ಕ್ರೈಂ

ಹಣಕ್ಕಾಗಿ ವ್ಯಕ್ತಿಯನ್ನು ಅಪಹರಣ ಮಾಡಲು ಯತ್ನ – ಇಬ್ಬರ ಬಂಧನ

ಮೂಲಕ News Desk | ಪ್ರಕಟಿಸಲಾಗಿದೆ May 23, 2026 May 23, 2026 | 09:47 AM 70 ವೀಕ್ಷಣೆಗಳು


ಬೆಂಗಳೂರು: ಹಣಕ್ಕಾಗಿ ವ್ಯಕ್ತಿಯನ್ನು ಅಪಹರಣ ಮಾಡಲು ಯತ್ನಿಸಿದ ಘಟನೆ ಬಾಗಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಉಳಿದವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.


ಏರ್ಪೋರ್ಟ್ ಪ್ರದೇಶದಲ್ಲಿ ಉಬರ್ ಕಾರನ್ನು ಬುಕ್ ಮಾಡಿಕೊಂಡು ಬಂದಿದ್ದ ನಾಲ್ವರು ಆರೋಪಿಗಳು, ಬಾಗಲೂರು ಠಾಣೆ ವ್ಯಾಪ್ತಿಯಲ್ಲಿ ಕಾರನ್ನು ನಿಲ್ಲಿಸಲು ಚಾಲಕನಿಗೆ ಸೂಚಿಸಿದ್ದಾರೆ. ಬಳಿಕ ಚಾಲಕನಿಗೆ ಚಾಕು ತೋರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.


ಈ ವೇಳೆ “ನನ್ನ ಬಳಿ ಹಣ ಇಲ್ಲ, ನನ್ನ ಸ್ನೇಹಿತನ ಬಳಿ ಇದೆ” ಎಂದು ಚಾಲಕ ಹೇಳಿದ್ದಾನೆ. ಆರೋಪಿಗಳು ನಂತರ ಆತನ ಸ್ನೇಹಿತನನ್ನು ಸ್ಥಳಕ್ಕೆ ಕರೆಸಿಕೊಂಡಿದ್ದಾರೆ. ಆದರೆ ಸ್ಥಳಕ್ಕೆ ಬಂದ ಚಾಲಕನ ಸ್ನೇಹಿತ ಆರೋಪಿಗಳ ಕಣ್ತಪ್ಪಿಸಿ ತಪ್ಪಿಸಿಕೊಂಡಿದ್ದಾನೆ.


ತಕ್ಷಣವೇ 112ಕ್ಕೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಮಾಹಿತಿ ಪಡೆದ ಬಾಗಲೂರು ಪೊಲೀಸರು ಕೂಡಲೇ ಸ್ಥಳಕ್ಕೆ ಧಾವಿಸಿ ಅಪಹರಣಕ್ಕೊಳಗಾಗಿದ್ದ ವ್ಯಕ್ತಿಯನ್ನು ರಕ್ಷಿಸಿದ್ದಾರೆ.


ಈ ವೇಳೆ ಪರಾರಿಯಾಗಲು ಯತ್ನಿಸುತ್ತಿದ್ದ ನಾಲ್ವರು ಆರೋಪಿಗಳಲ್ಲಿ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಉಳಿದ ಇಬ್ಬರು ಆರೋಪಿಗಳಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.


ಪ್ರಕರಣ ಸಂಬಂಧ ಬಾಗಲೂರು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.