ಕರ್ನಾಟಕ

ಪ್ರವಾಸಿಗರನ್ನೇ ಟಾರ್ಗೆಟ್ ಮಾಡಿ ಚರಸ್ ಮಾರಾಟಕ್ಕೆ ಸಂಚು; ಗಂಗಾವತಿ ಪೊಲೀಸರ ಭರ್ಜರಿ ಕಾರ್ಯಾಚರಣೆ!

ಮೂಲಕ News Desk | ಪ್ರಕಟಿಸಲಾಗಿದೆ November 18, 2026 November 18, 2026 | 06:10 AM 22 ವೀಕ್ಷಣೆಗಳು

ಕೊಪ್ಪಳ: ಪ್ರವಾಸಿಗರನ್ನೇ ಗುರಿಯಾಗಿಸಿಕೊಂಡು ಮಾದಕ ವಸ್ತು ಚರಸ್ ಮಾರಾಟ ಮಾಡಲು ಸಂಚು ರೂಪಿಸಿದ್ದ ಜಾಲವನ್ನು ಗಂಗಾವತಿ ಗ್ರಾಮೀಣ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಭೇದಿಸಿದ್ದಾರೆ. ಹಿಮಾಚಲ ಪ್ರದೇಶದಿಂದ ಗಂಗಾವತಿಗೆ ಸಾಗಿಸಲಾಗಿದ್ದ ಬರೋಬ್ಬರಿ 23 ಲಕ್ಷ ರೂಪಾಯಿ ಮೌಲ್ಯದ 753 ಗ್ರಾಂ ಚರಸ್ ಅನ್ನು ಪೊಲೀಸರು ಜಪ್ತಿ ಮಾಡಿ, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.


ಕೊಪ್ಪಳ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣಗಳಾದ ಆನೆಗೊಂದಿ, ಸಣಾಪೂರ ಹಾಗೂ ಬಸಾಪೂರ ಪ್ರದೇಶಗಳಿಗೆ ಆಗಮಿಸುವ ಪ್ರವಾಸಿಗರನ್ನೇ ಟಾರ್ಗೆಟ್ ಮಾಡಿಕೊಂಡು ಚರಸ್ ಮಾರಾಟ ಮಾಡಲು ಆರೋಪಿಗಳು ಸಂಚು ರೂಪಿಸಿದ್ದರು ಎನ್ನಲಾಗಿದೆ.


ಈ ಅಕ್ರಮ ದಂಧೆಯ ಬಗ್ಗೆ ಖಚಿತ ಮಾಹಿತಿ ಪಡೆದ ಗಂಗಾವತಿ ಗ್ರಾಮೀಣ ಪೊಲೀಸರು ಸಣಾಪೂರದಲ್ಲಿ ದಾಳಿ ನಡೆಸಿದಾಗ ಮಾದಕ ವಸ್ತು ಮಾರಾಟದ ಜಾಲ ಬಯಲಾಗಿದೆ. ಕಾರ್ಯಾಚರಣೆ ವೇಳೆ 88 ಪ್ಯಾಕೆಟ್‌ಗಳಲ್ಲಿ ಸಂಗ್ರಹಿಸಿಟ್ಟಿದ್ದ ಒಟ್ಟು 753 ಗ್ರಾಂ ಚರಸ್ ಪತ್ತೆಯಾಗಿದ್ದು, ಅದನ್ನು ವಶಕ್ಕೆ ಪಡೆಯಲಾಗಿದೆ.


ಇದಲ್ಲದೆ, ಕೊಪ್ಪಳ ತಾಲೂಕಿನ ಬಸಾಪೂರದಲ್ಲಿರುವ ಮನೆಯೊಂದರಲ್ಲಿಯೂ ಚರಸ್ ಸಂಗ್ರಹಿಸಿಟ್ಟಿರುವುದು ಪತ್ತೆಯಾಗಿದೆ. ಹಿಮಾಚಲ ಪ್ರದೇಶ ಮೂಲದ ರಾಜೇಶ್ ಶರ್ಮಾ ಸೇರಿದಂತೆ ಒಟ್ಟು ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.


ಪ್ರವಾಸಿ ತಾಣಗಳಿಗೆ ಬರುವ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಮಾದಕ ವಸ್ತು ಮಾರಾಟ ಮಾಡಲು ಯತ್ನಿಸುತ್ತಿದ್ದ ಜಾಲವನ್ನು ಭೇದಿಸಿರುವ ಪೊಲೀಸರು, ಸುಮಾರು 23 ಲಕ್ಷ ರೂಪಾಯಿ ಮೌಲ್ಯದ ಚರಸ್ ವಶಪಡಿಸಿಕೊಂಡಿದ್ದಾರೆ.


ಈ ಸಂಬಂಧ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಾದಕ ವಸ್ತುಗಳ ಜಾಲದ ಹಿಂದೆ ಇನ್ನೂ ಯಾರಾದರೂ ಇದ್ದಾರೆಯೇ? ಈ ದಂಧೆಗೆ ಸ್ಥಳೀಯವಾಗಿ ಯಾರಾದರೂ ಸಹಕರಿಸಿದ್ದಾರೆಯೇ? ಎಂಬ ನಿಟ್ಟಿನಲ್ಲಿ ತನಿಖೆ ಮುಂದುವರಿದಿದೆ.


ಪ್ರವಾಸಿ ತಾಣಗಳಲ್ಲಿ ಮಾದಕ ವಸ್ತುಗಳ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪೊಲೀಸರ ಈ ಕಾರ್ಯಾಚರಣೆ ಮಹತ್ವ ಪಡೆದುಕೊಂಡಿದೆ.