ಕ್ರೈಂ

ದೇವಸ್ಥಾನದ ಬಳಿ ಮದ್ಯಪಾನ ಪ್ರಶ್ನಿಸಿದ ವ್ಯಕ್ತಿಯ ಮೇಲೆ ಹಲ್ಲೆ; ಮೂವರ ವಿರುದ್ಧ ಪ್ರಕರಣ ದಾಖಲು

ಮೂಲಕ News Desk | ಪ್ರಕಟಿಸಲಾಗಿದೆ July 22, 2026 July 22, 2026 | 05:14 AM 49 ವೀಕ್ಷಣೆಗಳು

ಹುಬ್ಬಳ್ಳಿ:ದೇವಸ್ಥಾನದ ಸಮೀಪ ಮದ್ಯಪಾನ ಮಾಡಬಾರದು ಎಂದು ಬುದ್ಧಿವಾದ ಹೇಳಿದ ವ್ಯಕ್ತಿಯ ಮೇಲೆ ಮೂವರು ಸೇರಿ ಹಲ್ಲೆ ನಡೆಸಿರುವ ಘಟನೆ ನಗರದ ಬಾಣತಿ ಕಟ್ಟೆ ಪ್ರದೇಶದಲ್ಲಿ ನಡೆದಿದ್ದು, ಈ ಸಂಬಂಧ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಗಾಯಗೊಂಡಿರುವ ವ್ಯಕ್ತಿಯನ್ನು ಅಯೋಧ್ಯ ನಗರದ ನಿವಾಸಿ ದೀಪಕ್ ಎಂದು ಗುರುತಿಸಲಾಗಿದೆ. ಆರೋಪಿಗಳಾಗಿ ಸಾಗರ್, ಪ್ರವೀಣ್ ಕುಮಾರ್ ಸೇರಿದಂತೆ ಮೂವರ ವಿರುದ್ಧ ದೂರು ದಾಖಲಾಗಿದೆ.


ದೂರಿನ ಪ್ರಕಾರ, ದೇವಸ್ಥಾನದ ಸಮೀಪ ಆರೋಪಿಗಳು ಮದ್ಯಪಾನ ಮಾಡುತ್ತಿರುವುದನ್ನು ಕಂಡ ದೀಪಕ್, ಸಾರ್ವಜನಿಕ ಸ್ಥಳ ಹಾಗೂ ಧಾರ್ಮಿಕ ಕ್ಷೇತ್ರದ ಬಳಿ ಮದ್ಯಪಾನ ಮಾಡಬಾರದು ಎಂದು ಬುದ್ಧಿವಾದ ಹೇಳಿದ್ದಾರೆ. ಇದರಿಂದ ಕೋಪಗೊಂಡ ಆರೋಪಿಗಳು ದೀಪಕ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಕಲ್ಲು ಹಾಗೂ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.


ಹಲ್ಲೆಯಿಂದ ಗಾಯಗೊಂಡ ದೀಪಕ್ ಅವರಿಗೆ ಚಿಕಿತ್ಸೆ ನೀಡಲಾಗಿದ್ದು, ಘಟನೆ ಕುರಿತು ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಕೊಲೆಗೆ ಯತ್ನ ಸೇರಿದಂತೆ ವಿವಿಧ ಆರೋಪಗಳಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.