ಹುಬ್ಬಳ್ಳಿ: ರಾಜ್ಯ ಸರ್ಕಾರವು ಕಾವೇರಿ ತಂತ್ರಾಂಶದ ಮೂಲಕ ಪೇಪರ್ ಲೇಸ್ ಡಿಜಿಟಲ್ ನೋಂದಣಿ ಜಾರಿಗೆ ಮುಂದಾಗಿರುವುದು ಸಾರ್ವಜನಿಕರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಈ ಯೋಜನೆಯಿಂದ ಆಸ್ತಿ ದಾಖಲಾತಿಗೆ ಯಾವುದೇ ಭದ್ರತೆ ಇಲ್ಲದಂತಾಗಿದ್ದು, ಡಿಜಿ ಲಾಕರ್ನಲ್ಲಿ ದಾಖಲೆಗಳು ಸೇವ್ ಆಗುವುದರಿಂದ ಆಸ್ತಿ ಖರೀದಿದಾರರಿಗೆ ನಿಖರ ಮಾಹಿತಿ ಲಭ್ಯವಾಗುತ್ತಿಲ್ಲ ಎಂದು ಧಾರವಾಡ ಜಿಲ್ಲಾ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಿಂದ ಪರವಾನಗಿ ಪಡೆದ ಪತ್ರ ಬರಹಗಾರರ ಟ್ರಸ್ಟ್ ಆರೋಪಿಸಿದೆ.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟ್ರಸ್ಟ್ನ ಜಿಲ್ಲಾಧ್ಯಕ್ಷ ಶಾಂತರಾಜ ಪೋಳ, ಕೂಡಲೇ ಸರ್ಕಾರವು ಪೇಪರ್ ಲೇಸ್ ಜೊತೆಗೆ ಹಿಂದಿನ ಪತ್ರ ವ್ಯವಹಾರದ ನೋಂದಣಿ ವ್ಯವಸ್ಥೆಯನ್ನು ಮುಂದುವರೆಸಬೇಕೆಂದು ಒತ್ತಾಯಿಸಿದರು.
"ಹಲವಾರು ವರ್ಷಗಳಿಂದ ಆಸ್ತಿ ಖರೀದಿ, ಮಾರಾಟ ಸೇರಿದಂತೆ ಎಲ್ಲ ನೋಂದಣಿ ಕಾರ್ಯಗಳು ಪತ್ರ ವ್ಯವಹಾರದ ಮೂಲಕ ನಡೆಯುತ್ತಿದ್ದವು. ಆದರೆ ಈಗ ಕೇವಲ ಪೇಪರ್ ಲೇಸ್ ನೋಂದಣಿ ಮಾಡುವ ಮೂಲಕ ಸರ್ಕಾರ ಭೂಮಾಫಿಯಾ ಜನರಿಗೆ ಅನುಕೂಲ ಕಲ್ಪಿಸಿಕೊಟ್ಟಂತಾಗಿದೆ. ಈ ವ್ಯವಸ್ಥೆಯಿಂದ ಯಾರ ಆಸ್ತಿ, ಯಾರು ಖರೀದಿ ಅಥವಾ ಮಾರಾಟ ಮಾಡಿದ್ದಾರೆಂಬುದು ಪತ್ತೆಯಾಗದು" ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಅನಕ್ಷರಸ್ಥರು, ಸಾಮಾನ್ಯ ಜನರು ಹಾಗೂ ಇಲಾಖೆಯ ಅಧಿಕಾರಿ-ಸಿಬ್ಬಂದಿಗೂ ಈ ಡಿಜಿಟಲ್ ವ್ಯವಸ್ಥೆಯಿಂದ ತೀವ್ರ ತೊಂದರೆಯಾಗಲಿದೆ ಎಂದು ಅವರು ಎಚ್ಚರಿಸಿದರು. "ನೋಂದಣಿಗಾಗಿ ಎಲ್ಲರೂ ಶಿಕ್ಷಣ ಪಡೆದವರಾಗಿರಬೇಕಿಲ್ಲ. ಅನಕ್ಷರಸ್ಥರಿಗೆ ಡಿಜಿಟಲ್ ಕಾರ್ಯವಿಧಾನ ಅರ್ಥವಾಗದು" ಎಂದು ತಿಳಿಸಿದರು.
