ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯ ದಾಸರಹಳ್ಳಿ: ಅಂಬೇಡ್ಕರ್ ಅವರು ಭಾರತ ಭಾಗ್ಯ ವಿಧಾತರೆಂಬ ಅಭಿದಾನದೊಂದಿಗೆ ನಮಗೆಲ್ಲಾ ಸಂವಿಧಾನ ರೂಪಿಸಿ, ಸರ್ವಸಮಾನತೆಯನ್ನು ಹಂಬಲಿಸಿದವರು. ಭಾರತವು ಸ್ವಾತಂತ್ರ್ಯ ಆಗುವುದರೊಂದಿಗೆ - ಸಂವಿಧಾನ ಕೂಡಾ ಜೊತೆ ಜೊತೆಗೆ ನಮಗೆಲ್ಲಾ ಜಾತ್ಯಾತೀತ ಪರಿಕಲ್ಪನೆ ಯನ್ನು ಒಡಮೂಡಿಸಿದ ಕೀರ್ತಿಗೆ ಅಂಬೇಡ್ಕರ್ ಅವರು ಭಾಜನರು" ಎಂದು ಶಾಸಕ ಎಸ್. ಮುನಿರಾಜು ನುಡಿದರು.
ಹಾವನೂರು ಬಡಾವಣೆಯಲ್ಲಿ ಕನ್ನಡಿಗರ ಕಹಳೆ ಹಿತರಕ್ಷಣಾ ವೇದಿಕೆ ಮತ್ತು ಕನ್ನಡ ಸಂಘಟನೆಗಳ ಕಾರ್ಮಿಕರ ಒಕ್ಕೂಟದ ವತಿಯಿಂದ ಡಾ. ಬಿ.ಆರ್. ಅಂಬೇಡ್ಕರ್ 135 ನೇ ಜಯಂತಿ, ಬಸವೇಶ್ವರ ಜಯಂತಿ, ಅಂತರಾಷ್ಟ್ರೀಯ ಕಾರ್ಮಿಕರ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದರು.
ಸಾಹಿತಿ ವೈ.ಬಿ.ಎಚ್. ಜಯದೇವ್ ಮಾತನಾಡಿ,' ಜಗತ್ತಿನ ಎಲ್ಕಾ ದಾರ್ಶನಿಕರ ಆಶಯ ಹಾಗೂ ಆದರ್ಶಗಳು ಸಮಾನತೆಯನ್ನು ಸಾರುತ್ತವೆ. ಸತ್ಯ,ಅಹಿಂಸೆ ಹಾಗೂ ತ್ಯಾಗವನ್ನು ಪ್ರತಿಪಾದಿಸುವ ಈ ಮಹಾನುಭಾವರ ಹಾದಿಯಲ್ಲಿ ಇಂದಿನ ಆಧುನಿಕ ಯುವ ಜನಾಂಗ ಸಾಗಬೇಕಿದೆ. ಅನಾಚಾರ, ದುರಾಚಾರಗಳ ಮಾರ್ಗದಲ್ಲಿ ನಡೆಯುತ್ತಿರುವ ಶೋಷಣೆ, ಅತ್ಯಾಚಾರ ಮುಂತಾದ ಅಪಸವ್ಯಗಳನ್ನು ನಿವಾರಿಸಲು ಈ ಮಹಾತ್ಮರ ತತ್ವಗಳನ್ನು, ಆದರ್ಶಗಳನ್ನು ಪಾಲಿಸುವುದೇ ನಿಜಕ್ಕೂ ನಮ್ಮ ಮುಂದೆ ಇರುವ ಮಹಾಮಾರ್ಗ' ಎಂದರು.
ಕನ್ನಡಿಗರ ಕಹಳೆ ಹಿತರಕ್ಷಣಾ ವೇದಿಕೆ ಸಂಸ್ಥಾಪಕಿ ಸುನಿತಾ ಬಾಯಿ ಎಲ್ ಮಾತನಾಡಿ,' ನಮ್ಮ ವೇದಿಕೆಯಿಂದ ನಾಡು ನುಡಿ ರಕ್ಷಣೆ ಅಲ್ಲದೆ ಸಮಾಜ ಸೇವೆ ಸಾಂಸ್ಕೃತಿಕ ಚಟುವಟಿಕೆಯನ್ನು ಕೂಡ ನಾವು ತೊಡಗಿಸಿಕೊಂಡಿದ್ದೇವೆ. ಇಂದು ಸಮಾಜದಲ್ಲಿ ಗಣ್ಯರನ್ನು ಮತ್ತು ಸಾಧಕರನ್ನು ಗುರುತಿಸಿ ಸನ್ಮಾನ ಮಾಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ' ಎಂದರು.
