ಹುಬ್ಬಳ್ಳಿ 08/05/2026: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ನಾಲ್ಕು ಪ್ರಮುಖ ವಲಯ ಕಚೇರಿಗಳ ಮೇಲೆ ಇಂದು ಮುಂಜಾನೆಯಿಂದಲೇ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ವಲಯ ಸಂಖ್ಯೆ 6, 7, 10 ಮತ್ತು 11 ರ ಕಚೇರಿಗಳಲ್ಲಿ ಈ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಈ ಸಮಯದಲ್ಲಿ ದಾಖಲೆಗಳು, ಲೆಕ್ಕಪತ್ರಗಳು ಮತ್ತು ಇತರ ಸೂಕ್ಷ್ಮ ದಾಖಲೆಗಳನ್ನು ವಶಕ್ಕೆ ಪಡೆಯಲಾಗುತ್ತಿದೆ.
ಕೇವಲ ಕೆಲವೇ ದಿನಗಳ ಹಿಂದೆ 'ಪಬ್ಲಿಕ್ ರೈಡ್' ಪತ್ರಿಕೆಯು ವಲಯ ಸಂಖ್ಯೆ 10 ರ ಕಚೇರಿಯಲ್ಲಿ ನಡೆಯುತ್ತಿರುವ ವ್ಯಾಪಕ ಭ್ರಷ್ಟಾಚಾರದ ಕುರಿತು ವರದಿ ಪ್ರಕಟಿಸಿತ್ತು. ಈ ವರದಿಯ ಬೆನ್ನಲ್ಲೇ ಲೋಕಾಯುಕ್ತ ಈ ಕಾರ್ಯಾಚರಣೆಗೆ ಮುಂದಾಗಿದ್ದಾರೆಂದು ಶಂಕಿಸಲಾಗಿದೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ದಾಳಿಯ ಸಂದರ್ಭದಲ್ಲಿ ವಲಯ ಕಚೇರಿಗಳಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದ್ದು, ಸಿಬ್ಬಂದಿಗಳು ಕಳವಳಕ್ಕೊಳಗಾಗಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಲೋಕಾಯುಕ್ತದ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಲಾಗಿದೆ. ಹೆಚ್ಚಿನ ವಿವರಗಳು ಬರಬೇಕಾಗಿದೆ.