ಹುಬ್ಬಳ್ಳಿ

ಕೆಜೆಪಿ ಇಲ್ಲದ ಪ್ಲಾಟ್ಗಳಿಗೆ ‘ಎ ಖಾತಾ’: ವಲಯ ಕಚೇರಿ ಸಂಖ್ಯೆ 10 ರಲ್ಲಿ ಭ್ರಷ್ಟಾಚಾರದ ಆರೋಪ

ಮೂಲಕ News Desk | ಪ್ರಕಟಿಸಲಾಗಿದೆ April 13, 2026 125 ವೀಕ್ಷಣೆಗಳು
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ವಲಯ ಕಚೇರಿ ಸಂಖ್ಯೆ 10, ಹೆಗ್ಗೇರಿಯಲ್ಲಿ ಕರ್ನಾಟಕ ಸರ್ಕಾರದ ಯೋಜನಾ ಪ್ರಾಧಿಕಾರದ (ಕೆಜೆಪಿ) ಅನುಮೋದನೆ ಇಲ್ಲದ ಒಂದು ಲೇಔಟ್ನ ನ ಪ್ಲಾಟ್ಗಳಿಗೆ ‘ಎ ಖಾತಾ’ ಮಂಜೂರು ಮಾಡಿರುವ ಆರೋಪ ಕೇಳಿ ಬಂದಿದೆ. ಸಾಮಾನ್ಯ ನಾಗರಿಕರು ಪಾಲಿಕೆ ಕಚೇರಿಗಳಲ್ಲಿ ಅಲೆದಾಡಬೇಕಾಗಿದ್ದರೂ, ಪ್ರಭಾವಿ ವ್ಯಕ್ತಿಗಳು ನಿಯಮಗಳನ್ನು ಕಡೆಗಣಿಸಿ ಸುಲಭವಾಗಿ ‘ಎ ಖಾತಾ’ ಪಡೆದುಕೊಂಡಿರುವುದು ಅನುಮಾನ ಮೂಡಿಸಿದೆ.

ಈ ಲೇಔಟ್ನ ಪ್ಲಾಟ್ಗಳಿಗೆ ಕೆಜೆಪಿ ಅನುಮೋದನೆ ಇಲ್ಲದಿರುವುದು ನಿಯಮಗಳ ಉಲ್ಲಂಘನೆಯಾಗಿದೆ. ಸಾಮಾನ್ಯ ನಾಗರಿಕರಿಗೆ ಸಣ್ಣ ದಾಖಲೆಗಳಿಗಾಗಿಯೇ ದಿನಗಟ್ಟಲೆ ಅಲೆಯಬೇಕಾಗುತ್ತದೆ. ಆದರೆ ಇಲ್ಲಿ ಪೂರ್ಣ ದಾಖಲೆಗಳಿಲ್ಲದಿದ್ದರೂ, ವಲಯ ಕಚೇರಿಯು ‘ಎ ಖಾತಾ’ ಮಂಜೂರು ಮಾಡಿದೆ.

ಹಿಂದಿನ ಸಹಾಯಕ ಆಯುಕ್ತ ಆಸಂಗಿ ಅವರು ಆ ಲೇಔಟ್ಗೆ ಸಂಬಂಧಿಸಿದ ‘ಎ ಖಾತಾ’ ಅರ್ಜಿಗಳನ್ನು ಕಾನೂನು ಸಲಹೆಗಾರರ ಕಚೇರಿಗೆ ಪರಿಶೀಲನೆಗೆ ಕಳುಹಿಸಿ, ನಂತರವೇ ನಿರ್ಧಾರ ತೆಗೆದುಕೊಳ್ಳಲು ನಿರ್ಧರಿಸಿದ್ದರು. ಆದರೆ ಇದೀಗ ಅಧಿಕಾರ ವಹಿಸಿಕೊಂಡಿರುವ ಸಹಾಯಕ ಆಯುಕ್ತ ಸಬರದ್ ಅವರು ಈ ಹಿಂದೆ ಇದೆ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ಯಾವುದೇ ಪರಿಶೀಲನೆಯನ್ನು ಲೆಕ್ಕಿಸದೆ, ದಾಖಲೆಗಳ ಕೊರತೆಯಿದ್ದರೂ ತ್ವರಿತವಾಗಿ ‘ಎ ಖಾತಾ’ ಮಂಜೂರು ಮಾಡಿದ್ದಾರೆ. ಪ್ರಸ್ತುತ ಮತ್ತೆ ಅದೇ ಹುದ್ದೆಯಲ್ಲಿ ವಿರಾಜಮಾನರಾಗಿದ್ದಾರೆ.

