ಹುಬ್ಬಳ್ಳಿ, ಜು. 12: 14 ವರ್ಷದ ಅಪ್ರಾಪ್ತೆಗೆ ಹೆರಿಗೆ ನಡೆದಿರುವ ಪ್ರಕರಣ ಕೇವಲ ಒಂದು ಅಪರಾಧ ಪ್ರಕರಣವಾಗಿ ಉಳಿಯದೆ, ಆರೋಗ್ಯ ವ್ಯವಸ್ಥೆ, ಮಕ್ಕಳ ರಕ್ಷಣೆ ವ್ಯವಸ್ಥೆ ಹಾಗೂ ಸಂಬಂಧಪಟ್ಟ ಇಲಾಖೆಗಳ ಕಾರ್ಯವೈಖರಿಯ ಬಗ್ಗೆಯೂ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಗ್ರಾಮ ಅಥವಾ ನಗರ ಮಟ್ಟದಲ್ಲಿ ಗರ್ಭಿಣಿಯರ ಆರೋಗ್ಯದ ಮೇಲ್ವಿಚಾರಣೆಯಲ್ಲಿ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಸಿಬ್ಬಂದಿ, ಆರೋಗ್ಯ ಸಿಬ್ಬಂದಿ ಹಾಗೂ ಸಂಬಂಧಪಟ್ಟ ವೈದ್ಯಕೀಯ ಅಧಿಕಾರಿಗಳು ವಿವಿಧ ಹಂತಗಳಲ್ಲಿ ನಿರ್ದಿಷ್ಟ ಜವಾಬ್ದಾರಿಗಳನ್ನು ನಿರ್ವಹಿಸುತ್ತಾರೆ. ಈ ಹಿನ್ನೆಲೆಯಲ್ಲಿ, ಈ ಪ್ರಕರಣದಲ್ಲಿ ಅಪ್ರಾಪ್ತೆ ಗರ್ಭಿಣಿಯಾಗಿದ್ದ ಮಾಹಿತಿ ಯಾವುದೇ ಹಂತದಲ್ಲಿ ಆರೋಗ್ಯ ವ್ಯವಸ್ಥೆಯ ಗಮನಕ್ಕೆ ಬಂದಿತ್ತೇ? ಬಂದಿದ್ದರೆ ಯಾವ ಕ್ರಮ ಕೈಗೊಳ್ಳಲಾಯಿತು? ಅಥವಾ ಯಾವುದೇ ಹಂತದಲ್ಲಿ ಮಾಹಿತಿ ವ್ಯವಸ್ಥೆಯಲ್ಲಿ ಲೋಪವಾಗಿದೆಯೇ? ಎಂಬ ಪ್ರಶ್ನೆಗಳಿಗೆ ತನಿಖೆಯಲ್ಲೇ ಉತ್ತರ ಸಿಗಬೇಕಿದೆ.
ಅಲ್ಲದೆ,
* ಅಪ್ರಾಪ್ತೆಯ ಗರ್ಭಧಾರಣೆ ಮೊದಲ ಬಾರಿಗೆ ಯಾವಾಗ ಪತ್ತೆಯಾಯಿತು?
* ಯಾವುದೇ ಆರೋಗ್ಯ ಕೇಂದ್ರದಲ್ಲಿ ಪರೀಕ್ಷೆ ಅಥವಾ ಸ್ಕ್ಯಾನಿಂಗ್ ನಡೆದಿತ್ತೇ?
* ನಡೆದಿದ್ದರೆ ಕಾನೂನು ಪ್ರಕಾರ ಅಗತ್ಯ ಮಾಹಿತಿ ಸಂಬಂಧಪಟ್ಟ ಅಧಿಕಾರಿಗಳಿಗೆ ರವಾನೆಯಾಗಿತ್ತೇ?
* ಮಕ್ಕಳ ರಕ್ಷಣೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಮಾಹಿತಿ ನೀಡಲಾಗಿತ್ತೇ?
* ಯಾವುದೇ ಹಂತದಲ್ಲಿ ನಿರ್ಲಕ್ಷ್ಯ ಅಥವಾ ಕರ್ತವ್ಯ ಲೋಪ ನಡೆದಿದೆಯೇ?
ಈ ಎಲ್ಲ ಪ್ರಶ್ನೆಗಳು ಈಗ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿವೆ.
ಈ ಪ್ರಕರಣದಲ್ಲಿ ಕೇವಲ ಅಪರಾಧ ಎಸಗಿದ ವ್ಯಕ್ತಿಯಷ್ಟೇ ಅಲ್ಲ, ತನಿಖೆಯಲ್ಲಿ ಯಾರದ್ದೇ ಕರ್ತವ್ಯ ಲೋಪ ಅಥವಾ ಕಾನೂನು ಉಲ್ಲಂಘನೆ ಕಂಡುಬಂದರೆ ಅವರ ವಿರುದ್ಧವೂ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ವ್ಯಕ್ತವಾಗುತ್ತಿದೆ.
ಈ ಪ್ರಕರಣದ ಪ್ರತಿಯೊಂದು ಆಯಾಮವನ್ನು "ಪಬ್ಲಿಕ್ ರೈಡ್" ನಿರಂತರವಾಗಿ ಪರಿಶೀಲಿಸಲಿದೆ. ಪೊಲೀಸ್ ತನಿಖೆ, ಆರೋಗ್ಯ ಇಲಾಖೆಯ ಕ್ರಮ, ಮಕ್ಕಳ ರಕ್ಷಣಾ ವ್ಯವಸ್ಥೆಯ ಪಾತ್ರ ಹಾಗೂ ಅಧಿಕೃತ ದಾಖಲೆಗಳ ಆಧಾರದ ಮೇಲೆ ಪ್ರಕರಣದ ಎಳೆ ಎಳೆಯನ್ನೂ ಸಾರ್ವಜನಿಕರ ಮುಂದಿಡುವ ವಿಶೇಷ ವರದಿ ಸರಣಿಯನ್ನು ಪಬ್ಲಿಕ್ ರೈಡ್ ಪ್ರಕಟಿಸಲಿದೆ.