ಚಿತ್ರದುರ್ಗ: ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ಯುವತಿಯನ್ನು ಲೈಂಗಿಕವಾಗಿ ಬಳಸಿಕೊಂಡು ಮೋಸ ಮಾಡಿರುವ ಆರೋಪದ ಮೇಲೆ DAR ವಿಭಾಗದ RSI ವರುಣ್ ಕುಮಾರ್ ವಿರುದ್ಧ ಚಿತ್ರದುರ್ಗ ಮಹಿಳಾ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.
ದಾವಣಗೆರೆ ಮೂಲದ ಪೂರ್ಣಿಮಾ ಎಂಬ ಯುವತಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದ್ದು, ನ್ಯಾಯಕ್ಕಾಗಿ ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಅವರಿಗೆ ಮನವಿ ಸಲ್ಲಿಸಲಾಗಿದೆ.
ಸಂತ್ರಸ್ತೆಯ ಆರೋಪದ ಪ್ರಕಾರ, ಸುಮಾರು ಒಂದು ವರ್ಷದ ಹಿಂದೆ ಇನ್‌ಸ್ಟಾಗ್ರಾಂ ಮೂಲಕ ಪೂರ್ಣಿಮಾ ಹಾಗೂ RSI ವರುಣ್ ಕುಮಾರ್ ನಡುವೆ ಪರಿಚಯವಾಗಿತ್ತು. ಆ ಬಳಿಕ ಇಬ್ಬರ ಮಧ್ಯೆ ಸ್ನೇಹ ಬೆಳೆದು ಪ್ರೀತಿಗೆ ತಿರುಗಿತ್ತು. ಆ ಸಂದರ್ಭದಲ್ಲಿ ಪೂರ್ಣಿಮಾ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆ, ವರುಣ್ ಕುಮಾರ್ ಪೊಲೀಸ್ ತರಬೇತಿಗಾಗಿ ಬೆಂಗಳೂರಿಗೆ ತೆರಳಿದ್ದನು ಎನ್ನಲಾಗಿದೆ.
ಮದುವೆಯಾಗುವುದಾಗಿ ನಂಬಿಸಿ ನಿರಂತರವಾಗಿ ಲೈಂಗಿಕ ಸಂಬಂಧ ಬೆಳೆಸಿದ್ದಾನೆ ಎಂದು ಯುವತಿ ದೂರಿನಲ್ಲಿ ಆರೋಪಿಸಿದ್ದಾಳೆ. ಇದೇ ವೇಳೆ ತನ್ನೊಂದಿಗೆ ಇದ್ದ ಸಮಯದಲ್ಲಿ ಗರ್ಭಿಣಿಯಾಗಿದ್ದಾಗಿ ಹೇಳಿರುವ ಯುವತಿ, ಮದುವೆ ವಿಚಾರವಾಗಿ ಒತ್ತಾಯಿಸಿದಾಗ ಆರೋಪಿ ಗರ್ಭಪಾತ ಮಾತ್ರೆ ನೀಡಿದ್ದಾನೆ ಎಂದು ಗಂಭೀರ ಆರೋಪ ಮಾಡಿದ್ದಾಳೆ.
ಈ ಸಂಬಂಧ ಚಿತ್ರದುರ್ಗ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, FIR ದಾಖಲಾಗುತ್ತಿದ್ದಂತೆಯೇ RSI ವರುಣ್ ಕುಮಾರ್ ನಾಪತ್ತೆಯಾಗಿರುವುದಾಗಿ ತಿಳಿದುಬಂದಿದೆ.
ಪ್ರಕರಣದ ತನಿಖೆ ಮುಂದುವರಿದಿದ್ದು, ಆರೋಪಿಯನ್ನು ತಕ್ಷಣ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಂತ್ರಸ್ತ ಯುವತಿ ಒತ್ತಾಯಿಸಿದ್ದಾಳೆ.