷ್ಟವಾಗಿಲ್ಲ ಎಂದು ತಿಳಿಸಲಾಗಿದೆ.ಪ್ರಕರಣದ ಸಂಬಂಧ ಹುಬ್ಬಳ್ಳಿಯ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಈ ಪ್ರಕರಣದಲ್ಲಿ ಭಾಗಿಯಾಗಿರುವ ವ್ಯಕ್ತಿಯೂ ಅಪ್ರಾಪ್ತನಾಗಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಆದರೆ ಈ ಕುರಿತು ಪೊಲೀಸರು ಅಧಿಕೃತ ಮಾಹಿತಿ ನೀಡಿಲ್ಲ.ಇನ್ನೊಂದೆಡೆ, ಕೆಲವು ಸಂಘಟನೆಗಳು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕಿಯ ಜೀವಕ್ಕೆ ಅಪಾಯವಿದ್ದು, ಆರೋಪಿತನ ಕಡೆಯಿಂದ ಜೀವ ಬೆದರಿಕೆ ಇದೆ ಎಂದು ಆರೋಪಿಸಿವೆ. ಈ ಕುರಿತು ಸಮಗ್ರ ತನಿಖೆ ನಡೆಸಿ ಬಾಲಕಿಗೆ ಅಗತ್ಯ ರಕ್ಷಣೆ ಒದಗಿಸಬೇಕು ಎಂದು ಅವು ಒತ್ತಾಯಿಸಿವೆ.ಘಟನೆ ಹಲವು ದಿನಗಳವರೆಗೆ ಸಾರ್ವಜನಿಕರ ಗಮನಕ್ಕೆ ಬಾರದೆ ಇರುವುದು ಕೂಡ ಹಲವು ಅನುಮಾನಗಳಿಗೆ ಕಾರಣವಾಗಿದೆ. ಪ್ರಕರಣದ ಸಂಪೂರ್ಣ ಸತ್ಯಾಂಶವು ಪೊಲೀಸ್ ತನಿಖೆ ಪೂರ್ಣಗೊಂಡ ಬಳಿಕವೇ ಬಹಿರಂಗವಾಗುವ ನಿರೀಕ್ಷೆಯಿದೆ.

Jul 12, 2026 | 06:03 AM
171 0