ರಾಜ್ಯ ಸರ್ಕಾರವು ಚಾಮರಾಜನಗರದಲ್ಲಿ ಈ ಪೇಪರ್ ಲೇಸ್ ನೋಂದಣಿಯನ್ನು ಮೊದಲ ಹಂತದಲ್ಲಿ ಜಾರಿಗೊಳಿಸಿ ಯಶಸ್ವಿಯಾಗಿದೆ ಎಂದು ಸಾರಿದರೂ, ಅಲ್ಲಿ ಅನೇಕ ಸಮಸ್ಯೆಗಳು ಎದುರಾಗಿರುವುದಾಗಿ ಅವರು ಆರೋಪಿಸಿದರು. ಅನ್ಯ ರಾಜ್ಯಗಳಲ್ಲಿ ಪೇಪರ್ ಲೇಸ್ ಮತ್ತು ಪೇಪರ್ ಸಹಿತ ನೋಂದಣಿ ಎರಡೂ ವ್ಯವಸ್ಥೆಗಳು ಜಾರಿಯಲ್ಲಿವೆ. ಅದೇ ಮಾದರಿಯನ್ನು ಕರ್ನಾಟಕದಲ್ಲೂ ಜಾರಿಗೊಳಿಸಬೇಕು ಎಂದು ಪೋಳ ಒತ್ತಾಯಿಸಿದರು.
ಕೇವಲ ಪೇಪರ್ ಲೇಸ್ ಡಿಜಿಟಲ್ ನೋಂದಣಿ ಮಾತ್ರ ಜಾರಿ ಮಾಡಿದಲ್ಲಿ ರಾಜ್ಯದ ಸಾವಿರಾರು ದಸ್ತುಬರಹಗಾರರು ನಿರುದ್ಯೋಗಿಗಳಾಗುವ ಅನಿವಾರ್ಯತೆ ಎದುರಾಗಲಿದೆ. ಆದ್ದರಿಂದ ಈ ನಿರ್ಧಾರವನ್ನು ಕೂಡಲೇ ಹಿಂಪಡೆಯಬೇಕು. ಹಿಂದಿನ ಪತ್ರ ವ್ಯವಸ್ಥೆಯ ಜೊತೆಗೆ ಡಿಜಿಟಲ್ ನೋಂದಣಿ ಮಾಡುವುದಕ್ಕೆ ತಮಗೆ ಆಕ್ಷೇಪವಿಲ್ಲ ಎಂದು ಸ್ಪಷ್ಟಪಡಿಸಿದರು.
ಸರ್ಕಾರ ತಮ್ಮ ಬೇಡಿಕೆ ಈಡೇರಿಸದಿದ್ದಲ್ಲಿ ಹೋರಾಟ ಅನಿವಾರ್ಯವಾಗಲಿದೆ. ಈ ಕುರಿತು ರಾಜ್ಯದ ಎಲ್ಲ ದಸ್ತುಬರಹಗಾರರೊಂದಿಗೆ ಚರ್ಚಿಸಿ ಮುಂದಿನ ಆಂದೋಲನದ ರೂಪರೇಖೆ ಸಿದ್ಧಪಡಿಸಲಾಗುವುದು ಎಂದು ಅವರು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ವಿನೋದಗೌಡ ಪಾಟೀಲ, ಉಪಾಧ್ಯಕ್ಷ ರಾಮಚಂದ್ರ ಸಾಳಂಕೆ, ಗುರುನಾಥ ಯಾತಗೇರಿ, ಮಹವೀರ ಕಂಚಗಾರ, ರುಕ್ಮಿಣಿಬಾಯಿ ಛಲವಾದಿ ಸೇರಿದಂತೆ ಇತರರು ಉಪಸ್ಥಿತರಿದ್ದರು.