ಎ.ಬಿ.ಬಿ. ಮಂಜಣ್ಣ ಅವರು ಮಾತನಾಡಿ" ಅಂಬೇಡ್ಕರ್ ಅವರ ಕನಸುಗಳನ್ನು ಸಾಕಾರಗೊಳಿಸುವಲ್ಲಿ ನಮ್ಮ ಸಂಘಟನೆಗಳ ಪಾತ್ರ ಮಹತ್ತರವಾದುದು. ಈ ದಿಸೆಯಲ್ಲಿ ಕನ್ನಡಿಗರ ಕಹಳೆ ಹಿತರಕ್ಷಣಾ ವೇದಿಕೆ ಅತ್ಯಂತ ಸಮರ್ಥವಾಗಿ ಶ್ರಮಿಸುತ್ತಿದೆ. ಸಮಾನತೆ ಹಾಗೂ ಮಹಿಳಾ ಸಬಲತೆಗಾಗಿ ಆಶಿಸಿದ ಅಂಬೇಡ್ಕರ್ ಅವರ ತತ್ವಗಳು ಎಲ್ಲರ ಮನೆ ಮಾತಾಗಬೇಕು " ಎಂದು ನುಡಿದರು
ಸಮಾರಂಭದಲ್ಲಿ ಶ್ರೀ ಮಾರುತಿ ಕೋಲಾಟ ತಂಡದಿಂದ ಮಹಿಳೆಯರು ಜಾನಪದ ಗೀತೆಗಳಿಗೆ ಕೋಲಾಟ, ಭರತನಾಟ್ಯ ಮತ್ತು ಸಂಸ್ಕೃತಿಕ ಕಾರ್ಯಕ್ರಮ ಜರುಗಿತು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಕಾರ್ಮಿಕರತ್ನ, ಆದರ್ಶ ಸ್ಪೂರ್ತಿ ರತ್ನ, ಮಾಧ್ಯಮ ರತ್ನ, ವಿದ್ಯಾರ್ಥಿ ರತ್ನ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಇದೇ ವೇಳೆ ಶ್ರೀ ಸಾಯಿ ಫೌಂಡೇಶನ್ ವತಿಯಿಂದ ಉಚಿತ ಆರೋಗ್ಯ ಶಿಬಿರ ಏರ್ಪಡಿಸಿ ಉಚಿತ ಕನ್ನಡಕ, ವಾಕಿಂಗ್ ಸ್ಟಿಕ್, ಪೌರಕಾರ್ಮಿಕರಿಗೆ ಹ್ಯಾಂಡ್ ಗ್ಲೌಸ್, ಮಾಸ್ಕ್ ವಿತರಣೆ ಮಾಡಲಾಯಿತು.
ಸಮಾಜ ಸೇವಕ ಮಂಜುನಾಥ್ (ಎಬಿಬಿ), ಸಮಾಜಸೇವಕರಾದ ಭರತ್ ಸೌಂದರ್ಯ, ಬಿ. ಕೃಷ್ಣಮೂರ್ತಿ, ಕಾಂಗ್ರೆಸ್ ಮುಖಂಡ ಆನಂದ್ ರೆಡ್ಡಿ, ಅಭಯಕೃಷ್ಣಯ್ಯ, ಬುಲೆಟ್ ಬಾಬು, ಪತ್ರಕರ್ತ ಪ್ರಶಾಂತ್ ಗೌಡ, ಪ್ರಜಾವಾಣಿ ವರದಿಗಾರ ಪ್ರಸನ್ನ ಕುಮಾರ್.ವೇದಿಕೆ ರಾಜ್ಯಾಧ್ಯಕ್ಷ ಗಣೇಶ್ ಭಾರದ್ವಾಜ್, ಕನ್ನಡ ಸಂಘಟನೆಗಳ ಕಾರ್ಮಿಕರ ಒಕ್ಕೂಟದ ರಾಜ್ಯಾಧ್ಯಕ್ಷ ಮಂಜುನಾಥ್ ಮುಂತಾದವರಿದ್ದರು.
ವರದಿ:ಪಬ್ಲಿಕ್ ರೈಡ್ ದೇವರಾಜ್