ಕ್ರೈಂ

ಚಿತ್ರದುರ್ಗದಲ್ಲಿ ಹಾಡಹಗಲೇ 4 ಲಕ್ಷ ರೂ. ದೋಚಿದ ಖತರ್ನಾಕ್ ಕಳ್ಳರು

ಮೂಲಕ News Desk | ಪ್ರಕಟಿಸಲಾಗಿದೆ May 24, 2026 May 24, 2026 | 05:09 AM 32 ವೀಕ್ಷಣೆಗಳು


ಚಿತ್ರದುರ್ಗ: ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿಯಲ್ಲಿ ಹಾಡಹಗಲೇ ನಡೆದ ಕಳ್ಳತನ ಪ್ರಕರಣ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಬೈಕ್ ಸೈಡ್ ಬ್ಯಾಗ್‌ನಲ್ಲಿ ಇಟ್ಟಿದ್ದ ಸುಮಾರು 4 ಲಕ್ಷ ರೂಪಾಯಿ ಹಣವನ್ನು ಇಬ್ಬರು ಖತರ್ನಾಕ್ ಕಳ್ಳರು ಕದ್ದು ಪರಾರಿಯಾಗಿರುವ ಘಟನೆ ನಡೆದಿದೆ.


ಮುಷ್ಟಲಗುಮ್ಮಿ ಗ್ರಾಮದ ಶಿಕ್ಷಕ ಸಿ.ಎನ್. ಉಮೇಶ್ ಅವರಿಗೆ ಸೇರಿದ ಹಣ ಇದಾಗಿದ್ದು, ಕುಟುಂಬದ ಮದುವೆ ಕಾರ್ಯಕ್ರಮದ ಹಿನ್ನೆಲೆ ಬ್ಯಾಂಕ್‌ನಿಂದ ಹಣ ಡ್ರಾ ಮಾಡಿಕೊಂಡು ಬಂದಿದ್ದರು ಎನ್ನಲಾಗಿದೆ. ಬಳಿಕ ನಾಯಕನಹಟ್ಟಿಯ ಪೋಸ್ಟ್ ಆಫೀಸ್ ಬಳಿ ಬೈಕ್ ನಿಲ್ಲಿಸಿ ಒಳಗೆ ತೆರಳಿದ್ದ ವೇಳೆ, ಬೈಕ್‌ನ ಸೈಡ್ ಬ್ಯಾಗ್‌ನಲ್ಲಿ ಇಟ್ಟಿದ್ದ ಹಣವನ್ನು ಕಳ್ಳರು ಕ್ಷಣಾರ್ಧದಲ್ಲಿ ದೋಚಿ ಪರಾರಿಯಾಗಿದ್ದಾರೆ.


ಕಳ್ಳರು ಹಣದ ಜೊತೆಗೆ ಅಗತ್ಯ ದಾಖಲೆಗಳನ್ನೂ ಕದ್ದೊಯ್ದಿದ್ದಾರೆ. ಬಳಿಕ ಹಣ ಇರಿಸಿದ್ದ ಬ್ಯಾಗ್ ಮಾತ್ರ ರೇಣುಕಾಪುರ ಸಮೀಪ ಪತ್ತೆಯಾಗಿದೆ. ಘಟನೆಯ ಸಂಬಂಧ ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ, ಬೈಕ್‌ನಲ್ಲಿ ಬಂದಿದ್ದ ಇಬ್ಬರು ಆರೋಪಿಗಳ ಚಲನವಲನಗಳು ದಾಖಲಾಗಿರುವುದು ತಿಳಿದುಬಂದಿದೆ.

ಘಟನಾ ಸ್ಥಳಕ್ಕೆ ನಾಯಕನಹಟ್ಟಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ನಾಯಕನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ.