ಹುಬ್ಬಳ್ಳಿ:ನಗರದಲ್ಲಿ ಮಾದಕ ವಸ್ತುಗಳ ಅಕ್ರಮ ಮಾರಾಟ ಹಾಗೂ ಸಾಗಾಟದ ವಿರುದ್ಧ ಗೋಕುಲ ರೋಡ್ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ತಮಿಳುನಾಡು ಮೂಲದ ಇಬ್ಬರು ಸೇರಿದಂತೆ ಒಟ್ಟು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ಬರೋಬ್ಬರಿ 1 ಕೆ.ಜಿ. 300 ಗ್ರಾಂ ತೂಕದ MDMA ಮಾದಕ ಮಾತ್ರೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ದಿನಾಂಕ 20-11-2026ರಂದು ರಾತ್ರಿ ಸುಮಾರು 9:30 ಗಂಟೆಗೆ ಹುಬ್ಬಳ್ಳಿಯ ಉದ್ಯಮ ನಗರ ಸಮೀಪ ಅಕ್ರಮವಾಗಿ MDMA ಮಾದಕ ಮಾತ್ರೆಗಳನ್ನು ಮಾರಾಟ ಹಾಗೂ ಸಾಗಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು. ಈ ಮಾಹಿತಿಯ ಮೇರೆಗೆ ಗೋಕುಲ ರೋಡ್ ಪೊಲೀಸ್ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ಸಂಗಮೇಶ ದಿಡಿಗಿನಾಳ ಅವರ ನೇತೃತ್ವದ ಪೊಲೀಸ್ ತಂಡ ತಕ್ಷಣ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಬಂಧಿತ ಆರೋಪಿಗಳು
1. ರಘುಕೃಷ್ಣನ್ ಅಲಿಯಾಸ್ ಕುಳ್ಳಿ (24), ಕೊಯಂಬತ್ತೂರು, ತಮಿಳುನಾಡು.
2. ರಾಜಕುಮಾರ (21), ಕೊಯಂಬತ್ತೂರು, ತಮಿಳುನಾಡು.
3. ಪ್ರವೀಣ ಶೆಟ್ಟಿ, ಅರವಿಂದ ನಗರ, ಹಳೆ ಹುಬ್ಬಳ್ಳಿ.
ಬಂಧಿತ ಆರೋಪಿಗಳಲ್ಲಿ ಮೊದಲನೇ ಆರೋಪಿ ರಘುಕೃಷ್ಣನ್ ಅಲಿಯಾಸ್ ಕುಳ್ಳಿ ವಿರುದ್ಧ ತಮಿಳುನಾಡಿನ ಕುನಿಯಾಮುತೂರು, ಚೆಟ್ಟಿಪಾಳಯಂ ಹಾಗೂ ಮಧುಕ್ಕರೈ ಪೊಲೀಸ್ ಠಾಣೆಗಳಲ್ಲಿ ಒಟ್ಟು ನಾಲ್ಕು ಪ್ರಕರಣಗಳು ದಾಖಲಾಗಿರುವುದಾಗಿ ಪೊಲೀಸ್ ಪ್ರಕಟಣೆ ತಿಳಿಸಿದೆ.
ಇನ್ನು ಮೂರನೇ ಆರೋಪಿ ಪ್ರವೀಣ ಶೆಟ್ಟಿ ವಿರುದ್ಧ ತಮಿಳುನಾಡಿನ ಕರುಂಬಕಡೈ ಪೊಲೀಸ್ ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗಿರುವುದಾಗಿ ತಿಳಿದುಬಂದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋಕುಲ ರೋಡ್ ಪೊಲೀಸ್ ಠಾಣೆಯಲ್ಲಿ NDPS ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್ ಸಂಗಮೇಶ ದಿಡಿಗಿನಾಳ, ಪಿಎಸ್‌ಐ ಸಚಿನ್‌ಕುಮಾರ ದಾಸರೆಡ್ಡಿ ಹಾಗೂ ಸಿಬ್ಬಂದಿಗಳಾದ ಲಕ್ಷ್ಮಣ ನಾಯಕ ಮತ್ತು ಸಂತೋಷ ಅಡೂರ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ.
ಪೊಲೀಸ್ ತಂಡದ ಕಾರ್ಯವೈಖರಿಯನ್ನು ಪೊಲೀಸ್ ಆಯುಕ್ತರು ಶ್ಲಾಘಿಸಿದ್ದು, ತಂಡಕ್ಕೆ ನಗದು ಬಹುಮಾನ ಘೋಷಿಸಿದ್ದಾರೆ.
ಹುಬ್ಬಳ್ಳಿ ನಗರದಲ್ಲಿ ಮಾದಕ ವಸ್ತುಗಳ ಅಕ್ರಮ ಜಾಲದ ವಿರುದ್ಧ ಪೊಲೀಸರ ಈ ಕಾರ್ಯಾಚರಣೆ ಮಹತ್ವದ ಹೆಜ್ಜೆಯಾಗಿದ್ದು, ಪ್ರಕರಣದ ಹಿಂದಿರುವ ಇತರ ಸಂಪರ್ಕಗಳ ಬಗ್ಗೆಯೂ ತನಿಖೆಯಿಂದ ಹೆಚ್ಚಿನ ಮಾಹಿತಿ ಹೊರಬರಬೇಕಿದೆ.