ಕ್ರೈಂ

ಹಣ ವಸೂಲಾತಿ ಹೆಸರಿನಲ್ಲಿ ಮನೆಗೆ ನುಗ್ಗಿ ಕಿರುಕುಳ ಆರೋಪ: ಅಮರಗೋಳದಲ್ಲಿ ಉದ್ವಿಗ್ನತೆ

ಮೂಲಕ News Desk | ಪ್ರಕಟಿಸಲಾಗಿದೆ May 30, 2026 May 30, 2026 | 02:53 PM 108 ವೀಕ್ಷಣೆಗಳು
ಹುಬ್ಬಳ್ಳಿ:ನಗರದ ಹೊರವಲಯದ ಅಮರಗೋಳ ಗ್ರಾಮದ ಹೊಸಪೇಟೆ ಓಣಿಯಲ್ಲಿ ಮಹಿಳೆಯೊಬ್ಬರ ಮನೆಗೆ ನುಗ್ಗಿ ಹಣ ವಸೂಲಾತಿ ಸಿಬ್ಬಂದಿ ಕಿರುಕುಳ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಸುವರ್ಣ ಎಂಬ ಮಹಿಳೆ ಈ ಕುರಿತು ಆರೋಪ ಮಾಡಿದ್ದು, ಬಜಾಜ್ ಫೈನಾನ್ಸ್‌ನ ಸಾಲದ ಹಣ ವಸೂಲಾತಿಗೆ ಬಂದಿದ್ದ ವ್ಯಕ್ತಿಗಳು ತಮ್ಮ ಮನೆಗೆ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು ಮಾತ್ರವಲ್ಲದೆ ಬೆದರಿಕೆ ಹಾಕಿದ್ದಾರೆ ಎಂದು ದೂರಿದ್ದಾರೆ.

ಮಹಿಳೆಯ ಆರೋಪದ ಪ್ರಕಾರ, ವಸೂಲಾತಿಗೆ ಬಂದಿದ್ದ ರಾಹುಲ್ ಹಾಗೂ ಆತನ ಸಹಚರರು "ದುಡ್ಡು ಕಟ್ಟದಿದ್ದರೆ ನಿಮ್ಮ ಸೀರೆ ಕೊಡಿ, ಇಲ್ಲವೇ ನಿಮ್ಮ ಮನೆಯಲ್ಲಿ ಸಾಯುತ್ತೇನೆ" ಎಂಬ ರೀತಿಯ ಮಾತುಗಳನ್ನಾಡಿ ಮಾನಸಿಕ ಕಿರುಕುಳ ನೀಡಿದ್ದಾರೆ ಎನ್ನಲಾಗಿದೆ.

ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆಯೇ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ. ಬಳಿಕ ಹಣ ವಸೂಲಾತಿಗೆ ಬಂದಿದ್ದ ರಾಹುಲ್ ಮತ್ತು ಆತನ ಸಹಚರರನ್ನು ಹೆಚ್ಚಿನ ವಿಚಾರಣೆಗಾಗಿ ಠಾಣೆಗೆ ಕರೆದುಕೊಂಡು ಹೋಗಲಾಗಿದೆ.

ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಮಹಿಳೆ ಮಾಡಿದ ಆರೋಪಗಳ ಸತ್ಯಾಸತ್ಯತೆ ಕುರಿತು ತನಿಖೆ ಮುಂದುವರಿದಿದೆ. ತನಿಖೆಯ ಬಳಿಕವೇ ಘಟನೆಯ ಸಂಪೂರ್ಣ ವಿವರ ಹಾಗೂ ವಾಸ್ತವಾಂಶ ಹೊರಬರಬೇಕಿದೆ.

ಈ ಘಟನೆ ಅಮರಗೋಳ ಗ್ರಾಮದಲ್ಲಿ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಸಿದ್ದು, ಸಾಲ ವಸೂಲಾತಿ ಪ್ರಕ್ರಿಯೆಯಲ್ಲಿ ನಿಯಮಗಳನ್ನು ಪಾಲಿಸುವ ಅಗತ್ಯದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.