ಕ್ರೈಂ

ರಾಮನಗರದಲ್ಲಿ ಅಪ್ರಾಪ್ತ ಬಾಲಕಿಯರ ವಿಡಿಯೋ ಚಿತ್ರೀಕರಿಸಿ ಆನ್‌ಲೈನ್‌ಗೆ ಅಪ್ಲೋಡ್: ಇಬ್ಬರ ಬಂಧನ

ಮೂಲಕ News Desk | ಪ್ರಕಟಿಸಲಾಗಿದೆ May 15, 2026 May 15, 2026 | 10:47 AM 131 ವೀಕ್ಷಣೆಗಳು


ರಾಮನಗರ: ಅಪ್ರಾಪ್ತ ಬಾಲಕಿಯರನ್ನು ಪರಿಚಯ ಮಾಡಿಕೊಂಡು ಲೈಂಗಿಕ ಕಿರುಕುಳ ನೀಡಿ, ಅದರ ವಿಡಿಯೋಗಳನ್ನು ಚಿತ್ರೀಕರಿಸಿ ಆನ್‌ಲೈನ್‌ಗೆ ಅಪ್ಲೋಡ್ ಮಾಡಿದ್ದ ಆರೋಪದಡಿ ಇಬ್ಬರನ್ನು ರಾಮನಗರ ಸಿಇಎನ್ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಕಗ್ಗಲೀಪುರ ಮೂಲದ ಕಿರಣ್ ಕುಮಾರ್ ಹಾಗೂ ಆದಿತ್ಯ ಎಂದು ಗುರುತಿಸಲಾಗಿದೆ.

ಆರೋಪಿಗಳು ಕನಕಪುರ ರಸ್ತೆಯ ಖಾಸಗಿ ರೆಸಾರ್ಟ್‌ನಲ್ಲಿ ಈಜುಕೊಳ ಸ್ವಚ್ಛಗೊಳಿಸುವ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಈ ವೇಳೆ ಕುರಿಗಾಯಿ ಬಾಲಕಿಯರೊಂದಿಗೆ ಪರಿಚಯ ಬೆಳೆಸಿ, ಅವರಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ.

ಅಲ್ಲದೆ, ಕೃತ್ಯವನ್ನು ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಿಸಿ, ಬಳಿಕ ಅದನ್ನು ಆನ್‌ಲೈನ್‌ನಲ್ಲಿ ಅಪ್ಲೋಡ್ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ಎನ್‌ಸಿಆರ್‌ಪಿ ಪೋರ್ಟಲ್‌ಗೆ ಮಾಹಿತಿ ಬಂದ ಹಿನ್ನೆಲೆ ರಾಮನಗರ ಸಿಇಎನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ತನಿಖೆ ವೇಳೆ ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಪ್ರಕರಣ ಸಂಬಂಧ ಪೊಲೀಸರು ಮುಂದಿನ ತನಿಖೆ ಮುಂದುವರಿಸಿದ್ದಾರೆ.