ಕ್ರೈಂ

ಹುಬ್ಬಳ್ಳಿಯನ್ನೇ ಬೆಚ್ಚಿಬೀಳಿಸಿದ್ದ ದಾದಾಪೀರ್ ಕೊಲೆ ಪ್ರಕರಣಕ್ಕೆ ಟ್ವಿಸ್ಟ್: ಇಬ್ಬರು ಆರೋಪಿಗಳು ಪೊಲೀಸರ ವಶಕ್ಕೆ!

ಮೂಲಕ News Desk | ಪ್ರಕಟಿಸಲಾಗಿದೆ August 30, 2026 August 30, 2026 | 09:57 AM 41 ವೀಕ್ಷಣೆಗಳು

ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯನ್ನೇ ಬೆಚ್ಚಿಬೀಳಿಸಿದ್ದ ಹಾಡಹಗಲೇ ನಡೆದ ದಾದಾಪೀರ್ ಬರ್ಬರ ಹತ್ಯೆ ಪ್ರಕರಣಕ್ಕೆ ಇದೀಗ ಮಹತ್ವದ ತಿರುವು ಸಿಕ್ಕಿದೆ. ನಡು ರಸ್ತೆಯಲ್ಲೇ ಯುವಕನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಗಳಿಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.


ಕಳೆದ ಶುಕ್ರವಾರ ಮಟಮಟ ಮಧ್ಯಾಹ್ನ ಹುಬ್ಬಳ್ಳಿಯ ಲಿಂಗರಾಜನಗರದ ಸಿದ್ದೇಶ್ವರ ಪಾರ್ಕ್ ಬಳಿ ದಾದಾಪೀರ್ ಉದಯಕರ್ ಎಂಬ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಘಟನೆ ಬಳಿಕ ಆರೋಪಿಗಳಿಗಾಗಿ ಪೊಲೀಸರು ತೀವ್ರ ಶೋಧ ನಡೆಸಿದ್ದರು.


ಇದೀಗ ಎಸಿಪಿ ಶಿವಾನಂದ ಚಲವಾದಿ ನೇತೃತ್ವದ ಪೊಲೀಸ್ ತಂಡ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದೆ ಎಂದು ತಿಳಿದುಬಂದಿದೆ. ಆರೋಪಿಗಳನ್ನು ಹುಬ್ಬಳ್ಳಿಯ ಈಶ್ವರ ನಗರದ ವೀರೇಂದ್ರ ಮಟ್ಟಿ ತಳಕಲ್ ಹಾಗೂ ದೀಪಕ್ ಛಲವಾದಿ ಎಂದು ಗುರುತಿಸಲಾಗಿದೆ ಎನ್ನಲಾಗಿದೆ.


ಈ ಪ್ರಕರಣದ ಹಿಂದೆ 2015ರ ಹಳೆ ಕೊಲೆ ಪ್ರಕರಣದ ದ್ವೇಷ ಇರಬಹುದೆಂಬ ಶಂಕೆ ಈಗ ಮತ್ತಷ್ಟು ಬಲಗೊಂಡಿದೆ. 2015ರಲ್ಲಿ ಈಶ್ವರನಗರದಲ್ಲಿ ಮಾರುತಿ ತಳಕಲ್ ಎಂಬಾತನ ಕೊಲೆ ನಡೆದಿತ್ತು. ಆ ಪ್ರಕರಣದಲ್ಲಿ ದಾದಾಪೀರ್ ಕೂಡ ಆರೋಪಿಯಾಗಿದ್ದ ಎನ್ನಲಾಗಿದೆ. ಬಳಿಕ ಪ್ರಕರಣದಲ್ಲಿ ರಾಜಿ ನಡೆದು ದಾದಾಪೀರ್ ಖುಲಾಸೆಯಾಗಿದ್ದ ಎಂದು ತಿಳಿದುಬಂದಿದೆ.


ಇದೀಗ ಪೊಲೀಸರ ವಶದಲ್ಲಿರುವ ವೀರೇಂದ್ರ ಮಟ್ಟಿ ತಳಕಲ್, ಹತ್ಯೆಯಾಗಿದ್ದ ಮಾರುತಿ ತಳಕಲ್ ಅವರ ಸಹೋದರ ಎನ್ನಲಾಗಿದ್ದು, ಮತ್ತೊಬ್ಬ ಆರೋಪಿ ದೀಪಕ್ ಛಲವಾದಿ, ಮಾರುತಿ ಅವರ ಅಳಿಯ ಎನ್ನಲಾಗಿದೆ.


ಹೀಗಾಗಿ, 2015ರ ಕೊಲೆ ಪ್ರಕರಣದ ದ್ವೇಷವೇ ದಾದಾಪೀರ್ ಹತ್ಯೆಗೆ ಕಾರಣವಾಗಿದೆಯೇ ಎಂಬುದು ತನಿಖೆಯ ಪ್ರಮುಖ ಅಂಶವಾಗಿದೆ.


ಈಗಾಗಲೇ ಇಬ್ಬರು ಆರೋಪಿಗಳನ್ನು ಹುಬ್ಬಳ್ಳಿಯ ಗಬ್ಬೂರು ಬೈಪಾಸ್ ಬಳಿ ವಶಕ್ಕೆ ಪಡೆದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಹತ್ಯೆಗೆ ನಿಖರ ಕಾರಣವೇನು? ಕೊಲೆಗೆ ಸಂಚು ಹೇಗೆ ರೂಪಿಸಲಾಗಿತ್ತು? ಮತ್ತಷ್ಟು ಮಂದಿ ಇದರಲ್ಲಿ ಭಾಗಿಯಾಗಿದ್ದಾರೆಯೇ? ಎಂಬ ಹಲವು ಪ್ರಶ್ನೆಗಳಿಗೆ ಪೊಲೀಸರ ತನಿಖೆಯಲ್ಲಿ ಉತ್ತರ ಸಿಗಬೇಕಿದೆ.


ಹಳೆ ಕೊಲೆ ಪ್ರಕರಣದ ದ್ವೇಷ... ವರ್ಷಗಳ ಬಳಿಕ ನಡೆದ ಬರ್ಬರ ಹತ್ಯೆ... ಇದೀಗ ಪೊಲೀಸರ ಕೈಗೆ ಸಿಕ್ಕ ಇಬ್ಬರು ಆರೋಪಿಗಳು! ದಾದಾಪೀರ್ ಕೊಲೆ ಪ್ರಕರಣದ ಸಂಪೂರ್ಣ ರಹಸ್ಯ ವಿಚಾರಣೆ ಬಳಿಕ ಮತ್ತಷ್ಟು ಬಹಿರಂಗವಾ

ಗುವ ಸಾಧ್ಯತೆಯಿದೆ.