ಕರ್ನಾಟಕ

ಬಳ್ಳಾರಿಯಲ್ಲಿ ದುರಂತ ಪತಿ ಹಾಗೂ ಅತ್ತೆಯ ಮಾನಸಿಕ ಕಿರುಕುಳಕ್ಕೆ ಬೇಸತ್ತು ಯುವತಿ ಆತ್ಮಹತ್ಯೆ

ಮೂಲಕ News Desk | ಪ್ರಕಟಿಸಲಾಗಿದೆ May 20, 2026 May 20, 2026 | 03:57 AM 170 ವೀಕ್ಷಣೆಗಳು

ಬಳ್ಳಾರಿ: ಪತಿ ಹಾಗೂ ಅತ್ತೆಯ ಮಾನಸಿಕ ಕಿರುಕುಳಕ್ಕೆ ಬೇಸತ್ತು ಯುವತಿಯೊಬ್ಬರು ಡೆತ್ ನೋಟ್ ಬರೆದು ನೇಣಿಗೆ ಶರಣಾದ ದುರ್ಘಟನೆ ಬಳ್ಳಾರಿ ಜಿಲ್ಲೆಯ Kampli ಪಟ್ಟಣದಲ್ಲಿ ನಡೆದಿದೆ.


ಐಶ್ವರ್ಯ (24) ಆತ್ಮಹತ್ಯೆಗೆ ಶರಣಾದ ಯುವತಿಯಾಗಿದ್ದಾರೆ. ಪಶುಸಂಗೋಪನೆ ಇಲಾಖೆಯಲ್ಲಿ ವೈದ್ಯರಾಗಿರುವ ಪ್ರದೀಪ್ ಕುಮಾರ್ ಅವರು ಐಶ್ವರ್ಯಳನ್ನು ಪ್ರೀತಿಸಿ ಮದುವೆಯಾಗಿದ್ದರು ಎಂದು ತಿಳಿದುಬಂದಿದೆ.


ಮದುವೆಯಾದ ದಿನದಿಂದಲೇ ಪತಿ ಪ್ರದೀಪ್ ಕುಮಾರ್ ಹಾಗೂ ಅತ್ತೆ ನಿರಂತರವಾಗಿ ಮಾನಸಿಕ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಅತ್ತೆಯ ಕಿರುಕುಳ ಹೆಚ್ಚಾಗಿದ್ದರೂ ಪತಿ ಪತ್ನಿಯ ಬೆಂಬಲಕ್ಕೆ ನಿಲ್ಲದೆ ನಿರ್ಲಕ್ಷ್ಯ ವಹಿಸುತ್ತಿದ್ದನೆಂದು ಆರೋಪಿಸಲಾಗಿದೆ.


ಮಾನಸಿಕ ಹಿಂಸೆ ತಾಳಲಾರದೆ ಬೇಸತ್ತ ಐಶ್ವರ್ಯ ತವರು ಮನೆಗೆ ಬಂದು ಆತ್ಮಹತ್ಯೆಗೆ ನಿರ್ಧಾರ ಮಾಡಿಕೊಂಡಿದ್ದು, ನೇಣಿಗೆ ಶರಣಾಗುವ ಮುನ್ನ ಡೆತ್ ನೋಟ್ ಬರೆದಿದ್ದಾರೆ ಎನ್ನಲಾಗಿದೆ. ಡೆತ್ ನೋಟ್‌ನಲ್ಲಿ ಆತ್ಮಹತ್ಯೆಗೆ ಕಾರಣಗಳನ್ನೂ ಉಲ್ಲೇಖಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಈ ಸಂಬಂಧ Kampli Police Station ನಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಪತಿ ಪ್ರದೀಪ್ ಕುಮಾರ್ ಹಾಗೂ ಅವರ ತಾಯಿಯನ್ನು ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.