ಈ ವಿವಾದದಲ್ಲಿ ಲೇಔಟ್ನ ಸಂಬಂಧಿಸಿದ ವಾರ್ಡ್ ನ ವಸೂಲಿಗಾರ ಪಟ್ಟದಕಲ್ಲ ಅವರ ಪಾತ್ರವೂ ಪ್ರಮುಖವಾಗಿದೆ. ಆರೋಪದ ಪ್ರಕಾರ, ಈ ಶುಭ ಕಾರ್ಯದಲ್ಲಿ ಸಹಾಯಕ ಆಯುಕ್ತ ಸಬರದ್ ಅವರ ಸಹಪಾಠಿಯಾಗಿರುವ ಪಟ್ಟದಕಲ್ಲ ಅವರು ಈ ‘ಎ ಖಾತಾ’ ಮಂಜೂರಾತಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇದು ಅಧಿಕಾರಿ ಮತ್ತು ವಸೂಲಿಗಾರ ನಡುವಿನ ಸ್ನೇಹದ ಆಧಾರದ ಮೇಲೆ ಅಕ್ರಮವನ್ನು ಸಮರ್ಥಿಸಲಾಗಿದೆಯೇ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಕರ್ನಾಟಕ ನಗರ ಮತ್ತು ಗ್ರಾಮ ಯೋಜನಾ ಕಾಯ್ದೆ (KTCP Act), 1961 ರ ಸೆಕ್ಷನ್ 14 ಮತ್ತು 17 ರ ಪ್ರಕಾರ, ಕೃಷಿ ಭೂಮಿಯನ್ನು ವಸತಿ ಉದ್ದೇಶಕ್ಕೆ ಪರಿವರ್ತಿಸಿ ಲೇಔಟ್ ಮಾಡಬೇಕಾದರೆ ಯೋಜನಾ ಪ್ರಾಧಿಕಾರದ (ಕೆಜೆಪಿ) ಪೂರ್ವಾನುಮತಿ ಕಡ್ಡಾಯವಾಗಿದೆ. ಅನುಮೋದನೆ ಇಲ್ಲದ ಯಾವುದೇ ಲೇಔಟ್ ಅಥವಾ ಪ್ಲಾಟ್ಗೆ ‘ಎ ಖಾತಾ’ ನೀಡುವಂತಿಲ್ಲ. ಈ ನಿಯಮ ಉಲ್ಲಂಘಿಸಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸ್ಪಷ್ಟಪಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ವಲಯ ಕಚೇರಿ ಸಂಖ್ಯೆ 10 ರ ನಿರ್ಧಾರ ಸಂಪೂರ್ಣವಾಗಿ ನಿಯಮಬಾಹಿರವಾಗಿದೆ.

ಪ್ರಶ್ನೆಗಳು:
- ಕೆಜೆಪಿ ಅನುಮೋದನೆ ಇಲ್ಲದ ಲೇಔಟ್ಗೆ ‘ಎ ಖಾತಾ’ ಮಂಜೂರು ಮಾಡಲು ಸಹಾಯಕ ಆಯುಕ್ತರಿಗೆ ಯಾವ ಅಧಿಕಾರ ಇತ್ತು?
- ಹಿಂದಿನ ಸಹಾಯಕ ಆಯುಕ್ತರ ಕಾನೂನು ಪರಿಶೀಲನೆಯ ಆದೇಶವನ್ನು ಏಕೆ ಕಡೆಗಣಿಸಲಾಯಿತು?
- ಸಹಾಯಕ ಆಯುಕ್ತ ಸಬರದ್ ಮತ್ತು ವಸೂಲಿಗಾರ ಪಟ್ಟದಕಲ್ಲ ಅವರ ನಡುವಿನ ಸಂಬಂಧದಿಂದ ಈ ನಿರ್ಧಾರ ಪ್ರಭಾವಿತವಾಗಿದೆಯೇ?

ಮುಂದಿನ ಕ್ರಮ:
ಸಾಕ್ಷಿ ಸಮೇತ ಈ ಪ್ರಕರಣವನ್ನು ಮಹಾನಗರ ಪಾಲಿಕೆಯ ಆಯುಕ್ತರ ಗಮನಕ್ಕೆ ತರಲಾಗುವುದು. ಈ ಭ್ರಷ್ಟಾಚಾರದಲ್ಲಿ ತೊಡಗಿರುವ ಎಲ್ಲಾ ವ್ಯಕ್ತಿಗಳ ಮುಖವಾಡವನ್ನು ಬಯಲಿಗೆ ತರಲಾಗುವುದು. ಭ್ರಷ್ಟ ಅಧಿಕಾರಿಗಳಿಗೆ ಮತ್ತೆ ಗೇಟ್ ಪಾಸ್ ನೀಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಪಬ್ಲಿಕ್ ರೈಡ್ _ತಪ್ಪು ಮಾಡಿದರೆ ಬಿಡಲ್ಲ.