ಕ್ರೈಂ

ದಾರಿ ಕೇಳುವ ನೆಪದಲ್ಲಿ ಚಿನ್ನದ ಸರ ಕಳವು: ಇಬ್ಬರು ಆರೋಪಿಗಳ ಬಂಧನ

ಮೂಲಕ News Desk | ಪ್ರಕಟಿಸಲಾಗಿದೆ May 31, 2026 May 31, 2026 | 05:31 AM 118 ವೀಕ್ಷಣೆಗಳು

ಕೋಲಾರ,: ದಾರಿ ಕೇಳುವ ನೆಪದಲ್ಲಿ ವ್ಯಕ್ತಿಯೊಬ್ಬರ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಕಳವು ಮಾಡಿ ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಕೋಲಾರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮೇ 16ರಂದು ಕೋಲಾರದ ಗಾಂಧಿನಗರ ನಿವಾಸಿ ಶಿವಶಂಕರ್ ಅವರು ಶ್ಯಾನಬೋಗನಹಳ್ಳಿ ರಸ್ತೆಯಲ್ಲಿ ಸಂಚರಿಸುತ್ತಿದ್ದ ವೇಳೆ, ಬೈಕ್‌ನಲ್ಲಿ ಬಂದ ಇಬ್ಬರು ಯುವಕರು ಶ್ಯಾನಬೋಗನಹಳ್ಳಿಗೆ ಹೋಗುವ ದಾರಿ ಯಾವುದು ಎಂದು ಕೇಳಿದ್ದಾರೆ. ಈ ವೇಳೆ ಶಿವಶಂಕರ್ ಅವರು ಬೈಕ್ ನಿಲ್ಲಿಸಿ ದಾರಿ ತಿಳಿಸುತ್ತಿದ್ದಾಗ, ಆರೋಪಿಗಳು ಅವರ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಕಸಿದುಕೊಂಡು ಪರಾರಿಯಾಗಿದ್ದರು.

ಈ ಕುರಿತು ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಂಡ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು. ತನಿಖೆಯ ವೇಳೆ ಬೆಂಗಳೂರಿನ ಮೂಲದ ಹೇಮಂತ್ ಮತ್ತು ಆದರ್ಶ್ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ಬಂಧಿತರಿಂದ ಸುಮಾರು 23 ಗ್ರಾಂ ತೂಕದ ಚಿನ್ನದ ಸರ ಹಾಗೂ ಕೃತ್ಯಕ್ಕೆ ಬಳಸಿದ್ದ ಬೈಕ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಪ್ರಕರಣದ ಯಶಸ್ವಿ ಭೇದನೆಗಾಗಿ ಕೋಲಾರ ಗ್ರಾಮಾಂತರ ಠಾಣೆ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.