ಧಾರವಾಡ: ಮನೆ ಕಟ್ಟಲು ತೋಡಿದ್ದ ನೀರಿನ ತುಂಬಿದ ಗುಂಡಿಗೆ ಬಿದ್ದು ಇಬ್ಬರು ಬಾಲಕರು ಮೃತಪಟ್ಟ ಘಟನೆ ಧಾರವಾಡ ತಾಲೂಕಿನ ಮನಸೂರು ಗ್ರಾಮದಲ್ಲಿ ಬುಧವಾರ ರಾತ್ರಿ ಸಂಭವಿಸಿದೆ.
ಮೃತರನ್ನು ಗ್ರಾಮದ ಕುಮಾರ್ ನಿಂಗಪ್ಪ ಮುದಕಣ್ಣವರ (7) ಮತ್ತು ಧಾರವಾಡದ ಸತ್ತೂರು ನಿವಾಸಿಯಾಗಿದ್ದು, ತವರು ಮನೆಗೆ ಬಂದಿದ್ದ ಪ್ರಥಮ್ ಉಳ್ಳಾಗಡ್ಡಿ (7) ಎಂದು ಗುರುತಿಸಲಾಗಿದೆ.
ಬುಧವಾರ ಸಂಜೆ ಆಟವಾಡಲು ಹೋದ ಬಾಲಕರು ರಾತ್ರಿಯಾದರೂ ಮನೆಗೆ ಮರಳದಿದ್ದಾಗ ಕುಟುಂಬಸ್ಥರು ತೀವ್ರ ಆತಂಕಕ್ಕೊಳಗಾಗಿ ಹುಡುಕಾಟ ಆರಂಭಿಸಿದರು. ತಡರಾತ್ರಿ ವೇಳೆ ಗ್ರಾಮದಲ್ಲಿಯೇ ಮನೆ ಕಟ್ಟಲು ತೋಡಿದ್ದ ನೀರಿನ ಗುಂಡಿಯಲ್ಲಿ ಬಾಲಕರು ಬಿದ್ದಿರುವುದು ಪತ್ತೆಯಾಯಿತು. ಒಳಗೆ ಇಳಿದು ನೋಡುವಷ್ಟರಲ್ಲಿ ಇಬ್ಬರೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರು.
ಘಟನಾ ಸ್ಥಳಕ್ಕೆ ಧಾರವಾಡ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ. ಗುಂಡಿ ತೋಡಿದ ವ್ಯಕ್ತಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಈ ದುರ್ಘಟನೆಯಿಂದ ಎರಡೂ ಕುಟುಂಬಗಳಲ್ಲಿ ಶೋಕಾಕುಲ ವಾತಾವರಣ ನೆಲೆಸಿದ್ದು, ಗ್ರಾಮದಲ್ಲಿ ದುಃಖದ ಅಲೆ ಸಂಚರಿಸುತ್ತಿದೆ.